ನೆನಪುಗಳು - ಕಿಮ್

 ಡೇಟಾ ಪ್ರಾಸೆಸಿಂಗ್ ವಿಭಾಗದಲ್ಲಿ ಕೆಲಸಕ್ಕಿದ್ದವರಲ್ಲಿ ಕಿಮ್ ಒಬ್ಬಳು. ಸ್ವಲ್ಪ ಸ್ಥೂಲ ಶರೀರ. ಕನ್ನಡಕ ಧರಿಸುತ್ತಿದ್ದಳು. ಗಂಭೀರ  ಸ್ವರೂಪದ ಯುವತಿ. ಅವಳ ಕೆಲಸ ಡೇಟಾ ಎಂಟ್ರಿ. ಕಂಪ್ಯೂಟರ್ ಟರ್ಮಿನಲ್ ಮುಂದೆ ಕೂತು ಮಾಹಿತಿಯನ್ನು ಟೈಪ್ ಮಾಡುತ್ತಾ ಕೂಡುವುದು. ಇದೂ ಒಂದು ಬಗೆಯ ಫ್ಯಾಕ್ಟರಿ ಕೆಲಸವೇ. ದಿನಕ್ಕೆ ಇಂತಿಷ್ಟು ಮಾಹಿತಿಯನ್ನು ಸೇರಿಸಬೇಕು ಎಂಬ ನಿಯಮವಿರುತ್ತದೆ. ತಪ್ಪುಗಳನ್ನು ಮಾಡಿದವರಿಗೆ ದಂಡ. ಹೆಚ್ಚು ಕೆಲಸ ಮಾಡಿದವರಿಗೆ ಪ್ರಲೋಭನೆ. 


ಕಿಮ್ ಮದುವೆಯಾಗಿ ಇಬ್ಬರು ಮಕ್ಕಳ ತಾಯಿ. ಅವಳ ಪರಿಚಯ ಹೇಗಾಯಿತೋ ನನಗೆ ಮರೆತುಹೋಗಿದೆ. ಅವಳ ಮಗನೊಬ್ಬನ ಹುಟ್ಟಿದಹಬ್ಬದ ಪಾರ್ಟಿಗೆ ನಮಗೆ ಆಹ್ವಾನ ಬಂತು. ನಾವು ಇಂಡಿಯಾದಿಂದ ಬಂದವರೆಂಬುದು ಅಲ್ಲಿ ಬಹಳ ದೊಡ್ಡ ವಿಷಯವಾಗಿತ್ತು. ನಾವು ಡೇಟಾ ಅನಲಿಸ್ಟ್ ಹುದ್ದೆಯಲ್ಲಿರುವವರು, ಭಾರತದ ಮುಂಚೂಣಿ ವಿದ್ಯಾನಿಲಯಗಳಿಂದ ಪದವಿ ಪಡೆದವರು ಎಂದೆಲ್ಲ ನಮ್ಮ ಬಗ್ಗೆ ಸಾಕಷ್ಟು ಡಂಗೂರ ಬಡಿಯಲಾಗಿತ್ತು. ನಮ್ಮನ್ನು ಪರಿಚಯ ಮಾಡಿಕೊಳ್ಳುವುದು ಒಂದು ದೊಡ್ಡ ವಿಷಯ ಎಂಬುದು ಅಲ್ಲಿಯ ಡೇಟಾ ಪ್ರಾಸೆಸಿಂಗ್ ವಲಯದಲ್ಲಿ ಅಭಿಪ್ರಾಯವಾಗಿತ್ತು.


ಕಿಮ್ ಪತಿಯಾದ ಡ್ಯಾನಿ ಕೂಡಾ ಅದೇ ಸಂಸ್ಥೆಯ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದವನು. ಹೆಚ್ಚು ಓದಿದವನಲ್ಲ.  ವಸ್ತುಗಳನ್ನು ಅಲ್ಲಿಂದಿಲ್ಲಿಗೆ ಎತ್ತಿಕೊಂಡು ಒಯ್ದಿಡುವ ಕೆಲಸ. ನೋಡಲು ಆಕರ್ಷಕನಾಗಿದ್ದ.  ಕಿಮ್ ಮತ್ತು ಅವನು ಬಹುಶಃ ಒಂದೇ ವಯಸ್ಸಿನವರು. ಡ್ಯಾನಿ ಮೀಸೆಯನ್ನು ವಿಶೇಷವಾಗಿ ಬೆಳೆಸಿದ್ದ. ಅವನನ್ನು ಒಬ್ಬ ಶೋಕಿಲಾಲ ಎಂದರೆ ತಪ್ಪಿಲ್ಲ. ಕಿಮ್ ಇನ್ನೂ ಹದಿನೈದು ಹದಿನಾರು ವರ್ಷದವಳಾದಾಗಲೇ ಇವನ ಮೋಹದ ಬಲೆಗೆ ಬಿದ್ದವಳು. ತಾಯಿತಂದೆಯ ಇಚ್ಛೆಗೆ ವಿರುದ್ಧವಾಗಿ ಅವನನ್ನು ಮದುವೆಯಾದವಳು. ಮದುವೆಯಾದ ತರುಣದಲ್ಲೇ ಇಬ್ಬರು ಮಕ್ಕಳು. ದೊಡ್ಡವನು ಜಸ್ಟಿನ್. ಕಿರಿಯವನು ಜೆರಡ್. ಆಗ ಆವರಿಗೆ ಆರು ಮತ್ತು ನಾಲ್ಕು ವರ್ಷ ಎಂದು ನೆನಪು.  ಮನೆಯ ಮುಂದಿದ್ದ ಪುಟ್ಟ ಆಟದ ಮೈದಾನದಲ್ಲಿ ಅವರೊಂದಿಗೆ ಆಡಿದ್ದು ನೆನಪಿದೆ.


ಹುಟ್ಟಿದ ಹಬ್ಬದ ಪಾರ್ಟಿಯಲ್ಲಿ ಹೆಚ್ಚು ಜನ ಇರಲಿಲ್ಲ. ಡ್ಯಾನಿಯ ಚಿಕ್ಕ ತಮ್ಮನೊಬ್ಬ ಬಂದಿದ್ದ ಎಂದು ನೆನಪು.  ಕೇಕ್, ಐಸ್ ಕ್ರೀಮ್ ಇವು ಅಲ್ಲಿಯ ಹುಟ್ಟುಹಬ್ಬದ ಕುರುಹುಗಳು.  ಪಾರ್ಟಿಯಲ್ಲಿ ಡ್ಯಾನಿಯ ತಮ್ಮ ಮೈಕಲ್ ಜ್ಯಾಕ್ಸನ್ ರೀತಿಯಲ್ಲಿ ಡ್ಯಾನ್ಸ್ ಮಾಡಿದ. ಆಗ ಮೈಕಲ್ ಜ್ಯಾಕ್ಸನ್ ಪ್ರಸಿದ್ಧಿಯ ತುದಿಯಲ್ಲಿದ್ದ ಕಲಾವಿದ. ಅವನ ಮ್ಯೂಸಿಕ್ ವಿಡಿಯೋಗಳು ಪ್ರತಿದಿನವೂ ಪ್ರಸಾರವಾಗುತ್ತಿದ್ದವು. ಜಸ್ಟ್ ಬೀಟ್ ಇಟ್ ಎನ್ನುವ ಒಂದು ಹಾಡಂತೂ ಅತ್ಯಂತ ಜನಪ್ರಿಯವಾಗಿತ್ತು. 


ಪಾರ್ಟಿಯಲ್ಲಿ ಎಲ್ಲರೂ ಉಪಾಹಾರ ಸ್ವೀಕರಿಸಿದ ನಂತರ ಕಿಮ್ ಅಡಿಗೆಮನೆಯಲ್ಲಿ ಒಬ್ಬಳೇ ಕೆಲಸ ಮಾಡುತ್ತಿದ್ದಳು. ನಿನಗೆ ಏನಾದರೂ ಸಹಾಯ ಬೇಕೇ ಎಂದು ಕೇಳಿದೆ. ಅವಳು  "ನಿನಗೆ ಬೋರ್ ಆಗುವುದಿಲ್ಲ ತಾನೇ?" ಎಂದರೂ ಅವಳಿಗೆ ಯಾರಾದರೂ ಸಹಾಯಹಸ್ತ ಚಾಚಿದ್ದು  ಬಹಳ ಆಪ್ಯಾಯವಾಗಿತ್ತು. ನನಗೆ  ಒಂದಿಷ್ಟು ಒಪ್ಪ ಓರಣದ ಕೆಲಸ ಹೇಳಿದಳು.  ಅತಿಥಿಗಳು ಕುಡಿದ ಪ್ಲಾಸ್ಟಿಕ್ ಪಾರ್ಟಿ ಲೋಟಗಳನ್ನು ಅಲ್ಲಿಯ ಪದ್ಧತಿಯಂತೆ ಎಸೆಯಲು  ನಾನು ಮುಂದಾದಾಗ "ನಾನು ಇವನ್ನು ತೊಳೆದು ಮರುಬಳಕೆ ಮಾಡುತ್ತೇನೆ" ಎಂದು ಕಿಮ್ ರಹಸ್ಯವೆಂಬಂತೆ ಹೇಳಿದಳು. "ಅಯ್ಯೋ, ಇಂಡಿಯಾದಲ್ಲಿ ನಮ್ಮ ತಾಯಿ ಹಳೆಯ ಹಾರ್ಲಿಕ್ಸ್ ಬಾಟಲುಗಳನ್ನು ಬಳಸುತ್ತಾರೆ, ಅಲ್ಲಿ ನಾವು ಹೀಗೆಲ್ಲ ಎಸೆಯುವುದಿಲ್ಲ. ಇಲ್ಲಿಗೆ ಬಂದಾಗಿನಿಂದ ನೀವು ಒಳ್ಳೊಳ್ಳೆಯ ಪ್ಯಾಕೇಜಿಂಗ್ ಎಸೆದುಬಿಡುವುದು ನೋಡಿ ಸಂಕಟವಾಗುತ್ತೆ" ಎಂದೆ. ಕಿಮ್ ಬಹುಶಃ ನನ್ನಲ್ಲಿ ಒಬ್ಬ ತಮ್ಮನನ್ನು ಕಂಡಳೆಂದು ತೋರುತ್ತದೆ. ಅವಳು ನಾಲ್ಕು ಜನ ಹೆಣ್ಣು ಮಕ್ಕಳಲ್ಲಿ ಹಿರಿಯ ಮಗಳು.  ಡ್ಯಾನಿಯೊಂದಿಗೆ ಮದುವೆಯಾಗಿ ಮೊದಲು ಡೇರಿ ಕ್ವೀನ್ ಎಂಬ ಐಸ್ ಕ್ರೀಮ್ ಪಾರ್ಲರಿನಲ್ಲಿ ಕೆಲಸ ಮಾಡುತ್ತಿದ್ದಳು. ಕಿಮ್ ಸ್ವಭಾವತಃ ಪ್ರತಿಭಾವಂತೆ. ಹೇಗೋ ಡೇಟಾ ಎಂಟ್ರಿ ಕಲಿತು ಈಗ ಹಿಂದಿಗಿಂತ ಉತ್ತಮ ಉದ್ಯೋಗದಲ್ಲಿದ್ದಳು. ಡ್ಯಾನಿ ಈಗ  ಬಿಯರ್ ಕುಡಿಯುತ್ತ ಹರಟೆ ಹೊಡೆಯುತ್ತಿದ್ದ. ಅವನು ಒಮ್ಮೆಯಾದರೂ ಒಳಗೆ ಬಂದು ವಿಚಾರಿಸಲಿಲ್ಲ. 


ಕಿಮ್ ಮತ್ತು ಡ್ಯಾನಿ ನಡುವೆ ಎಲ್ಲವೂ ಚೆನ್ನಾಗಿಲ್ಲವೆಂಬ ಭಾವನೆ ಯಾರಿಗಾದರೂ ಬರುವಂತಿತ್ತು. ಡ್ಯಾನಿ ಒಬ್ಬ ಬಣ್ಣದ ಚಿಟ್ಟೆ. ಅವನಿಗೆ ಫ್ಯಾಕ್ಟರಿ ಕೆಲಸ ಮಾಡುವಾಗ ಬೆನ್ನು ನೋವಾಗಿ ಕೆಲಸ ಕಳೆದುಕೊಂಡು ಈಗ ಮನೆಯಲ್ಲೇ ಇದ್ದ. ಕಿಮ್ ಗಳಿಕೆಯಲ್ಲೇ ಸಂಸಾರ ಸಾಗಬೇಕು. ಬಹುಶಃ ಇದು ಇಬ್ಬರಿಗೂ ಬಹಳ ಕಷ್ಟದ ಪರಿಸ್ಥಿತಿ. ಸಾಲದ್ದಕ್ಕೆ ಡ್ಯಾನಿ ಮತ್ತೊಬ್ಬ ಯುವತಿಯ ಬಲೆಗೆ ಬಿದ್ದಿದ್ದನಂತೆ. ಇದು ನಮಗೆ ನಂತರ ತಿಳಿಯಿತು.


ಕೊನೆಗೂ ಅವರು ಬೇರೆಯಾದರು. ಕಿಮ್ ಮಕ್ಕಳನ್ನು ಕರೆದುಕೊಂಡು ಬೇರೊಂದು ಅಪಾರ್ಟ್ಮೆಂಟಿಗೆ ಬಂದು ನೆಲೆಸಿದಳು. ಹಿಂದೊಮ್ಮೆ ದೊಡ್ಡ ಮನೆಯಲ್ಲಿ ಬೆಳೆದ ಮಕ್ಕಳು ಈಗ ಅಪಾರ್ಟ್ಮೆಂಟಿನ ಪರಿಸರಕ್ಕೆ ಹೊಂದಿಕೊಳ್ಳತೊಡಗಿದವು.  ಡ್ಯಾನಿ ಈಗ ತನ್ನ ಪ್ರಿಯಕರಳನ್ನು ಮನೆಗೆ ಕರೆತಂದಿದ್ದಾನೆ ಎಂದು ಕಿಮ್ ನಮಗೆ ಒಮ್ಮೆ ಹೇಳಿದಳು. ಅವಳ ಮಾತಿನಲ್ಲಿ.ಕಹಿ ಇತ್ತು.  ಇನ್ನೂ ಇಪ್ಪತ್ತರ ಹರೆಯದಲ್ಲಿದ್ದವಳ ಮೇಲೆ ಇಬ್ಬರು ಮಕ್ಕಳ ಜವಾಬ್ದಾರಿ ಬಂದಿತ್ತು.  ಹಿಂದೆ ಅವಳಿಗೆ ಬಾದಿಗೆಯ ಖರ್ಚು ಇರಲಿಲ್ಲ. ಈಗ ಬಾಡಿಗೆ ತೆರಬೇಕು. ಮಕ್ಕಳನ್ನು ನೋಡಿಕೊಳ್ಳಲು ವ್ಯವಸ್ಥೆ ಮಾಡಬೇಕು.


"ನಾನು ನಿಮ್ಮ ಲಾಂಡ್ರಿ ಮಾಡಿಕೊಡಬಲ್ಲೆ" ಎಂದು ಕಿಮ್ ಸೂಚಿಸಿದಾಗ ನಮಗೆ ಬಹಳ ಹೀನಾಯ ಎನ್ನಿಸಿತು.  ವಾರಕ್ಕೆ ಇಂತಿಷ್ಟು ಎಂದು ನಮ್ಮಿಂದ ಹಣ ಪಡೆದು ನಮ್ಮ ಲಾಂಡ್ರಿಯನ್ನು ಮನೆಯಿಂದ ತೆಗೆದುಕೊಂಡು ಹೋಗಿ ಮಶೀನಿನಲ್ಲಿ ಒಗೆದು ಒಣಗಿಸಿ ಒಪ್ಪಮಾಡಿ ತಲುಪಿಸುತ್ತಿದ್ದಳು. ಈ ಸಂಪಾದನೆಯಿಂದ ಒಂದಿಷ್ಟು ಸಹಾಯವಾಗಿದೆ ಎಂದು ಅವಳು ಕೃತಜ್ಞತೆಯಿಂದ ಹೇಳುತ್ತಿದ್ದಳು. ಅವಳು ಲಾಂಡ್ರಿ ಪಡೆಯಲು ಬಂದಾಗ ಅವಳ ಎರಡು ಮಕ್ಕಳೂ ಬರುತ್ತಿದ್ದವು. ಒಮ್ಮೆ ಅವರನ್ನು ಇಲ್ಲೇ ಬಿಟ್ಟುಹೋಗು, ನಾವು ಅವರನ್ನು ಆಡಿಸಿಕೊಳ್ಳುತ್ತೇವೆ ಎಂದೆ. ಅವಳಿಗೆ ಅಷ್ಟೇ ಸಾಕಾಯಿತು. ಆದರೆ ಈ ಇಬ್ಬರು ಮಕ್ಕಳನ್ನು ನೋಡಿಕೊಳ್ಳುವುದು ನಮಗೆ ಸಾಕಾಯಿತು. ಇಬ್ಬರೂ ಮಹಾ ತುಂಟರು. ಕಿಮ್ ಅವರನ್ನು ಹೇಗೆ ಸುಧಾರಿಸುತ್ತಿದ್ದಳೋ.


ಒಮ್ಮೆ ಮೌಂಟನ್ ಹೋಮ್ ಹಳ್ಳಿಯಲ್ಲಿ ಸಂತೆ ಬಂತು. ಇದಕ್ಕೆ ಕಂಟ್ರಿ ಫೇರ್ ಎನ್ನುತ್ತಾರೆ.  ತಿಂಡಿ ತಿನಿಸು, ಥ್ರಿಲ್ ನೀಡುವ ರಂಗಿನ ರಾಟೆ ಇತ್ಯಾದಿ ಆಟಗಳು. ಇವಲ್ಲದೆ ಸ್ಥಳೀಯರಿಗೆ ಹಸು ಮತ್ತು ಹಂದಿಗಳ ಮಾರಾಟವೂ ಇತ್ತೆಂದು ನೆನಪು. ಅವತ್ತು ರಂಗಿನ ರಾಟೆಯಲ್ಲಿ ಜೆರಡ್ ನನ್ನ ಜೊತೆ ಕುಳಿತ. ಜಸ್ಟಿನ್ ಅಮ್ಮನೊಂದಿಗೆ ಕುಳಿತಿದ್ದ. ಆ ರಂಗಿನರಾಟೆ ಬಹಳ ದೊಡ್ಡದು. ಮೇಲಕ್ಕೆ ಹೋಗಿ ನಿಲ್ಲಿಸಿ ನಂತರ ಒಮ್ಮೆಲೇ ರಾಟೆಯು ಚಲಿಸಿದಾಗ ಹೊಟ್ಟೆಯಲ್ಲೆಲ್ಲ ಚಿಟ್ಟೆಗಳು. ನನಗೆ ನನ್ನನ್ನು ಸಂಭಾಳಿಸಿಕೊಳ್ಳುವುದೇ ಕಷ್ಟವಾಗುತ್ತಿತ್ತು. ಪಕ್ಕದಲ್ಲಿದ್ದ ಮಗುವಿನ ಗತಿ ಏನಾಯಿತೋ ಎಂಬ ಚಿಂತೆ ಹೆಚ್ಚು ಕಾಡುತ್ತಿತ್ತು! "ಏನೂ ಆಗೋದಿಲ್ಲ" ಎಂದು ನಾನು ಅವನಿಗೆ ಆಶ್ವಾಸನೆ ಕೊಟ್ಟೆ. ಆದರೆ ನನಗೇ ಅದರಲ್ಲಿ ನಂಬಿಕೆ ಇರಲಿಲ್ಲ!  ಇಳಿದಾಗ ಎಲ್ಲರ ಮುಖದಲ್ಲೂ ಅಬ್ಬಾ ಸದ್ಯ ಮುಗಿಯಿತಲ್ಲ ಎಂಬ ಭಾವ. ಏನೋ ದಿಗ್ವಿಜಯ ಸಾಧಿಸಿದ ಹೆಮ್ಮೆ. 


"ಮಕ್ಕಳು ಮೂರ್ಛೆ ಹೋಗಿಬಿಡುತ್ತಾರೇನೋ ಎಂದು ನನಗೆ ದಿಗಿಲಾಗಿತ್ತು!"  ಎಂದು ಕಿಮ್ ನಕ್ಕಳು. ಜೆರಡ್ ಮತ್ತು ಜಸ್ಟಿನ್ ಅಲ್ಲೆಲ್ಲೋ ಕಂಡ ತಿನಿಸನ್ನು ತೋರಿಸಿ ತಮಗೆ ಬೇಕೆಂದು ಗೋಗರೆಯುತ್ತಿದ್ದರು. ನಾನು ಅವರಿಗೆ ಕೊಡಿಸಲು ಮುಂದಾದೆ.  ಕಿಮ್ ನನಗೆ ಕೃತಜ್ಞತೆ ತಿಳಿಸಿದಳು. ಅಲ್ಲಿ ಒಂಟಿಯಾಗಿ ಮಕ್ಕಳನ್ನು ಪೋಷಿಸುವ ತಾಯಂದಿರ ಸ್ಥಿತಿ ದಯನೀಯ. ಅನೇಕ ವರ್ಷಗಳ ನಂತರ ಟೆಕ್ಸಾಸ್ ನಗರದ ಒಂದು ರೆಸ್ಟೋರಾಂಗೆ ಹೋದಾಗ ಪಾರ್ಕಿಂಗ್ ಸ್ಥಳದಲ್ಲಿ ಒಂದು ಕಾರಿನಲ್ಲಿದ್ದ ಒಬ್ಬ ಯುವತಿ ಹಣ ಕೇಳಿದಳು. ಅವಳೊಂದಿಗೆ ಇಬ್ಬರು ಮುದ್ದಾದ ಹೆಣ್ಣುಮಕ್ಕಳು. ನನ್ನ ಜೊತೆಗಿದ್ದ ಸಹೋದ್ಯೋಗಿಣಿ ಅವಳನ್ನು ಮಾತಾಡಿಸಿ ವಿಷಯ ಏನೆಂದು ಕೇಳಿದರು. ಆಕೆ ತನ್ನ ಗಂಡನಿಂದ ಬೇರೆಯಾಗಿ ಬಂದಿದ್ದಳು. ಅವಳೂ ಇಪ್ಪತ್ತರ ಯುವತಿಯಂತೆ ತೋರುತ್ತಿದ್ದಳು. ಹೋಗಲು ಮನೆ ಇಲ್ಲ. ಕಾರಿನಲ್ಲೇ ಆ ರಾತ್ರಿ ಕಳೆಯುವ ಯೋಚನೆ. ಮಕ್ಕಳಿಗೆ ಊಟ ಕೊಡಿಸಲು ಹಣವಿಲ್ಲ. ನಮಗೆ ಮೈ ಜುಂ ಎಂದಿತು. ನಾವು ಹಣ ಕೊಟ್ಟರೂ ಆಕೆಯ ಸಮಸ್ಯೆ ಪರಿಹಾರವಾಗದು. ನನ್ನ ಸಹೋದ್ಯೋಗಿಣಿ ಆಕೆಗೆ ಅಲ್ಲಿಯ ಚರ್ಚ್ ಮುಂತಾದ ಸಂಸ್ಥೆಗಳ ಬಗ್ಗೆ ವಿವರ ನೀಡಿದರು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)