ಆರತಿಗೊಂದು ಕನ್ನಡ, ಕೀರುತಿಗೊಂದು ಇಂಗ್ಲಿಷ್

ಡಾ. ಸಿ. ಪಿ. ರವಿಕುಮಾರ್



ಮ್ಮ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಇಟ್ಟುಕೊಂಡಿದ್ದೆವು. ಈ ವರ್ಷ ಕನ್ನಡ ಚರ್ಚಾಸ್ಪರ್ಧೆ ಇಟ್ಟುಕೊಳ್ಳಿ ಎಂಬ ಸಲಹೆ ಕೊಟ್ಟವನು ನಾನೇ. ಕಾರ್ಯಕ್ರಮದ ಆಯೋಜಕರು ನನ್ನ ಮಾತನ್ನು ಕೇಳಿಕೊಂಡು ಪ್ರಕಟಣೆಯನ್ನು ಹೊರಡಿಸಿದರು. ಸ್ಪರ್ಧೆಯ ದಿವಸ ಹತ್ತಿರ ಬಂದಂತೆ ಮುಖ್ಯ ಆಯೋಜಕ ನನ್ನನ್ನು ಕಾಣಲು ಬಂದ. ಸ್ವಲ್ಪ ಗಾಬರಿಯಾಗಿದ್ದ. "ಸರ್, ಸ್ಪರ್ಧೆಗೆ ಕೇವಲ ಆರು ಜನ ಮಾತ್ರ ಹೆಸರು ಬರೆಸಿದ್ದಾರೆ!" ಎಂದ.

"ಅದನ್ನು ಹಾಗೆ ಹೇಳಬೇಡಿ, ಮೂರ್ತಿ! ಸ್ಪರ್ಧೆಗೆ ಆರು ಜನ ಹೆಸರು ಬರೆಸಿಬಿಟ್ಟಿದ್ದಾರೆ ಸರ್! ಅಂತ ಉತ್ಸಾಹದಿಂದ ಹೇಳಿ. ಇದು ರೆಕಾರ್ಡ್ ಕಣ್ರೀ!" ಎಂದೆ. ಇಬ್ಬರೂ ನಕ್ಕೆವು.

ಕಾಲೇಜುಗಳಲ್ಲಿ ಕನ್ನಡ ಪಾಠ ಹೇಳಿಕೊಡುವ ಪ್ರಾಧ್ಯಾಪಕರನ್ನು ತೀರ್ಪುಗಾರರನ್ನಾಗಿ ಕರೆಯಬೇಕು ಎಂಬ ತೀರ್ಮಾನವಾಯಿತು. ಸ್ಪರ್ಧೆಯ ದಿನವೂ ಬಂತು.

"ಸರ್, ನನಗೆ ಯಾವ ಕನ್ನಡ ಪ್ರಾಧ್ಯಾಪಕರೂ ಗೊತ್ತಿಲ್ಲ; ನಾನು ಪ್ರಯತ್ನ ಪಟ್ಟ ಕಡೆ ಫಲ ಸಿಕ್ಕುವ ಭರವಸೆ ಇಲ್ಲ. ನೀವೇ ತೀರ್ಪುಗಾರರಾಗಬೇಕು" ಎಂದು ಮೂರ್ತಿ ತೀರ್ಪು ನುಡಿದ.  ಮಾಡಿದ್ದುಣ್ಣೋ ಎಂದು ಮನಸ್ಸಿನಲ್ಲೇ ಅಂದುಕೊಂಡು ಒಪ್ಪಿಕೊಂಡೆ. ಮತ್ತೊಬ್ಬ ತೀರ್ಪುಗಾರರನ್ನಾಗಿ ನನ್ನ ಸಹೋದ್ಯೋಗಿ ರಾವ್ ಅವರನ್ನು ಒಪ್ಪಿಸಿದೆ.

ಸ್ಪರ್ಧೆಯ ವಿಷಯವನ್ನು ನಾನೇ ಕೊಟ್ಟಿದ್ದೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ತಾನೇ! ಪ್ರಜಾವಾಣಿಯಲ್ಲಿ ಒಬ್ಬ ಕನ್ನಡ ತಾಯಿ ಆ ದಿನಗಳಲ್ಲಿ ಸಂಪಾದಕರಿಗೆ ಬರೆದ ಪತ್ರ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.  ಆಕೆ "ನನ್ನ ಮಗನಿಗೆ ಕನ್ನಡ ಮಾಧ್ಯಮ ಕೊಡಿಸಿ ನಾನೇ ಅವನಿಗೆ ಕೈಯಾರ ವಿಷ ಕೊಟ್ಟ ಹಾಗಾಗಿದೆ" ಎಂಬ ಅರ್ಥದ ಪತ್ರವನ್ನು ಬರೆದಿದ್ದರು. ಆಕೆಯ ಪತ್ರಕ್ಕೆ ಅನೇಕ ಪ್ರತ್ಯುತ್ತರಗಳು ಬಂದವು.  ಆಕೆಯ ಮನೋಭಾವದಲ್ಲಿ ಕೀಳರಿಮೆ ಇದೆ ಎಂದು ಕೆಲವರು ವಾದಿಸಿದರು.

ಚರ್ಚಾಸ್ಪದ ವಿಷಯ 


ವಿವಾದದಿಂದ ಉತ್ತೇಜಿತನಾಗಿ ನಾನು ಸ್ಪರ್ಧೆಗೆ  ಕೊಟ್ಟ ವಿಷಯ ಕನ್ನಡವು ಶಿಕ್ಷಣದಲ್ಲಿ ಮಹತ್ತ್ವ ಕಳೆದುಕೊಳ್ಳುತ್ತಿದೆಯೇ ಎಂಬುದಾಗಿತ್ತು.  ಆರು ಜನರಲ್ಲಿ ಮೂವರು ಪರವಾಗಿ ಮತ್ತು ಮೂವರು ವಿರುದ್ಧವಾಗಿ ಮಾತಾಡಿದರು.  ಚರ್ಚಾಸ್ಪರ್ಧೆ ಚೆನ್ನಾಗಿಯೇ ನಡೆಯಿತು. ತಡವರಿಸಿದರೂ ಮಧ್ಯೆ ಮಧ್ಯೆ ಇಂಗ್ಲಿಷ್ ಬಳಸಿದರೂ  ಕನ್ನಡದಲ್ಲಿ ಚೆನ್ನಾಗಿಯೇ ಮಾತಾಡಿದರು. ಬಹಳ ದಿನಗಳ ನಂತರ ಹೀಗೆ ಕನ್ನಡದಲ್ಲಿ ಮಾತಾಡಲು ದೊರೆತ ಅವಕಾಶಕ್ಕಾಗಿ ಅವರು ಸಂತೋಷವನ್ನೂ ವ್ಯಕ್ತಪಡಿಸಿದರು.

ಬಹುಮಾನ ವಿತರಣೆಯ ನಂತರ ತೀರ್ಪುಗಾರರಿಗೆ ಮಾತನಾಡುವ ಅವಕಾಶ. ನನ್ನ ಮಿತ್ರರಾದ ರಾವ್  "ಯಾರು ನಡುವೆ ಇಂಗ್ಲಿಷ್ ಪದಗಳನ್ನು ಬಳಸಿದರೋ ಅವರಿಗೆ ನಾನು ಕಡಿಮೆ ಅಂಕಗಳನ್ನು ಕೊಟ್ಟಿದ್ದೇನೆ" ಎಂದರು. ಅನಂತರ ತಮ್ಮ ಒಂದು ಅನುಭವ ಹೇಳಿದರು. ಅವರ ಸಂಬಂಧಿಕರು ಅವರನ್ನು ಒಮ್ಮೆ ಮಾತಾಡಲು ಕರೆದರು. ವಿಷಯ "ಜ್ಯೋತಿಷ್ಯ ಶಾಸ್ತ್ರ." ಅದರಲ್ಲಿ ಪರಿಣತಿ ಹೊಂದಿರುವ ರಾವ್ ಅವರಿಗೆ ಕನ್ನಡದಲ್ಲಿ ಮಾತಾಡಲು ಕೇಳಿಕೊಂಡರು.  ರಾವ್ ಅವರಿಗೆ ಪೇಚಾಟವಾಯಿತು. ಏಕೆಂದರೆ ಅವರು ಸುಮಾರು ಮೂವತ್ತು ವರ್ಷ ಇಂಗ್ಲಿಷ್ ನಲ್ಲಿ ಪಾಠ ಹೇಳಿದವರು.  "ಮೊದಲು ಹೇಗೋ ಕಷ್ಟ ಪಟ್ಟು ಕನ್ನಡದಲ್ಲಿ ಪ್ರಾರಂಭಿಸಿದೆ. ಆದರೆ ನನಗೆ ಅರಿವಿಲ್ಲದೆ ನಾನು ಇಂಗ್ಲಿಷ್ ಗೆ ಜಾರಿದೆ," ಎಂದು ತಮ್ಮ ಅನುಭವ ಹೇಳಿಕೊಂಡರು. ಅನಂತರ "ನನ್ನ ಪ್ರಕಾರ ವಿಜ್ಞಾನ, ಶಾಸ್ತ್ರ ಇದಕ್ಕೆಲ್ಲಾ ಕನ್ನಡವನ್ನು ಬಳಸದಿದ್ದರೂ ಪರವಾಗಿಲ್ಲ. ಅದಕ್ಕೆ ಇಂಗ್ಲಿಷ್ ಲಾಯಕ್ಕಾಗಿದೆ. ಕವಿತೆ- ಸಾಹಿತ್ಯ ಇವಕ್ಕೆ ಕನ್ನಡ ಉಪಯೋಗಿಸೋಣ. ಕನ್ನಡದಲ್ಲಿ ಶ್ರೇಷ್ಥವಾದ ಕಾವ್ಯಗಳಿವೆ"  ಎಂದರು.

"ಆರತಿಗಾಗಿ ಒಬ್ಬ ಮಗಳು, ಕೀರುತಿಗಾಗಿ ಒಬ್ಬ ಮಗ" ಎಂಬ ಗಾದೆ ನೆನಪಾಯಿತು. ಹೊಗಳುತ್ತಲೇ ನಮಗೆ ಅರಿವಿಲ್ಲದಂತೆ ಹೆಣ್ಣುಮಕ್ಕಳಿಗೆ ಅನ್ಯಾಯ ಮಾಡುವ ಇಂಥ ಗಾದೆಗಳಿಂದ ನಾವು ಜಾಗರೂಕರಾಗಿರಬೇಕು.

ರಾವ್ ನನ್ನ ಆಪ್ತ ಗೆಳೆಯರು. ಹಾಗಾದ್ದರಿಂದ ನಾನು ಅವರನ್ನು ವಿರೋಧಿಸಿ ಮಾತಾಡಬಲ್ಲೆ. ನಾನು ಕೂಡಲೇ "ನನಗೆ ಇದರ ಬಗ್ಗೆ ಸ್ವಲ್ಪ ಭಿನ್ನಾಭಿಪ್ರಾಯ ಇದೆ!" ಎಂದು ಮೊದಲು ಮಾಡಿದೆ.

ಕನ್ನಡದಲ್ಲಿ  ಕಾವ್ಯೇತರ 



ನ್ನಡ ಬಹಳ ಹಳೆಯ ಭಾಷೆ; ಇಂಗ್ಲಿಷ್ ಗೆ ಹೋಲಿಸಿದರೆ ಬಹಳ ಹಳೆಯದು. ಅಂಕಿ-ಅಂಶಗಳನ್ನು ಬಿಟ್ಟುಬಿಡೋಣ. ಪಂಪ ರನ್ನ ಇವರೆಲ್ಲಾ ಮಹಾಕಾವ್ಯಗಳನ್ನು ರಚಿಸಿದಾಗ ಇಂಗ್ಲಿಷ್ ಭಾಷೆ ಇರಲಿಲ್ಲ. ಕಾವ್ಯಗಳನ್ನು ಕನ್ನಡದಲ್ಲಿ ರಚಿಸಿ ಕನ್ನಡಕ್ಕೆ ಕಿರೀಟ ತೊಡಿಸಿದ ಕವಿಗಳ ಸಾಲೇ ಇದೆ.  ನಮ್ಮ ಪಠ್ಯ ಪುಸ್ತಕಗಳಲ್ಲಿ ಪಂಪ, ರನ್ನ, ರಾಘವಾಂಕ, ಹರಿಹರ, ಬಸವಣ್ಣ, ಅಕ್ಕ ಮಹಾದೇವಿ, ಪುರಂದರದಾಸ, ಕನಕದಾಸ, ಇವರೆಲ್ಲಾ ಮಿಂಚಿ ಮಾಯವಾಗುತ್ತಾರೆ. ಹಾಗೇ ಕುವೆಂಪು, ಬೇಂದ್ರೆ, ಕೆ. ಎಸ್. ನರಸಿಂಹಸ್ವಾಮಿ, ಜಿ.ಪಿ. ರಾಜರತ್ನಂ ಇವರೆಲ್ಲಾ "ನಾವೂ ಇದ್ದೇವೆ" ಎಂದು ಕೈ ಬೀಸಿ ಹೋಗುತ್ತಾರೆ. ನನ್ನ ಇಬ್ಬರೂ ಮಕ್ಕಳು ಕನ್ನಡವನ್ನು ದ್ವಿತೀಯ ಭಾಷೆಯನ್ನಾಗಿ ಓದಿದರು - ಅವರಿಗೆ ಶಿವರಾಮ ಕಾರಂತ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಗೋಪಾಲಕೃಷ್ಣ ಅಡಿಗ ಮೊದಲಾದವರ ಹೆಸರೂ ಗೊತ್ತಿಲ್ಲ.  ಯಾಕೆಂದರೆ ಇಂದಿನ ಪಠ್ಯ ಪದ್ಧತಿಯಲ್ಲಿ ಕೂಡಾ "ಮೀಸಲಾತಿ" ಹೊಕ್ಕಿದೆ.  ಅದರ ವಿಷಯ ಈಗ ಬೇಡ.

ರಾವ್ ಅವರು ಹೇಳಿದ ಮಾತು ನನ್ನನ್ನು ಅಲುಗಾಡಿಸಿ ಬಿಟ್ಟಿತು.ವಿಜ್ಞಾನ/ಶಾಸ್ತ್ರಗಳ ಬಗ್ಗೆ ಬರೆಯಲು ಕನ್ನಡ ಭಾಷೆ ಅಸಮರ್ಥವೆ?  ಕನ್ನಡದಲ್ಲಿ ವಿಜ್ಞಾನ/ಶಾಸ್ತ್ರ ಕುರಿತು ಯಾರೂ ಬರೆಯಲೇ ಇಲ್ಲವೇ? ಪಾಕಶಾಸ್ತ್ರವನ್ನು ಕುರಿತು ಕನ್ನಡದಲ್ಲಿ ಹಳೆಯ ಗ್ರಂಥವಿದೆ ಎಂದು ಓದಿದ ನೆನಪಿದೆ. ಇನ್ನು ವ್ಯಾಕರಣ ಶಾಸ್ತ್ರದ ಬಗ್ಗೆ ಅನೇಕ ರಚನೆಗಳಿವೆ. ಜೀವನ ದರ್ಶನವನ್ನು ಕುರಿತು, ಕಾವ್ಯ ಮೀಮಾಂಸೆಯನ್ನು ಕುರಿತು, ರಾಜಕಾರಣವನ್ನು ಕುರಿತು ಗ್ರಂಥಗಳಿವೆ.  ಇಂಗ್ಲಿಷ್ ಭಾಷೆಯ ಪ್ರಾಬಲ್ಯ ಮತ್ತು ಹೇರಿಕೆಯಿಂದ ನಲುಗಿದ ಭಾರತೀಯ ಭಾಷೆಗಳಲ್ಲಿ ವಿಜ್ಞಾನ, ಗಣಿತ ಮೊದಲಾದವುಗಳನ್ನು ಕುರಿತು ಸ್ವತಂತ್ರವಾದ ಬರಹಗಳು ಅಷ್ಟಾಗಿ ಬರಲಿಲ್ಲ.  ಇದಕ್ಕೆ ಅಪವಾದಗಳು ಕೂಡಾ ಇವೆ.  ಕಾರಂತರು ರಚಿಸಿದ ವಿಶ್ವಕೋಶ, ನಿರಂಜನ ಅವರು ಸಂಪಾದಿಸಿದ ಜ್ಞಾನ ಗಂಗೋತ್ರಿ, ವಿವಿಧ ವಿಶ್ವವಿದ್ಯಾಲಯಗಳು ಹೊರತಂದ ವಿಶ್ವಕೋಶಗಳು, ವಿ.ಸೀ. ಅವರು ಅರ್ಥಶಾಸ್ತ್ರದ ಬಗ್ಗೆ ಬರೆದ  ಗ್ರಂಥ, ಇವು ನನಗೆ ನೆನಪಾಗುತ್ತಿವೆ. ಸಸ್ಯಶಾಸ್ತ್ರವನ್ನು ಕುರಿತ ಬಿ.ಜಿ. ಎಲ್. ಸ್ವಾಮಿ ಅವರ  "ಹಸುರು ಹೊನ್ನು" ವಿಶೇಷ  ಪ್ರಯೋಗ. ಜಿ.ಟಿ. ನಾರಾಯಣರಾವ್ ಅವರು ವಿಜ್ಞಾನಕ್ಕೆ ಸಂಬಂಧಿಸಿದ ಬರಹಗಳನ್ನು ಬರೆದಿದ್ದಾರೆ. ಆದರೆ ನನಗೆ ತಿಳಿದಂತೆ ಇವರಲ್ಲಿ ಯಾರೂ ತಮ್ಮ ಸಂಶೋಧನೆಗಳನ್ನು ಕುರಿತು ಬರೆದಿಲ್ಲ.ಅವರದ್ದು  ಈಗಾಗಲೇ ಪ್ರಕಟಿತವಾದ ಇಂಗ್ಲಿಷ್ ಬರಹಗಳನ್ನು ಆಧಾರವಾಗಿಟ್ಟುಕೊಂಡು ರಚಿಸಿದ ಬರಹಗಳು.

ನನ್ನ "ಕಂಪ್ಯೂಟರ್ ಗೊಂದು ಕನ್ನಡಿ" ಪುಸ್ತಕ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಪ್ರಕಟವಾಯಿತು. ನಾನು ಒಂದು ಕನ್ನಡ ದಿನಪತ್ರಿಕೆಗೆ ಬರೆದ ಲೇಖನಗಳನ್ನು ಸಂಗ್ರಹಿಸಿ "ಅಭಿನವ" ಪ್ರಕಾಶನದವರು ಪುಸ್ತಕ ಹೊರತಂದರು. ಇಂಟರ್ ನೆಟ್ ಮೊದಲಾದ ವಿಷಯಗಳನ್ನು ಕುರಿತು ಆಗ ನಾನು ಬರೆದ ಲೇಖನಗಳು ನನಗೆ ತಿಳಿದಂತೆ ಕನ್ನಡದಲ್ಲಿ ಹೊಸದಾಗಿದ್ದವು.  ಅದನ್ನು ಓದಿ ನನಗೆ ಜಿ.ಟಿ. ನಾರಾಯಣರಾವ್ ಬಹಳ ಪ್ರೋತ್ಸಾಹಕರವಾದ ಮಾತುಗಳನ್ನು ಪತ್ರದಲ್ಲಿ ಬರೆದರು. ಆಯಾ ವಿಷಯಗಳಲ್ಲಿ ವಿಶೇಷಜ್ಞರು ಕನ್ನಡದಲ್ಲಿ ಬರೆದಾಗ ಅದಕ್ಕೆ ಹೆಚ್ಚು ತೂಕ ಬರುತ್ತದೆಂದು ಮೆಚ್ಚುಗೆ ಸೂಚಿಸಿ ಬರೆದಿದ್ದರು. ವಿಷಯ ಅರಿಯದವರು ಇಂಗ್ಲಿಷ್ ಭಾಷೆಯಿಂದ ಕನ್ನಡಕ್ಕೆ ಮಾಡುವ ಒಣ  ಭಾಷಾಂತರದಲ್ಲಿ  ವಿಷಯಗಳು  ಹೇಗೆ ಕಳೆದುಹೋಗಬಹುದು ಎಂದು ಸೂಚಿಸಿದ್ದರು. ಅವರು ಹೇಳಿದ ವಿಷಯಕ್ಕೆ ನಾನು ಮೇಲೆ ಸೂಚಿಸಿದ ಚರ್ಚಾಸ್ಪರ್ಧೆಯಲ್ಲೇ ಉದಾಹರಣೆಗಳು ಸಿಕ್ಕವು. ಒಬ್ಬ ಸ್ಪರ್ಧಿ "ಬಸ್ ಎಂಬ ಪದಕ್ಕೆ ಕನ್ನಡದಲ್ಲಿ ಬಹಳ ಕಷ್ಟವಾದ ಭಾಷಾಂತರ ಪದವಿದೆ - ಈ ಕಾರಣಕ್ಕಾಗಿ ಕನ್ನಡವನ್ನು ಓದಲು ಯಾರೂ ಇಷ್ಟ ಪಡುವುದಿಲ್ಲ" ಎಂದರು!

ಭಾಷಾಂತರದ  ಅವಾಂತರ 



ಪಿಡುಗನ್ನು ನೀವೂ ಅನುಭವಿಸಿರಬಹುದು. ಇಂಜಿನಿಯರ್ ಎಂಬ ಪದ ಸರ್ವೇಸಾಮಾನ್ಯವಾಗಿರುವಾಗ ಅದಕ್ಕೆ "ಅಭಿಯಂತರರು" ಎಂಬ ಪದವನ್ನು ಹುಡುಕುವುದು ಕೆಲವರಿಗೆ ಮೋಜಿನ ವಿಷಯ. ಇದು ಕನ್ನಡದಲ್ಲಷ್ಟೇ ಅಲ್ಲ, ಭಾರತದ ಎಲ್ಲಾ ಭಾಷೆಗಳಲ್ಲೂ ನಡೆಯುವ ಅನಾಹುತ. "ಆರ್ಟಿಫಿಷಿಯಲ್  ಇಂಟೆಲಿಜೆನ್ಸ್" ಎಂಬುದಕ್ಕೆ "ಕೃತ್ರಿಮ ಬುದ್ಧಿಮತ್ತೆ" ಎಂಬ ಭಾಷಾಂತರವನ್ನು ಕೊಟ್ಟು ಕೆಲವರು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ನಾನು ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದಾಗ ನಮ್ಮ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಕವಿ ಗೋಪಾಲ ಕೃಷ್ಣ ಅಡಿಗ ಅವರ ಜೊತೆ ಇನ್ನೊಬ್ಬ ಸಾಹಿತಿಯೂ ಬಂದಿದ್ದರು; ಅವರ ಹೆಸರು ಮರೆತಿದೆ. ಅವರು "ಎಲೆಕ್ಟ್ರಾನಿಕ್ಸ್" ಎಂಬ ಪದಕ್ಕೆ ಅದೇನೋ ಅದ್ಭುತವಾದ ಪದವನ್ನು ಹುಡುಕಿ ಹೇಳಿದರು. ಒಂದೇ ಇಂಗ್ಲಿಷ್ ಪದವನ್ನು ಬಳಸದೆ ಭಾಷಣ ಬಿಗಿದು ವಿದ್ಯಾರ್ಥಿಗಳಿಂದ ಮೇಲಿಂದ ಮೇಲೆ ಚಪ್ಪಾಳೆ ಗಿಟ್ಟಿಸಿಕೊಂಡರು! ಅವರು ಏನು ಹೇಳಿದರು ಎಂಬುದು ಯಾರಿಗೂ ಅರ್ಥವಾಗಲಿಲ್ಲ ಎಂಬುದು ಬೇರೆ ವಿಷಯ! ಅಡಿಗರಿಗೆ ಇದರಿಂದ ಮುಜುಗರ ಮತ್ತು ಕೋಪ ಎರಡೂ ಉಂಟಾಗಿದ್ದು ಸ್ಪಷ್ಟವಾಗಿತ್ತು. ಅವರು ಅದನ್ನು ತಮ್ಮ ಭಾಷಣದಲ್ಲಿ ಹೇಳಿಯೂ ಬಿಟ್ಟರು. ಅದಕ್ಕೆ ಅವರಿಗೆ ಸಿಕ್ಕ ಸನ್ಮಾನವೆಂದರೆ ಅವರು ಮಾತನಾಡುತ್ತಿದ್ದಾಗಲೇ ಚಪ್ಪಾಳೆಯ ನಿಲ್ಲದ ಸುರಿಮಳೆ! ಕೊನೆಗೆ ಅವರು ಭಾಷಣವನ್ನು ಅರ್ಧಕ್ಕೇ ನಿಲ್ಲಿಸಿ ಕೋಪಾವಿಷ್ಟರಾಗಿ ಹೊರಟುಹೋದರು.

ಸಂಸ್ಕೃತ ಭೂಯಿಷ್ಠವಾದ ಪದಗಳನ್ನು ರಚಿಸಿ ಹೊಗಳಿಕೆಗೆ ಪಾತ್ರರಾಗುವ ಲೇಖಕರು ಕನ್ನಡಕ್ಕೆ ಪರೋಕ್ಷವಾಗಿ ಮಾಡುವ ನಷ್ಟ ಕಡಿಮೆಯಾದುದಲ್ಲ.  ಈ ಪದಗಳಿಗೆ ಓದುಗರ ಪ್ರತಿಕ್ರಿಯೆಗೂ ಮೃಗಾಲಯದಲ್ಲಿ ಆನೆ-ಜಿಂಕೆ-ಹುಲಿಗಳನ್ನು ನೋಡಿದವರು ಮಾಡುವ ಉದ್ಗಾರಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ಆನೆ ಜಿಂಕೆ ಹುಲಿಗಳನ್ನು  ಮೃಗಾಲಯದಲ್ಲಿ ನೋಡಿದಾಗ ಆನಂದ ಪಡುವ ಜನ ಈ ಪ್ರಾಣಿಗಳನ್ನು ಮನೆಗೆ ಕರೆದೊಯ್ಯುವುದಿಲ್ಲ!

ಇದರ ಇನ್ನೊಂದು ಮುಖವನ್ನು ನಾನು ಇಂಟರ್ ನೆಟ್ ನಲ್ಲಿ ಗಮನಿಸಿದ್ದೇನೆ. ಕನ್ನಡದಲ್ಲಿ ಮಹಾಪ್ರಾಣಗಳೇ ಇರಲಿಲ್ಲ ಎಂದು ಒಬ್ಬ ಭಾಷಾ ಶಾಸ್ತ್ರಜ್ಞರು ಹೇಳಿದ್ದರಿಂದ ಪ್ರಭಾವಿತರಾದ ಕೆಲವರು ಪ್ರಯತ್ನಪೂರ್ವಕವಾಗಿ ಮಹಾಪ್ರಾಣಗಳನ್ನು ಬಿಟ್ಟು ಬರೆಯಲು ಹೆಣಗುತ್ತಿದ್ದಾರೆ. ಅಷ್ಟೇ ಅಲ್ಲ, "ಶುದ್ಧ ಕನ್ನಡದಲ್ಲಿ" ಪ್ರತಿಯೊಂದು ಪರಿಚಿತ ಪದಕ್ಕೂ ಪರ್ಯಾಯ ಪದಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಒಂದೆರಡು ವರ್ಷದ ಹಿಂದೆ 'ದೀಪಾವಳಿ' ಎಂಬುದು ಕನ್ನಡ ಪದವಲ್ಲ ಎಂದು ಅದಕ್ಕೆ ಕನ್ನಡದಲ್ಲಿ ಬೇರೆ (ಅದಕ್ಕಿಂತ ಕಷ್ಟವಾದ) ಪದವನ್ನು ಬಳಸಲು ಕಳಕಳಿಯಿಂದ ಕೇಳಿಕೊಂಡರು. ವೈಜ್ಞಾನಿಕ ಬರಹಗಳು ಕನ್ನಡದಲ್ಲಿ ಜನಪ್ರಿಯವಾಗಬೇಕಾದಲ್ಲಿ ಅಪರಿಚಿತ ಸಂಸ್ಕೃತ ಪದಗಳನ್ನು ಬಳಸುವುದು ಹೇಗೆ ಜಾಣತನವಲ್ಲವೋ ಹಾಗೇ ಪರಿಚಿತವಲ್ಲದ ಕನ್ನಡ ಪದಗಳನ್ನು ಹುಡುಕಾಡುವುದೂ ಅಂತಹ ಜಾಣತನವಲ್ಲ ಎಂದು ನನ್ನ ಭಾವನೆ. ಕೆಲವು ಹೊಸಪದಗಳನ್ನು ಕನ್ನಡಕ್ಕೆ ಸ್ವೀಕರಿಸಿ ಮುಂದುವರೆಯುವುದು ಹೆಚ್ಚು ಸೂಕ್ತ ಎಂದು ನನಗೆ ಅನ್ನಿಸುತ್ತದೆ.

ಕನ್ನಡದಲ್ಲಿ ವೈಜ್ಞಾನಿಕ ಬರಹ ಅಸಾಧ್ಯವೇ?


"ನ್ನಡವು ಸಹಜವಾದ ವೈಜ್ಞಾನಿಕ ಬರಹಕ್ಕೆ ಹೇಳಿ ಮಾಡಿಸಿದ ಭಾಷೆಯಲ್ಲ" ಎಂಬುದು ಇನ್ನೊಂದು ಚರ್ಚಾಸ್ಪರ್ಧೆಗೆ ವಿಷಯವಾಗಬಲ್ಲದು. ಹಾಗೆ ತೀರ್ಮಾನ ಮಾಡುವವರುನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ವಿಷಯಗಳು ಹಲವಾರು. ಕನ್ನಡದಲ್ಲಿ ವಿಜ್ಞಾನವನ್ನು ಓದಿದರೆ/ಬರೆದರೆ ಅದರಿಂದ ಓದಿದವರಿಗೆ/ಬರೆದವರಿಗೆ ಏನಾದರೂ (ಪ್ರಾಪಂಚಿಕ) ಲಾಭವಿದೆಯೆ? ಕೇವಲ ಆತ್ಮಸಂತೋಷಕ್ಕಾಗಿ ಮಾಡುವ ಕೆಲಸವನ್ನು ಯಾರಾದರೂ ಎಷ್ಟು ದಿನ ಮಾಡಿಯಾರು? ಕನ್ನಡದಲ್ಲಿ ವೈಜ್ಞಾನಿಕ ಬರಹಗಳಿಗೆ ಅಭಾವವಿದೆ ಎಂದು ಮಾತನ್ನು ಯಾರಾದರೂ  ಒಬ್ಬರು ಭಾಷಣದಲ್ಲಿ ಹೇಳಿದರು ಎಂಬ  ವರದಿ ಆಗಾಗ ಓದುತ್ತಲೇ   ಇರುತ್ತೇವೆ.  ಆದರೆ ವೈಜ್ಞಾನಿಕ ಬರಹಕ್ಕೆ ಇರುವ ಪ್ರೋತ್ಸಾಹವೇನು? ನನ್ನ ಗುರುಸ್ಥಾನದಲ್ಲಿದ್ದ ಒಬ್ಬ ಸಾಹಿತಿಗಳು ನನಗೆ ಮಾಹಿತಿ ತಂತ್ರಜ್ಞಾನದ ಬಗ್ಗೆ ಒಂದು ಪುಸ್ತಕ ಬರೆಯಲು ಪ್ರೇರೇಪಿಸಿದರು. ಹಸ್ತಪ್ರತಿ ಸಿದ್ಧವಾದ ಕೆಲವು ತಿಂಗಳಲ್ಲಿ ಅವರು ದಿವಂಗತರಾದರು. ಹಸ್ತಪ್ರತಿ ನನ್ನ ಹತ್ತಿರವೇ ಉಳಿಯಿತು! ಯಾವ ಪ್ರಕಾಶನ ಸಂಸ್ಥೆಗಾಗಿ ಅವರು ಈ ಹಸ್ತಪ್ರತಿಯನ್ನು ಬರೆಸಿದ್ದರೋ ಅವರು ನನ್ನನ್ನು ಸಂಪರ್ಕಿಸಲೇ ಇಲ್ಲ! ನಾನೇ ಪ್ರಕಟಿಸಬೇಕೆಂಬ ಆಸೆ ಇದ್ದರೂ ಅದಕ್ಕೆ ಬೇಕಾದ ಸಮಯ ನನ್ನಲ್ಲಿಲ್ಲದೇ ಪುಸ್ತಕವು ಹಸ್ತಪ್ರತಿಯಾಗೇ ಉಳಿದಿದೆ!

ಒಂದು ವಿಶ್ವವಿದ್ಯಾಲಯದವರು ಹಮ್ಮಿಕೊಂಡ ವಿಶ್ವಕೋಶ ಯೋಜನೆಗೆ ನನ್ನಿಂದ ಇಪ್ಪತ್ತು ವರ್ಷಗಳ ಹಿಂದೆ ಲೇಖನ ಬರೆಸಿಕೊಂಡರು; ವಿಶ್ವಕೋಶದ ಪ್ರಕಟಣೆಯಾಗಲೇ ಇಲ್ಲ. ಕೆಲವು ವರ್ಷಗಳ ಹಿಂದೆ ಈ ಯೋಜನೆಯ ಪುನರುಜ್ಜೀವನವಾಗುತ್ತಿದೆ ಎಂದು ನನಗೆ ಲೇಖನವನ್ನು ತಿದ್ದಿಕೊಡಲು ಕೇಳಿಕೊಳ್ಳಲಾಯಿತು. ತಾಳ್ಮೆಯಿಂದ ಅದನ್ನೂ ಪೂರೈಸಿದೆ. ಇನ್ನೆರಡು ಲೇಖನಗಳು ಬೇಕೆಂಬ ವಿನಂತಿಗೂ ಸಮ್ಮತಿಸಿದೆ. ಈಗ ವಿಶ್ವಕೋಶದ ಯೋಜನೆ ಮತ್ತೆ ನಿದ್ರಾಸ್ಥಿತಿಗೆ ಮರಳಿದೆ!

ಹೆಸರಾಂತ ಐ ಟಿ ಕಂಪನಿಯ ಒಬ್ಬ ಮುಂದಾಳು "ಇಂಗ್ಲಿಷ್ ಕಲಿಯದೇ ನಿಮ್ಮ ಮಕ್ಕಳಿಗೆ ಭವಿಷ್ಯವೇ ಇಲ್ಲ" ಎಂದು ಪದೇಪದೇ ಹೇಳುತ್ತಲೇ ಇದ್ದಾರೆ. "ಏಳ್ ಕನ್ನಡ ತಾಯ್!" ಎಂದು ಕನ್ನಡ ತಾಯನ್ನು ಎಬ್ಬಿಸಿ ಹೊರದೂಡುವ ಕೆಲಸ ನಡೆಯುತ್ತಲೇ ಇದೆ.  ಕನ್ನಡ ಶಾಲೆಗಳಲ್ಲಿ ಜನ ಬರುವುದಿಲ್ಲ ಎಂಬ ಕಾರಣಕ್ಕೆ ಶಾಲೆಗಳನ್ನೇ ಮುಚ್ಚಲು ಮುಂದಾಗುವ ಸರಕಾರಗಳಿಂದ ಹೆಚ್ಚಿನ ಅಪೇಕ್ಷೆ ಇಟ್ಟುಕೊಳ್ಳಲು ಸಾಧ್ಯವೇ? ಪೀಟ್ಸಾ ಬರ್ಗರ್ ಓಟ್ಸ್ ಮೊದಲಾದವುಗಳು "ಜನಪ್ರಿಯ"ವಾಗುತ್ತಾ ಬಂದಂತೆ ಒಂದು ದಿನ ಹೀಗೂ ಆಗಬಹುದೇನೋ - "ರಾಗಿ, ಅಕ್ಕಿ ಇವುಗಳು ಹೆಚ್ಚು ಜನಪ್ರಿಯವಾಗದ ಕಾರಣ ಇವುಗಳನ್ನು ಬೆಳೆಯುವುದೇ ಬೇಡ" ಎಂಬ ನಿರ್ಧಾರಕ್ಕೆ ನಾವು ಬಂದುಬಿಡಬಹುದು.

ಬನ್ನಿ, ನಾವು ಪೀಟ್ಸಾ ತಿನ್ನೋಣ, ಕ್ಯಾಪುಚಿನೋ ಕುಡಿಯೋಣ, ಕೋಲಾ ಸವಿಯೋಣ, ಐರನ್ ಮ್ಯಾನ್-೪ ನೋಡೋಣ ಹವಾನಿಯಂತ್ರಿತ ಕಾರಿನಲ್ಲಿ ಸಂಚರಿಸೋಣ, ಹ್ಯಾರಿ ಪಾಟರ್ ಓದೋಣ,  ಹೆವಿ ಮೆಟಲ್ ಕೇಳೋಣ, ಫೇರ್ ಅಂಡ್ ಲವ್ಲೀ ಉಪಯೋಗಿಸುತ್ತಾ ಬೆಳ್ಳಗೆ ಮುಗುಳ್ನಗೋಣ.



ಟಿಪ್ಪಣಿಗಳು:

(೧) ಇಂಗ್ಲಿಷ್ ಭಾಷೆಯಲ್ಲೇ ಶಿಕ್ಷಣ ಕೊಡಬೇಕೆಂಬ ನಿರ್ಧಾರವನ್ನು ೧೮೩೫ ರಲ್ಲಿ ಬ್ರಿಟಿಷ್ ಸರಕಾರ ತೆಗೆದುಕೊಂಡಿತು. ಇದಕ್ಕೆ ಕಾರಣವಾದ ಮೆಕಾಲೆಯ ವರದಿಯಲ್ಲಿ ಭಾರತೀಯ ಜ್ನಾನಸಂಪತ್ತಿನ ಬಗ್ಗೆ ಅವನು ಬರೆದಿದ್ದು ಹೀಗೆ:

ಯಾರು ಇಂಗ್ಲಿಷ್ ಬಲ್ಲರೋ ಅವರಿಗೆ ಗೊತ್ತು - ಜಗತ್ತಿನ ಅತ್ಯಂತ ಜಾಣ ರಾಷ್ಟ್ರಗಳು ಕಳೆದ ತೊಂಬತ್ತು ಪೀಳಿಗೆಗಳಲ್ಲಿ ಬರೆದಿಟ್ಟ ಜ್ಞಾನ ಸಂಪತ್ತಿಗೆ ಮೀರಿದ ಜ್ಞಾನ ಸಂಪತ್ತು ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಾಗಿದೆ.  ಇಂಗ್ಲಿಷ್ ಭಾಷೆಯಲ್ಲಿ ಈಗಿರುವ ಸಾಹಿತ್ಯವು ಕಳೆದ ಮುನ್ನೂರು ವರ್ಷಗಳಲ್ಲಿ ಜಗತ್ತಿನ ಬೇರೆಲ್ಲಾ ಭಾಷೆಗಳಲ್ಲಿ ಬರೆದಿಟ್ಟ ಸಾಹಿತ್ಯಕ್ಕಿಂತಲೂ ಹೆಚ್ಚಿನ ಮೌಲ್ಯ ಹೊಂದಿದೆ ಎಂದು ನಾವು ನಿಸ್ಸಂದೇಹವಾಗಿ ಹೆಳಬಹುದು.  ನಮ್ಮ ಮುಂದಿರುವ ಪ್ರಶ್ನೆ ಒಂದೇ. ಇಂಗ್ಲಿಷ್ ಭಾಷೆಯನ್ನು (ಭಾರತೀಯರಿಗೆ)  ನಾವು ಹೇಳಿಕೊಡುವ ಸಾಧ್ಯತೆ ನಮ್ಮ ಮುಂದಿರುವಾಗ ನಾವೇಕೆ ಇನ್ನಿತರ ಭಾಷೆಗಳ ಮೊರೆ ಹೋಗಬೇಕು? ಅದೂ (ಜಗತ್ತಿನಲ್ಲಿ ಇಂದು ಎಲ್ಲರೂ ಒಪ್ಪಿಕೊಳ್ಳುವ ಹಾಗೆ) ಇಂಗ್ಲಿಷ್ ಭಾಷೆಯಲ್ಲಿರುವ ಗ್ರಂಥಗಳೊಂದಕ್ಕೂ ಸರಿತೂಗಬಲ್ಲ ಒಂದೂ ಗ್ರಂಥಗಳು ಲಭ್ಯವಾಗದ ಭಾಷೆಗಳಲ್ಲಿ!  ಯೂರೋಪಿಯನ್ ವಿಜ್ಞಾನವನ್ನು ಇನ್ನಿತರ ಭಾಷೆಯಲ್ಲಿರುವ ವಿಜ್ಞಾನಕ್ಕೆ ಹೋಲಿಸಿದರೆ ಪರ ವಿಜ್ಞಾನಗಳು ಅದಕ್ಕಿಂತ ಕೀಳಾಗಿವೆ ಎಂದು ಇಂದು ಜಗತ್ತಿನಲ್ಲಿ ಎಲ್ಲರೂ ಒಪ್ಪುವ ವಿಷಯ. ಹೀಗಿರುವಾಗ ನಾವೇಕೆ ಯೂರೋಪಿಯನ್ ವಿಜ್ಞಾನವನ್ನು ಕಲಿಸಬಾರದು?  ನಾವು ಇಂದು (ಭಾರತೀಯರಿಗೆ) ಸುದೃಢವಾದ (ನಮ್ಮ) ದರ್ಶನವನ್ನು ಹೇಳಿಕೊಡಬಹುದು; ನಿಜವಾದ ಇತಿಹಾಸವನ್ನು ಹೇಳಿಕೊಡಬಹುದು. ಹೀಗಿರುವಾಗ, ಅದೂ ಸಾರ್ವಜನಿಕರ ಹಣವನ್ನು ಉಪಯೋಗಿಸಿ, ನಾವು ಹೇಳಿಕೊಡುತ್ತಿರುವುದಾದರೂ ಏನನ್ನು? ವೈದ್ಯಕೀಯ ಎಂಬ ಹೆಸರಿನಲ್ಲಿ ಇಲ್ಲಿ ಹೇಳಿಕೊಡಲಾಗುವ ವಿದ್ಯೆಯು ಕುದುರೆಗೆ ಲಾಳ ಹೊಡೆಯುವ ಒಬ್ಬ ಇಂಗ್ಲಿಷ್  ಉದ್ಯೋಗಿಯನ್ನು ಕೂಡಾ ಅಪಮಾನಿಸುವಂಥದ್ದು.  ಇಲ್ಲಿಯ ಖಗೋಳಶಾಸ್ತ್ರವನ್ನು ಕೇಳಿ ಇಂಗ್ಲಿಷ್ ಬೋರ್ಡಿಂಗ್ ಶಾಲೆಯ ಹುಡುಗಿಯರು ನಗುತ್ತಾರೆ.  ಇಲ್ಲಿಯ ಚರಿತೆಯಲ್ಲಿ ಬರುವ ರಾಜರು ಮೂವತ್ತು ಅಡಿ ಎತ್ತರ ಇರುತ್ತಿದ್ದರಂತೆ! ಅವರು ಮೂವತ್ತು ಸಾವಿರ ಕಾಲ ರಾಜ್ಯವಾಳುತ್ತಿದ್ದರಂತೆ! ಇನ್ನು ಭೂಗೋಳ ಶಾಸ್ತ್ರದಲ್ಲೋ ಜೇನು-ಹಾಲುಗಳ ಹೊಳೆಗಳೇ ತುಂಬಿವೆ! ಇಷ್ಟಿದ್ದೂ ನಾವೇಕೆ ಇಂಗ್ಲಿಷ್ ಭಾಷೆಯನ್ನೂ ಯೂರೋಪಿಯನ್ ವಿಜ್ಞಾನವನ್ನೂ ಹೇಳಿಕೊಡಲು ಹಣವನ್ನು ಬಳಸಲು ಹಿಂದೆ ಮುಂದೆ ನೋಡುತ್ತಿದ್ದೇವೆ?

(ಭಾರತದ ಎಲ್ಲಾ ಕಡೆ ಶಿಕ್ಷಣಕ್ಷೇತ್ರದಲ್ಲಿದ್ದ ಸಂಸ್ಕೃತವೇ ಮುಂದೆ ಮೆಕಾಲೆಯ ಹೊಡೆತಕ್ಕೆ ಉರುಳಿ ಬಿದ್ದಾಗ ಇನ್ನು ಕನ್ನಡದ ಪಾಡೇನಾಗಬೇಕು?)

ಕಾಮೆಂಟ್‌ಗಳು

  1. ಈ ಬರಹ ಮುಗಿಸಿದ ಎಷ್ಟೋ ದಿನಗಳ ನಂತರ ನಾನು ನನ್ನ "ಸಿ.ಪಿ ಸಂಪದ" ಬ್ಲಾಗ್ ಪ್ರಾರಂಭಿಸಿದೆ; ಈ ಬ್ಲಾಗ್ ನಲ್ಲಿ ಕಂಪ್ಯೂಟರ್ ವಿಜ್ಞಾನ ಕುರಿತ ವಿಷಯಗಳನ್ನು ಕನ್ನಡದಲ್ಲಿ ಬರೆಯುತ್ತಿದ್ದೇನೆ. ನೀವೂ ನೋಡಬಹುದು - http://seepisampada.blogspot.com/

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)