ಗ್ರೇ ಸ್ಕೇಲ್ ಚಿತ್ರ



ಸಿ ಪಿ ರವಿಕುಮಾರ್ 

ಯಾರೋ ಫೇಸ್ ಬುಕ್ ಮೇಲೆ ಕೆಂಪೇಗೌಡ ರಸ್ತೆಯ ಚಿತ್ರ ಹಾಕಿದ್ದಾರೆ. ಅಲ್ಲೊಂದು ಡಬಲ್ ಡೆಕರ್ ಬಸ್ ಚಿತ್ರ ಕಾಣುತ್ತಿದೆ. ಆ ಬಸ್ ನಲ್ಲಿ ನಾನು ಕೂತಿದ್ದೇನೆ, ನಿಮಗೆ ಕಾಣುತ್ತಿದೆಯೇ? ಬಸ್ ಹತ್ತಿದ ಕೂಡಲೇ ಮೆಟ್ಟಿಲು ಹತ್ತಿ ಮೇಲಿನ ಡೆಕ್ ಗೆ ಹೋಗುವುದು ನನ್ನ ಅಭ್ಯಾಸ. ಡ್ರೈವರ್ ಇಲ್ಲದ ಮೇಲಿನ ಡೆಕ್ ನ ಮುಂದಿನ ಸೀಟಿನಲ್ಲಿ ಕೂತರೆ ಎಲ್ಲಾ ಎಷ್ಟು ಚೆನ್ನಾಗಿ ಕಾಣುತ್ತಿದೆ! ಗ್ರೇ ಬಣ್ಣದ ಮರಗಿಡಗಳಲ್ಲಿ ಗ್ರೇ ಬಣ್ಣದ ಎಲೆಗಳು ಸೊಂಪಾಗಿ ನೇತಾಡುತ್ತಿವೆ. ಬಹುತೇಕ ಕಪ್ಪು ಜನ ಕಪ್ಪು-ಬಿಳುಪು ಬಟ್ಟೆ ತೊಟ್ಟು ಯಾವುದೇ ತರಾತುರಿಯಿಲ್ಲದೆ ಓಡಾಡುತ್ತಿದ್ದಾರೆ. ಕೆಲವರು ರಸ್ತೆ ಬದಿಯಲ್ಲಿ ಗಿಳಿಮೂತಿ ಮಾವಿನಕಾಯಿಗೆ ಕಾರ ಹಚ್ಚಿಸಿಕೊಂಡು ತಿನ್ನುತ್ತಿದ್ದಾರೆ.  ಸಪ್ನಾ ಚಿತ್ರಮಂದಿರದಲ್ಲಿ "ಸ್ವಾಮಿ" ಚಿತ್ರ ನಡೆಯುತ್ತಿದೆ. ಲತಾ ಮಂಗೇಶ್ಕರ್ ಹಾಡಿರುವ ಚಿತ್ರಗೀತೆ ಎಷ್ಟು ಇಂಪಾಗಿದೆ. ಪಲ್  ಭರ್ ಮೇ ಯೇ ಕ್ಯಾ ಹೋ ಗಯಾ! ಒಂದೇ ಕ್ಷಣದಲ್ಲಿ ಏನೇನು ನಡೆದುಹೋಯಿತು!

ಅವತ್ತು ಆಗಿದ್ದೂ ಹಾಗೇ. ಒಮ್ಮೆಲೇ ಸುಂಟರಗಾಳಿಯೊಂದು ಬೀಸಿತು. ಹರಿಕೇನ್ ಕಟ್ರೀನಾ ಅಥವಾ ಅದರ ಸೋದರ ಸಂಬಂಧಿ ಯಾವುದೋ. ಹೇಗೆ ಬೀಸಿತು ಆ ಗಾಳಿ! ನಾನು ಕುಳಿತಿದ್ದ ಡಬ್ಬಲ್ ಡೆಕರ್ ಅಲ್ಲಾಡಿ ಹೋಯಿತು. ಒಮ್ಮೆಲೇ ಬಸ್ ಮೇಲಕ್ಕೆ ಮೇಲಕ್ಕೆ ಇನ್ನೂ ಮೇಲಕ್ಕೆ ಹಾರಿತು. ಕಣ್ಣುಬಿಟ್ಟು ನೋಡಿದಾಗ ನಾನೊಂದು ಡಬಲ್ ಡೆಕರ್  A380 ಏರ್ ಬಸ್ ನಲ್ಲಿ ಕುಳಿತದ್ದು ಅನುಭವಕ್ಕೆ ಬಂತು. ಗಗನಸಖಿಯರು ಕಿತ್ತಳೆ, ಟೊಮೇಟೋ ಮತ್ತು ಪೈನಾಪಲ್ ಹಣ್ಣಿನ ರಸದ ಬಟ್ಟಲುಗಳನ್ನು ಟ್ರೇನಲ್ಲಿಟ್ಟುಕೊಂಡು ಓಡಾಡುತ್ತಿದ್ದರು.  ನಿಧಾನವಾಗಿ ನನಗೊಂದು ವಿಷಯ ಹೊಳೆಯಿತು. ಈ ಹಣ್ಣಿನ ರಸಗಳು ಹಳದಿ, ಕೆಂಪು ಬಣ್ಣಗಳಲ್ಲಿದ್ದವು. ಗಗನಸಖಿಯರು ಕೂಡಾ ಬಣ್ಣದ ಬಟ್ಟೆಗಳನ್ನು ಹಾಕಿಕೊಂಡಿದ್ದರು. ಏರ್ ಬಸ್ ನಲ್ಲಿದ್ದ ಎಲ್ಲರೂ ಬಣ್ಣದ ಬಟ್ಟೆಗಳನ್ನು ಹಾಕಿಕೊಂಡಿದ್ದರು. ಕೇವಲ ನಾನೊಬ್ಬ ಮಾತ್ರ ಗ್ರೇ ಸ್ಕೇಲ್ ಚಿತ್ರವಾಗಿದ್ದೆ.  ನನ್ನನ್ನು ಕೀಳರಿಮೆ ಆವರಿಸಿಕೊಂಡಿತು. ನಿಮ್ಮೊಡನಿದ್ದೂ ನಿಮ್ಮಂತಾಗದೆ  ಜಗ್ಗಿದ ಕಡೆ ಬಾಗದೆ ನಾನು ಗ್ರೇ ಆಗಿ ಉಳಿದೆನಲ್ಲಾ ಎಂಬ ಕೀಳರಿಮೆ ನನ್ನನ್ನು ತಿನ್ನತೊಡಗಿತು. ಗಗನಸಖಿ ನನ್ನ ಬಳಿ ಬಂದಾಗ ನಾನು ಉಸಿರು ಬಿಗಿಹಿಡಿದೆ.  ನನ್ನನ್ನು ಅವಳು ಕಡೆಗಣಿಸಿ ಹೊರಟುಹೋಗುತ್ತಾಳೆ ಎಂದು ನನ್ನ ಮನಸ್ಸು ಹೇಳಿತು.   ಆದರೆ ಆಕೆ ನಿಂತು ನನ್ನ ಕಡೆ ನೋಡಿ ಮುಗುಳ್ನಕ್ಕಳು.  ಗ್ರೇ ಬಣ್ಣದ ನನ್ನನ್ನು ನೋಡಿ ಅವಳು ಮುಗುಳ್ನಕ್ಕಳು! ಸಾಲದೆಂಬಂತೆ ನನ್ನ ಮುಂದೆ ಟ್ರೇ ಹಿಡಿದಳು.  ನಾನು ಹಿಂದೆ-ಮುಂದೆ ನೋಡುತ್ತಾ ಪೈನಾಪಲ್ ಹಣ್ಣಿನರಸವಿದ್ದ ಬಟ್ಟಲನ್ನು ಕೈಗೆತ್ತಿಕೊಂಡೆ. 
  
ಪೈನಾಪಲ್ ಹಣ್ಣಿನರಸದಲ್ಲಿ ಏನಿತ್ತೋ! ಒಮ್ಮೆಲೇ ನನಗೆ ತಲೆತಿರುಗಿದಂತೆ ಭಾಸವಾಯಿತು. ಸಾವರಿಸಿಕೊಂಡಾಗ ನಾನು ವಾಯುವಜ್ರ ಬಸ್ ನಲ್ಲಿ ಕುಳಿತಿದ್ದು ಅನುಭವಕ್ಕೆ ಬಂತು. ವಾತಾನುಕೂಲಿತ ಬಸ್ ನಲ್ಲಿ ನನ್ನ ಮೈ ಸಣ್ಣಗೆ ನಡುಗಿತು. ನಾನು ಸುತ್ತಲೂ ನೋಡಿದೆ. ಬಸ್ ಒಳಗೆ ಕೆಲವೇ ಜನರಿದ್ದರು. ಕಂಡಕ್ಟರ್ ನಿದ್ದೆ ಮಾಡುತ್ತಿದ್ದ. ಒಬ್ಬಳು ಇಪ್ಪತ್ತರ ಹರೆಯದ ತರುಣಿ ಮೊಬೈಲ್ ಫೋನ್ ಹಿಡಿದು ಮುಗುಳ್ನಗುತ್ತಾ ಹರಟುತ್ತಿದ್ದಳು. ಅವಳು ಬಣ್ಣಬಣ್ಣದ ಬಟ್ಟೆ ತೊಟ್ಟಿದ್ದಳು. ಅವಳ ಪಕ್ಕದಲ್ಲಿ ಕುಳಿತಿದ್ದ ಮಧ್ಯವಯಸ್ಕನೊಬ್ಬ ತನ್ನ ಕೈಯಲ್ಲಿದ್ದ ಫೋನ್ ಮೇಲೆ ಏನನ್ನೋ ಓದುತ್ತಿದ್ದ. ಅವನ ಬಟ್ಟೆಯಲ್ಲಿ ಕೂಡಾ ಬಣ್ಣಗಳಿದ್ದವು. ಒಬ್ಬ ಯುವಕ ಹಿಂದಿನ ಸೀಟಿನಲ್ಲಿ ಹೆಡ್ ಫೋನ್ ಹಾಕಿಕೊಂಡು ಹಾಡು ಕೇಳುವುದರಲ್ಲಿ ಮಗ್ನನಾಗಿದ್ದ.  ಅವರು ಯಾರೂ ನನ್ನ ಕಡೆ ನೋಡುತ್ತಿರಲಿಲ್ಲ. ನಾನು ನನ್ನ ಕಡೆಗೆ ದೃಷ್ಟಿ ಹಾಯಿಸಿದೆ. ನಾನಿನ್ನೂ ಗ್ರೇ ಬಣ್ಣದಲ್ಲೇ ಇರುವುದು ನನ್ನ ಗಮನಕ್ಕೆ ಬಂದು ನನಗೆ ವಿಪರೀತ ಮುಜುಗರವಾಯಿತು. ನಾನು ಹೊರಗಡೆ ದೃಷ್ಟಿ ಹಾಯಿಸಿದೆ. ಕೆಂಪೇಗೌಡ ರಸ್ತೆ ಕೂಡಾ ಈಗ ಬಣ್ಣಗಳಲ್ಲಿ ಅದ್ದಿ ತೆಗೆದಂತೆ ಕಂಗೊಳಿಸುತ್ತಿತ್ತು. ಸಪ್ನಾ ಚಿತ್ರಮಂದಿರದ ಮುಂದೆ ಹಾಕಿದ ಪೋಸ್ಟರ್ ನನಗೆ ಓದಲು ಕಷ್ಟವಾಯಿತು. ಓರೆಕೋರೆ ಗೀಟುಗಳ ಚಿತ್ರವಿಚಿತ್ರ ಅಕ್ಷರಗಳು ನನಗೆ ಅರ್ಥವಾಗಲಿಲ್ಲ.  ಚಿತ್ರಮಂದಿರದ ಹೊರಗೆ ಗಲಾಟೆಯೇ ಇರಲಿಲ್ಲ. ಓಡಾಡುತಿದ್ದ ಎಲ್ಲಾ ಜನರ  ಕೈಯಲ್ಲೂ ಒಂದು ಮೊಬೈಲ್ ಫೋನ್ ಇದ್ದದ್ದು ಕಾಣಿಸಿತು. ಎಲ್ಲರೂ ಅದನ್ನು ನೋಡಿಕೊಂಡೇ ಓಡಾಡುತ್ತಿದ್ದರು. ನಾನು ನೋಡುತ್ತಿರುವಂತೆಯೇ ಇಬ್ಬರು ಎದುರು ದಿಕ್ಕಿನಿಂದ ಬರುತ್ತಿದ್ದ ಯುವಕರು ಒಬ್ಬರಿಗೊಬ್ಬರು ಢಿಕ್ಕಿ ಹೊಡೆದರು. ಆದರೂ ಏನೂ ಆಗದವರಂತೆ ಸಾವರಿಸಿಕೊಂಡು ಮುನ್ನಡೆದರು. ಯುವಕರ ದೃಷ್ಟಿ ತಮ್ಮ ಮೊಬೈಲ್ ಫೋನಿನಿಂದ ಕದಲಲೇ ಇಲ್ಲವೆಂದು ನಾನು ಸೋಜಿಗ ಪಡುತ್ತಿರುವಷ್ಟರಲ್ಲೇ ಅವರಿಬ್ಬರೂ ತಾವು ಧರಿಸಿದ ಕ್ಯಾಪ್ ಮೇಲೆತ್ತಿ ತಮ್ಮ ಆಂಟೆನಾ ಸರಿ ಮಾಡಿಕೊಂಡರು. 

ನಾನು ಸಣ್ಣಗೆ ಚೀರಿದೆ. ನನ್ನ ಸಹಪ್ರಯಾಣಿಕರು ಕತ್ತು ಮೇಲೆತ್ತಿ ನನ್ನ ಕಡೆ ನೋಡಿ ಮತ್ತೆ ತಮ್ಮ ಮೊಬೈಲ್ ಕಡೆ ದೃಷ್ಟಿ ನೆಟ್ಟು ತಮ್ಮ ಕೆಲಸ ಮುಂದುವರೆಸಿದರು. ಅವರ ಕಣ್ಣುಗಳ ಪಾಪೆಗಳು ಚಲಿಸುತ್ತಲೇ ಇರಲಿಲ್ಲವೆಂಬುದು ನನ್ನ ಗಮನಕ್ಕೆ ಬಂತು.  ನಾನು ಮತ್ತೆ ಸಣ್ಣಗೆ ಚೀರಿದೆ. ಮಧ್ಯವಯಸ್ಕ ತನ್ನ ಫೋನ್ ಮೇಲೆ ಫೇಸ್ ಬುಕ್ ಚಿತ್ರ ನೋಡುತ್ತಿದ್ದ. ಆ ಫೇಸ್ ಬುಕ್ ಚಿತ್ರದಲ್ಲಿ ಕೆಂಪೇಗೌಡ ರಸ್ತೆಯ ಗ್ರೇ ಸ್ಕೇಲ್ ಚಿತ್ರವಿತ್ತು. ಅಲ್ಲೊಂದು ಡಬಲ್ ಡೆಕರ್ ಬಸ್. ಸಪ್ನಾ ಚಿತ್ರಮಂದಿರದಲ್ಲಿ 'ಸ್ವಾಮಿ' ಚಿತ್ರ ನಡೆಯುತ್ತಿತ್ತು.  ಆ ಬಸ್ ನಲ್ಲಿ ಗ್ರೇ ಸ್ಕೇಲ್ ಬಣ್ಣದ ಜನ ಕುಳಿತಿದ್ದರು. ಸುಂಟರಗಾಳಿಗಾಗಿ, ಗಗನಸಖಿಗಾಗಿ, ಪೈನಾಪಲ್ ಹಣ್ಣಿನ ರಸಕ್ಕಾಗಿ ನಾನು ಎಲ್ಲಾ ಕಡೆ ನೋಡುತ್ತಾ ನನ್ನ ಮುಂದಿದ್ದ ಟಚ್ ಸ್ಕ್ರೀನ್ ಸಿಕ್ಕಸಿಕ್ಕ ಕಡೆ ಒತ್ತತೊಡಗಿದೆ.   ಯುವಕ ಹೆಡ್ ಫೋನ್ ಬಿಚ್ಚಿ ವಾಲ್ಯೂಮ್ ದೊಡ್ಡದು ಮಾಡಿದ.  ಭಾಷೆ ಮತ್ತು ಪದಗಳು ಬೇರೆಯಾದರೂ ನಾನು ಹಾಡನ್ನು ಗುರುತಿಸಿದೆ. ಪಲ್ ಭರ್ ಮೇ ಯೇ ಕ್ಯಾ ಹೋಗಯಾ!


(c) 2015, C.P. Ravikumar
ಕಪ್ಪು-ಬಿಳುಪು ಚಿತ್ರ : ಕೃಪೆ - ಪ್ರಜಾವಾಣಿ 

ಕಾಮೆಂಟ್‌ಗಳು

  1. ಚೆಂದಿದೆ ಸರ್, ತೆಲುಗಿನ ಆದಿತ್ಯ-369 ಸಿನೆಮಾವನ್ನ ನೆನಪಿಸಿತು, ಟೈಮ್ ಮೆಷಿನ್ನಲ್ಲಿ ವರ್ತಮಾನದಿಂದ, ಕೃಷ್ಣ ದೇವರಾಯನ ಕಾಲಕ್ಕೆ ಹೋಗಿ.. ಅಲ್ಲಿಂದ ಭವಿಷ್ಯಕ್ಕೆ( 2500ನೇ ವರ್ಷಕ್ಕೆ) ಹೋಗಿ,ಮತ್ತೆ ವರ್ತಮಾನಕ್ಕೆ ಬರುವ ಕತೆ ಬಲು ರೋಚಕ :)

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)