ಓಂ ಪುರಿ ಅವರಿಗೊಂದು ಶ್ರದ್ಧಾಂಜಲಿ
ಓಂ ಪುರಿ ಅವರಿಗೊಂದು ಶ್ರದ್ಧಾಂಜಲಿ
ಸಿ. ಪಿ. ರವಿಕುಮಾರ್
ನೂರಾರು ಪಾತ್ರಗಳನ್ನು ತೆರೆಯ ಮೇಲೆ ಪುನರ್ಸೃಷ್ಟಿಸಿದ ಅಸಾಮಾನ್ಯ ಪ್ರತಿಭೆಗೆ ಒಂದು ಶ್ರದ್ಧಾಂಜಲಿ
ನಟ ಓಂ ಪುರಿ ಅವರ ನಿಧನದ ಸುದ್ದಿ ಬಂದಿದೆ. ಎಷ್ಟೊಂದು
ಪಾತ್ರಗಳನ್ನು ಅವರು ತೆರೆಯ ಮೇಲೆ ಪುನರ್ಸೃಷ್ಟಿಸಿದ್ದಾರೆ ಎಂದು ನೆನೆದಾಗ ಆಶ್ಚರ್ಯವಾಗುತ್ತದೆ. ತಮಸ್
ಕಾದಂಬರಿಯನ್ನು ಗೋವಿಂದ್ ನಿಹಲಾನಿ ಟೆಲಿವಿಷನ್ ಧಾರಾವಾಹಿಯ
ರೂಪದಲ್ಲಿ ತಂದಾಗ ಅದರ ಬಹುಮುಖ್ಯ ಪಾತ್ರವೊಂದಕ್ಕೆ ಆಯ್ಕೆ ಮಾಡಿದ್ದು ಓಂ ಪುರಿಯನ್ನು. ಅವಿಭಜಿತ ಪಂಜಾಬಿನಲ್ಲಿ ಕಥೆ ನಡೆಯುತ್ತದೆ. ನತ್ಥೂ ಎಂಬ ಚಮ್ಮಾರನಿಗೆ
ಯಾರೋ ಒಬ್ಬ ಕಿಡಿಗೇಡಿ ಒಂದು ಹಂದಿಯನ್ನುಕೊಟ್ಟು ಅದನ್ನು ವಧೆ ಮಾಡಬೇಕೆಂದು ತಾಕೀತು ಮಾಡುತ್ತಾನೆ. ತನಗೆ ಪ್ರಾಣಿಗಳನ್ನು ಕೊಲ್ಲುವ ವಿದ್ಯೆ
ಗೊತ್ತಿಲ್ಲ, ತಾನೇನಿದ್ದರೂ ಚರ್ಮ ಸುಲಿಯುವವನು ಎಂದು ಹೇಳಿದರೂ “ಡಾಕ್ಟರ್ ಕೆಲಸಕ್ಕೆ ಬೇಕಾಗಿದೆ”
ಎಂದು ಐದು ರೂಪಾಯಿ ಕೊಡುತ್ತಾನೆ. ಆಗಿನ ಕಾಲದಲ್ಲಿ
ಐದು ರೂಪಾಯಿ ಬಹುದೊಡ್ಡ ಮೊತ್ತ. ಆಮಿಷಕ್ಕೆ ಬಿದ್ದ
ನತ್ಥೂ ಹಂದಿಯನ್ನು ಕೊಲ್ಲಲು ಶತಪ್ರಯತ್ನ ಪಡುತ್ತಾನೆ. ಈ ಸನ್ನಿವೇಶದಿಂದಲೇ ತಮಸ್ ಪ್ರಾರಂಭವಾಗುವುದು.
ಇಲ್ಲಿ ಕೊಲ್ಲಲ್ಪಡುವ ಪಶುವನ್ನು ಭಾರತಕ್ಕೆ ಒಂದು ರೂಪಕ ಎಂದು ಕೂಡಾ ಇಟ್ಟುಕೊಳ್ಳಬಹುದು. ದುರದೃಷ್ಟವಶಾತ್
ಹಂದಿಯ ಹೆಣವನ್ನು ಮಸೀದಿಯ ಮುಂದೆ ಎಸೆದು ಕೋಮುಗಲಭೆ ಎಬ್ಬಿಸುವ ಕುತಂತ್ರದಲ್ಲಿ ನತ್ಥೂ ತನಗೆ ತಿಳಿಯದೇ
ಸಿಕ್ಕಿಹಾಕಿಕೊಳ್ಳುತ್ತಾನೆ. ಮುಂದೆ ನಡೆಯುವ ದಂಗೆಗೆ ಅವನು ತಾನೇ ಜವಾಬ್ದಾರ ಎಂದು ಹಲುಬುತ್ತಾನೆ.
ತನ್ನ ಗರ್ಭಿಣಿ ಹೆಂಡತಿಯನ್ನು ಗಾಡಿಯಲ್ಲಿಟ್ಟುಕೊಂಡು ಮತ್ತು ವಯಸ್ಸಾದ ತಾಯನ್ನು ಹೆಗಲಮೇಲೆ ಹೊತ್ತುಕೊಂಡು ಅವನು ಪಂಜಾಬಿನ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವಲಸೆ
ಹೋಗುವ ದೃಶ್ಯಗಳು ಮನಸ್ಸು ಕಲಕುತ್ತವೆ. ಓಂ ಪುರಿ ಈ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಗುಲ್ಜಾರ್ ಅವರ ನಿರ್ದೇಶನದಲ್ಲಿ ದೂರದರ್ಶನದಲ್ಲಿ ಮೂಡಿಬಂದ ಕಿರ್ದಾರ್ ಧಾರಾವಾಹಿಯ ಅನೇಕ ಉರ್ದೂ ಮತ್ತು ಹಿಂದಿ ಕಥೆಗಳಲ್ಲಿ ಓಂ ಪುರಿಯೇ ನಾಯಕ. ಒಂದೊಂದು ಕತೆಯಲ್ಲೂ ವಿಭಿನ್ನ ಪಾತ್ರ – ಎಲ್ಲವೂ ಮುಖ್ಯ ಪಾತ್ರಗಳಲ್ಲ. ಆದರೆ ಓಂ ಪುರಿ ಅಭಿನಯ ಮನಸ್ಸಿನಲ್ಲಿ ಅಚ್ಚಳಿಯದೆ ನಿಲ್ಲುವಂಥದ್ದು. ಬೇಲ್ ನಿಂಬು ಎಂಬ ಒಂದು ಕಥೆ ನನಗೆ ನೆನಪಾಗುತ್ತಿದೆ. ತನ್ನ ಪ್ರೇಯಸಿಯ ಬಯಕೆ ತೀರಿಸಲು ಒಬ್ಬ ಶ್ರೀಮಂತ ವರ್ತಕ ಬೇಲದ ಹಣ್ಣನ್ನು ಹೇಗಾದರೂ ಮಾಡಿ ತರಬೇಕೆಂದು ತನ್ನ ಕಾರಕೂನನಿಗೆ ತಾಕೀತು ಮಾಡುತ್ತಾನೆ. ಆಗ ಬೇಲದ ಹಣ್ಣಿನ ಕಾಲವಲ್ಲ. ಎಲ್ಲಿಂದ ತರುವುದು! ಈ ಕಾರಕೂನ ತನ್ನ ಕೆಲಸ ಉಳಿಸಿಕೊಳ್ಳಲು ಹೇಗಾದರೂ ಈ ಪವಾಡ ಮಾಡಲೇ ಬೇಕು. ಅವನು ಇನ್ನೊಬ್ಬನಿಗೆ ಕೆಲಸ ವಹಿಸಿಬಿಡುತ್ತಾನೆ. ಒಬ್ಬರಿಂದ ಇನ್ನೊಬ್ಬರಿಗೆ ದಾಟಿಬರುವ ಕೆಲಸ ಕೊನೆಗೆ ಒಬ್ಬ ಮಾಲಿಯ ಹೆಗಲಿನ ಮೇಲೆ ಬೀಳುತ್ತದೆ. ಈ ಮಾಲಿಯ ಪಾತ್ರದಲ್ಲಿ ಓಂ ಪುರಿ ನಟಿಸಿದ್ದಾರೆ. ಮಾಲಿಗೆ ವಯಸ್ಸಾಗಿದೆ. ಕೆಮ್ಮು ಬಾಧಿಸುತ್ತಿದೆ. ಆದರೂ ಎರಡು ರೂಪಾಯಿಗಳ ಆಸೆಗೆ ಕಟ್ಟುಬಿದ್ದು ಅವನು ನದಿ ದಾಟಿ ಪಕ್ಕದ ಊರಿಗೆ ಹೋಗಿ ಯಾರದೋ ಮನೆಯಿಂದ ಬೇಲದ ಹಣ್ಣು ಸಂಪಾದಿಸಿ ಬಹಳ ಕಷ್ಟದಿಂದ ಮರಳುತ್ತಾನೆ. ಆದರೆ ಪ್ರಯಾಣದ ಆಯಾಸವನ್ನು ಅವನ ವೃದ್ಧ ಶರೀರ ತಡೆಯುವುದಿಲ್ಲ. ಶ್ರೀಮಂತ ವರ್ತಕನ ಪ್ರೇಯಸಿಗೆ ಬೇಲದ ಹಣ್ಣು ಸಿಕ್ಕುತ್ತದೆ. ಅವಳು ಬೇರೆ ಯಾರೂ ಅಲ್ಲ, ಮಾಲಿಯ ಮಗಳು! ಅವಳು ತನ್ನ ಶ್ರೀಮಂತ ಪ್ರಿಯಕರನನ್ನು ಬೇಲದ ಹಣ್ಣು ಕೇಳಿದ್ದಾದರೂ ಯಾಕೆ? ತನ್ನ ಅಪ್ಪನಿಗೆ ವೈದ್ಯರು ಹೇಳಿದ ಔಷಧ ಮಾಡಿಸಲು! ಔಷಧವಾಗಬೇಕಾಗಿದ್ದ ಬೇಲದ ಹಣ್ಣು ಮೃತ್ಯುವಾಗುತ್ತದೆ. ವೃದ್ಧ ಮಾಲಿಯ ಪಾತ್ರದಲ್ಲಿ ಓಂ ಪುರಿ ನಟನೆ ಅತ್ಯಂತ ಸಹಜವಾಗಿದೆ.

ಬಹುಶಃ ಅವರ ಚಿತ್ರಗಳಲ್ಲಿ ನಾನು ಮೊದಲು ನೋಡಿದ್ದು
ಆಕ್ರೋಶ್ ಎಂಬ ಚಿತ್ರ. ಇಲ್ಲಿ ಬಲಾತ್ಕಾರಕ್ಕೆ ಒಳಗಾದ ಆದಿವಾಸಿ ಮಹಿಳೆಯೊಬ್ಬಳ ಪತಿಯಾಗಿ ಓಂ ಪುರಿ
ನಟಿಸಿದ್ದಾರೆ. ಸದ್ಗತಿ ಎಂಬ ಚಿತ್ರದಲ್ಲಿ ತನ್ನ ಸತ್ತ ತಾಯಿಯ ಆತ್ಮಕ್ಕೆ ಸದ್ಗತಿ ದೊರಕಿಸಿಕೊಡಲು
ಕರ್ಮಗಳನ್ನು ನಡೆಸಲು ದುಡ್ಡಿಲ್ಲದೆ ಒಬ್ಬ ಪಂಡಿತನ ಮನೆಗೆ ಸೌದೆ ಒಡೆದುಕೊಡಲು ಇಡೀ ದಿನ ಬಿಸಿಲಿನಲ್ಲಿ
ದುಡಿದ ಆಯಾಸಕ್ಕೆ ತಾನೇ ಸತ್ತುಹೋಗುವ ಬಡವನ ಪಾತ್ರ. ಮಿರ್ಚ್ ಮಸಾಲಾ ಚಿತ್ರದಲ್ಲಿ ಗ್ರಾಮದ ಹೆಣ್ಣುಮಗಳ ಗೌರವ ಕಾಪಾಡಲು
ಅವಳಿಗೆ ಮಸಾಲೆ ಕುಟ್ಟುವ ಕಾರ್ಖಾನೆಯಲ್ಲಿ ರಕ್ಷಣೆ ಕೊಟ್ಟು ತಾನು ಬಂದೂಕು ಹಿಡಿದು ಕಾವಲು ನಿಲ್ಲುವ
ವೃದ್ಧ ಕಾವಲುಗಾರನ ಪಾತ್ರ. ಈಸ್ಟ್ ಈಸ್ ಈಸ್ಟ್ ಎಂಬ ಚಿತ್ರದಲ್ಲಿ ಲಂಡನ್ ನಗರಕ್ಕೆ ವಲಸೆ ಹೋದ ಪಾಕೀಸ್ತಾನಿಯೊಬ್ಬನ
ಪಾತ್ರ. ತನಗೆ ಮದುವೆಯಾಗಿದ್ದರೂ ಲಂಡನ್ ನಗರದಲ್ಲಿ ಒಬ್ಬ ಇಂಗ್ಲಿಷ್ ಮಹಿಳೆಯೊಂದಿಗೆ ಮತ್ತೊಂದು ವಿವಾಹವಾಗಿದ್ದಾನೆ.
ತನ್ನ ಹೆಸರನ್ನು ಜಾರ್ಜ್ ಎಂದು ಬದಲಾಯಿಸಿಕೊಂಡಿದ್ದಾನೆ. ಇವನಿಗೆ ಇಬ್ಬರು
ಗಂಡು ಮಕ್ಕಳು. ಮೊದಲನೆಯವನಿಗೆ ವಿವಾಹವಾಗಬೇಕಾಗಿದೆ. ಅವನಿಗೆ ಪಾಕೀಸ್ತಾನದ ವಧು ಹುಡುಕಲು ಮಕ್ಕಳ
ಜೊತೆಗೆ ಜಾರ್ಜ್ ತನ್ನ ಹಳ್ಳಿಗೆ ಮರಳುತ್ತಾನೆ. ಹದಿವಯಸ್ಸಿನ ಅವನ ಎರಡನೇ ಮಗನಿಗೂ ಜಾರ್ಜನಿಗೂ ಸ್ನೇಹವಿಲ್ಲ.
ಲಂಡನ್ ನಗರದಲ್ಲಿದ್ದರೂ ಪಾಕೀಸ್ತಾನಿಯ ಹಾಗೆ ಬದುಕುವ ಅಪ್ಪನ ಅಸಹಜ ನಡತೆ ಮಗನಿಗೆ ಒಪ್ಪದು. ಆದರೆ ಪಾಕೀಸ್ತಾನದ
ಹಳ್ಳಿಯ ಜೀವನ ಈ ಹುಡುಗನಿಗೂ ರುಚಿ ಎನ್ನಿಸುತ್ತದೆ. ತನ್ನ ಮಗನಿಗೆ ಹೆಣ್ಣು ಬೇಡಲು ಹೋದ ಜಾರ್ಜ್ ಅವಮಾನಿತನಾಗಿ
ವಾಪಸ್ ಬರುತ್ತಾನೆ. ಏಕೆಂದರೆ ಇವನ ಮಗನಿಗೆ ಹೆಣ್ಣು ಕೊಡಲು ತಂದೆ ಒಪ್ಪುವುದಿಲ್ಲ. ಕೊನೆಗೆ ತನ್ನ
ಅಣ್ಣನಿಗೆ ಸೂಕ್ತ ವಧುವನ್ನು ಎರಡನೇ ಮಗನೇ ಹುಡುಕುತ್ತಾನೆ.
ಹಾಸ್ಯಮಯವಾಗಿ ಸಾಗುವ ಕಥೆಯಲ್ಲಿ ಆಗಾಗ ವಿಷಾದದ ಎಳೆಗಳು ಸಿಕ್ಕುಹಾಕಿಕೊಳ್ಳುತ್ತವೆ. ಜಾರ್ಜ್ ಮೊದಲ ಹೆಂಡತಿಗೆ ಈಗ ವಯಸ್ಸಾಗಿದೆ. ತನ್ನ ಗಂಡ ತನ್ನನ್ನು ತೊರೆದು ಹೋದ ಬಗ್ಗೆ ಅವಳಿಗೆ ಕೋಪವಿದೆ. ಆದರೆ ಅವನು ಮತ್ತೆ ಪಾಕೀಸ್ತಾನಕ್ಕೇ ಮರಳಿಬಂದಿದ್ದಾನೇನೋ ಎಂಬ ದೂರದ ಆಸೆಯೂ ಇದೆ. ಅವಳು ಜಾರ್ಜನಿಗೆ ಮುಖಾಮುಖಿಯಾಗಿ ತನ್ನ ಕೋಪ ತೋಡಿಕೊಳ್ಳುವ ದೃಶ್ಯ ಮನಸ್ಸು ಕಲಕುತ್ತದೆ.

ಎರಡು ವರ್ಷಗಳ ಹಿಂದೆ ನೋಡಿದ “ದ ಹಂಡ್ರೆಡ್ ಫುಟ್
ಜರ್ನಿ” ಎಂಬ ಫ್ರೆಂಚ್/ಇಂಗ್ಲಿಷ್ ಚಿತ್ರ ಕೂಡಾ ಬಹಳ ಉತ್ತಮ ಚಿತ್ರ. ಓಂ ಪುರಿ ಅವರದ್ದು ಫ್ರಾನ್ಸ್
ದೇಶದಲ್ಲಿ ನೆಲೆಸಿದ ಭಾರತೀಯ ಕುಟುಂಬದ ತಂದೆಯ (ಪಾಪಾ ಕದಂ) ಪಾತ್ರ. ಈ ಕುಟುಂಬದವರು ಬಾಣಸಿಗ ವೃತ್ತಿಯವರು.
ಮುಂಬೈ ನಗರದಲ್ಲಿ ಅವರ ಉಪಾಹಾರಗೃಹ ಒಂದು ದುರ್ಘಟನೆಯಲ್ಲಿ ಸುಟ್ಟುಹೋಗುತ್ತದೆ. ತಾಯಿ ಈ ದುರ್ಘಟನೆಯಲ್ಲಿ
ಸಾಯುತ್ತಾಳೆ. ಮಕ್ಕಳನ್ನು ಕರೆದುಕೊಂಡು ತಂದೆ ವಿದೇಶಕ್ಕೆ ಪ್ರಯಾಣ ಬೆಳೆಸುತ್ತಾನೆ. ಈಗ ಫ್ರಾನ್ಸ್
ದೇಶದಲ್ಲಿ ಒಂದು ಉಪಾಹಾರಗೃಹ ತೆರೆಯುವ ಹುನ್ನಾರದಲ್ಲಿದ್ದಾರೆ. ಆದರೆ ಅವರು ಸ್ಥಾಪಿಸಿದ ಉಪಾಹಾರ ಗೃಹದ
ಮುಂದೆ ಒಂದು ಫ್ರೆಂಚ್ ಉಪಾಹಾರಗೃಹವೂ ಇದೆ. ಇದರ ಒಡತಿಗೆ ಫ್ರೆಂಚ್ ಅಡುಗೆ ಪದ್ಧತಿಯ ಬಗ್ಗೆ ಅತೀವ
ಅಭಿಮಾನ. ಇವಳಿಗೂ ಮತ್ತು ಪಾಪಾ ಕದಂಗೂ ಘೋರ ಸ್ಪರ್ಧೆ
ಏರ್ಪಡುತ್ತದೆ. ಆದರೆ ವಿಚಿತ್ರವೆಂದರೆ ಕದಂ ಎರಡನೆಯ ಮಗನಿಗೆ ಫ್ರೆಂಚ್ ಅಡುಗೆಯಲ್ಲಿ ಆಸಕ್ತಿ ಹುಟ್ಟುತ್ತದೆ.
ಅವನು ಭಾರತೀಯ ಮತ್ತು ಫ್ರೆಂಚ್ ಅಡುಗೆಗಳನ್ನು ಬೆರೆಸಿ ಒಂದು ವಿಶಿಷ್ಟ ಅಡುಗೆ ಪದ್ಧತಿಯನ್ನೇ ಪ್ರಾರಂಭಿಸುತ್ತಾನೆ.
ಆದರೆ ಫ್ರೆಂಚ್ ಉಪಾಹಾರಗೃಹದ ಒಡತಿಗೆ ಇದು ಸಹಿಸುವುದಿಲ್ಲ. ಕ್ರಮೇಣ ಅವಳಿಗೆ ಯುವಕ ಬಾಣಸಿಗನಲ್ಲಿರುವ
ವಿಶಿಷ್ಟ ಪ್ರತಿಭೆಗೆ ಮಾರುಹೋಗುತ್ತಾಳೆ. ಮುಂದೆ ಕದಂ ಮತ್ತು ಆಕೆಯ ನಡುವಣ ಸಮರಕ್ಕೆ ತೆರೆ ಬಿದ್ದು
ಇಬ್ಬರೂ ಸ್ನೇಹಿತರಾಗುತ್ತಾರೆ.
ನೂರಾರು ಪಾತ್ರಗಳಿಗೆ ಜೀವ ತುಂಬಿ ಭಾರತೀಯ ಕಲಾರಂಗಕ್ಕೆ
ಅನುಪಮ ಕೊಡುಗೆ ನೀಡಿದ ಓಂ ಪುರಿ ಅವರ ಆತ್ಮಕ್ಕೆ ಶಾಂತಿ ಸಿಕ್ಕಲೆಂದು ಕೋರುತ್ತೇನೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ