ಮಿದುಳು ತಿನ್ನುವ ಅಮೀಬಾ

 ಸಿ ಪಿ ರವಿಕುಮಾರ್




"ಕೇಳಿದಿರಾ? ಇನ್ನೊಂದು ಆಘಾತಕರ ಸುದ್ದಿ!" ಎಂದು ಮಿಸೆಸ್ ಶಾಂತಾ ಏದುಸಿರು ಬಿಡುತ್ತಾ ಮನೆಯನ್ನು ಪ್ರವೇಶಿಸಿದಾಗ ಮಿಸೆಸ್ ತಾರಾ ಅವರೆಕಾಯಿ ಬಿಡಿಸುತ್ತಾ ಕೂತಿದ್ದರು. 


"ಏನಾಯ್ತು? ಈರುಳ್ಳಿ ಬೆಲೆ ಮತ್ತೆ ಹಂಡ್ರೆಡ್ ದಾಟಿತಾ?" ಎಂದು ಮಿಸೆಸ್ ತಾರಾ ಆತಂಕದಿಂದ ಕೇಳಿದರು. ಅಂದು ಈರುಳ್ಳಿ ಸಾಂಬಾರ್ ಮಾಡುವುದು ಎಂದು ತೀರ್ಮಾನ ಮಾಡಿದ್ದರಲ್ಲ?


"ಇಲ್ಲಾ ಇಲ್ಲಾ ಈರುಳ್ಳಿ ಈಸ್ ಓಕೆ. ಪ್ರಾಬ್ಲಂ ಬಂದಿರೋದು ಅಮೀಬಾ ಇಂದ"


"ಯಾರು ಅಮೀಬಾ ಅಂದರೆ? ಕಸ್ತೂರಿಬಾ ವಿನೋಬಾ ಕೇಳಿದೀನಿ. ಅಮೀಬಾ ಯಾರು, ಅಮೀರ್ ಖಾನ್ ಹೆಂಡ್ತಿ ಏನ್ರೀ?"


"ಅಯ್ಯೋ ನೀವು ಬಯಾಲಜಿ ಓದಲಿಲ್ವಾ ತಾರಾ? ಅಮೀಬಾ, ದ ಸಿಂಗಲ್ ಸೆಲ್ಯುಲರ್ ಆರ್ಗಾನಿಸಂ."


"ಓಹ್ ಹೌದಲ್ವಾ! ಈಗ ನೆನಪಿಗೆ ಬರ್ತಾ ಇದೆ. ಅದೇನೋ ನ್ಯೂಕ್ಲಿಯಸ್, ಪ್ಲಾಸ್ಮಾ ಅಂತ ಏನೋ ಚಿತ್ರ ಬರೆದು ಲೇಬಲ್ ಮಾಡಿದ್ದು."


"ಪ್ಲಾಸ್ಮಾ ಅಲ್ಲ, ಸೈಟೋಪ್ಲಾಸಂ. ಅಯ್ಯೋ ಅದಿರಲಿ, ಸುದ್ದಿ ಕೇಳಿ. ಸೌತ್ ಕೊರಿಯಾದಲ್ಲಿ ಒಂದು ಭಯಂಕರ ಅಮೀಬಾ ಕಾಣಿಸಿಕೊಂಡಿದೆ ಕಣ್ರೀ."


"ಅಯ್ಯ, ಈ ಕೊರೊನಾಗಿಂತಲೂ ಏನ್ರೀ? ನೀವು ಸುಮ್ಮನೆ ಹೆದರ್ತೀರಿ. ಮೊದಲು ಆ ಮಾಸ್ಕ್ ತೆಗೀರಿ. ಕಾಫಿ ಕೊಡ್ತೀನಿ."


ಕಾಫಿ ಹೀರುತ್ತಾ ಮಿಸೆಸ್ ಶಾಂತಾ "ಸೌತ್ ಕೊರಿಯಾದಲ್ಲಿ ಈ ಅಮೀಬಾ ಸಿಕ್ಕಿದೆಯಂತೆ ಕಣ್ರೀ. ಅದು ಬ್ರೇನ್ ತಿಂದುಬಿಡತ್ತಂತೆ!" ಎಂದು ತಟ್ಟೆಯಿಂದ ಕೋಡುಬಳೆ ಎತ್ತಿಕೊಂಡು ಮುರಿದು ಬಾಯಿಗೆ ಹಾಕಿಕೊಂಡರು.


"ಏನು? ಬುದ್ಧಿ ತಿಂದು ಬಿಡತ್ತಾ! ಅದೇನು ಬುದ್ಧಿಜೀವಿ ಏನ್ರೀ?"


"ಅಯ್ಯೋ ಜೋಕ್ ಮಾಡಬೇಡಿ ತಾರಾ. ನನಗೆ ಯಾಕೋ ವಿಪರೀತ ಹೆದರಿಕೆ ಆಗ್ತಿದೆ."


"ನಿಮಗೆ ಏನೂ ಆಗಲ್ಲ ಶಾಂತಾ. ಶಾಂತವಾಗಿರಿ.  ನಾನು ಗ್ಯಾರಂಟಿ ಕೊಡ್ತೀನಿ."


"ಹ್ಯಾಗೆ?"


"ಬ್ರೇನ್ ಇದ್ದರೆ ತಾನೇ ತಿನ್ನೋದು, ನಿಮ್ಮ ಅಮೀಬಾ!"


"ನೀವೋ ನಿಮ್ಮ ಜೋಕೋ! ವರ್ಸ್ ದ್ಯಾನ್ ದೋಸ್ ನಗುಬಂತಾ ವರ್ಸಸ್ ಬೈ ರವಿಕುಮಾರ್!" ಎಂದು ಮಿಸೆಸ್ ಶಾಂತಾ ಅಶಾಂತರಾಗಿ ಬೆವರು ವರ್ಸಿಕೊಂಡರು.


"ನೋಡ್ರೀ, ಅದು ನಿಮಗೆ ಒಬ್ಬರಿಗೆ ಅಂತ ಹೇಳ್ತಿಲ್ಲ ಶಾಂತಾ! ನಮ್ಮಲ್ಲಿ ಯಾರಿಗೂ ಈ ಅಮೀಬಾ ಏನೂ ಮಾಡಲ್ಲ."


"...??"


"ಯಾಕೆ ಹಾಗೆ ನೋಡ್ತೀರಿ? ನಂಬಿಕೆ ಬರ್ತಿಲ್ಲವಾ? ನೋಡಿ, ಹುಟ್ಟಿದಾಗ ನಮಗೆ ಎಲ್ಲರಿಗೂ ಇರೋ ಹಾಗೆ ಬ್ರೇನ್ ಇದ್ದೇ ಇತ್ತು. ಯಾವಾಗ ಈ ಮೊಬೈಲ್ ಮೇಲೆ ಫೇಸ್ಬುಕ್ ವಾಟ್ಸಾಪ್ ಮತ್ತು ಟಿವಿ ಮೇಲೆ ಒನ್ ಟೂ ತ್ರೀ ಫೋರ್ ಫೈವ್ ಸಿಕ್ಸ್ ಸೆವೆನ್ ಏಯ್ಟ್ ನೈನ್ ಅಂತ ಟಿವಿ ನ್ಯೂಸ್ ಚಾನೆಲ್ ಬಂದ್ವೋ ಅವೆಲ್ಲಾ ಸೇರಿ ನಮ್ಮ ಬ್ರೇನ್ ತಿಂದು ಖಾಲಿ ಮಾಡಿಬಿಟ್ಟಿವೆ. ಹಾಗಾಗಿ ನಿರಾಳವಾಗಿರಿ. ವಾಟ್ಸಾಪ್ ಮೇಲೆ ಅಮೀಬಾ ವಿಷಯ ಓದಿ. ಟಿವಿ ಮೇಲೆ ಅಮೀಬಾ ನಿಜವೋ ಸುಳ್ಳೋ ಅಂತ ಚರ್ಚೆ ನೋಡಿ.  ರೆಸಿಪಿ ನೋಡಿಕೊಂಡು ಅವರೆಕಾಳು ಉಪ್ಪಿಟ್ಟು ಮಾಡಿ ತಿನ್ನಿ. ಯಾವ ಅಮೀಬಾನೂ ಬಾ ಅಂದ್ರೂ ಬರಲ್ಲ."


ಅಷ್ಟರಲ್ಲಿ ಮಿಸೆಸ್ ತಾರಾ ಅವರ ಪತಿ ಶ್ರೀ ಗುರುಮೂರ್ತಿ "ಇನ್ನೂ ಉಪ್ಪಿಟ್ಟು ರೆಡಿ ಆಗಿಲ್ವಾ? ಇನ್ನೇನು ಟಿವಿ ಡಿಬೇಟ್ ಶುರು ಆಗುತ್ತೆ" ಎನ್ನುತ್ತಾ ಬಂದಾಗ "ನಾನು ಹೊರಡುತ್ತೀನಿ ತಾರಾ" ಎಂದು ಮಿಸೆಸ್ ಶಾಂತಾ ಮೇಲೆದ್ದರು.


#ನಗುಬಂತಾ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)