ಬಾವಿಯೊಳಗೆ

ಮೂಲ - ಆಂಡ್ರೂ ಹಡ್ಜಿನ್ಸ್ 

ಕನ್ನಡಕ್ಕೆ - ಸಿ. ಪಿ. ರವಿಕುಮಾರ್   

Image result for well wikipedia

ಹಗ್ಗವನ್ನು ಕುಣಿಕೆ ಮಾಡಿದ ಅಪ್ಪ 
ಬಿಗಿಗೊಳಿಸಿದ ನನ್ನ ಸೊಂಟದ ಸುತ್ತ. 
ಅನಂತರ ಅಂಧಕಾರದ ಗಾಢದೊಳಗೆ  
ನನ್ನನ್ನು ಮೆಲ್ಲಗೆ ಇಳಿಬಿಟ್ಟ. 

ಒಮ್ಮೆಲೇ ಹಲವಾರು ರುಚಿಗಳು ನನ್ನ ಬಾಯಲ್ಲಿ 
ಭೀತಿ, ಕತ್ತಲೆ, ಮಣ್ಣು, ಕೊಳೆಯುವಿಕೆಯ ರುಚಿ.
ವಾಕರಿಸಿ ಮುಖ ತಿರುವಿ ತಲೆ ಬಡಿಸಿಕೊಂಡು 
ಅನುಭವಿಸುತ್ತೇನೆ ಹೊಸದಾಗಿ ಕಬ್ಬಿಣದ ರುಚಿ 

ತುಟಿಗೆ ಹತ್ತಿದ ನೆತ್ತರಿನಲ್ಲಿ.
ಅಪ್ಪ ಕೈ ಮೇಲೆ ಕೈ ಇಟ್ಟು
ಇಳಿಸುತ್ತಾನೆ ಆಳ ಆಳಕ್ಕೆ
ಹಗ್ಗ  ಮೆಲ್ಲಗೆ ಬಿಟ್ಟು ಬಿಟ್ಟು.

ಮುಟ್ಟುತ್ತೇನೆ ಕೊನೆಗೆ ತಣ್ಣನೆಯ ನೀರು
ಕೂದಲಿನ ರಾಶಿಯೊಂದು ಎದೆಗೆ ಸುತ್ತಿ
ನಾನು ಕೂಗಿಕೊಂಡಾಗ ಅಪ್ಪ ಮೇಲೆತ್ತುತ್ತಾನೆ
ಒದ್ದೆ ಹಗ್ಗ ಎಳೆದು; ನಾನು ಉಸಿರು ಕಟ್ಟಿ

ಮೇಲೆ ಬರುತ್ತೇನೆ ಅವಚಿಕೊಂಡು ಎದೆಗೆ
ಪಕ್ಕದ ಮನೆಯ ಕಾಣೆಯಾದ ನಾಯಿ.
ಸಾವನ್ನು ಅಪ್ಪಿಕೊಂಡು ಸಾಗಿದಾಗ
ಮೊದಲು ಬೆಳಕು, ನಂತರ ಕೈಗಳು ತದನಂತರ ಗಾಳಿ.

(ಹುಡುಗನೊಬ್ಬನನ್ನು ತಂದೆ ಬಾವಿಯೊಳಗೆ ಇಳಿಸಿದ್ದಾನೆ.  (ಹಾಗೆ ಇಳಿಸಲು ಒಂದು ಕಾರಣವಿದೆ.)  ಹುಡುಗನಿಗೆ ಇದು ಮೊದಲ ಅನುಭವ. ಕತ್ತಲು ತುಂಬಿದ ಬಾವಿಯೊಳಗೆ ಇಳಿಯುವಾಗ ಅವನನ್ನು ಭಯ ಆವರಿಸುತ್ತದೆ.  ಕೊಳೆತು ನಾರುವ ವಾಸನೆಗೆ ಅವನಿಗೆ ವಾಕರಿಕೆ ಬರುತ್ತದೆ. ಕೆಳಗೆ ಅವನು ಮಾಡಬೇಕಾದ ಒಂದು ಕೆಲಸವಿದೆ. ಕೊನೆಗೂ ಅದು ಮುಗಿದಾಗ ಅವನನ್ನು ಅಪ್ಪ ಮತ್ತೆ   ಮೇಲಕ್ಕೆ ಎಳೆದುಕೊಳ್ಳುತ್ತಾನೆ. ಸಾವಿನ ತೀರಾ ಸಮೀಪ ಹೋಗಿಬಂದು ಸ್ವಚ್ಛ ಗಾಳಿ ಮತ್ತು ಬೆಳಕನ್ನು ಹುಡುಗ ಮತ್ತೊಮ್ಮೆ ಅನುಭವಿಸುತ್ತಾನೆ. ಇದನ್ನು ಓದುವಾಗ ನಿಮಗೆ ಅಲ್ಲಾದೀನನ ಮಾಂತ್ರಿಕ ದೀಪದ ಕಥೆ ನೆನಪಾಯಿತೇ? ಈ ಕಥೆಯಲ್ಲಿ ಅಲ್ಲಾದೀನನನ್ನು ಮಾಂತ್ರಿಕ ದೀಪ ಹೊರತರಲು ಒಬ್ಬ ಕುತಂತ್ರಿ ಇದೇ ರೀತಿ ಗವಿಯಲ್ಲಿ ಇಳಿಸುತ್ತಾನೆ.)

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)