ನೆನಪುಗಳು - ಪ್ರವಾಸ
ಅಕ್ಟೋಬರ್ ತಿಂಗಳಿನಲ್ಲಿ ಒಂದು ಲಾಂಗ್ ವೀಕೆಂಡ್ ಬಂದಾಗ ನಾವೆಲ್ಲರೂ ಒಂದು ಸಾಹಸದ ಪ್ರಯಾಣ ಕೈಗೊಂಡೆವು. ಶಿಕಾಗೋ ನಗರಕ್ಕೆ ಕಾರಿನಲ್ಲಿ ಪ್ರಯಾಣ ಮಾಡುವುದು ನಮ್ಮ ಯೋಜನೆಯಾಗಿತ್ತು. ಇದು ಮೂರ್ತಿಯ ಯೋಜನೆ. ನಮ್ಮ ಜೊತೆ ಕೆಲಸ ಮಾಡುತ್ತಿದ್ದ ಒಬ್ಬ ಸಹೋದ್ಯೋಗಿ ಈಗ ವಿಸ್ಕಾನ್ಸಿನ್ ರಾಜ್ಯದಲ್ಲಿ ಉದ್ಯೋಗದಲ್ಲಿದ್ದ. ಅಲ್ಲಿಗೆ ಶಿಕಾಗೋ ನಗರ ಹತ್ತಿರ. ಅವನ ಮನೆಯಲ್ಲಿ ತಂಗುವುದು ಮತ್ತು ಶಿಕಾಗೋ ನಗರವನ್ನು ನೋಡಿಕೊಂಡು ಬರುವುದು ಎಂದು ಅವನು ಯೋಜನೆ ಸಿದ್ಧಪಡಿಸಿದ. ನಮ್ಮ ಹತ್ತಿರ ಇದ್ದ ಕಾರ್ ಬಹಳ ಹಳೆಯ ಪಾಂಟಿಯಾಕ್. ಅದನ್ನು ಕೊಂಡ ಒಂದು ತಿಂಗಳಲ್ಲೇ ಅದರ ಮಡ್ ಗಾರ್ಡ್ ಕೆಟ್ಟುಹೋಗಿ ಒಂದು ದಿನ ಮನೆಗೆ ವಾಪಸು ಬರುವಾಗ ಕತ್ತೆ ಕಿರುಚಿದಂತೆ ಸದ್ದು ಮಾಡುತ್ತಾ ನಮಗೆ ತೀವ್ರ ಅಪಮಾನ ಮಾಡಿತ್ತು. ಆ ಕಾರಿನಲ್ಲಿ ದೀರ್ಘ ಪ್ರಯಾಣ ಅಸಾಧ್ಯ. ನಾವು ಕಾರ್ ರೆಂಟಲ್ ಕಂಪನಿಯೊಂದನ್ನು ಸಂಪರ್ಕಿಸಿದೆವು. ನಮ್ಮ ಯೋಜನೆಯ ಬಗ್ಗೆ ನಾವು ಆಫೀಸಿನಲ್ಲಿ ಮಾತಾಡಿಕೊಂಡಿದ್ದು ಒಬ್ಬರಿಂದ ಇನ್ನೊಬ್ಬರಿಗೆ ಹರಡಿ ಕೊನೆಗೆ ಕಿಮ್ ಕಿವಿಗೂ ಮುಟ್ಟಿತು.
"ನೀವು ಪ್ರಯಾಣಕ್ಕೆ ನನ್ನ ಕಾರನ್ನೇ ತೆಗೆದುಕೊಂಡು ಹೋಗಬಹುದು. ರೆಂಟಲ್ ಕಂಪನಿಗೆ ಕೊಡಬೇಕಾದ ಬಾಡಿಗೆಯನ್ನು ನನಗೇ ಕೊಡಿ" ಎಂದು ಅವಳು ಸೂಚಿಸಿದಳು. ಕೊನೆಗೆ ಹೀಗೇ ಮಾಡುವುದು ಎಂದು ನಿರ್ಧಾರವಾಯಿತು. ಕಿಮ್ ಮೂರ್ತಿಯ ಕೈಗೆ ಕೀ ಕೊಟ್ಟು ಒಂದಿಷ್ಟು ಜೋಪಾನಗಳನ್ನು ಹೇಳಿದಳು. ಅವನು ಎಲ್ಲದಕ್ಕೂ ತಲೆಯಾಡಿಸಿದ.
ನಮ್ಮ ಪ್ರಯಾಣದ ದಿನವೂ ಬಂತು. ಹೈವೇಗಳನ್ನು ಗುರುತು ಹಾಕಿಕೊಂಡು ನಕ್ಷೆ ಇಟ್ಟುಕೊಂಡು ಡ್ರೈವ್ ಮಾಡಬೇಕಾದ ಕಾಲವದು. ಈಗಿನಂತೆ ಜಿಪಿಎಸ್ ಮತ್ತು ಗೂಗಲ್ ಮ್ಯಾಪ್ ಇವೆಲ್ಲಾ ಇರಲಿಲ್ಲ. ಈಗಾಗಲೇ ಚಳಿಗಾಲ ಸಮೀಪಿಸುತ್ತಿತ್ತು. ದಾರಿಯ ಎರಡೂ ಕಡೆ ವೃಕ್ಷಗಳಲ್ಲಿ ಎಲೆಗಳು ಕೆಂಪಾಗುತ್ತಿದ್ದವು. ಪ್ರಯಾಣ ಪ್ರಾರಂಭವಾಗುತ್ತಿದ್ದಂತೆ ಮೂರ್ತಿ ಡ್ರೈವ್ ಮಾಡುವುದರಲ್ಲಿ ಮತ್ತು ಮ್ಯಾಪ್ ನೋಡಿಕೊಂಡು ಎಲ್ಲಿ ಎಕ್ಸಿಟ್ ತೆಗೆದುಕೊಳ್ಳಬೇಕು ಇತ್ಯಾದಿ ಮಾತುಗಳಲ್ಲಿ ಮಿಕ್ಕಿದ್ದೆಲ್ಲವನ್ನೂ ಮರೆತುಬಿಟ್ಟ. ಕಿಮ್ ಹೇಳಿದ ಜೋಪಾನಗಳನ್ನು ಕೂಡಾ.
ಮೌಂಟನ್ ಹೋಮ್ ಮತ್ತು ಅಕ್ಕಪಕ್ಕದ ಊರುಗಳಲ್ಲಿ ರಸ್ತೆಗಳು ಅಂಕುಡೊಂಕಾಗಿದ್ದರೂ ಡ್ರೈವಿಂಗ್ ಕೆಲಸ ನೇರ. ಹೆಚ್ಚು ಟ್ರಾಫಿಕ್ ಇರುತ್ತಿರಲಿಲ್ಲ. ಎಷ್ಟೋ ಸಲ ಇಡೀ ರಸ್ತೆಯಲ್ಲಿ ನಮ್ಮ ಕಾರನ್ನು ಹೊರತಾಗಿ ಬೇರೆ ಯಾವ ವಾಹನವೂ ಕಾಣುತ್ತಿರಲಿಲ್ಲ. ಅಲ್ಲಿಯ ಜನ ಬಹಳ ಸೌಮ್ಯ ಸ್ವಭಾವದವರು. ಅಲ್ಲಿ ಎಂದೂ ಹಾರ್ನ್ ಕುಟ್ಟುವುದು, ಒಬ್ಬರು ಇನ್ನೊಬ್ಬರನ್ನು ಓವರ್ ಟೇಕ್ ಮಾಡುವುದು ಇವೆಲ್ಲಾ ನಾವು ನೋಡಿರಲಿಲ್ಲ. ಈ ಪರಿಸರ ಬಿಟ್ಟು ನಗರಗಳನ್ನು ಸಮೀಪಿಸಿದಾಗ ಜನರ ಪ್ರವೃತ್ತಿಗಳು ಬದಲಾಗುವುದನ್ನು ಗಮನಿಸಬಹುದಾಗಿತ್ತು. ಹದಿನೆಂಟು ಚಕ್ರಗಳ ದೊಡ್ಡ ಲಾರಿಗಳು ಒಂದೆಡೆಯಿಂದ ಇನ್ನೊಂದೆಡೆಗೆ ಸಾಮಾನುಗಳನ್ನು ಸಾಗಿಸುತ್ತಿದ್ದವು. ಈ ಲಾರಿಗಳನ್ನು ನಡೆಸುವ ಚಾಲಕರಿಂದ ದೂರವಿರುವುದೇ ಕ್ಷೇಮ. ಅವರನ್ನು ಓವರ್ ಟೇಕ್ ಮಾಡುವುದು ಇತ್ಯಾದಿ ದುಸ್ಸಾಹಸಗಳನ್ನು ಮಾಡಿ ಅವರ ಕೋಪಕ್ಕೆ ಪಾತ್ರರಾಗದೇ ಇರುವುದೇ ಕ್ಷೇಮ. ಇವನ್ನೆಲ್ಲಾ ಮಾತಾಡಿಕೊಳ್ಳುತ್ತಾ ನಮ್ಮ ಪ್ರಯಾಣ ಸಾಗಿತು. ಬೆಳಗ್ಗೆ ಬೇಗ ಹೊರಟರೂ ನಾವು ಶಿಕಾಗೋ ತಲುಪಲು ರಾತ್ರಿಯಾಯಿತು. ನಮ್ಮ ಸ್ನೇಹಿತ ನಮಗೆ ಭಾರತೀಯ ಅಡುಗೆ ಮಾಡಿದ್ದು ನಮಗೆ ಗೆಲುವು ತಂದಿತು.
ಮರುದಿನ ನಾವು ವಿಸ್ಕಾನ್ಸಿನ್ ನಗರದ ಕೆನೋಷಾದಲ್ಲಿ ನೋಡಬಹುದಾದ ಒಂದೆರಡು ಸ್ಥಳಗಳನ್ನು ನೋಡಿಬಂದೆವು. ಒಂದು ಆರ್ಬೋರೇಟಮ್ ನೋಡಿದೆವು ಎಂದು ನೆನಪು. ಅಲ್ಲಿ ಚಳಿಗಾಲದಲ್ಲೂ ಹವಾಮಾನ ನಿಯಂತ್ರಿಸಿ ಟ್ರಾಪಿಕಲ್ ವೃಕ್ಷಗಳನ್ನು ಬೆಳೆಸಿದ್ದರು. ಮರುದಿನ ನಾವು ಶಿಕಾಗೋಗೆ ಹೋದೆವು. ಅಲ್ಲಿ ವಿಪರೀತ ಜೋರಾಗಿ ಬೀಸುವ ಕುಳಿರ್ಗಾಳಿಗೆ ನಾವು ತಯಾರಾಗಿ ಬಂದಿರಲಿಲ್ಲ. ನನ್ನ ಸಹೋದ್ಯೋಗಿ ದೇವ್ ಮುಖದ ಮೇಲೆಲ್ಲಾ ಕೆಂಪು ಕೆಂಪು ಕಲೆಗಳು ಹುಟ್ಟಿಕೊಂಡವು. ಅವನು ಹೆದರಿ ಕಂಗಾಲಾದ. ಅದೃಷ್ಟವಶಾತ್ ಕಟ್ಟಡಗಳ ಒಳಗೆ ಹೋದ ಸ್ವಲ್ಪಹೊತ್ತಿನಲ್ಲಿ ಈ ಕಲೆಗಳು ಮಾಯವಾದವು!
ಸಿಯರ್ಸ್ ಟವರ್ ಆಗ ಅತ್ಯಂತ ಎತ್ತರದ ಕಟ್ಟಡ ಎಂಬ ಹೆಸರು ಪಡೆದಿತ್ತು. ಎಲಿವೇಟರಿನಲ್ಲಿ 108 ಮಜಲುಗಳ ಕಟ್ಟಡ ಮೇಲೆ ಹೋಗಲು ಆಗ ಎಂಟು ಹತ್ತು ನಿಮಿಷಗಳೇ ಬೇಕಾದವು ಎಂದು ನೆನಪು. ಅಲ್ಲಿಂದ ನಗರವನ್ನು ನೋಡಲು ದುರ್ಬೀನುಗಳಿವೆ. ಶಿಕಾಗೋದಲ್ಲಿ ಒಂದು ಭಾರತೀಯ ರೆಸ್ಟೋರಾಂ ಹುಡುಕಿ ಊಟ ಮಾಡಿದೆವು. ನಂತರ ಅಲ್ಲಿಯ ಪ್ರಸಿದ್ಧ ಡಿವಾನ್ ಅವೆನ್ಯೂಗೆ ಹೋಗಿ ಭಾರತೀಯ ಅಂಗಡಿಗಳಲ್ಲಿ ಒಂದಿಷ್ಟು ಖರೀದಿ ಮಾಡಿದೆವು. ಮೌಂಟನ್ ಹೋಮಿನಲ್ಲಿ ಬೇಳೆ ಕೂಡಾ ಸಿಕ್ಕುತ್ತಿರಲಿಲ್ಲ. ಅಲ್ಲಿ ಸಿಕ್ಕುತ್ತಿದ್ದ ಒಣಗಿಸಿದ ಹಸಿರು ಬಟಾಣಿಯನ್ನು ಬೇಯಿಸಿ ಹುಳಿ ಮಾಡಿ ಅದರ ಹಸಿರುಬಣ್ಣವನ್ನು ನೋಡದೆ ತಿನ್ನುವುದು ನಮಗೆ ರೂಢಿಯಾಗಿತ್ತು. ಶಿಕಾಗೋದಲ್ಲಿ ನಮಗೆ ಮೊದಲ ಸಲ ಬೇಳೆಯ ದರ್ಶನವಾಯಿತು.
ನಾವು ಮೌಂಟನ್ ಹೋಮಿಗೆ ಮರಳಿ.ಹೊರಟೆವು. ಮರಳುವಾಗ ಮೂರ್ತಿ ಒಮ್ಮೆ ತಪ್ಪಿ ಒನ್ ವೇ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಗಾಡಿಯನ್ನು ಓಡಿಸಿ ಎದುರಿನಿಂದ ಕಾರು ಬರುವುದನ್ನು ಕಂಡು ಹೌಹಾರಿ ಕಾರನ್ನು ರಿವರ್ಸ್ ಮಾಡಿದ್ದು ಒಂದು ಸಾಹಸ. ಹೋಗುವಾಗ ಇದ್ದ ಉತ್ಸಾಹ ಮರಳುವಾಗ ಇರಲಿಲ್ಲ. ದಾರಿಯಲ್ಲಿ ಕಾರು ಏನೋ ತೊಂದರೆ ಕೊಟ್ಟಿತು. ಒಮ್ಮೆಲೇ ಮೂರ್ತಿಗೆ ನೆನಪಾಯಿತು. ಕಿಮ್ ಅವನಿಗೆ ಆಯಿಲ್ ಬದಲಾಯಿಸಬೇಕು ಎಂದು ಜೋಪಾನ ಹೇಳಿದ್ದಳು! ಅವನು ಅದನ್ನು ಮರೆತೇ ಬಿಟ್ಟಿದ್ದ! ಆಯಿಲ್ ಬದಲಾಯಿಸದೆ ಕಾರಿನ ಟ್ರಾನ್ಸ್ಮಿಷನ್ ಕೆಟ್ಟುಹೋಗಿತ್ತು.
ವಿಷಯ ತಿಳಿದಾಗ ಕಿಮ್ ಅಪ್ರತಿಭಳಾದಳು. ನಾವು ಅವಳ ಕಾರ್ ರಿಪೇರಿಗೆ ಹಣ ಕೊಟ್ಟರೂ ಕಾರನ್ನು ಅವಳು ಕೊನೆಗೆ ಮಾರಬೇಕಾಯಿತು. ಅವಳು ಮೂರ್ತಿಯನ್ನು ಕ್ಷಮಿಸಲೇ ಇಲ್ಲ. ಬಹಳ ವರ್ಷಗಳ ನಂತರವೂ ಅವಳು ಈ ಘಟನೆಯನ್ನು ನೆನಸಿಕೊಂಡು ತನ್ನ ಕಾರ್ ಕೆಟ್ಟುಹೋದ ವಿಷಯ ಮರುಕಳಿಸಿ ವ್ಯಥೆ ಪಟ್ಟಳು. "ನಾನೇ ಇಂಜಿನ್ ಆಯಿಲ್ ಬದಲಾಯಿಸಿ ಕೊಡಬೇಕಾಗಿತ್ತು. ಮೂರ್ತಿಯನ್ನು ನಾನು ಕೇಳಿದಾಗ ನಾವೇ ಬಡಲಾಯಿಸುತ್ತೇವೆ ಎಂದು ಪ್ರಾಮಿಸ್ ಮಾಡಿ ಮರೆತೇ ಬಿಟ್ಟ!" ಎಂದು ನಕ್ಕಳು.
#ನೆನಪುಗಳು
(ಮುಂದುವರೆಸುತ್ತೇನೆ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ