ದೀಪಾವಳಿ ಮೈನಸ್ ಪಟಾಕಿ
"ಪಟಾಕಿ ಇಲ್ಲದೆ ದೀಪಾವಳಿ ಸಾಧ್ಯವೇ ಇಲ್ಲ," ಎಂದು ಸ್ನೇಹಿತರು ವಾದಿಸಿದರು. "ನಮ್ಮ ಸಂಪ್ರದಾಯಗಳನ್ನು ನಾವು ಯಾಕೆ ಬಿಡಬೇಕು? ಮಾಲಿನ್ಯ ಉಂಟಾಗುತ್ತದೆ ಎನ್ನುವ ಹೆದರಿಕೆ ಇದ್ದರೆ ನಾವು ಮೋಟಾರ್ ಕಾರ್ ಯಾಕೆ ಓಡಿಸಬೇಕು?" ನನ್ನ ಸ್ನೇಹಿತರು ನಾನು ಬಲ್ಲ ಮೇಧಾವಿಗಳಲ್ಲಿ ಒಬ್ಬರು. ಅವರು ಫೇಸ್ ಬುಕ್ ಮೇಲೆ ನನ್ನ ಬರಹಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದರು. ಪಟಾಕಿಯಿಂದ ಏನೇನು ಅನರ್ಥಗಳಾಗುತ್ತವೆ ಎನ್ನುವುದನ್ನು ನಾನು ಪಟ್ಟಿ ಮಾಡಿದ್ದೆ - ಬಾಲಕಾರ್ಮಿಕರನ್ನು ಪಟಾಕಿ ಮಾಡಲು ಬಳಸಲಾಗುತ್ತದೆ ಎನ್ನುವುದು ಈಗ ಸರ್ವವಿದಿತ ಈಗಾಗಲೇ ವಾಯುಮಾಲಿನ್ಯದಿಂದ ದುಸ್ತರವಾದ ನಗರಜೀವನ - ಆಸ್ತಮಾ ಮೊದಲಾದ ಕಾಯಿಲೆಗಳಿಂದ ನರಳುವ ಜನ ಪಟಾಕಿ ಸುಡಲು ಹೋಗಿ ಅಪಘಾತಗಳಿಗೆ ತುತ್ತಾದ ಜನ ಪಟಾಕಿ ಸದ್ದಿಗೆ ಶ್ರವಣಶಕ್ತಿ ಕಳೆದುಕೊಂಡವರು ಪಟಾಕಿ ಸದ್ದಿಗೆ ಕಂಗಾಲಾಗುವ ಎಳೆಯ ಮಕ್ಕಳು, ಸಾಕುಪ್ರಾಣಿಗಳು ಇವೆಲ್ಲಾ ಹಾಗಿರಲಿ, ನಮ್ಮ ಸಂಪ್ರದಾಯ ನಮಗೆ ಮುಖ್ಯ ಎನ್ನುವವರಿಗೆ ಕೆಲವು ಪ್ರಶ್ನೆಗಳ ಮೂಲಕವೇ ಉತ್ತರಿಸಬೇಕಾಗುತ್ತಿದೆ. ಪಟಾಕಿ ದೀಪಾವಳಿಯ ಸಂಪ್ರದಾಯ ಎಂದು ಎಲ್ಲಿ ಹೇಳಿದೆ? ದೀಪಾವಳಿ ಎನ್ನುವ ಶಬ್ದದಲ್ಲಿ ದೀಪಗಳ ಸಾಲಿದೆ. ರಾಮನು ಅಯೋಧ್ಯೆಗೆ ಮರಳಿದಾಗ ಅಮಾವಾಸ್ಯೆಯ ದಿನವಾದ್ದರಿಂದ ನಗರದ ಜನ ದೀಪಗಳ ಸಾಲನ್ನು ಹಚ್ಚಿಟ್ಟು ರಾಮನಿಗೆ ಸ್ವಾಗತ ಕೋರಿದರು ಎನ್ನುವ ಕಥೆ ಇದೆ. ಅಮಾವಾಸ್ಯ...