ಜರೆ
(ಚಾರ್ಲ್ಸ್ ಸ್ಪೆನ್ಸ್ಲೇ ಅವರ ಚಿತ್ರ ನೋಡಿ ಬರೆದ ಕವಿತೆ. ಕೆಳಗೆ ತೋರಿಸಿದ ಚಿತ್ರ ಬರೆದಿದ್ದು ಏ ಐ.)
ಚಿತ್ರಕವಿತೆ: ಸಿ. ಪಿ. ರವಿಕುಮಾರ್
ಜರೆ
ಮರೆತ ರಾಗಗಳನ್ನು ಮತ್ತೆ ನೆನೆಸಿಕೊಳ್ಳುತ್ತಾ
ನೆರೆತ ಕೂದಲಿನವನು ಕೂತಿರುವನು ಸುಮ್ಮನೆ
ಬರುವವರಿದ್ದರಲ್ಲ ಇಂದು ಯಾರೋ? ಅಥವಾ
ಕರೆದಿದ್ದರೋ ಅವರು ತನ್ನನ್ನೇ ಮನೆಗೆ?
ಯಾರವರು? ಓರಗೆಯವರು ಒಬ್ಬರೂ ಇಲ್ಲವಲ್ಲ.
ಹೊರದೇಶದಲ್ಲಿದ್ದಾರಲ್ಲವೆ ವರ್ಷಗಳಿಂದ ಮಕ್ಕಳು?
ಕರೆದು ಕೇಳೋಣ ಎಂದು ಕೂಗಿದ ಅವಳನ್ನು;
ಮರುಕ್ಷಣವೇ ಅವಳು ಮನದಲ್ಲಿ ನಕ್ಕಳು:
ತೆರೆತೆರೆಯಾಗಿ ನಗಬಲ್ಲವಳು ಅವಳೊಬ್ಬಳೇ
ಪೊರೆಗಣ್ಣಿಗೂ ಕಾಣುತ್ತದೆ ಅವಳ ನಗುಮುಖ.
ಅರಳು ಮರಳಾಗಿದೆ ಎಂದು ರೇಗಿಸಿ ನಕ್ಕರೂ
ಬರಲಿಲ್ಲ ಏಕೆಂದು ಯೋಚಿಸಿದ ಮುದುಕ.
ಬರಿದಾದ ರಂಗ, ವಾದ್ಯ ನುಡಿಸುತ್ತಿದ್ದಾಗ ತಾನೊಬ್ಬನೇ
ತೆರೆ ಯಾಕೆ ಎಳೆಯುತ್ತಿದೆ? ಕಾರ್ಯಕ್ರಮ ಮುಗಿಯಿತೇ?
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ