ಶಶಿ ಕಪೂರ್ ಅವರ ಎರಡು ಚಿತ್ರಗಳು



ಸಿ ಪಿ ರವಿಕುಮಾರ್ 

ಶಶಿ ಕಪೂರ್ ಅವರಿಗೆ ಫಾಲ್ಕೆ ಪ್ರಶಸ್ತಿ ಬಂದಿದ್ದು ಸಂತೋಷದ ವಿಷಯ. ಅವರ ಚಿತ್ರಗಳಲ್ಲಿ ನನಗೆ ಥಟ್ಟನೆ ನೆನಪಿಗೆ ಬರುವುದು "ಜುನೂನ್.". ಜುನೂನ್ ಎಂಬ ಉರ್ದು ಪದದ ಅರ್ಥ "ಭಾವತೀವ್ರತೆ" ಅಥವಾ "ಭಾವೋನ್ಮಾದ." ಈ ಚಿತ್ರದ ಕಥೆ 1857ರಲ್ಲಿ ನಡೆದ ಸಿಪಾಯಿದಂಗೆಯ ಸಮಯದಲ್ಲಿ ನಡೆದ ಒಂದು ಘಟನೆಯನ್ನು ಕುರಿತದ್ದು. ಭಾರತೀಯ ಕಾದಂಬರಿಕಾರ ರಸ್ಕಿನ್ ಬಾಂಡ್ ಅವರ ಕಾದಂಬರಿಯನ್ನು ಆಧರಿಸಿ ಚಿತ್ರಕಥೆಯನ್ನು ಹೆಣೆಯಲಾಗಿದೆ. ನಾನು ವಿದ್ಯಾರ್ಥಿಯಾಗಿದ್ದಾಗ  ಈ ಚಿತ್ರ ನೋಡಿದ್ದು ನೆನಪಾಗುತ್ತಿದೆ.

ಸಿಪಾಯಿದಂಗೆ ನಡೆದಾಗ ಉತ್ತರಭಾರತದಲ್ಲಿ ನೆಲೆಸಿದ್ದ ಬ್ರಿಟಿಷ್ ಪ್ರಜೆಗಳ ಜೀವನ ಅಲ್ಲೋಲಕಲ್ಲೋಲವಾಯಿತು.  ಒಮ್ಮೆಲೇ ಅವರು ಅಲ್ಪಸಂಖ್ಯಾತರಾಗಿ ಭಾರತೀಯರ ಕೈಗೆ ಸಿಕ್ಕ ಪಾರಿವಾಳಗಳಾಗಿಹೋದರು. ಇಂಥ ಒಂದು ಕುಟುಂಬದಲ್ಲಿ ರೂಥ್ ಎಂಬ ಚೆಲುವೆಯೊಬ್ಬಳಿದ್ದಾಳೆ. ಅವಳ ತಂದೆ ಸಿಪಾಯಿದಂಗೆಯಲ್ಲಿ ಕೊಲೆಯಾಗುತ್ತಾನೆ. ಜಾವೇದ್ ಖಾನ್ ಎಂಬ ಒಬ್ಬ ಮುಸ್ಲಿಂ ಯುವಕನಿಗೆ ರೂಥ್ ಕುರಿತು ಜುನೂನ್ ಭಾವನೆ ಇದೆ. ಅವಳ ತಂದೆಯ ಕೊಲೆಗಡುಕರಲ್ಲಿ ಅವನೂ ಒಬ್ಬ. ಅವನು ರೂಥ್ ಳನ್ನು ಕೊಲೆ ಮಾಡದೆ ಉಳಿಸುತ್ತಾನೆ. ರೂಥ್ ಳ ತಾಯಿ ತಮ್ಮ ಕುಟುಂಬಕ್ಕೆ ಹತ್ತಿರದವನಾಗಿದ್ದ ಒಂದು ಹಿಂದೂ ಶ್ರೀಮಂತನ ಮನೆಯಲ್ಲಿ ಆಶ್ರಯ ಬೇಡುತ್ತಾಳೆ. ಈ ಶ್ರೀಮಂತನಿಗೆ ಧರ್ಮ ಸಂಕಟ. ಬ್ರಿಟಿಷರನ್ನು ಬಚ್ಚಿಟ್ಟುಕೊಂಡಿದ್ದಾನೆ ಎಂದು ತಿಳಿದರೆ ಅವನ ಕುಟುಂಬದವರ ಪ್ರಾಣಕ್ಕೆ ಸಂಚಕಾರ. ತನಗೆ ನಿಕಟವಾಗಿದ್ದವರನ್ನು ನಡುನೀರಿನಲ್ಲಿ ಕೈಬಿಡುವ ಹಾಗಿಲ್ಲ.  ತಮ್ಮ ಮನೆಯಲ್ಲಿ ಇರಲು ಬಂದ ಬ್ರಿಟಿಷ್ ಹೆಂಗಸರನ್ನು ಕುರಿತು  ಶ್ರೀಮಂತನ ಮನೆಯ ಹೆಂಗಸರಿಗೆ ಆಷ್ಟಕ್ಕಷ್ಟೆ.  ಆದರೆ ಕ್ರಮೇಣ ರೂಥ್ ಅವರ ಜೊತೆ ಹೊಂದಿಕೊಂಡು ಅವರ ಸ್ನೇಹ ಸಂಪಾದಿಸುತ್ತಾಳೆ. ಮುಂದೆ ಜಾವೇದ್ ಖಾನ್ ಅವಳನ್ನು ಅಪಹರಿಸಿ ಮನೆಗೆ ಕರೆದುಕೊಂಡು ಹೋಗುತ್ತಾನೆ. ಜಾವೇದ್ ಖಾನನ ಹೆಂಡತಿಗೆ ರೂಥ್ ಬಗ್ಗೆ ಮತ್ಸರ ಕುದಿಯುತ್ತದೆ. ರೂಥ್ ಗೆ ಜಾವೇದ್ ಖಾನ್ ಕುರಿತು ಭಯ. ಜಾವೇದ್ ಖಾನನಿಗೆ ಅವಳ ಭಾಷೆ ಬಾರದು; ದೂರದಿಂದಲೇ ಅವಳನ್ನು ಪ್ರೀತಿಯಿಂದ ನೋಡುತ್ತಾನೆ. ಅವಳ ಮೇಲೆ ಅವನು ಎಂದೂ ಕೈಮಾಡುವುದಿಲ್ಲ.

ಇನ್ನೇನು ಬ್ರಿಟಿಷರನ್ನು ಸೋಲಿಸಿಯೇ ಬಿಟ್ಟೆವು ಎಂದುಕೊಂಡಿದ್ದ ಭಾರತೀಯರಿಗೆ ಒಮ್ಮೆಲೇ ಪರಿಸ್ಥಿತಿ ಬದಲಾಗುತ್ತಿರುವುದು ಗೋಚರಿಸುತ್ತದೆ. ತಮ್ಮ ದೇಶದಿಂದ ಬಂದ ಮಿಲಿಟರಿ ನೆರವಿನಿಂದ ಬ್ರಿಟಿಷರು  ಸಿಪಾಯಿದಂಗೆಯನ್ನು ಅಡಗಿಸುತ್ತಾರೆ. ರೂಥ್ ಮತ್ತು ಅವಳ ತಾಯಿ ತಮ್ಮ ದೇಶಕ್ಕೆ ಹಿಂತಿರುಗಿ ಹೋಗುತ್ತಾರೆ. ಅವಳು ಜಾವೇದ್ ಖಾನನನ್ನು ಗುಪ್ತವಾಗಿ ಪ್ರೀತಿಸುವುದರಿಂದ ಕೊನೆಯವರೆಗೂ ಮದುವೆಯಾಗದೆ ಇದ್ದುಬಿಡುತ್ತಾಳೆ.

ಜಾವೇದ್ ಖಾನ್ ಪಾತ್ರದಲ್ಲಿ ಶಶಿ ಕಪೂರ್ ಮತ್ತು ರೂಥ್ ತಾಯಿಯಾಗಿ ಶಶಿ ಕಪೂರ್ ಅವರ ದಿವಂಗತ  ಪತ್ನಿ ಜೆನಿಫರ್ ಕೆಂಡಾಲ್ ನಟಿಸಿದ್ದಾರೆ.  ನಫೀಸಾ ಅಲಿ ಎಂಬ ನಟಿ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಚಿತ್ರವನ್ನು ಶ್ಯಾಮ್ ಬೇನೆಗಲ್ ನಿರ್ದೇಶಿಸಿದ್ದಾರೆ.  ಜಾವೇದ್ ಖಾನನಿಗೆ ಪಾರಿವಾಳಗಳನ್ನು ಸಾಕುವ ಹವ್ಯಾಸವಿರುತ್ತದೆ. ರೂಥ್ ಕೂಡಾ ಅವನು ಸಾಕಿದ ಪಾರಿವಾಳದಂತೆಯೇ. ಜಾವೇದ್ ಖಾನನ ಸ್ನೇಹಿತ ಸರ್ಫರಾಜ್ ಖಾನ್ ಎಂಬುವನಿಗೆ ಬ್ರಿಟಿಷ್ ಜನರ ಬಗ್ಗೆ ತೀವ್ರವಾದ ದ್ವೇಷವಿದೆ. ಜಾವೇದ್ ಖಾನ್ ಹೀಗೆ ರೂಥ್ ಳನ್ನು ಪ್ರೇಮಿಸುವುದು ಅವನಿಗೆ ನುಂಗಲಾರದ ತುತ್ತು. ಒಮ್ಮೆ ರೋಷದಿಂದ ಅವನು ರೂಥ್ ಮುಂದೆ ಅವಳು ತುಂಬಾ ಪ್ರೀತಿಸುವ ಒಂದು ಪಾರಿವಾಳದ ಕತ್ತು ಮುರಿದು ಹಾಕುತ್ತಾನೆ.

1978ರಲ್ಲಿ ತಯಾರಾದ ಚಿತ್ರವನ್ನು ಶಶಿ ಕಪೂರ್ ತಾವೇ ನಿರ್ಮಿಸಿದರು. ಶಶಿ ಕಪೂರ್ ಮತ್ತು ಅವರ ಪತ್ನಿ ಇಬ್ಬರೂ ಮುಂಬೈನಲ್ಲಿ ತಮ್ಮ ತಂದೆ ಪ್ರಾರಂಭಿಸಿದ ಪೃಥ್ವಿ ಥಿಯೇಟರ್ ಎಂಬ ನಾಟಕಶಾಲೆಯಲ್ಲಿ ಸಕ್ರಿಯವಾಗಿದ್ದರು. ನಾಸಿರುದ್ದೀನ್ ಷಾ ಮುಂತಾದ ಅನೇಕ ಮುಖ್ಯ ನಟ-ನಟಿಯರು ಈ ನಾಟಕಶಾಲೆಯ ಮೂಲಕ ಪ್ರಸಿದ್ಧರಾಗಿ ಚಿತ್ರರಂಗಕ್ಕೆ ಪ್ರವೇಶಿಸಿದವರು.  ಜುನೂನ್ ಚಿತ್ರದಲ್ಲಿ ಇಂಥ ಅನೇಕರು ನಟಿಸಿದ್ದಾರೆ. ಇಸ್ಮತ್ ಚುಗತಾಯಿ ಎಂಬ ಪ್ರಸಿದ್ಧ ಉರ್ದೂ ಲೇಖಕಿ ಕೂಡಾ ನಟಿಸಿದ್ದಾರೆ.

ಶಶಿ ಕಪೂರ್ ಇನ್ನೂ ಚಿಕ್ಕವರಾಗಿದ್ದಾಗ ನಟಿಸಿದ ದ ಹೌಸ್ ಹೋಲ್ಡರ್ ಎಂಬ ಮರ್ಚೆಂಟ್ ಐವರಿ ನಿರ್ದೇಶನದ ಚಿತ್ರದಲ್ಲಿ ಅವರ ನಟನೆ ಮನೋಜ್ಞವಾಗಿದೆ. ಹೊಸದಾಗಿ ಒಂದು ಹೆಣ್ಣನ್ನು ಮದುವೆಯಾಗಿ ಮನೆಗೆ ಕರೆತಂದ ಒಬ್ಬ ಯುವಕನ ಕಥೆ ಈ ಚಿತ್ರದಲ್ಲಿದೆ. ಅವನಿಗೆ ತನ್ನ ನೌಕರಿ, ತನ್ನ ಹಣ ಇವು ಮುಖ್ಯ - ತನ್ನ ಹೆಂಡತಿಯನ್ನು ಅವನು ಮೊದಲು ಕಡೆಗಣಿಸುತ್ತಾನೆ.  ಅವನ ತಾಯಿ ಅವರೊಂದಿಗೆ ಇರಲು ಬಂದಾಗಲಂತೂ ಗಂಡ-ಹೆಂಡಂದಿರ ನಡುವಣ ಸಂಬಂಧ ಪೂರ್ತಿ ಕಡಿದುಹೋಗುತ್ತದೆ. ಹೆಂಡತಿ ತನ್ನ ತವರಿಗೆ ಹೊರಟುಹೋಗುತ್ತಾಳೆ. ಕ್ರಮೇಣ ಯುವಕನಿಗೆ ತನ್ನ ಹೆಂಡತಿಯನ್ನು ಗೌರವಿಸುವುದು ಮತ್ತು ಪ್ರೀತಿಸುವುದು ಸಾಧ್ಯವಾಗುತ್ತದೆ.  ಯುವಕನ ಪಾತ್ರದಲ್ಲಿ ಶಶಿ ಕಪೂರ್ ಮತ್ತು ಹೆಂಡತಿಯ ಪಾತ್ರದಲ್ಲಿ ಲೀಲಾ ನಾಯ್ಡು ನಟಿಸಿದ್ದಾರೆ. ಈ ಚಿತ್ರವನ್ನು ನೋಡುವುದು ಒಂದು ಆಹ್ಲಾದಕಾರ ಅನುಭವ.  ಟ್ಯಾಗೋರರ ಮೃಣಾಲಿನಿ ಎಂಬ ಪಾತ್ರ ಈ ಚಿತ್ರದ ನಾಯಕನನ್ನು ನೋಡಿದಾಗ ನೆನಪಾಗುತ್ತದೆ. ಮೃಣಾಲಿನಿ (ಮಿನಿ) ತುಂಟಾಟದ ಹುಡುಗಿ; ಇವಳನ್ನು ಮೆಚ್ಚಿ ಒಬ್ಬ ಯುವಕ ಮದುವೆಯಾಗುತ್ತಾನೆ. ಆದರೆ ಮಿನಿ ಮದುವೆಯಾದ ನಂತರವೂ ಹುಡುಗಿಯಂತೆಯೇ ಪುಂಡಾಟದಲ್ಲಿ ಮಗ್ನಳಾಗಿರುತ್ತಾಳೆ! ನಿರಾಶೆಯಿಂದ ಅವಳ ಪತಿ ಓದಲು ಕಲ್ಕತ್ತೆಗೆ ಹೊರಟು ಹೋದಾಗ ಮಿನಿಗೆ ಒಮ್ಮೆಲೇ ಹಿಂದೆಂದೂ ಕಾಡದ ಒಂಟಿತನ ಕಾಡತೊಡಗುತ್ತದೆ. ಅವಳಿಗೆ ಒಮ್ಮೆಲೇ ತಾನು ದೊಡ್ಡವಳಾಗಿದ್ದೇನೆ ಎಂದು ಮನವರಿಕೆಯಾಗುತ್ತದೆ. ಈ ಕಥೆಯನ್ನು ಆಧರಿಸಿ ಉಪಹಾರ್ ಎಂಬ ಚಿತ್ರ ತಯಾರಿಸಲಾಗಿದೆ. (ಜಯಾ ಬಚ್ಚನ್ ಮಿನಿ ಪಾತ್ರದಲ್ಲಿ ನಟಿಸಿದ್ದಾರೆ).

ಮುಂದೆ ಶಶಿ ಕಪೂರ್ ಬಾಲಿವುಡ್ ಚಿತ್ರಗಳಲ್ಲೂ ನಟಿಸಿ ಖ್ಯಾತರಾದರು. ಅವರ ಬಹುಮುಖ ಪ್ರತಿಭೆಗೆ ಸಂದ ಗೌರವ ಫಾಲ್ಕೆ ಪ್ರಶಸ್ತಿ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)