ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ

ಮೂಲ ಹಿಂದಿ ಕವಿತೆ - ಮಧು 
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 



ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ
ಕಣ್ಣೀರನ್ನು ಬಚ್ಚಿಟ್ಟುಕೊಂಡು ಬೇರೆಡೆಗೆ ನೋಡುತ್ತಾ
ಸಪ್ಪಗೆ ಹೀಗೆ ನಗಬೇಡ ಅಪ್ಪಾ
ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ

ಮನೆಯ ದೀಪಗಳನ್ನು ಹುಷಾರಾಗಿ ಆರಿಸುವೆ
ಬೇಕಾದ ವಸ್ತುಗಳನ್ನೂ ಬೇಡವೆಂದು ಸಾಧಿಸುವೆ
ಪದೇಪದೇ ಗಾಡಿಯ ಮೈಲೇಜು ಚೆಕ್ ಮಾಡುವ ಅಪ್ಪಾ
ನನ್ನ ಕೈಯಲ್ಲಿ ಎಟಿಎಂ ಕಾರ್ಡು ಇಡಬೇಡ ಅಪ್ಪಾ
ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ

ನೀರಿನ ಬಾಟಲ್ ಇಟ್ಟುಕೊಂಡೆಯೋ ಇಲ್ಲವೋ
ಟಿಕೆಟ್ ಇದೆಯೋ ಇಲ್ಲವೋ ಮತ್ತೊಮ್ಮೆ ನೋಡಿಕೋ
ಇಟ್ಟುಕೊಂಡಿದ್ದೀ ತಾನೇ ಪರ್ಸಿನಲ್ಲಿ ಚಿಲ್ಲರೆ?
ನಿನ್ನ ಒದ್ದೆ ಪ್ರೀತಿಯನ್ನು ಸುರಿಸದಿರು ಅಪ್ಪಾ
ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ

ಚೀಲವನ್ನು ನೂಕುತ್ತಾ ಸೀಟಿನ ಕೆಳಗೆ
ಒಂದು ಕಣ್ಣಿಟ್ಟಿರಿ ಹೊರಟಿದ್ದಾಳೆ ಒಬ್ಬಾಕೆ
ಎಂದು ಬೇಡುತ್ತಾ ಎದುರು ಸೀಟಿನ ಹೆಂಗಸಿಗೆ
ಸುಮ್ಮನೆ ಕಾಳಜಿ ಮಾಡಿಕೊಳ್ಳಬೇಡಪ್ಪಾ
ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ

ಮುಟ್ಟಿದ ಕೂಡಲೇ ಫೋನ್ ಮಾಡು ಆಯಿತಾ?
ಇನ್ನು ಯಾವಾಗಲೋ ಮತ್ತೆ ಈಕಡೆಗೆ ಪಯಣ?
ನೀನಿಲ್ಲದೆ ಇನ್ನು ಮನೆಯೆಲ್ಲ ಭಣಭಣ 

ಎನ್ನುತ್ತಾ ತಲೆಯ ಮೇಲೆ ಕೈ ಇಡಬೇಡ ಅಪ್ಪಾ
ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ

ಮೌನಿಯಾಗುವೆನು ಏನು ಹೇಳಲೂ ತೋರದೆ
ಎದೆತುಂಬಿ ನನ್ನನ್ನು ಅಪ್ಪಿಕೊಳ್ಳದಿರು ಹೀಗೆ -
ದೂರದವರೆಗೂ ನೋಟ ನೆಟ್ಟು ಕುಳಿತಾಗ
ಮರೆಯಾಗುವವರೆಗೂ ಕೈಬೀಸಬೇಡಪ್ಪಾ
ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ

ಮೌನ ಆವರಿಸುತ್ತದೆ ಎಲ್ಲೆಡೆಗೆ ಒಮ್ಮೆಲೇ
ಪದಗಳು ಸಿಕ್ಕಿಕೊಂಡು ಗದ್ಗದ ಕಂಠದೊಳಗೆ
ನನ್ನ ಮುಂದಿನದನ್ನು ಕುರಿತು ಆಲೋಚನೆ
ಮಾಡುತ್ತ ಜೀವಕ್ಕೆ ಕೊಡಬೇಡ ಕಷ್ಟ
ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ

ಫೋನ್ ಮಾಡಿದಾಗ ಏನೂ ಮಾತಾಡಲು ತೋರದೆ
ತೊಗೋ ಅಮ್ಮನ ಜೊತೆಗೆ ಮಾತಾಡು ಎನ್ನುವೆ
ಅವಳ ಬಳಿ ಕೇಳಿ ತಿಳಿದುಕೊಳ್ಳುತ್ತಾ ನಂತರ
ನನ್ನ ಹೆಸರಿನಲ್ಲಿ ಕಾಸು ಕೂಡಿಡಬೇಡ ಅಪ್ಪಾ
ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)