ಮೂಗು ಮುರಿಯದಿರಿ ಮುಖದ ಮೇಲಿರುವುದೇಕೆಂದು
ಮೂಲ ಕವಿತೆ: ಜ್ಯಾಕ್ ಪ್ರೆಲುಟ್ಸ್ಕಿ
ಕನ್ನಡಕ್ಕೆ - ಸಿ. ಪಿ. ರವಿಕುಮಾರ್
ಮೂಗು
ಮುರಿಯದಿರಿ ಮುಖದ ಮೇಲಿರುವುದೇಕೆಂದು,
ಎಲ್ಲಿದೆಯೋ
ಅಲ್ಲೇ ಚೆನ್ನಾಗಿದೆ ಮೂಗು!
ಬೇರೆಲ್ಲಾದರೂ
ಮೆತ್ತಿದ್ದರೆ ಮೂಗಣ್ಣನ ಅಣ್ಣ
ಫಜೀತಿಯಾಗುತ್ತಿತ್ತು
ನಿನ್ನ ಮೂಗನ್ನ!
ಕಾಲ್ಬೆರಳುಗಳ
ನಡುವೆ ಇದ್ದಿದ್ದರೆ ಮೂಗು
ಹೇಗಿರುತ್ತಿತ್ತೆಂದು
ಆಲೋಚಿಸಿ ನೋಡು!
ಪಾಪ!
ಇಡೀ ದಿವಸವೂ ಆಘ್ರಾಣಿಸುತ್ತಾ
ಇರಬೇಕಾಗುತ್ತಿತ್ತು
ನಿನ್ನ ಪಾದಗಳ ದುರ್ನಾತ.
ತಲೆಯ
ಮೇಲೆ ಕೂಡಿಸಿದ್ದರೆ ಆ ಬ್ರಹ್ಮ
ಅನರ್ಥವೇ
ಆಗುತ್ತಿತ್ತು ಕಾಣಣ್ಣಾ!
ಗಾಳಿ
ಬೀಸಿದಾಗೆಲ್ಲಾ ಹಾರಾಡುವ ಕೂದಲು
ಮುತ್ತಿಟ್ಟು
ಮೂಗಿಗೆ ದಿನವೆಲ್ಲ ಸೀನು!
ಕಿವಿಯೊಳಗೇ
ಇಟ್ಟುಬಿಟ್ಟಿದ್ದರೆ ಹೇಗೆ?
ಹೆದರುತ್ತೇನೆ
ಹೀಗೆ ಆಲೋಚಿಸಿದರೇನೇ!
ಆಕ್ಷಿ!
ಆಕ್ಷಿ! ಎಂದು ಸೀನಿದಾಗೆಲ್ಲಾ
ಮಿದುಳಲ್ಲಿ
ನಾನ್ನೂರು ವೋಲ್ಟ್ ಸಂಚಾರ!
ಅಂಟಿಸಿದ್ದಾನೆ
ಹುಬ್ಬು-ಗಲ್ಲಗಳ ನಡುಮಧ್ಯೆ
ಪರಬೊಮ್ಮ
ಸರಿಯಾದ ಜಾಗದಲ್ಲೇ
ಬೇರೆಲ್ಲಾದರೂ
ಮೆತ್ತಿದ್ದರೆ ಮೂಗಣ್ಣನ ಅಣ್ಣ
ಫಜೀತಿಯಾಗುತ್ತಿತ್ತು
ನಿನ್ನ ಮೂಗನ್ನ!
(c) 2017, ಸಿ. ಪಿ. ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ