ಒಂದು ಕಡುಬಿನ ಕಥೆ



ಅಮೆರಿಕನ್ನರು ಕಡುಬಿಗೆ ಪೈ ಎನ್ನುತ್ತಾರೆ. ಉದಾಹರಣೆಗೆ ಆಪಲ್ ಪೈ ಎಂದರೆ ಸೇಬಿನ ಹಣ್ಣಿನ ರಸಾಯನ ಹೂರಣವಾಗಿಟ್ಟು ಮಾಡಿದ ಕಡುಬು.  ಇದೇ ರೀತಿ ಪಂಪ್ಕಿನ್ ಪೈ ಎಂದರೆ ಸಿಹಿಕುಂಬಳಕಾಯಿ ಕಡುಬು. 


ಅಮೆರಿಕಾದಲ್ಲಿ ವಾಸವಾಗಿದ್ದ ಕನ್ನಡಿಗರೊಬ್ಬರು ಒಮ್ಮೆ ಒಂದು ಜಾತ್ರೆಗೆ ಹೋಗಿದ್ದರು. ಅಮೆರಿಕಾದಲ್ಲಿ ಜಾತ್ರೆಗೆ ಫೇರ್ ಎನ್ನುತ್ತಾರೆ. ಹೌದು, ಫೇರ್ ಅಂಡ್ ಲವ್ಲಿ ಇದೆಯಲ್ಲ, ಅದೇ ಫೇರ್.  ಸ್ಪೆಲಿಂಗ್ ಕೂಡಾ ಅದೇ. ಕೆಲವು ಕಡೆ ಕಾರ್ನಿವಾಲ್ ಎನ್ನುತ್ತಾರೆ. ಅಲ್ಲಿ ಸರ್ಕಸ್ ಮಾದರಿಯ ಪ್ರದರ್ಶನಗಳೂ ಇರುತ್ತವೆ. ಹಳ್ಳಿಗಳಲ್ಲಿ ನಡೆಸುವ ಜಾತ್ರೆಗಳಲ್ಲಿ ಹಸು, ಹಂದಿ ಇಂಥವುಗಳ ಮಾರಾಟ ನಡೆಯುತ್ತದೆ. ಇದಲ್ಲದೆ ಶೂಟಿಂಗ್ ಇತ್ಯಾದಿ ಆಟಗಳು ಕೂಡಾ ಇರುತ್ತವೆ.  ಶೂಟಿಂಗ್ ಎಂದರೆ ಹೆದರಬೇಡಿ.   ಆಟದ ಪಿಸ್ತೂಲು ಬಳಸಿ ನೀವು ಬಲೂನಿಗೆ ಗುರಿ ಇಟ್ಟು ಹೊಡೆದು ಅದನ್ನು ಒಡೆದರೆ ನಿಮಗೆ ಏನಾದರೂ ಬಹುಮಾನ ಸಿಕ್ಕುತ್ತದೆ. ಆದರೆ ಬಹಳ ಸಲ ಏನೂ ಸಿಕ್ಕದ ಅವಮಾನವೇ ಸಿಕ್ಕುತ್ತದೆ. ಏನು ಮಾಡುವುದು, ಗುರಿ ಇಲ್ಲದ ಜನರು ನಾವು! ಅರ್ಜುನನು ನೀರಿನಲ್ಲಿ  ಕಾಣುವ ಪ್ರತಿಬಿಂಬ ನೋಡಿಯೇ ಹಕ್ಕಿಯ ಕಣ್ಣಿಗೆ ಗುರಿ ಇಟ್ಟು ಬಾಣ ಬಿಟ್ಟನಂತೆ. ಇಂಥ ಯಾವುದೇ ಆಟವನ್ನು ಒಲಿಂಪಿಕ್ಸ್ ಪಂದ್ಯಗಳಲ್ಲಿ ನೋಡಿರುವಿರಾ? ನಮ್ಮ ಹಳೆಯ ಸಂಪ್ರದಾಯಗಳನ್ನು ಮರೆತ ಗುರಿ ಇಲ್ಲದ ಬದುಕು ನಮ್ಮದು! ಬುಗುರಿಯನ್ನೇ ಆಡದ ಮಕ್ಕಳು ಗುರಿ ಹೇಗೆ ಸಾಧಿಸಿಯಾರು? ಇರಲಿ, ಅದೆಲ್ಲ ಈಗ ಮುಖ್ಯವಲ್ಲ.


ನಮ್ಮ ಅಮೆರಿಕನ್ನಡಿಗರು ಜಾತ್ರೆಗೆ ಹೋದಾಗ ಅಲ್ಲೂ ಒಂದು ಶೂಟಿಂಗ್ ರಿಂಗ್ ಇದ್ದಿತು. ಅದನ್ನು ನಡೆಸುತ್ತಿದ್ದವಳು ಒಬ್ಬ ಹಳ್ಳಿಯ ರಮಣಿ. ಆಕೆ ತಾನೇ ಬೇಯಿಸಿದ ಆಪಲ್ ಪೈಗಳನ್ನು ಅಲ್ಲಿ ಜೋಡಿಸಿ ಇಟ್ಟಿದ್ದಳು. ಶೂಟಿಂಗ್ ಆಟದಲ್ಲಿ ಗೆದ್ದವರಿಗೆ ಆಪಲ್ ಪೈ ಸಿಕ್ಕುತ್ತದೆ ಎಂದು ಅವಳು ಆಗಾಗ ಮೈಕಿನಲ್ಲಿ ಘೋಷಣೆ ಮಾಡುತ್ತಿದ್ದಳು. ಜನ ನಾ ಮುಂದು ತಾ ಮುಂದು ಎಂದು ನುಗ್ಗಿ ಟಿಕೆಟ್ ಕೊಳ್ಳುತ್ತಿದ್ದರು. ಟಿಕೆಟ್ ಒಂದಕ್ಕೆ ಐದು ಡಾಲರ್. ಐದು ಸಲ ಶೂಟ್ ಮಾಡಬಹುದು. ಗೆದ್ದರೆ ಇಪ್ಪತ್ತೈದು ಡಾಲರ್ ಮೌಲ್ಯದ ಕಡುಬು. ಸೋತರೆ? ಸೋತರೂ ಇಪ್ಪತ್ತು ಡಾಲರ್ ತೆತ್ತು ಆಪಲ್ ಪೈ ಕೊಂಡೊಯ್ಯಬಹುದು ಎಂದು ಹಳ್ಳಿಯ ರಮಣಿ ತನ್ನ ಹಳ್ಳಿ ಭಾಷೆಯಲ್ಲಿ ಘೋಷಣೆ ಮಾಡುತ್ತಿದ್ದಳು.


ಕಡುಬು ಎಂದರೆ ಬಹಳ ಇಷ್ಟ ನಮ್ಮ ಅಮೆರಿಕನ್ ಕನ್ನಡಿಗರಿಗೆ. ಅದೇನು ಅಂತಿಂಥ ಕಡುಬಲ್ಲ. ಮೇಲೆ ಲೇಸ್ ವರ್ಕ್ ಮಾದರಿಯಲ್ಲಿ ಮಡಿಸಿದ ಕಡುಬಿನ ಹೊರಮೈಯಿಂದ ಒಳಗಿನ ಹೂರಣ ಕಾಣುತ್ತಿತ್ತು. ಸೇಬಿನ ಘಮಘಮ ವಾಸನೆ ಸೂಸುತ್ತಿತ್ತು. ಎಲ್ಲರ ಬಾಯಲ್ಲಿ ನೀರೂರುತ್ತಿತ್ತು.


ನಮ್ಮ ಕನ್ನಡಿಗರು ತಮ್ಮ ವಾಲೆಟ್ ತೆರೆದು ನೋಡಿದರು. ಅಲ್ಲಿ ಇಪ್ಪತ್ತು ಡಾಲರ್ ಇದ್ದವು. ಇದನ್ನು ಖರ್ಚು ಮಾಡುವುದೇ ಬೇಡವೇ ಎಂದು ಅವರು ಚಿಂತಿಸಿದರು.  ಏಕೆಂದರೆ ಮರಳಿ ಹೋಗುವಾಗ ಯಾರಾದರೂ ಮಗರ್ ಬಂದು ಬೇಡಿದರೆ ಅವನಿಗೆ ನೀಡಲು ಇಪ್ಪತ್ತು ಡಾಲರ್ ಬೇಕಲ್ಲ! ಮಗರ್ ಎಂದರೆ ಏನೆಂದು ನೀವು ಅಗರ್ ಕೇಳಿದರೆ ಅದಕ್ಕೆ ವಿವರಣೆ ನೀಡುವುದು ನನ್ನ ಕರ್ತವ್ಯ. ಮಗ ಎಂಬುದಕ್ಕೂ ಮಗರ್ ಎಂಬುದಕ್ಕೂ ಅಂಥ ಸಂಬಂಧವಿಲ್ಲ;  ಮಗರ್ ಹಣ ದೋಚಿ ಹೋದನಂತರ ಕನ್ನಡಿಗರು ಅವನಿಗೆ ...ಮಗ ಎಂದು ಬೈದುಕೊಳ್ಳುವುದನ್ನು ಹೊರತಾಗಿ). ಮಗರ್ ಜೀ ನಹೀ ಸಕ್ತೇ ತುಂಹಾರೆ ಬಿನಾ ಎಂದು ಒಮ್ಮೆ ಒಬ್ಬನು ಹಾಡಿಕೊಂಡು ತನ್ನ ಪಾಡಿಗೆ ಹೋಗುತ್ತಿದ್ದಾಗ "ಏನು, ನನ್ನನ್ನು ಕರೆದೆಯಾ?" ಎಂದು ಮಗರ್ ಒಬ್ಬನು ಪ್ರತ್ಯಕ್ಷನಾದನಂತೆ.  ಮಗ್ ಎಂದರೆ ಇಂಗ್ಲಿಷ್ ಭಾಷೆಯಲ್ಲಿ ಕನಿಷ್ಠ ಎರಡು ಅರ್ಥಗಳು. ಸ್ನಾನದಲ್ಲಿ ನೀರು ಹೊಯ್ದುಕೊಳ್ಳಲು ಬಳಸುವ ಮಗ್ ಎಂಬುದು ಒಂದು. ದುಷ್ಟನು ಕೈಯಲ್ಲಿ ಪಿಸ್ತೂಲು ಹಿಡಿದು ಹಣ ಬೇಡುವ ಕ್ರಿಯೆಗೂ ಮಗ್ ಎನ್ನುತ್ತಾರೆ. ಬಹುಶಃ ಹಿಂದೊಮ್ಮೆ ಪಿಸ್ತೂಲಿನ ಬದಲು ಕೈಯಲ್ಲಿ ಮಗ್ ಹಿಡಿದು ಅದರಲ್ಲಿದ್ದ ಪುಡಿಗಾಸನ್ನು ಕುಲುಕಿ ಹಣ ಬೇಡುತ್ತಿದ್ದರೋ ಏನೋ! ಹಾಗೆಲ್ಲಾ ಬೇಡಿದಾಗ ಯಾರೂ ಕೊಡದೇ ನಿರಾಶರಾಗಿ ಅವರು ಮಗ್ ಬಿಟ್ಟು ಗನ್ ಹಿಡಿದರು ಎಂದು ನನ್ನ ಊಹೆ. ಮಗ್ ಮಾಡಲು ಬಂದವರಿಗೆ ಇಪ್ಪತ್ತು ಡಾಲರ್ ಕೊಟ್ಟರೆ ಅವರು ಏನೂ ಮಾಡದೇ ಹಣವನ್ನು ಸ್ವೀಕರಿಸಿ ಧನ್ಯವಾದ ತಿಳಿಸಿ ಹೊರಟುಹೋಗುವರು ಎಂದು ಪ್ರತೀತಿ ಇದೆ. ಎಷ್ಟಾದರೂ ಮಗರ್ ಮನಸ್ಸು ಮಗುವಿನ ಮನಸ್ಸು!


ನೋಡಿ ಕಥೆ ಮುಂದೆ ಹೋಗುತ್ತಿಲ್ಲ ಎಂದು ನೀವು ಬೇಸರಿಸಬೇಡಿ. ನನಗೆ ನೆನಪಿದೆ. 


ಅಮೇರಿಕನ್ ಕನ್ನಡಿಗರಿಗೆ ಒಮ್ಮೆಲೇ "ಅಕ್ಕಿಯ ಮೇಲೆ ಆಸೆ, ಮಕ್ಕಳ ಮೇಲೆ ಪ್ರೀತಿ" ಎಂಬ ಗಾದೆ ನೆನಪಾಯಿತು. ಕಡುಬಿನ ಮೇಲೆ ಆಸೆ, ಮಗರ್ ಮನುಷ್ಯನ ಭೀತಿ ಎಂದು ಅವರು ಗಾದೆಯನ್ನು ಸ್ವಲ್ಪ ಪರಿವರ್ತಿಸಿ ತಮಗೆ ತಾನೇ ಹೇಳಿಕೊಂಡರು. ಆಗ ಹಿಂದಿನಿಂದ ಯಾರೋ ಅವರ ಹೆಸರು ಹಿಡಿದು ಕೂಗಿದರು! 


ಎಲಾ! ದೂರದ ಊರಿನಲ್ಲಿ ಕನ್ನಡಿಗರು ಒಬ್ಬರೂ ಇಲ್ಲದ ಈ ನಾಡಿನಲ್ಲಿ ನನ್ನನ್ನು ಯಾರು ಕರೆಯುತ್ತಿದ್ದಾರೆ?! ಹೀಗೆಂದು ಅವರು ಚಕಿತರಾಗಿ ಹಿಂದೆ ನೋಡಿದರು.


ಹಿಂದಿದ್ದ ಹಳ್ಳಿಯ ರಮಣಿ ಅವರ ಹೆಸರನ್ನು ಮತ್ತೆ ಕರೆದಳು 


"ಗೋವಿಂದ ಪೈ!"


ಇವಳಿಗೆ ನನ್ನ ಹೆಸರು ಹೇಗೆ ತಿಳಿಯಿತು ಎಂದು ನಮ್ಮ ಕಥಾನಾಯಕರಿಗೆ ಬೆರಗು ಮತ್ತು ಹೆದರಿಕೆ ಎರಡೂ ಏಕಕಾಲದಲ್ಲಿ ಉಂಟಾದವು.  ಈ ಹಳ್ಳಿಯ ರಮಣಿ ಕನ್ನಡಿಗಳೇ? ಅವಳು ಕೂಡಾ ಉಡುಪಿ ಮಂಗಳೂರಿನ ಕಡೆಯ ಕನ್ನಡತಿಯೇ? 


ಅವಳು ಮತ್ತೊಮ್ಮೆ ಕರೆದಳು. 


"ಆಂಟ್ ಜೆನ್ನೀಸ್ ಆಪಲ್ ಪೈ! ಗೋವಿಂದ ಪೈ!"


ಕನ್ನಡಿಗರಿಗೆ ಈಗ ನಿಗೂಢವು ಏನೆಂದು ತಿಳಿದು ನಿರಾಳವಾಯಿತು. ಅವರು ಉತ್ಸಾಹದಿಂದ ಪೈ ವಿನ್ನಲು ಡೇರೆಯ ಕಡೆಗೆ ಬಿರುಸು ಹೆಜ್ಜೆ ಹಾಕಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)