ವಿಜ್ಞಾನಕವಿತೆಗಳು

ಆಸಿಡ್

ಜೀರ್ಣವಾಗಲು ನೀನು ತಿಂದ ಬರ್ಗರ್ ಪಾಸ್ತಾ
ನಿನ್ನ ಹೊಟ್ಟೆಯಲ್ಲಿ ಸ್ರವಿಸುವುದು ಏನು ಗೊತ್ತಾ
ಹೈಡ್ರೋಕ್ಲೋರಿಕ್ ಆಸಿಡ್, ಇದೇನು ಸುಮ್ಮನೇ ಆಯ್ತಾ,
ಕರಗಿಸಬಲ್ಲದು ಕಬ್ಬಿಣವನ್ನೇ! ಎಂದಾಗ ಪ್ರೊ ಗುಪ್ತಾ
ಕೇಳಿದನು ಒಬ್ಬ, ಸರ್ ನನಗೊಂದು ಡೌಟು,
ಆಸಿಡ್‌ಗೆ ಹೊಟ್ಟೆಯೇ ಕರಗಿಹೋಗದೆ ಸುಟ್ಟು?
"ನೀನು ಕೇಳಿದ್ದು ಸರಿಯಾಗಿದೆ ಚೋಟೂ,
ಹೊಟ್ಟೆ ಸ್ರವಿಸುವುದು ಸೋಡಾ ಬೈ ಕಾರ್ಬೊನೇಟು!
ರಕ್ಷಿಸಿಕೊಂಡರೂ ಹೀಗೆ ತನ್ನ ಒಳಪದರ
ಕರಗುವುದು ತಪ್ಪುವುದಿಲ್ಲ ಮೇಲೆ ಹೇಳಿದ ಥರ
ನಾಲ್ಕುದಿನಕ್ಕೊಮ್ಮೆ ಮರುಜೀವ ಪಡೆಯುವುದು ಉದರ!
ಶಿವನು ವಿಷಕಂಠ, ಮನುಷ್ಯನೋ! ನುಂಗಿ ವಿಷಧರ!
ತಿಂದರೆ ಸುಲಭಜೀರ್ಣವಾಗದ್ದನ್ನು ಪದೇಪದೇ
ಆಸಿಡ್ ಹೆಚ್ಚಾಗಿ ಹೊಟ್ಟೆಗೆ ಆಗುವುದು ಬಾಧೆ!
ಜೀರ್ಣಿಸಿಕೊಂಡೆಯಾ ನಾನು ಹೇಳಿದ್ದನ್ನೆಲ್ಲಾ?"
"ಸರ್ ಯಾಕೋ ಹೊಟ್ಟೆ ನೋಯುತ್ತಿದೆಯಲ್ಲ!"


ಖಾಲೀಸ್ಥಳ

ಜಿಮ್‌ಗೆ ಹೋಗಿ ಎಷ್ಟೇ ಮಾಡಿದರೂ ಸಾಮು
ಎಷ್ಟೇ ಗಟ್ಟಿಯಾದರೂ ಬಾಡಿ
ದೇಹದ ಕಣಗಳ ನಡುವೆ ಬರೀ ಖಾಲೀಸ್ಥಾನ
ತುಂಬಿಕೊಂಡಿದೆ ಅಷ್ಟೇ, ಮರೆಯಬೇಡಿ
ಹಿಡಿದು ತಂದು ಭೂಮಿಯ ಎಲ್ಲ ಮನುಷ್ಯರನ್ನೂ
ತೆಗೆದುಬಿಟ್ಟರೆ ನಡುವಣ ಖಾಲೀಸ್ಥಳ
ಫುಸ್ ಎಂದು ಕುಗ್ಗಿಸಿಬಿಡಬಹುದು
ಸಕ್ಕರೆಯ ಕ್ಯೂಬ್ ಆಳ ಉದ್ದ ಅಗಲ-
ದಷ್ಟೇ ಘನ ಅಳತೆಯಲ್ಲಿ! ಆದರೂ
ಎಲ್ಲಿಂದ ಬಂತೋ ಮನುಷ್ಯನಿಗೆ ಆಶ್ಚರ್ಯ
ಜಗತ್ತನ್ನೇ ಆಳುವೆನೆಂಬ ಪೊಗರು!
ಮಂಗಳಗ್ರಹಕ್ಕೂ ಲಗ್ಗೆ ಇಡುವ ಧೈರ್ಯ!

ಫೋಟಾನ್ ಬಸ್

ಹೊರಟಿತು ಹೊರಟಿತು ಫೋಟಾನ್ ಬಸ್
ಸೂರ್ಯನ ಹೊರಮೈ ಮೇಲಿಂದ
"ಭೂಮಿ" ಎಂದು ಬರೆದಿದೆ ಬಸ್ ಮೇಲೆ
ನೋಡಲು ಹೊರಟಿವೆ ಭೂಮಿಯ ಚಂದ!
ಎಷ್ಟು ಹೊತ್ತಾಗುವುದಮ್ಮಾ ಇನ್ನೂ
ಎಂದು ಕೇಳಿತು ಮರಿ ಫೋಟಾನ್
ಎಂಟು ನಿಮಿಷ ಹತ್ತೊಂಬತ್ತು ಸೆಕೆಂಡ್
ಮಲಗು, ಮಾಡದಿರು ಸುಮ್ಮನೇ ಪರೇಶಾನ್!

ತ್ರೀಡೀ

ನಾಯಿಮರಿ ನಾಯಿಮರಿ ತ್ರೀಡೀ ಬೇಕೇ?
ಟೂಡೀ ಬೇಕು, ತ್ರೀಡೀ ಬೇಕು ಎಲ್ಲಾ ಬೇಕು
ನಾಯಿಮರಿ ತ್ರೀಡೀ ನಿನಗೆ ಕಾಣಿಸುತ್ತೆಯೇ?
ಕಾಣಿಸದೇ ಏನು, ಎಲ್ಲಿ, ಟೀವೀ ಹಾಕು
ಕಾಣುವುವೇ ತ್ರೀಡಿ ಜೊತೆಗೆ ಎಲ್ಲ ಕಲರ್ರೂ?
ಕಾಣುತ್ತಿದೆ ನೀಲಿ ತಟ್ಟೆಯಲ್ಲಿ ಲೆಮನ್ ಕೇಕ್ ಚೂರು!
ಕಾಣದೇನು ಪಕ್ಕದಲ್ಲಿ ಕೆಂಪು ಹಸಿರು ಸ್ಟ್ರಾಬೆರೀ?
ಬೌ! ಬೌ! ಕಾಣುತ್ತಿದೆ ಬರಣಿಯಲ್ಲಿ ಕಳ್ಳೇಪುರಿ!

(ನಾಯಿಗಳಿಗೆ ಕೇವಲ ಎರಡೇ ಆಯಾಮಗಳು ಕಾಣುತ್ತವೆ ಮತ್ತು ಬಣ್ಣಗಳು ಕಾಣುವುದಿಲ್ಲ ಎಂಬ ನಂಬಿಕೆಯನ್ನು ಈಗ ಪ್ರಶ್ನಿಸಲಾಗುತ್ತಿದೆ. ನಾಯಿಗಳು ನಮ್ಮಂತೆಯೇ ನೋಡಬಲ್ಲವು, ಆದರೆ ಕೆಂಪು ಮತ್ತು ಹಸಿರು ಬಣ್ಣಗಳನ್ನು ನೋಡಲಾರವು ಎಂದು ವಿಜ್ಞಾನಿಗಳು ನಂಬುತ್ತಿದ್ದಾರೆ)

ಸಿ.ಪಿ. ರವಿಕುಮಾರ್

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)