ನೆನಪುಗಳು - ಮೊದಲ ಉದ್ಯೋಗ
ಕೋಬಾಲ್ ಪ್ರೋಗ್ರಾಮಿಂಗ್ ನಾನು ಕಲಿತ ಮೊದಲ ಕಂಪ್ಯೂಟರ್ ಕೌಶಲ್ಯ. ಆಗ ಫೋರ್ಟ್ರಾನ್, ಬೇಸಿಕ್ ಮತ್ತು ಕೋಬಾಲ್ ಎಂಬ ಮೂರು ಪ್ರೋಗ್ರಾಮಿಂಗ್ ಭಾಷೆಗಳದ್ದೇ ರಾಜ್ಯ. ವೈಜ್ಞಾನಿಕ ಸಮಸ್ಯೆಗಳಿಗೆ ಫೋರ್ಟ್ರಾನ್, ಗೇಮಿಂಗ್ ಮುಂತಾದ ಹವ್ಯಾಸಗಳಿಗೆ ಬೇಸಿಕ್, ಮತ್ತು ಬಿಸಿನೆಸ್ ಸಂಬಂಧಿಸಿದ ಸಮಸ್ಯೆಗಳಿಗೆ ಕೋಬಾಲ್. ಕೋಬಾಲ್ ಭಾಷೆಯನ್ನು ಅಭಿವೃದ್ಧಿ ಪಡಿಸಿದ ಶ್ರೇಯಸ್ಸು ಗ್ರೇಸ್ ಹಾಪರ್ ಎಂಬ ಮಹಿಳೆಗೆ ಸಲ್ಲುತ್ತದೆ. ಆಕೆ ಅಮೆರಿಕದ ರಕ್ಷಣಾ ವಿಭಾಗದಲ್ಲಿ ಕೆಲಸ ಮಾಡುವಾಗ ಫ್ಲೋಮ್ಯಾಟಿಕ್ ಎಂಬ ಪ್ರೋಗ್ರಾಮಿಂಗ್ ಭಾಷೆಯನ್ನು ಅಭಿವೃದ್ಧಿ ಪಡಿಸಿದರಂತೆ. ಅದು ಕೋಬಾಲ್ ಭಾಷೆಗೆ ಪ್ರೇರಣೆ. ಪ್ರೋಗ್ರಾಮಿಂಗ್ ಕಲಿಯಲು ಇದು ಖಂಡಿತಾ ಸೂಕ್ತ ಭಾಷೆಯಲ್ಲ. ಆದರೆ ನಮಗೆ ಇದನ್ನು ಕಲಿಯದೆ ಬೇರೆ ದಾರಿಯಿರಲಿಲ್ಲ. ಆಗ ನಾವು ಕೆಲಸ ಮಾಡುತ್ತಿದ್ದುದು ಒಂದು ಮಿನಿ ಕಂಪ್ಯೂಟರ್ ಮೇಲೆ. ಡೇಟಾ ಜೆನೆರಲ್ ಎಂಬ ಕಂಪನಿ ಅಭಿವೃದ್ಧಿ ಪಡಿಸಿದ ಎಂವಿ 10000 ಎಂಬ ಕಂಪ್ಯೂಟರ್. ಆಗ ಕಂಪ್ಯೂಟರ್ ಕ್ಷೇತ್ರದಲ್ಲಿ ಐಬಿಎಂ ಮುಂಚೂಣಿಯಲ್ಲಿತ್ತು. ಡಿಜಿಟಲ್ ಎಕ್ವಿಪ್ಮೆಂಟ್ ಕಾರ್ಪೊರೇಷನ್ ಎಂಬ ಕಂಪನಿ ಐಬಿಎಂಗೆ ಪ್ರತಿಸ್ಪರ್ಧಿ. ಈ ಸಂದರ್ಭದಲ್ಲಿ ಡೇಟಾ ಜೆನೆರಲ್ ಎಂಬ ಕಂಪನಿ ಈ ಕ್ಷೇತ್ರವನ್ನು ಪ್ರವೇಶಿಸಿ ಸಾಕಷ್ಟು ಕ್ರಾಂತಿಕಾರಕ ಸಾಧನೆಗಳನ್ನು ಮಾಡಿತು. ದ ಸೋಲ್ ಆಫ್ ಎ ನ್ಯೂ ಮೆಷೀನ್ ಎಂಬ ಪುಸ್ತಕದಲ್ಲಿ ಡೇಟಾ ಜೆನೆರಲ್ ಕಂಪನಿಯಲ್ಲಿ ಕಂಪ್ಯೂಟರ್ ಅಭಿವೃದ್ಧಿ ಪಡಿಸಿದ ಕಥೆ ಇದೆ. ಆಗ...