ಹಳೇ ಸೈಕಲ್ಲುಗಳ ಗೋರಿ



ಊರಿನ ಅಂಚಿನಲ್ಲಿದೆ ಹಳೇ ಸೈಕಲ್ಲುಗಳ ಗೋರಿ
ಅನುಪಯುಕ್ತವೆನ್ನಿಸಿದಾಗ ಅಟ್ಟಿಬಿಡುವಂತೆ ದನ, ಹೋರಿ
ಇಲ್ಲಿ ತಂದು ಬಿಟ್ಟಿದ್ದಾರೆ ಚೈನಾದಲ್ಲಿ ಯಾವುದೋ ಊರಿನ ಜನ
ಮಾಡದೇ ಯಾವುದೇ ಕ್ರಿಯಾಕರ್ಮ, ಜನಾಜಾ ಪಠಣ.
ಶಿವನೊಬ್ಬ ತನ್ನ ಮೂರನೇ ಕಣ್ಣು ತೊಟ್ಟು
ಬಿಚ್ಚಿ ಈ ಸೈಕಲ್ಲುಗಳ ಸ್ಕ್ರೂ ಮತ್ತು ನಟ್ಟು
ಬೇರೆ ಮಾಡಿ ಬಿಡಿಭಾಗ ಒಂದೊಂದೂ
ರೀ ಸೈಕಲ್ ಮಾಡಲು ಬಂದಾನು ಬ್ರಹ್ಮನೊಬ್ಬ ಮುಂದು:
ಮರುವುಟ್ಟಿಗೆ ಕಾಯುತ್ತಿವೆ ಮೇಲೆ ಆಗಸದಲ್ಲಿ ಅಲ್ಲೇ
ಸೈಕಲ್ಲಿನ ಆತ್ಮಗಳು! ಸಿಕ್ಕೀತು ಅವಕಾಶ ಇಂದಲ್ಲ ನಾಳೆ
ಪುಟ್ಟ ಮಗುವಿನ ಹೊಳೆವ ಕೆಂಪು ಟ್ರೈಸಿಕಲ್ಲಾಗಿ
ಬೆಲ್ ಬಾರಿಸುತ್ತಾ ಮುನ್ನುಗ್ಗುವ ಕನಸು ಕಾಣುತ್ತ
ಅಥವಾ ಎಲ್ಲೋ ಭಾರತದ ಹಳ್ಳಿಯಲ್ಲಿ ಸಂಸಾರವನ್ನೇ
ಹೊತ್ತು ತುಳಿಯುವ ರೈತನೊಬ್ಬನ ಸ್ವರ್ಣರಥ.

ಸಿ.ಪಿ. ರವಿಕುಮಾರ್
(c) 2021

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)