ಹರಟೆಗಳು - ನಿಮಗೊಂದು ಟಿಪ್, ಬಿಟ್ ಕಾಯಿನ್, ಸೋಲಾರಕ್ಕೂ ಬೇಕಂತೆ ಕಾರ

 

(೧) 


ನಿಮಗೊಂದು ಟಿಪ್ 


 ಈರುಳ್ಳಿ ಹೆಚ್ಚುವಾಗ ನಿಮ್ಮ ಕಣ್ಣಲ್ಲಿ ನೀರು ಬರುತ್ತದೆಯೇ? ಹಾಗಾದರೆ ನೀವು ಈ ಟಿಪ್ ನೋಡಲೇ ಬೇಕು. ಕೊನೆಯವರೆಗೂ ಈ ಟಿಪ್ ವೀಕ್ಷಿಸಿದರೆ ಈರುಳ್ಳಿ ಕತ್ತರಿಸುವಾಗ ನಿಮ್ಮ ಕಣ್ಣಲ್ಲಿ ಸ್ವಲ್ಪವೂ ನೀರು ಬರುವುದಿಲ್ಲ. ಹಾಗಾದರೆ ಈಗ ಟಿಪ್ ನೋಡೋಣವೇ? ಅದಕ್ಕಿಂತ ಮುಂಚೆ ಒಂದು ಸಣ್ಣ ವಿರಾಮ.

ಎಲ್ಲರಿಗೂ ಮತ್ತೊಮ್ಮೆ ಸ್ವಾಗತ. ವೀಕ್ಷಕರೇ, ಇವತ್ತು ನಾನು ನಿಮಗೆ ಕೊಡುತ್ತಿರುವ ಟಿಪ್ ಬಹಳ ಉಪಯುಕ್ತವಾದದ್ದು. ಅದೆಷ್ಟು ಸಲ ನೀವು ಈರುಳ್ಳಿ ಕತ್ತರಿಸುವಾಗ ಯಾರಾದರೂ ಮನೆಗೆ ಬಂದು ನೀವು ಅಳುತ್ತಿದ್ದೀರೆಂದು ತಿಳಿದು ನಿಮ್ಮನ್ನು ಏನಾಯಿತೆಂದು ಮತ್ತೆ ಮತ್ತೆ ಕೇಳಿ ನಿಜವಾಗಲೂ ಅಳಿಸಿಲ್ಲ, ಹೇಳಿ! ಇವತ್ತು ನಾನು ನೀಡುವ ಟಿಪ್ ಕೊನೆಯವರೆಗೂ ಫಾಲೋ ಮಾಡಿದರೆ ಇಂಥ ಯಾವ ಕಸಿವಿಸಿಯೂ ನಿಮಗೆ ಆಗುವುದಿಲ್ಲ. ಹಾಗಾದರೆ ಟಿಪ್ ನೋಡೋಣವೇ?
ಮನೆಗೆ ಅತಿಥಿಗಳು ಬರಲಿದ್ದಾರೆ. ಅವರಿಗಾಗಿ ಈರುಳ್ಳಿ ಪಕೊಡವನ್ನೋ, ಆನಿಯನ್ ರಿಂಗ್ಸ್ ಅಥವಾ ಇನ್ನೇನೋ ಹೊಸರುಚಿ ತಯಾರಿಸಬೇಕಾಗಿದೆ. ಈರುಳ್ಳಿ ಕಟ್ ಮಾಡೋದು ಮಹಾ ಸಂಕಟದ ವಿಷಯ. ಅದರಲ್ಲೂ ಈ ಕೆಂಪು ಈರುಳ್ಳಿಯಂತೂ ಮಹಾ ಕಷ್ಟ. ಒಗಟು ಕೂಡಾ ಇದೆ. ದುಡ್ಡು ಕೊಟ್ಟು ತಂದು ದುಃಖ ಪಟ್ಟರು ಅಂತ. ಅದಕ್ಕೆ ಉತ್ತರ ನೀವು ಈಗಾಗಲೇ ಊಹಿಸಿರಬಹುದು. ಅದು ಏನೆಂದು ಕಾಮೆಂಟ್ ಬಾಕ್ಸಿನಲ್ಲಿ ಖಂಡಿತಾ ಹಾಕಿ. ನಿಮ್ಮ ಕಾಮೆಂಟ್ಸ್ ಓದುವುದು ನನಗೆ ತುಂಬಾ ಇಷ್ಟ.
ಸರಿ ಈಗ ಟಿಪ್ ನೋಡೋಣ. ಇದು ನಾನು ಈರುಳ್ಳಿ ಕಟ್ ಮಾಡೋವಾಗಲೆಲ್ಲಾ ಬಳಸುವ ಟಿಪ್. ಇದಕ್ಕೆ ನಿಮಗೆ ಹೆಚ್ಚು ಸಾಮಾಗ್ರಿ ಕೂಡಾ ಏನೂ ಬೇಕಾಗಿಲ್ಲ. ನಾನು ಈ ಟಿಪ್ ಬಳಸಿದಾಗ ನನ್ನ ಕಣ್ಣಲ್ಲಿ ಸ್ವಲ್ಪವೂ ನೀರಾಡದೇ ಈರುಳ್ಳಿ ಸಣ್ಣಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ತಯಾರಾಗುತ್ತದೆ ಅಂದರೆ ನಂಬುತ್ತೀರಾ?!
ಅತಿಥಿಗಳು ಬರುತ್ತಾರೆ ಅಂತ ಗೊತ್ತಾದ ತಕ್ಷಣವೇ ನೀವು ಮಾಡಬೇಕಾದದ್ದು ಇಷ್ಟೇ. ಎಷ್ಟು ಈರುಳ್ಳಿ ಬೇಕೋ ಅದನ್ನು ತೆಗೆದುಕೊಳ್ಳಿ. ಒಂದು ಕಟಿಂಗ್ ಬೋರ್ಡ್ ಮತ್ತು ಚಾಕು ಹೊಂದಿಸಿಕೊಳ್ಳಿ. ಕಟಿಂಗ್ ಬೋರ್ಡ್ ಶುದ್ಧವಾಗಿರಲಿ. ಚಾಕು ಚೂಪಾಗಿರಲಿ. ಅನಂತರ ನಿಮ್ಮ ಪತಿಯನ್ನೋ ಬಾಯ್ ಫ್ರೆಂಡ್, ಅತ್ತಿಗೆ, ನಾದಿನಿ, ಯಾರಾದರೂ ಇರಲಿ, ಅವರನ್ನು ಕರೆದು ಪ್ರೀತಿಯಿಂದ ಕಟಿಂಗ್ ಬೋರ್ಡ್ ಮುಂದೆ ಕೂಡಿಸಿ. ಪಕ್ಕದಲ್ಲಿ ಅವರಿಗೆ ಒಂದು ಕರ್ಚೀಫ್ ಇಡಿ. ಇದಾದ ನಂತರ ಹತ್ತು ಹದಿನೈದು ನಿಮಿಷಗಳ ಕಾಲ ನಿಮ್ಮ ಮೇಕಪ್ ಮೇಲೆ ಗಮನ ಕೊಡಿ. ಬಂದು ನೋಡಿದಾಗ ನಿಮ್ಮ ಕಣ್ಣಲ್ಲಿ ಸ್ವಲ್ಪವೂ ನೀರಿಲ್ಲದೆ ಈರುಳ್ಳಿ ಕತ್ತರಿಸಿ ಸಿದ್ಧ!!
ನಿಮಗೆ ನನ್ನ ಟಿಪ್ ಇಷ್ಟವಾಯಿತು ಎಂದು ಭಾವಿಸುತ್ತೇನೆ. ಖಂಡಿತಾ ಲೈಕ್ ಮಾಡಿ, ಕಾಮೆಂಟ್ ಮಾಡಿ, ಶೇರ್ ಮಾಡಿ. ಮತ್ತೊಂದು ಟಿಪ್ ಜೊತೆ ಬೇಗ ನಿಮ್ಮ ಮುಂದೆ ಹಾಜರಾಗುತ್ತೇನೆ.

(೨)

ಬಿಟ್ ಕಾಯಿನ್

ನೋಡಿದಿರೇನ್ರೀ ಸುದ್ದಿ? ಪಾಪ ಆ ಪ್ರೋಗ್ರಾಮರ್ ಗತಿ ಏನು?

ಯಾವ ಪ್ರೋಗ್ರಾಮರ್, ಏನು ಕತೆ?

ಯೂಎಸ್ಸೇನಲ್ಲಿದಾನಂತೆ. ಪಾಪ ಬಿಟ್ ಕಾಯಿನ್ ಹಾರ್ಡ್ ಡ್ರೈವಿಗೆ ಹಾಕಿ ಪಾಸ್ವರ್ಡ್ ಮರೆತು ಬಿಟ್ಟಿದಾನಂತೆ. ಹತ್ತು ಚಾನ್ಸ್ ಕೊಡತ್ತಂತೆ ಹಾರ್ಡ್ ಡ್ರೈವ್ಉ. ಸರಿಯಾಗಿರೋ ಪಾಸ್ವರ್ಡ್ ಹಾಕದೇ ಹೋದ್ರೆ ಎಲ್ಲಾ ಡೇಟಾ ಗುಳುಂ ಮಾಡಿಬಿಡುತ್ತಂತೆ.

ಅಯ್ಯೋ ಇವನು ಎಲ್ಲಾ ಬಿಟ್ಟು ಕಾಯಿನ್ನ ಹಾರ್ಡ್ ಡ್ರೈವಲ್ಲಿ ಯಾಕೆ ಇಡೋದಕ್ಕೆ ಹೋದ? ನಮ್ಮಮ್ಮ ಸಾಸುವೆ ಡಬ್ಬದಲ್ಲಿ ಇಟ್ಟುಕೊಳ್ಳೋರಪ್ಪ. ತೀರಾ ಹಾರ್ಡ್ ಡ್ರೈವಲ್ಲಿ ಹಾಗೆಲ್ಲಾ ಕಾಯಿನ್ ಹಾಕಿದರೆ ಕೆಟ್ಟುಹೋಗೋದಿಲ್ವಾ?

ರೀ, ಕಾಯಿನ್ ಅಲ್ರೀ ಹಾಕಿದ್ದು! ಬಿಟ್ ಕಾಯಿನ್ ಅಂದ್ರೆ ಕ್ರಿಪ್ಟೋ ಕರೆನ್ಸಿ ಕಣ್ರೀ.

ಕ್ರಿಪ್ಟೋ ಅಂದರೇನು? ಕೌಂಟ್ ಆಫ್ ಮಾಂಟೆ ಕ್ರಿಸ್ಟೋ ಕೇಳಿದ್ದೀನಪ್ಪ. ಕೌಂಟ್ ಆಫ್ ಮಾಂಟೆಕ್ರಿಸ್ಟೋಗೆ ಯಾವುದೋ ದ್ವೀಪದಲ್ಲಿ ಸಿಕ್ಕಿತಂತೆ ಚಿನ್ನದ ಕಾಯಿನ್ಸ್. ಕಡಲುಗಳ್ಳರು ಬಚ್ಚಿಟ್ಟಿದ್ದನ್ನು ದೋಣಿಗಳಲ್ಲಿ ತುಂಬಿಕೊಂಡು ಬಂದನಂತೆ.

ಈ ಬಿಟ್ ಕಾಯಿನ್ ಒಂಥರಾ ಬೇರೆ ಥರಾ ನಾಣ್ಯ. ಅದನ್ನ ಕೈಯಲ್ಲಿ ಹಿಡಿದುಕೊಂಡು ನೋಡೋದಕ್ಕೆ ಸಾಧ್ಯ ಇಲ್ಲ. ಒಂದು ಬಿಟ್ ಕಾಯಿನ್ ಕೊಂಡುಕೋಬೇಕು ಅಂದ್ರೆ ನೂರಾರು ಚಿನ್ನದ ನಾಣ್ಯಗಳೇ ಬೇಕು. ಒಂದು ಬಿಟ್ ಕಾಯಿನ್ ಇದ್ದೋನು ಭಾರೀ ಶ್ರೀಮಂತನೇ ಆಗಿರಬೇಕು. ಇಪ್ಪತ್ತು ಲಕ್ಷ ಕೊಟ್ರೂ ಒಂದು ಕಾಯಿನ್ ಸಿಕ್ಕೋದಿಲ್ಲ, ಬೇಕಾದರೆ ಗೂಗಲ್ ನೋಡಿ.

ಏನ್ರೀ ಇದು! ತಿರುಪತಿ ತಿಮ್ಮಪ್ಪನ ಹತ್ತಿರವೂ ಇದೆಯೋ ಇಲ್ಲವೋ ಇಂಥ ಕಾಯಿನ್!

ಇರಲಾರದು ಇರಲಾರದು.

ಭಕ್ತಾದಿಗಳು ಚಿನ್ನದ ನಾಣ್ಯ, ಬಳೆ, ಸರ, ಕಿರೀಟ ಇದನ್ನೆಲ್ಲಾ ತಿಮ್ಮಪ್ಪನ ಹುಂಡಿಗೆ ಹಾಕಿ ಬರ್ತಾರೆ. ಬಿಟ್ ಕಾಯಿನ್ ಯಾರೂ ಹಾಕೋದಿಲ್ವಾ.

ರೀ, ಹಾಗೆಲ್ಲಾ ಹಾಕೋದಕ್ಕೆ ಆಗೋದಿಲ್ರೀ. ಅದು ಕಂಪ್ಯೂಟರ್ ಮೇಲಿರುತ್ತೆ. ಹಾರ್ಡ್ ಡಿಸ್ಕ್ ಮೇಲೆ ಕೂತಿರುತ್ತೆ. ಈ ಪ್ರೋಗ್ರಾಮರ್ ಕೂಡಾ ಅದೆಷ್ಟೋ ಬಿಟ್ ಕಾಯಿನ್ಸ್ ಹಾರ್ಡ್ ಡ್ರೈವ್ನಲ್ಲಿ ಇಟ್ಟುಕೊಂಡು ಪಾಸ್ವರ್ಡ್ ಹಾಕಿ ಭದ್ರ ಮಾಡಿದ್ದ. ಪಾಪ ಈಗ ಪಾಸ್ವರ್ಡ್ ಮರೆತುಬಿಟ್ನಂತೆ.

ಬಿಟ್ ಕಾಯಿನ್ ಮರೆತು ಬಿಟ್ರೂ ಪರವಾಗಿಲ್ಲ, ಪಾಸ್ವರ್ಡ್ ಮರೆತರೆ ಹೇಗೆ ಈಗಿನ ಕಾಲದಲ್ಲಿ! ನಾನು ಕೂಡಾ ವಾಟ್ಸಾಪ್ ಪಾಸ್ವರ್ಡ್ ಮರೆತು ಫಜೀತಿ ಪಟ್ಟಿದೀನಿ.

ರೀ! ವಾಟ್ಸಾಪ್ನಲ್ಲಿ ಏನಿದೆ ಮಣ್ಣು! ಪಾಸ್ವರ್ಡ್ ಮರೆತರೆಷ್ಟು ಬಿಟ್ಟರೆಷ್ಟು!

ಏನ್ರೀ ನೀವು ಆಡೋ ಮಾತು! ಬೆಳಗ್ಗೆ ಸಿಕ್ಸ್ ಏಎಂಗೆ ಬರೋ ಜೀಎಂನಿಂದ ಹಿಡಿದು ಸೀಎಂ, ಪೀಎಂ ಪಾಲಿಟಿಕ್ಸ್ ಎಲ್ಲಾ ಇಲೆವೆನ್ ಪೀಎಂ ವರೆಗೂ ನೋಡಿ ಜೀಎನ್ ಹೇಳಿ ಮಲಗೋ ನಮಗೆ ಏನಿದೆ ಮಣ್ಣು ಅಂತೀರಲ್ಲ! ಮಣ್ಣು ಅಂದ್ರೆ ಯಾಕ್ರೀ ನಿಕೃಷ್ಟ? ಕೈ ಮಣ್ಣಾದರೆ ಬಾಯಿಗೆ ಹಣ್ಣು ಅಂತಲೋ ಏನೋ ಗಾದೆ ಕೂಡಾ ಇದೆ!

ಕೈ ಮಣ್ಣಾಗಿ ತೊಳಕೊಳ್ಳದೇ ಇದ್ರೆ ಬಾಯಿ ಹುಣ್ಣು ಅಷ್ಟೇ. ರೀ, ಮೇನ್ ಪಾಯಿಂಟ್ ಬಿಟ್ಟು ಎಲ್ಲೆಲ್ಲಿಗೋ ಹೋಗ್ತೀರಲ್ರೀ. ಪಾಪ ಆ ಪ್ರೋಗ್ರಾಮರ್ ಗತಿ ಹೇಳಿ.

ಪಾಸ್ವರ್ಡ್ ಮರೆತಿದಾನೆ ಅಲ್ಲವಾ? ನನಗೂ ಮರೆತುಹೋಗಿತ್ತು. ಆದರೆ ಆಮೇಲೆ ನೆನಪಿಗೆ ಬಂತು. ಪಾಸ್ವರ್ಡ್ ಬರೆದು ಸಾಸುವೆ ಡಬ್ಬದಲ್ಲಿ ಇಟ್ಟಿದ್ದೆ ಅಂತ.

ಸಿಕ್ಕಿತಾ?

ಅಯ್ಯೋ ಇಲ್ಲ..ಇವಳು ಒಗ್ಗರಣೆ ಹಾಕೋವಾಗ ಅದನ್ನೂ ಹಾಕಿಬಿಟ್ಟಿದ್ದಳು ಅಂತ ಕಾಣತ್ತೆ. ಹಾಳು ಮೊಬೈಲ್ ಫೋನ್ ಮೇಲೆ ರೆಸಿಪಿ ನೋಡಿಕೊಂಡು ಇವಳು ಅಡುಗೆ ಮಾಡೋವಾಗ ಏನು ಹಾಕ್ತಿದೀನಿ ಅಂತ ಎಲ್ಲಿರುತ್ತೆ ನಿಗಾ!

ಮತ್ತೆ?

ನಾನು ಇನ್ನೊಂದು ಬ್ಯಾಕಪ್ ಇಟ್ಟಿದ್ದೆ. ಹುರುಳಿ ಡಬ್ಬದಲ್ಲಿ. ಇವಳು ಸದ್ಯ ಹುರುಳಿ ಸಾರು ಮಾಡದೇ ಹೋಗಿದ್ದರಿಂದ ಅದು ಅಲ್ಲೇ ಇತ್ತು. ಬಚಾವ್. ನಿಮ್ಮ ಪ್ರೋಗ್ರಾಮರಿಗೆ ಮದುವೆ ಆಗಿದೆಯಾ ಕೇಳಿ. ಅವನ ಹೆಂಡತಿಗೆ ಏನಾದರೂ ಹೇಳಿದ್ದರೆ ಅವಳು ಹೀಗೇ ಯಾವುದಾದರೂ ಡಬ್ಬದಲ್ಲಿ ಹಾಕಿಟ್ಟಿರಬಹುದು.

ಇಲ್ಲ ಇಲ್ಲ. ಹಾಗೆಲ್ಲಾ ಈಗಿನ ಕಾಲದ ಪ್ರೋಗ್ರಾಮರ್ಸ್ ಸಾಸುವೆ ಡಬ್ಬದಲ್ಲಿ ಬೆಲ್ಲದ ಡಬ್ಬದಲ್ಲಿ ಅಂತ ಎಲ್ಲೆಲ್ಲೋ ಪಾಸ್ವರ್ಡ್ ಹಾಕಿಡಲ್ಲ. ನೆನಪಿಟ್ಟುಕೋತಾರೆ. ನನ್ನ ಮಗನಿಗೆ ಏನಿಲ್ಲ ಅಂದ್ರೂ ಒಂದು ಹದಿನೈದು ಪಾಸ್ವರ್ಡ್ ನೆನಪಿದೆ. ಪಾಪ ಈ ಪ್ರೋಗ್ರಾಮರ್ ಎಲ್ಲೋ ಬರೆದಿಟ್ಟುಕೊಂಡಿದ್ದನ್ನ ಕಳೆದುಕೊಂಡುಬಿಟ್ಟಿದಾನಂತೆ.

ಡಬ್ಬಗಳಲ್ಲಿ ಹುಡುಕಿದನಾ?
ರೀ! ಈ ಡಬ್ಬಾ ಐಡಿಯಾಗಳೆಲ್ಲಾ ಅವನಿಗೆ ಹೊಳೆದಿಲ್ಲ. ಪಾಪ ಹಾರ್ಡ್ ಡ್ರೈವ್ ಕೊಡೋ ಹತ್ತು ಚಾನ್ಸ್ನಲ್ಲಿ ಎಂಟು ಆಗಲೇ ಮುಗಿದುಹೋಗಿವೆ. ಇನ್ನು ಎರಡು ಚಾನ್ಸ್ ಇವೆ. ಅದು ತಪ್ಪಾದರೆ ಗೋವಿಂದ!

ಏನಾಗತ್ತೆ?

ಹಾರ್ಡ್ ಡ್ರೈವ್ ಎಲ್ಲಾ ಡೇಟಾನೂ ನಾಶ ಮಾಡಿಬಿಡುತ್ತೆ.

ಅಯ್ಯೋ ಪಾಪ ಪಿಕ್ಚರ್ಸ್ ಎಲ್ಲಾ ಹಾರ್ಡ್ ಡ್ರೈವ್ ಮೇಲೇ ಇದೆಯೋ ಏನೋ. ನಾನು ಕೂಡಾ ಸೇವ್ ಮಾಡೋದು ಹಾರ್ಡ್ ಡ್ರೈವ್ ಮೇಲೆ. ಫೇಸ್ಬುಕ್ ಮೇಲೆ ಒಬ್ಬರು ನಗುಬಂತಾ ಅಂತೆಲ್ಲಾ ಬರೀತಿರ್ತಾರೆ. ಅವರ ಜೋಕ್ಸ್ ನನಗೆ ಅರ್ಥವೇ ಆಗಲ್ಲ. ಮುಂದೆ ಯಾವಾಗಲಾದರೂ ಓದೋಣ ಅಂತ ಹಾರ್ಡ್ ಡ್ರೈವ್ ಮೇಲೇ ಸೇವ್ ಮಾಡೋದು.

ರೀ, ಫೇಸ್ಬುಕ್ ಪಿಕ್ಚರ್ಸ್ ಅಲ್ರೀ, ಬಿಟ್ ಕಾಯಿನ್ಸ್ ಇದೆಯಂತೆ ಕಣ್ರೀ. ಒಂದಲ್ಲ ಎರಡಲ್ಲ. ಸಾವಿರ ಕೋಟಿ ರೂಪಾಯಿ ಬೆಲೆ ಬಾಳೋ ಬಿಟ್ ಕಾಯಿನ್ಸ್!!

ಸಾವಿರಾರು ಕೋಟಿ! ಏನ್ರೀ ನವಕೋಟಿ ನಾರಾಯಣನ್ನ ಮೀರಿಸೋ ಹಾಗಿದೆ ಈ ಪ್ರೋಗ್ರಾಮರ್ ಊ. ಬಿಟ್ ಕಾಯಿನ್ ನಾರಾಯಣ ಅಂತ ಹೆಸರಿಡಬಹುದು ಇವನಿಗೆ.

ಏನು ಬಿಟ್ ಕಾಯಿನ್ನೋ. ಕೈ ಬಿಟ್ ಹೋಗ್ತಿವೆ ಪಾಪ.

ಹಾಗನ್ನಬೇಡಿ. ನವಕೋಟಿ ನಾರಾಯಣನಿಗೆ ಅರ್ಧ ಕೊಡ್ತೀನಿ ಅಂತ ಹೇಳಿಕೊಂಡರೆ ಪಾಸ್ವರ್ಡ್ ಖಂಡಿತಾ ಜ್ಞಾಪಕಕ್ಕೆ ಬರತ್ತೆ. ಸರಿ ನಡೀರಿ. ಎಸ್ ಎಲ್ ವೀ ಹತ್ತಿರ ಬಂತು. ಕಾಯಿನ್ ಮಾತು ಕೇಳ್ತಾ ಕೇಳ್ತಾ ವಡೆ ಜೊತೆ ಕಾಯಿನ್ ಚಟ್ನಿ ತಿನ್ನೋಣ ಅನ್ನಿಸ್ತಿದೆ!


(೩) ಸೋಲಾರಕ್ಕೂ ಬೇಕಂತೆ ಕಾರ

ಚಿಲ್ಲಿಯಲ್ಲಿರುವ ಖಾರಕ್ಕೆ ಕಾರಣವಾದ ರಾಸಾಯನಿಕವನ್ನೇ ಸೋಲಾರ್ ಸೆಲ್ಲಿನಲ್ಲಿ ಬಳಸಿ ಅದರ ಕ್ಷಮತೆಯನ್ನು ಹೆಚ್ಚಿಸಿದ್ದಾರಂತಲ್ಲ.

ನೋಡಿ, ಕೊನೆಗೂ ನಾನು ಅಷ್ಟು ದಿನದಿಂದ ಹೇಳುತ್ತಿದ್ದದ್ದನ್ನೇ ಅವರು ಮಾಡಿ ತೋರಿಸಿದ್ದಾರೆ.

ನೀನು ಯಾವಾಗ ಸೋಲಾರ್ ಸೆಲ್ಲಿಗೆ ಚಿಲ್ಲಿ ಹಾಕಬೇಕು ಅಂತ ಹೇಳಿದ್ದೆ!

ಸೋಲಾರ್ ಸೆಲ್ಲಿಗೆ ಹಾಕಬೇಕು ಅಂತ ಹೇಳಿರಲಿಲ್ಲ. ನೀವು ಮಾಡೋ ಹುಳಿಯಲ್ಲಿ ಸ್ವಲ್ಪ ಚಿಲ್ಲಿ ಜಾಸ್ತಿ ಹಾಕಿ ಅಂತ ನಾನು ಹೇಳ್ತಾನೇ ಇರ್ತೀನಿ. ನನಗೆ ಸಪ್ಪೆ ಅಡುಗೆ ತಿಂದರೆ ನಿದ್ದೆ ಬರುತ್ತೆ. ವರ್ಕ್ ಫ್ರಮ್ ಹೋಮ್ ಬೇರೆ. ಅಲ್ಲೇ ಮಂಚ ಕೂಡಾ ಇರುತ್ತೆ. ಚಿಲ್ಲಿ ಹಾಕಿದರೆ ಎಚ್ಚರವಾಗಿ ಕೆಲಸ ಮಾಡಬಹುದು. ಅದಕ್ಕೇ ನಾನು ನೀವು ಅಡಿಗೆ ಮಾಡಿದಾಗ ಉಪ್ಪಿನಕಾಯಿ ಇಟ್ಟುಕೊಂಡೇ ಊಟಕ್ಕೆ ಕೂಡೋದು.

ಯಾರೋ ಒಬ್ಬ ಚೈನೀಸ್ ವಿಜ್ಞಾನಿ ಸೋಲಾರ್ ಸೆಲ್ಲಿನಲ್ಲಿ ಹಾಕೋ ಮಸಾಲೆಗೆ ಚಿಲ್ಲಿಯಲ್ಲಿರೋ ಕ್ಯಾಪ್ಸೇಸಿನ್ ರಾಸಾಯನಿಕ ಸೇರಿಸಿ ಅದರ ಕಾರ್ಯಕ್ಷಮತೆ ಹೆಚ್ಚಿಸಿದ್ದಾನಂತೆ.

ನೋಡಿ ಈ ಚೈನೀಸ್ ವಿಜ್ಞಾನಿಗಳಿಗೆ ಇರೋ ಧೈರ್ಯ ನಮಗೆ ಇದ್ದಿದ್ದರೆ! ನಮ್ಮ ಆಂಧ್ರ ಆವಗಾಯಿ ಬಾಯಲ್ಲಿಟ್ಟುಕೊಳ್ಳೋಕೆ ಆಗದೆ ಹಾಹಾ ಅಂತ ಒದ್ದಾಡ್ತೀವೇ ವಿನಾ ಅದನ್ನು ಸೋಲಾರ್ ಹೀಟರಿಗೆ ಹಾಕಿದರೆ ಹೇಗೆ ಅಂತ ಒಬ್ಬರೂ ಯೋಚಿಸಲಿಲ್ಲ.

ಸೋಲಾರ್ ಹೀಟರಿಗೆ ಹಾಕಿಲ್ಲ. ಸೋಲಾರ್ ಸೆಲ್ಲಿಗೆ ಹಾಕಿದ್ದಾರೆ.

ಸೆಲ್ಲಿಗೆ ಹಾಕಿದರೇನು ಸೆಲ್ಲನ್ನು ಹೀಟರಿಗೆ ಹಾಕೋದಿಲ್ವೆ!

ಒಂದು ರೀತಿ ನೀನು ಹೇಳೋದು ನಿಜವೇ ಬಿಡು. ಒಂದು ಸೋಲಾರ್ ಪ್ಯಾನೆಲಿನಲ್ಲಿ ಸುಮಾರು ಐವತ್ತು ಸೆಲ್ ಇರುತ್ತೆ.

ಮತ್ತೆ! ಈ ಚೈನೀಸ್ ಯಾವ ಚಿಲ್ಲಿ ಹಾಕಿದ ಅಂತ ಬರೆದಿದ್ದಾರಾ?

ಇಲ್ಲ.

ಅಲ್ಲಿ.ಅಂಥಾ ಬೊಂಬಡಾ ಖಾರದ ಚಿಲ್ಲಿ ಸಿಕ್ಕುತ್ತೋ ಇಲ್ಲವೋ. ಬ್ಯಾಡಗಿ ಮೆಣಸಿನಕಾಯಿಗೂ ಗುಂಟೂರ್ ಮೆಣಸಿನಕಾಯಿಗೂ ವ್ಯತ್ಯಾಸ ಇಲ್ಲವಾ! ನಮ್ಮ ಗುಂಟೂರ್ ಚಿಲ್ಲಿ ಹಾಕಿ ಯಾರಾದ್ರೂ ಸೆಲ್ ಒಳಗೆ ಹಾಕಿದರೆ ಅದು ಹೇಗೆ ಓಡುತ್ತೆ ನೋಡ್ತಿರಿ.

ಅದನ್ನು ಕೇಳಿದರೆ ಸಾಕು ನನಗೆ ಹೊಟ್ಟೆ ಎಲ್ಲಾ ಒಂಥರಾ ಆಗ್ತಿದೆ.

ಅಯ್ಯೋ ನೀವೊಬ್ಬರು. ಹಾಗೆ ಬರೀ ಚಿಲ್ಲಿ ಹಾಕ್ತಾರಾ? ಆವಗಾಯಿ ತಿನ್ನೋವಾಗ ತುಪ್ಪ ಇಲ್ಲದೆ ಇದ್ರೆ ಆಯಿತು! ಎಣ್ಣೆ ತುಪ್ಪ ಧoಡಿಯಾಗಿ ಹಾಕಿದರೆ ತಾನೇ! ಆ ಚೈನೀಸ್ ವಿಜ್ಞಾನಿ ಸೆಲ್ಲಿಗೆ ಎಣ್ಣೆ ತುಪ್ಪ ಏನಾದ್ರೂ ಹಾಕಿದಾನೋ ಇಲ್ಲವೋ ಹೇಳಿ.

ಅಯ್ಯೋ ಅದೆಲ್ಲಾ ಹಾಗೆ ವರ್ಕ್ ಆಗೋದಿಲ್ಲ.

ಹೋಗಲಿ ಬಿಡಿ. ಈ ಚಿಲ್ಲಿ ವೆದರ್ನಲ್ಲಿ ಚಿಲ್ಲಿ ವಿಷಯ ಮಾತಾಡ್ತಾ ಯಾಕೋ ಹಸಿವಾಗ್ತಿದೆ. ಚಿಲ್ಲಿ ಬೋಂಡಾ ತಿನ್ನಬೇಕು ಅನ್ನಿಸ್ತಿದೆ. ನಿಮಗೂ ಬೇಕಾ ಹೇಳಿ.

ವಾಟ್ ಎ ಚಿಲ್ಲಿ ಕ್ವೆಸ್ಚನ್!

(4)

ಡಿಯರ್‌ಮೂನ್

ಮಧುಚಂದ್ರದ ಬಗ್ಗೆ ಕೇಳಿದ್ದಿರಲ್ಲವೇ, ಪ್ರಿಯಚಂದ್ರ ಪ್ರಾಜೆಕ್ಟ್ ಬಗ್ಗೆ ಕೇಳಿದ್ದಿರಾ? ಜಪಾನ್ ದೇಶದ ಬಿಲಿಯನೇರ್ ಶ್ರೀಮಂತ ಯುಸಾಕು ಮೇಜಾವಾ ಅವರ ಯೋಜನೆಯ ಹೆಸರು ಡಿಯರ್‌ಮೂನ್. 2023ರಲ್ಲಿ ಹೊರಡುವ ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ನಕ್ಷತ್ರನೌಕೆಯಲ್ಲಿ ಯುಸಾಕು ಹನಿಮೂನಿಗಲ್ಲ, ಮೂನಿಗೇ ಹೊರಡಲು ಯೋಜನೆ ಹಾಕಿಕೊಂಡಿದ್ದಾರೆ. ಇಷ್ಟೇ ಆಗಿದ್ದರೆ ಏನೋ ಶ್ರೀಮಂತರ ಕನಸು ಎಂದು ಸುಮ್ಮನಿದ್ದು ಬಿಡಬಹುದಾಗಿತ್ತು. ತಮ್ಮೊಂದಿಗೆ ಎಂಟು ಮಂದಿ ಜನಸಾಮಾನ್ಯರನ್ನು ಕರೆದೊಯ್ಯುವ ಯೋಜನೆಯನ್ನು ಯುಸಾಕು ಹಾಕಿದ್ದಾರೆ. ಲೋಣಾವಾಲಾಗೆ ಟ್ರಿಪ್ ಹಾಕಿದ್ದನ್ನು ಕೇಳಿರುವ ನಿಮಗೆ ಲೂನಾರ್ ವಾಲಾ ಟ್ರಿಪ್ ಕನಸುಗಳು ಮೂಡತೊಡಗಿದ್ದರೆ ಕ್ಷಮಿಸಿ, ಈ ಎಂಟು ಜನರೂ ಜಪಾನ್ ದೇಶದವರೇ ಆಗಿರುತ್ತಾರೆ. ನಮ್ಮದೇ ದೇಶದ ಅಂಬಾನಿ ಏನಾದರೂ ಯುಸಾಕು ಮಾದರಿಯಲ್ಲಿ ದಿಢೀರೆಂದು ಚಂದ್ರಯಾನಕ್ಕೆ ಅಂಬಾರಿಯಲ್ಲಿ ಹೊರಟರೆ ಆಗ ಖಂಡಿತಾ ನಿಮಗೊಂದು ಛಾನ್ಸ್ ಸಿಕ್ಕೀತು.
ಯುಸಾಕು ಅವರ ಟ್ರಿಪ್ ಬಗ್ಗೆ ಇನ್ನೂ ಅಷ್ಟೊಂದು ವಿವರಗಳು ಲಭ್ಯವಾಗಿಲ್ಲ. ಉದಾಹರಣೆಗೆ ಅವರಿಗೆ ಸ್ಪೇಸ್ ಎಕ್ಸ್ ನೌಕೆಯಲ್ಲಿ ಸಿಕ್ಕುವ ಬ್ರೇಕ್ ಫಾಸ್ಟ್, ಲಂಚ್, ಡಿನ್ನರ್ ಏನೇನು ಎಂದು ಸುಶೀಲಾ ಅವರು ಕೇಳಿದ್ದಾರೆ. ಇಡ್ಲಿ ಸಾಂಬಾರ್, ಕರ್ಡ್ ರೈಸ್, ಕಲರ್ ರೈಸ್, ಗೋಬಿ ಮಂಚೂರಿ ಇತ್ಯಾದಿಗಳು ಸ್ಪರ್ಧೆಯಲ್ಲಿವೆ ಎಂದು ಕೇಳಿದ್ದೇನೆ. ಸುಶೀ ಕೂಡಾ ಮೆನುವಿನಲ್ಲಿ ಇರಬಹುದು ಎಂಬ ನನ್ನ ಉತ್ತರ ಕೇಳಿ ಶ್ರೀಮತಿ ಸುಶೀ ಗಾಬರಿಯಾಗಿ ನನ್ನನ್ನು ಬ್ಲಾಕ್ ಮಾಡಿದ್ದಾರೆ.
ಈ ಟ್ರಿಪ್ ಪೂರೈಸಲು ಎಷ್ಟು ದಿವಸಗಳು ಬೇಕು ಎನ್ನುವ ಶ್ರೀ ಶಾಸ್ತ್ರಿಗಳ ಪ್ರಶ್ನೆಗೆ ಬರೋಣ. ಹೋಗಲು ಮೂರು ದಿವಸ. ನಂತರ ಚಂದ್ರನ ಸುತ್ತ ಒಂದು ಪ್ರದಕ್ಷಿಣೆ. ನಂತರ ಹಿಂದಿರುಗಲು ಮೂರು ದಿವಸ. ಪ್ರದಕ್ಷಿಣೆಯನ್ನು ಕ್ಲಾಕ್ ವೈಸ್ ಹಾಕುತ್ತಾರೋ ಆಂಟಿ ಕ್ಲಾಕ್ ವೈಸ್ ಹಾಕುತ್ತಾರೋ ಎಂಬುದು ಇನ್ನೂ ತಿಳಿದಿಲ್ಲ. ಹೊರಡುವಾಗ ಯಾವ ತಿಥಿ, ವಾರ, ನಕ್ಷತ್ರ ಎಂಬುದೆಲ್ಲಾ ಇನ್ನೂ ನಿರ್ಧಾರವಾಗಿಲ್ಲ. ಭಾದ್ರಪದ ಶುಕ್ಲ ಚೌತಿಯಂದು ಚಂದ್ರನ ಪ್ರದಕ್ಷಿಣೆ ಶ್ರೇಯಸ್ಕರವಲ್ಲ ಎಂದು ಮಸ್ಕ್ ಅವರಿಗೆ ಮತ್ತು ಯುಸಾಕು ಅವರಿಗೆ ತಿಳಿದಿಲ್ಲವೇನೋ. ಶಾಸ್ತ್ರಿಗಳು ಖಂಡಿತಾ ಯುಸಾಕು ಅವರನ್ನು ಸಂಪರ್ಕಿಸಬಹುದು.
ಹನಿಮೂನಿಗೆ ಅವರೊಂದಿಗೆ ಎಂಟು ಮಂದಿಯಲ್ಲದೆ ಬೇರೆ ಇನ್ನು ಯಾರು ಹೊರಡುತ್ತಾರೆ ಎಂಬ ಪ್ರಶ್ನೆ ಬಂದಿದೆ. ಅವರ ಹೆಂಡತಿಯೂ ಜೊತೆಗೆ ಇರುತ್ತಾರಾ ಎಂಬುದು ಈ ಪ್ರಶ್ನೆಯ ಹಿಂದಿರುವ ಕುತೂಹಲ. ನಲವತ್ತಾರು ವರ್ಷದ ಯುಸಾಕು ವಿಚ್ಛೇದಿತರಾದ್ದರಿಂದ ತಮ್ಮ ಎಕ್ಸ್ ಅನ್ನು ಸ್ಪೇಸ್ ಎಕ್ಸ್ ಮೇಲೆ ಕರೆದೊಯ್ಯುವರೇ ಎನ್ನುವುದು ಅನುಮಾನ. ಯುಸಾಕು ಅವರು ಬಿಲಿಯನೇರ್ ಹೇಗಾದರು ಎಂಬ ಶ್ರೀಮತಿ ಸೋನಿಯಾ ರೇಖಾ ಅವರ ಪ್ರಶ್ನೆಗೆ ಸಂಕ್ಷಿಪ್ತ ಉತ್ತರ. ಯುಸಾಕು ಆನ್ಲೈನ್ ಫ್ಯಾಷನ್ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಜೋಜೋಟೌನ್ ಎಂಬ ಫ್ಯಾಷನ್ ರೀಟೇಲ್ ಬಿಸಿನೆಸ್ ತೆರೆದು ಶ್ರೀಮಂತರಾದರು. ಅವರು ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವನ್ನೂ ಇಟ್ಟುಕೊಂಡಿದ್ದಾರೆ. ಚಂದ್ರನಿಂದ ಏನಾದರೂ ಮಣ್ಣು, ಕಲ್ಲು ಇತ್ಯಾದಿ ತಂದು ತಮ್ಮ ಆನ್ಲೈನ್ ಸ್ಟೋರಿನಲ್ಲಿ ಮಾರಾಟ ಮಾಡುವರೋ ಎನ್ನುವುದು ಇನ್ನೂ ಕಾದು ನೋಡಬೇಕಾದ ವಿಷಯ. ಅವರು ಚಂದ್ರನನ್ನೇ ತರಲು ಹೊರಟಿದ್ದಾರೆ ಎನ್ನುವುದು ಶುದ್ಧ ಊಹಾಪೋಹ. ಯುಸಾಕು ಅವರ ಬಗ್ಗೆ ಇಷ್ಟು ಸಾಕು.
ವ್ಯಾಕ್ಸೀನ್ ಎಲ್ಲರಿಗೂ ದೊರೆಯುತ್ತಿರುವಂತೆ ಮುಂದೊಮ್ಮೆ ಚಂದ್ರಪ್ರಯಾಣವೂ ಎಲ್ಲರಿಗೂ ದೊರೆಯಬಹುದೇ? ಯಾಕಾಗಬಾರದು? ಇವತ್ತು ಮಲಗುವ ಮುನ್ನ ಈ ಬರಹವನ್ನು ಓದಿ ಮಲಗಿ. ನಿಮಗೂ ಚಂದ್ರದರ್ಶನವಾಗುವುದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)