ಪೂಜೆ (ಕಥನ ಕವನ)

ಮೂಲ - ರವೀಂದ್ರನಾಥ ಠಾಕುರ್ 
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 

File:Rabindranath Tagore in 1909.jpg - Wikipedia
ಆಗಮಿಸಿದನು ರಾಜ ತನ್ನ ಒಡ್ಡೋಲಗದೊಂದಿಗೆ 
ಬೀಗುತ್ತಾ ಒಳಗೊಳಗೇ ತನ್ನ ಅಪ್ರತಿಮ ಸಾಧನೆಗೆ
ದೇಗುಲದ ಮುಂದೆ ನಿಂತು ನೋಡಿದನು ಕಣ್ತುಂಬಾ
ಬಾಗಿಲ ಮೇಲೆ ಕೆತ್ತಿರುವ ಚಿತ್ತಾರದ ಬಿಂಬ
ಮೇಲ್ಗಡೆಗೆ ಹರಿಸಿದನು ಅರಸ ಕಣ್ ದೃಷ್ಟಿ
ಮೇಘ ಉದುರಿಸಿದಂತೆ ಸ್ವರ್ಣಪುಷ್ಪವೃಷ್ಟಿ
ಝಗಝಗಿಸಿ ಕನಕಲೇಪಿತ ಮೇಲ್ಛಾವಣಿಯ ಕುಂಭ
ನಗೆಮುಗುಳಿನೊಳು ಬೆರೆತು ಸಾಧನೆಯ ಜಂಬ
ಬಾಗಿಸದೆ ತಲೆಯನ್ನು ಒಳಹೊಕ್ಕ ನೃಪತಿ
ಸಾಗುವಾನಿಯ ಮಹಾದ್ವಾರವನು ದಾಟಿ
ಆಘ್ರಾಣಿಸಿದ ಕಣ್ಮುಚ್ಚಿ ತೇಲಿಬಂದ ಸುಗಂಧ
ನಾಗಚಂಪಕ,ಮಲ್ಲಿಗೆ, ಪನ್ನೀರೆಲೆ, ಶ್ರೀಗಂಧ
ಜಾಗಟೆ, ನಾದಸ್ವರ, ಇನಿದನಿಯ ಘಂಟಾರವ
ರಾಗಬದ್ಧವಾಗಿ ಹಾಡುತ್ತಿದ್ದಾರೆ   ಯಾರೋ ದೇವೀಸ್ತವ
ಭೋಗಕ್ಕೆ ಸಿದ್ಧವಾಗಿವೆ ಬಗೆಬಗೆಯ ಪಕ್ವಾನ್ನ
ಹೂಗಳು ಹಣ್ಣುಗಳಿಂದ ತುಂಬಿ ತುಳುಕುತ್ತಿವೆ ಹರಿವಾಣ...
ಆಗ ದೇಗುಲದ ಪಾರುಪತ್ತೆಗಾರನು ಬಂದು
ಮೊಗದಲ್ಲಿ ಚಿಂತೆಯ ಹೊತ್ತು ಬಿನ್ನೈಸಿದನು ಇಂತು

ಪ್ರಮಾದವಾಗಿದೆ ಪ್ರಭೂ! ನೀಡಬೇಕು ಕ್ಷಮೆ!
ಸಮಾಧಾನ ಚಿತ್ತದಿಂದ ಕೇಳಬೇಕು ಒಮ್ಮೆ...
ಪ್ರಧಾನ ಅರ್ಚಕರು ಬಂದಿಲ್ಲ ಪೂಜಾರ್ಪಣೆಗೆ!
ವಿಧಿಯಾಟವೆನ್ನುತ್ತ ಮೇಲ್ವಿಚಾರಕ ಕೈಯಿಟ್ಟ ಹಣೆಗೆ
ನರೋತ್ತಮದಾಸರ ಆರೋಗ್ಯ ಸರಿಯಾಗಿದೆ ತಾನೇ?
ಧರಣೀಂದ್ರನು ಕೂಡಲೇ ಕೇಳಿದನು ಪ್ರಶ್ನೆ
ಸ್ವಸ್ಥರಾಗೇ ಕಂಡರು ಸ್ವಾಮೀ ಪ್ರಧಾನ ಅರ್ಚಕರು
ನಿಷ್ಠೆಯೇ ಯಾಕೋ ಬದಲಾದಂತೆ ತೋರಿತು
ಎಂದು ಮೇಲ್ವಿಚಾರಕ ಮುಖ ಹಾಕಿದನು ಕೆಳಗೆ
ಮಂದಹಾಸ ಬೀರಿದರೂ ದೊರೆ ನೊಂದ ಒಳಗೊಳಗೆ ...
ಕರೆದೊಯ್ಯಿರಿ ಎಲ್ಲಿರುವರೋ ದಾಸ ನರೋತ್ತಮರು
ಸರಿಯಾಗದು ಪೂಜೆ ಉಪಸ್ಥಿತರಿಲ್ಲದೆ ಕುಲಗುರು!

ಸಾಧು ನರೋತ್ತಮ ಕುಳಿತಿದ್ದ ವಟವೃಕ್ಷದ ಕೆಳಗೆ
ಏದುಬ್ಬುಸ ಪಡುತ್ತ ದೊರೆ ಬಂದನು ಬಳಿಗೆ
"ದಾಸರೇ! ಪೂಜೆಗೆ ಏಕೆ ಬರಲಿಲ್ಲ ಈ ಹೊತ್ತು!
ಬೇಸರವೇ? ದೇಹಾಲಸ್ಯವೇ? ರಾಜವೈದ್ಯರನ್ನು ಕಾಣಬೇಕಿತ್ತು!"
ಕ್ಷೀಣನಗೆ ನಕ್ಕು ಬಿಡುತ್ತಾ ದೀರ್ಘ ನಿಶ್ವಾಸ 
ಮೌನ ಮುರಿದನು ಕೊನೆಗೂ ನರೋತ್ತಮದಾಸ

"ಪೂಜೆ ಯಾರಿಗೆ ಮಾಡಲಿ! ದೇವರಿಲ್ಲದ ಆಲಯ!"
ಗೋಜಲಾಯಿತು ರಾಜನ ಮನಸು, "ಆಚಾರ್ಯ!
ಏನು ಹೇಳುತ್ತಿರುವಿರಿ ನೀವು! ಸ್ವರ್ಣಮಂದಿರದಲ್ಲಿ
ನಾನೇ ಪ್ರತಿಷ್ಠಾಪಿಸಲಿಲ್ಲವೇ ಮುಖ್ಯ ದೇವತಾಮೂರ್ತಿ!
ಅನ್ನಪೂರ್ಣೆಯ ರತ್ನಖಚಿತ ಚಿನ್ನದ ಪ್ರತಿಮೆ!
ಬಣ್ಣಿಸಲು ಕವಿಗಳಿಗೆ ಸಿಕ್ಕದಾಗಿದೆ ಉಪಮೆ!
ಹನ್ನೆರಡು ವರ್ಷಗಳ ಶ್ರಮದ ಫಲವಲ್ಲವೇ ಮಂದಿರ?
ಮೊನ್ನೆಯೇ ಪ್ರತಿಷ್ಠಾಪಿಸಿದ್ದು ಮರೆತಿರಾ!"
"ಹೇಗೆ ಮರೆಯಲು ಸಾಧ್ಯ ರಾಜನ್! ಈ ವರ್ಷ
ಬೇಗೆಯಲ್ಲಿ ಬೇಯುತ್ತಿದೆ ಭರತವರ್ಷ!
ಮೇಘಗಳ ಹೃದಯದಲ್ಲಿ ಹುಟ್ಟಲಿಲ್ಲ ಕರುಣೆ
ಸಾಗಿದವು ಚೆಲ್ಲದೆ ನೀರು ಉದ್ಧರಣೆ!
ಅನ್ನ ನೀರಿಲ್ಲದೆ ಸಾಯುತ್ತಿರುವಾಗ ಜನತೆ
ಸ್ವರ್ಣಮಂದಿರಕ್ಕಾಗಿ ತೋಡಿದರು ಸಿಹಿನೀರ ಊಟೆ!
ಅನ್ನ ನೀರಿಗೆ ಪರಿತಾಪ ಪಡುವಾಗ ಜನತೆ
ಅನ್ನಪೂರ್ಣೆಯ ಮೂರ್ತಿ ಪ್ರತಿಷ್ಠಾಪಿಸಲು ಹೊರಟೆ!
ಅಲ್ಲಿರುವುದು ಏನಿದ್ದರೂ ಬರಿ ಪ್ರತಿಮೆ, ಅಷ್ಟೇ!
ನಿಲ್ಲುವಳೇ ನಿರ್ಲಿಪ್ತತೆಯಿಂದ ತಾಯಿ, ಅತೃಪ್ತೆ!
ಇಲ್ಲವಳ ಮಕ್ಕಳು ಹಸಿದಿರುವಾಗ ತಾನು
ಅಲ್ಲಿ ಭೋಗಗಳನ್ನು ಸ್ವೀಕರಿಸುವಳೇ ತಾನು!
ಕ್ಷಮಿಸು ರಾಜನ್! ಅಲ್ಲಿ ದೇವರಿಲ್ಲ, ಕ್ಷಮಿಸು!
ನಮಿಸಿ ಯಾರಿಗೆ ಅರ್ಚಿಸಲಿ? ನೀನೇ ತಿಳಿಸು!
ಭುಗಿಲೆದ್ದಿತು ರಾಜನ ಮುಖದಲ್ಲಿ ಕ್ರೋಧ
ಮಿಗವನ್ನು ನಿರ್ಮಮತೆ ಬೇಟೆಯಾಡಿದನು ವ್ಯಾಧ
"ತೊಲಗು ನನ್ನ ರಾಜ್ಯವನ್ನು ಈ ಕೂಡಲೇ ಬಿಟ್ಟು"
ಮೊಳಗಿದ ಕಟ್ಟಪ್ಪಣೆ  ಕತ್ತಿಯಲುಗಿನಂತಿತ್ತು
"ಆಗಲಿ ರಾಜನ್! ನೀಡು ದೇಶೋಚ್ಚಾಟನೆಯ ದಂಡ!
ಹೇಗೆ ಹೊರಹಾಕಿದೆಯೋ ದೈವವನ್ನು ನಾಡಿನಿಂದ"


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)