ಫುಡ್ ಡೆಲಿವರಿಯ ಚರಿತ್ರೆ

 ಈ ಸ್ವಿಗ್ಗಿ ಜೋಮೇಟೋ ಎಲ್ಲ ಏನೂ ಹೊಸದಲ್ಲ. ಆನ್ ಟೈಮ್ ಫುಡ್  ಡೆಲಿವರಿ ಹಿಂದೆ ಇರಲಿಲ್ಲವೇ? ಇತ್ತು ಎಂಬುದನ್ನು ಸಿದ್ಧ ಪಡಿಸಲು ಇಗೋ ಈ ಕಥೆಯೇ ಸಾಕ್ಷಿ.

ಏಕಚಕ್ರಪುರ ಎಂಬ ಒಂದು ನಗರವಿತ್ತು. ಅದಕ್ಕೆ ಹಾಗೆ ಯಾಕೆ ಹೆಸರು ಬಂತೋ ಗೊತ್ತಿಲ್ಲ. ಒಂದೇ ಚಕ್ರದ ಬಂಡಿಗಳನ್ನು ಬಹುಶಃ ಅಲ್ಲಿ ಜನರು ಓಡಿಸುತ್ತಿದ್ದರೇನೋ.  ಈ ಪುರದ ಹೊರಗಡೆ ಇದ್ದ ದೊಡ್ಡ ಕಾಡನ್ನು ಬಿ. ಕೆ. ಸುರಾ ಎಂಬ ಹೊರದೇಶದ ಒಬ್ಬರು ಆಕ್ರಮಿಸಿಕೊಂಡು ಅಲ್ಲೇ ಇದ್ದ ಒಂದು ಬೆಟ್ಟದ ಮೇಲೆ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದರು. ಕಾಡಿನಲ್ಲಿ ಕುರಿ, ದನ ಮೇಯಿಸಲು ಹೋಗುತ್ತಿದ್ದ ಏಕಚಕ್ರಪುರಿಯ ಜನರಿಗೆ ಒಮ್ಮೆಲೇ ಸಮಸ್ಯೆ ಎದುರಾಯಿತು. ಹುಲ್ಲು ಮೇಯಿಸಲು ಹೋದವರು ಮರಳಿ ಬಂದಾಗ ಒಂದೆರಡು ದನಕುರಿಗಳು ಕಡಿಮೆ ಇರುವುದು ರೂಢಿಯಾಯಿತು. ಮೊದಮೊದಲು ಕಾಡಿನಲ್ಲಿ ಯಾವುದೋ ಪ್ರಾಣಿ ಹೀಗೆ ದನಕುರಿಗಳನ್ನು ಕದಿಯುತ್ತಿದೆ ಎಂದು ಊಹಾಪೋಹ ಪ್ರಾರಂಭವಾಯಿತು. ಏಕಚಕ್ರಪುರದ ಜನರು ಹೆದರಿದರು. 

ಊರಿನಲ್ಲಿ ಒಬ್ಬ ಪ್ರೈವೇಟ್ ಡಿಟೆಕ್ಟಿವ್ ಇದ್ದನು. ಅವನನ್ನು ತನಿಖೆ ಮಾಡಲು ಜನ ದುಂಬಾಲು ಬಿದ್ದರು.  ಅವನು ಹಸು ಕುರಿಗಳ ಹೆಜ್ಜೆ ಗುರುತುಗಳನ್ನು ಫಾಲೋ ಮಾಡಿಕೊಂಡು ಹೋದಾಗ ಅವು ಬೆಟ್ಟದ ಕಡೆ ಹೋಗುವುದನ್ನು ಗಮನಿಸಿದನು. ಬೆಟ್ಟವನ್ನು ಹತ್ತಿ ಹೋದಾಗ ಬಿ. ಕೆ. ಸುರಾ ಅವರ ಮನೆಯ ಹಿಂಭಾಗದಲ್ಲಿ ಏನೋ ರಾಶಿ ಬಿದ್ದಿದ್ದು ಕಂಡಿತು. ಅದು ಪ್ರಾಣಿಗಳ ಅಸ್ಥಿಗಳು ಎಂದು ಕಂಡುಕೊಂಡು ಪ್ರೈವೇಟ್ ಡಿಟೆಕ್ಟಿವ್ ಊರಿಗೆ ಮರಳಿ ಬಂದನು.

ಅವನು ಹೇಳಿದ್ದನ್ನು ಕೇಳಿ ಜನರು ನಡುಗಿ ಹೋದರು. ಬಹಳ ಜನರಿಗೆ ಕಾಡಿಗೆ ಹೋಗಲು ಧೈರ್ಯವಾಗಲಿಲ್ಲ.  ಧೈರ್ಯ ಮಾಡಿ ತನ್ನ ಕುರಿ ಮೇಯಿಸಲು ಹೋದ ಒಬ್ಬ ಗಂಡಾಳು ವಾಪಸ್ ಬರಲೇ ಇಲ್ಲ.

ಇನ್ನು  ಮುಂದೆ ಪ್ರಾಣಿಗಳನ್ನು ಮೇಯಿಸಲು ಕಾಡಿಗೆ ಹೋಗುವುದೇ ಇಲ್ಲ ಎಂದು ಜನ ನಿರ್ಧರಿಸಿಬಿಟ್ಟರು.  

"ಬೆಟ್ಟದ ಮೇಲೊಂದು ಮನೆಯ ಮಾಡಿದ ಮೃಗಗಳಿಗಂಜಿದೊಡೆಂತಯ್ಯಾ?" ಎಂದು ಪ್ರೈವೇಟ್ ಡಿಟೆಕ್ಟಿವ್ ಎಷ್ಟು ಹೇಳಿದರೂ ಕೇಳಲಿಲ್ಲ. 

ಅನಂತರ ಊರಿನ ಮನೆಗಳಿಂದ ರಾತ್ರೋರಾತ್ರಿ ಕುರಿದನಗಳು ಕಾಣೆಯಾದವು.  ಜನರಿಗೆ ರಾತ್ರಿ ನಿದ್ದೆಯೇ ಬಾರದೇ ತುಂಬಾ ಕಷ್ಟವಾಯಿತು. ಪ್ರೈವೇಟ್ ಡಿಟೆಕ್ಟಿವ್ ತಾನು ಇದನ್ನು ಪರಿಹರಿಸುವೆನೆಂದು ದಿಟ್ಟತನದಿಂದ ಮುಂದೆ ಬಂದನು. ಅವನು ಬಿ. ಕೆ. ಸುರಾ ಮನೆಯ ಬಾಗಿಲು ತಟ್ಟಿದನು. ಒಳಗಿನಿಂದ ಗಡುಸಾಗಿ "ಯಾರು?" ಎಂಬ ಧ್ವನಿ ಕೇಳಿತು.  ಬಂದವನು ತಾನು ಊರಿನ ಜನರ ಪರವಾಗಿ ಬಂದಿರವೆನೆಂದು ಹೇಳಿದನು. 

"ಏನು ಕೆಲಸ?" ಎಂದಿತು ಗಡುಸು ಧ್ವನಿ.

"ನೀವು ಊರಿನವರ ದನ ಕುರಿಗಳನ್ನು ಕದ್ದು ತಿನ್ನುತ್ತಿದ್ದೀರಿ ಎಂದು ನಮಗೆ ಅನುಮಾನ ಬಂದಿದೆ."

"ಕಾಡಿನ ಹುಲ್ಲು ನೀವು ಕದಿಯುತ್ತಿಲ್ಲವೇ!"

"ಕಾಡು ಎಲ್ಲರಿಗೂ ಸೇರಿದ್ದು!"

"ಹಾಗಂತ ಎಲ್ಲಿ ಹೇಳಿದೆ? ಈ ಕಾಡು ನನ್ನದು."

"ದಾಖಲೆ?"

"ಬೇಕಿದ್ದರೆ ತೋರಿಸುತ್ತೇನೆ. ಒಳಗೆ ಬಾ."

"ಪರವಾಗಿಲ್ಲ. ನಂಬುತ್ತೇನೆ. ನೀವು ಎಷ್ಟೋ ಸಲ ಕುರಿಗಳನ್ನು ಯದ್ವಾ ತದ್ವಾ ಕೊಂದುಹಾಕಿದ್ದೀರಿ.  ಮೇಯಿಸಲು ಬಂದವರನ್ನೂ  ಬಿಡದೆ ಕೊಂದು ತಿಂದಿದ್ದೀರಿ."

"ನನ್ನ ತಂಟೆಗೆ ಬಂದರೆ ಅಷ್ಟೇ ಮತ್ತೆ!"

"ಇದಕ್ಕೆ ನಾನು ಸಮಾಧಾನ ಹೇಳುತ್ತೇನೆ. ಪ್ರತಿದಿನ ಊರಿನ ಒಂದು ಮನೆಯವರು ನಿಮಗೆ ಊಟ ಕಳಿಸುತ್ತಾರೆ.  ಒಪ್ಪಿಗೆಯೇ?"

"ನನಗೆ ಪ್ರತಿದಿನ ಒಂದು ಕುರಿ ಮತ್ತು ಒಂದು ದನ ಬೇಕು."

"ಅಯ್ಯಯ್ಯೋ. ಊರಿನ ಬಹಳ ಜನರು ಶಾಕಾಹಾರಿಗಳು. ಅವರು ನಿಮಗೆ ಅನ್ನ ಕಳಿಸುತ್ತಾರೆ."

"ಅಂಥ ದಿವಸ ಅನ್ನ ತಂದವರನ್ನು ನಾನು ತಿಂದುಹಾಕುತ್ತೇನೆ."

ಹೀಗೆ ಒಪ್ಪಂದವಾಯಿತು. ಜನರು ಈಗ ಪಶುಗಳನ್ನು ಮೇಯಿಸಲು ಕಾಡಿಗೆ ನಿರ್ಭಯವಾಗಿ ಹೋಗುತ್ತಿದ್ದರು. ಬಿ. ಕೆ. ಸುರಾ ಅವರಿಗೆ ಪ್ರತಿದಿನ ಒಬ್ಬರು ಫುಡ್ ಡೆಲಿವರಿಗೆಂದು ಹೋಗುತ್ತಿದ್ದರು. ಯಾರು ಹೋಗಬೇಕೆಂದು ನಿಶ್ಚಯಿಸಲು ಅವರು ಒಂದು ಆಲ್ಗರಿತಮ್ಮನ್ನೇ ಹಿಡಿದಿದ್ದರು. ಮನೆಗಳಿಗೆ ಸಾಲಾಗಿ ನಂಬರುಗಳನ್ನು  ಕೊಟ್ಟು ಒಂದು ದಿನ ಬೆಸ ಸಂಖ್ಯೆಯ ಮನೆಯವರೂ ಮತ್ತೊಂದು ದಿನ ಸಮಸಂಖ್ಯೆಯವರೂ ಡೆಲಿವರಿ ಮಾಡಬೇಕಾಗಿತ್ತು. 

ಇದಾದ ಆರು ತಿಂಗಳ ನಂತರ ...

ಅಂದು ರಾತ್ರೋರಾತ್ರಿ ಒಂದು ಆರು ಜನರು ಏಕಚಕ್ರಪುರಕ್ಕೆ ಬಂದಿಳಿದರು. ಮಧ್ಯರಾತ್ರಿ ಮೀರಿತ್ತು. ಯಾರ ಮನೆಯಲ್ಲೂ ದೀಪಗಳಿಲ್ಲ. ಗಾಢ ಕತ್ತಲು.ಎಲ್ಲೋ ಒಂದು ನಾಯಿ ಬೊಗಳಿತು.  ಹದಿಮೂರನೇ ಸಂಖ್ಯೆಯ ಮನೆಯಲ್ಲಿ ಮಾತ್ರ ಬೆಳಕಿತ್ತು. ಅಷ್ಟೇ ಅಲ್ಲ, ಅಲ್ಲಿ ಈ ಸರಿರಾತ್ರಿಯಲ್ಲಿ ಯಾರೋ ಅಡುಗೆ ಮಾಡುತ್ತಿದ್ದರು. ಸೌದೆಯ ಹೊಗೆಯ ಜೊತೆಗೆ ಸಿಹಿಭಕ್ಷ್ಯದ ಪರಿಮಳ ಬರುತ್ತಿತ್ತು.


ಬಂದವರಲ್ಲಿ ಎಲ್ಲರಿಗಿಂತ ಎತ್ತರ ಮತ್ತು ಗಾತ್ರದಲ್ಲಿ ದೊಡ್ಡವನಾದ ವ್ಯಕ್ತಿ ಯಾರಿಗೂ ಕಾಯದೆ ಬಾಗಿಲು ತಟ್ಟಿದ. 


ಸ್ವಲ್ಪ ಹೊತ್ತಾದರೂ ಯಾರೂ ಬರಲಿಲ್ಲ. ಒಳಗೆ ಏನೋ ವಾಗ್ವಾದ ಕೇಳಿತು.


ಮತ್ತೊಮ್ಮೆ ತಟ್ಟಿದ. ಒಮ್ಮೆ ಕೆಮ್ಮಿದ.


"ಯಾರು?" ಒಬ್ಬ ಮನುಷ್ಯನ ಧ್ವನಿ ಬಂತು. ಅವನು ಹೆದರಿದಂತೆ ತೋರಿತು 


"ನಾವು ಪರ ಊರಿನವರು. ಇವತ್ತು ರಾತ್ರಿ ತಂಗಲು ಸ್ಥಳ ಬೇಕು."


ಬಾಗಿಲು ತೆರೆಯಿತು.


"ಎಷ್ಟು ಜನ ಇದ್ದೀರಿ?'


"ಆರು."


"ಗಂಡಸರು?"


"ಐದು ಜನ. ನಮ್ಮ ತಾಯಿ ಕೂಡಾ ಇದ್ದಾರೆ."


"ರಾತ್ರಿ ತಂಗಲು ಸ್ಥಳ ಕೊಟ್ಟರೆ ದಕ್ಷಿಣೆ ಕೊಡಬೇಕು."


"ನಾವು ಅವಸರದಲ್ಲಿ ಹೊರಟೆವು. ಹಣ, ಧಾನ್ಯ ಏನೂ ತರಲಿಲ್ಲ. ಮನೆಗೆ ಬೆಂಕಿ ಬಿದ್ದಿತ್ತು."


ಮನೆಯವನ ಹೆಂಡತಿ ಇಣುಕಿದಳು. ಕೈಯಲ್ಲಿ ಸೌಟು ಇಟ್ಟುಕೊಂಡೇ ಅವಳು ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದಳು.  


"ಯಾವ ದಕ್ಷಿಣೆಯೂ ಇಲ್ಲದೆ ಇರಲು ಸ್ಥಳ ಕೊಡುವುದು ಹೇಗೆ?"  ಎಂದು ಮನೆಯವನು ಅವಮಾನಿಸಿದ.


"ರೀ, ಇಲ್ಲಿ ಬನ್ನಿ!" ಎಂದು ಮನೆಯವಳು ಸನ್ನೆ ಮಾಡಿದಳು.


ಮನೆಯ ಯಜಮಾನ ಮಾತಿಲ್ಲದೆ ಅವಳ ಆಜ್ಞೆ ಪಾಲಿಸಿದ. ಇಬ್ಬರಲ್ಲೂ ಏನೋ ಗುಪ್ತ ಮಾತುಕತೆ ನಡೆಯಿತು.


ಆಕೆ ಯೋಧರು ಬಂದೂಕನ್ನು ಹಿಡಿಯುವ ರೀತಿಯಲ್ಲಿ ಸೌಟನ್ನು ಹಿಡಿದು "ನಮ್ಮ ಡೆಲಿವರಿ ಕೆಲಸದಲ್ಲಿ ನೀವು ಸಹಾಯ ಮಾಡಿದರೆ ನೀವು ಒಂದು ರಾತ್ರಿ ಇಲ್ಲಿರಬಹುದು."


"ಖಂಡಿತಾ! ಏನು ಡೆಲಿವರಿ ಮಾಡಬೇಕು ಹೇಳಿ!'


"ಊಟ."


ಎತ್ತರ ಗಾತ್ರಗಳಲ್ಲಿ ಎಲ್ಲರನ್ನೂ ಮೀರಿಸಿದ ಆಗಂತುಕನಿಗೆ ಕಿವಿ ನೆಟ್ಟಗಾಯಿತು.


"ಊಟ! ಎಷ್ಟು ಜನರಿಗೆ?"


"ಒಬ್ಬರಿಗೆ ಮಾತ್ರ."


"ಅಷ್ಟೇನಾ!'


"ಅಯ್ಯೋ ಆ ಮನೆ ಬೆಟ್ಟದ ಮೇಲಿದೆ. ಬಂಡಿಯಲ್ಲಿ ಬೆಟ್ಟಕ್ಕೆ ಹೋಗಬೇಕು. ಅಡುಗೆಯ ಪಾತ್ರೆಗಳನ್ನು ಸಾಗಿಸಿಕೊಂಡು ಮೇಲೆ ಹೋಗೋದು ಸುಲಭ ಏನಲ್ಲ.'


"ನನ್ನ ಮಗನ ಎತ್ತರ ಗಾತ್ರ ನೋಡಿ. ಅವನಿಗೆ ಬೆಟ್ಟ ಹತ್ತೋದು ಯಾವ ಲೆಕ್ಕ!' ಎಂದು ತಾಯಿ ಹೆಮ್ಮೆಯಿಂದ ಹೇಳಿದಳು.


"ನಾನೇನೋ ಹೋಗುತ್ತೇನೆ. ಆದರೆ ಊಟ ಮಾಡಿ ಒಂದು ದಿನವೇ ಆಯಿತು. ನೀವು ಮಾಡುತ್ತಿರುವ ಅಡುಗೆಯ ಸುವಾಸನೆಯಿಂದ ನನ್ನ ಹಸಿವು ಇಮ್ಮಡಿಯಾಯಿತು. ಒಳಗೆ ಒಗ್ಗರಣೆ ಸುಟ್ಟು ಹೋಯಿತು ಅಂತ ಕಾಣುತ್ತೆ.'


"ಅಯ್ಯೋ! ಹೌದು!" ಎನ್ನುತ್ತಾ ಮನೆಯೊಡತಿ ಒಳಗೆ ಓಡಿದಳು.


"ಇವಳು ಒಬ್ಬಳೇ ಅಡುಗೆ ಮಾಡಿ ಪಾರ್ಸಲ್ ಮಾಡಬೇಕು. ನಿನ್ನೆಯಿಂದ ತಯಾರಿ ಮಾಡಿಕೊಳ್ಳುತ್ತಿದ್ದಾಳೆ. ಇನ್ನೂ ಮುಗಿದಿಲ್ಲ."


"ಹೌದು. ಬಿಸಿಬೇಳೆಬಾತ್, ಪೊಂಗಲ್, ಮೊಸರನ್ನ, ಲಾಡು, ಕಡುಬು, ಹೋಳಿಗೆ, ... ನನಗೆ ಬೇಯಿಸಿ ಬೇಯಿಸಿ ಬೇಯಿಸಿ ಸಾಕಾಯಿತು." ಎಂದು ಮನೆಯವಳು ಅಳುವುದೊಂದು ಬಾಕಿ.


"ನನಗೆ ಬಿಟ್ಟುಬಿಡಿ. ನೀವು ಹೋಗಿ ಮಲಗಿಕೊಳ್ಳಿ. ಬಹಳ ಹೊತ್ತಾಗಿ ಹೋಗಿದೆ. ಎಲ್ಲರೂ ನಿದ್ದೆ ಮಾಡಿ. ನನಗೆ ಅಡ್ರೆಸ್ ಒಂದು ಕೊಟ್ಟು ಅಡುಗೆಮನೆ ತೋರಿಸಿ. ಉಳಿದ ಕುಕಿಂಗ್ ಡೆಲಿವರಿ ಎಲ್ಲಾ ನನ್ನ ಜವಾಬ್ದಾರಿ."


ಮನೆಯ ಒಡತಿಗೆ ಸ್ವರ್ಗ ಮೂರೇ ಗೇಣು ಎನ್ನಿಸಿತು.


ಮರುದಿನ ಮನೆಯ ಬಾಗಿಲು ಬಡಿದ ಸದ್ದಿಗೆ ಒಳಗೆ ಮಲಗಿದ್ದವರು ಎಚ್ಚರಗೊಂಡರು. ಆಗಲೇ ಸೂರ್ಯ ನೆತ್ತಿಯ ಮೇಲೆ ಬಂದಿದ್ದ. "ಆಯಾಸಕ್ಕೆ ಎಲ್ಲಾರಿಗೂ ಒಳ್ಳೆ ನಿದ್ದೆ!" ಎಂದು ಮನೆಯ ಒಡತಿ ಧಡಧಡ ಎದ್ದಳು.


ಬಾಗಿಲು ತೆರೆದು ನೋಡಿದಾಗ ಅವಳ ಕಣ್ಣು ಆಶ್ಚರ್ಯದಿಂದ ಊರಗಲ ಆಯಿತು. 


"ನೀನು ..."


"ಡೆಲಿವರಿ ಮುಗಿಸಿಕೊಂಡು ಬಂದೆ. ನೀವು ಈಗ ಎದ್ದಿರಾ?"


ಅವಳು ತೊದಲುತ್ತಾ "ಏನು ಸರಿಯಾದ ಕಡೆಗೆ ಹೋಗಿ ಡೆಲಿವರಿ ಮಾಡಿದೆ ತಾನೇ?"


"ಯಾಕೆ? ಬೀ. ಕೇ. ಸುರಾ ಅವರ ಮನೆಗೆ ತಾನೇ?"


"ಹೂಂ. ಹೂಂ. ಡೆಲಿವರಿ ಆಯಿತಾ!?'


"ಹೂಂ. ಅವರೇ ಬಂದು ಡೆಲಿವರಿ ತೊಗೊಂಡರು.'


"!!"


"ಲೇಟ್ ಆಯಿತು ಅಂತ ಕೋಪ ಮಾಡಿಕೊಂಡರು."


"ಅಯ್ಯೋ!'


"ಏನೂ ಯೋಚಿಸಬೇಡಿ. ಅವರಿಗೆ ನಾನು ನನ್ನ ಸ್ಪೆಷಲ್ ಲಾಡು ಕೊಟ್ಟಮೇಲೆ ಅವರು ಸಮಾಧಾನವಾಗಿ ಉಂಡು ಮಲಗಿಕೊಂಡರು. ಅಂದಹಾಗೆ ನಿಮ್ಮ ಬಿಸಿಬೇಳೆ ಭಾತ್ ಏ ಪ್ಲಸ್. ಅದಕ್ಕೆ ದೊಡ್ಡ ಮೆಣಸಿನಕಾಯಿ ಹಾಕಿದ್ದು ತುಂಬಾ ಫ್ಲೇವರ್ ಫುಲ್ ಆಗಿತ್ತು."


"ನಿನಗೆ ಹೇಗೆ ಗೊತ್ತಾಯಿತು?" ಅವಳು ಅನುಮಾನದಿಂದ ಕೇಳಿದಳು.


"ಅಯ್ಯೋ ಅದೊಂದು ಕಥೆ. ನನ್ನ ಕೈ ಲಾಡು ತಿಂದು ಅವರಿಗೆ ಸಾಕಾಗಿಹೋಯಿತು. ಎಲ್ಲಾ ವೇಸ್ಟ್ ಮಾಡೋದು ಯಾಕೆ ಅಂತ ನಾನೇ ತಿನ್ನಬೇಕಾಯಿತು!"


"ಅಷ್ಟೂ!"


"ಸ್ವಲ್ಪ ಕಷ್ಟವೇ ಅನ್ನಿಸಿತು. ಆದರೆ ಬೆಟ್ಟಕ್ಕೆ ಗಾಡಿ ಹೊಡೆದುಕೊಂಡು ಹೋಗೋದು ಅಷ್ಟು ಸುಲಭವೇ! ಅಂದಹಾಗೆ ಇವತ್ತು ಬೆಳಗ್ಗೆ ತಿಂಡಿಗೆ ಏನು?" ಎನ್ನುತ್ತಾ ಅವನು ಅಡುಗೆಮನೆಗೆ ನುಗ್ಗಿದ.


#ನಗುಬಂತಾ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)