ವಾರ್ಡನ್ ಕಥನ
ನಾನು ದೆಹಲಿ ಐಐಟಿಯ ನೀಲಗಿರಿ ಹಾಸ್ಟೆಲಿಗೆ ವಾರ್ಡನ್ ಆಗಿ ನಿಯುಕ್ತನಾಗಿ ಕೊನೆಗೂ ಮನೆಯನ್ನು ಬದಲಾಯಿಸಿ ವಾರ್ಡನ್ ಮನೆಗೆ ಬಂದೆ. ಆ ಮನೆಯ ಸ್ಥಿತಿ ಏನೂ ಚೆನ್ನಾಗಿರಲಿಲ್ಲ. ಮನೆಯ ಮುಂದೆ ಮತ್ತು ಹಿಂದೆ ಇದ್ದ ದೊಡ್ಡ ತೋಟ ನನಗೆ ಇಷ್ಟವಾಗಿತ್ತು. ಆದರೆ ಅದರಲ್ಲಿ ತೋಟಗಾರಿಕೆ ಮಾಡಲು ನನಗೆಲ್ಲಿ ಸಮಯವಿತ್ತು! ಮಗಳಿಗೆ ಆಗತಾನೇ ಒಂದು ವರ್ಷ ತುಂಬಿತ್ತು. ಅವಳನ್ನು ಹಿಡಿಯುವುದೇ ಒಂದು ಸಾಹಸ. ಅವಳಿಗೆ ಅವಳ ಅಮ್ಮ ಹಿತ್ತಲಲ್ಲಿದ್ದ ಶೆಹತೂತ್ ಅಥವಾ ಹಿಪ್ಪುನೇರಳೆ ಮರದಲ್ಲಿ ಉಯ್ಯಾಲೆ ಹಾಕಿಕೊಟ್ಟಳು. ಇಬ್ಬರೂ ಈ ಉಯ್ಯಾಲೆಯಲ್ಲಿ ಬೇಕಾದಷ್ಟು ಆಡಿದರು. ದೆಹಲಿಯ ವಾಯುಮಾಲಿನ್ಯ ಆಗಲೂ ಹದಗೆಟ್ಟಿತ್ತು. ಮಗಳಿಗೆ ಹವಾಮಾನ ಬದಲಾವಣೆಯಾದಾಗಲೆಲ್ಲಾ ನೆಗಡಿ, ಕೆಮ್ಮು. ಐಐಟಿಯ ದವಾಖಾನೆಯಲ್ಲಿ ಯಾವಾಗಲೂ ಗಿಜಿಗಿಜಿ ಜನ ತುಂಬಿರುತ್ತಿದ್ದ ಕಾರಣ ನಾವು ಹೊರಗಿನ ವೈದ್ಯರಿಗೆ ಶರಣಾದೆವು. ಒಬ್ಬ ಹೋಮಿಯೋಪತಿ ವೈದ್ಯೆಯ ಪರಿಚಯವನ್ನು ಯಾರೋ ಹೇಳಿದರು. ಆಕೆಯ ಕ್ಲಿನಿಕ್ ದೂರದಲ್ಲಿತ್ತು. ನನ್ನ ಹೆಂಡತಿ ಟ್ಯಾಕ್ಸಿ ಮಾಡಿಕೊಂಡು ಅಲ್ಲಿಗೆ ಹೋಗಿಬರುತ್ತಿದ್ದಳು. ಒಮ್ಮೆ ಹೋಮಿಯೋಪತಿಯ ಸಿಹಿಗುಳಿಗೆಗಳ ಬಾಟಲ್ ಮಗಳ ಕೈಗೆ ಸಿಕ್ಕಿ ಅವಳು ಅದರಲ್ಲಿದ್ದ ಸಿಹಿಯ ರುಚಿ ನೋಡಿದಳು..ಹೋಮಿಯೋಪತಿ ಔಷಧಕ್ಕೆ ಕಾಫಿ ಒಂದು ಆಂಟಿಡೋಟ್ ಅಥವಾ ಪ್ರತ್ಯೌಷಧ ಎಂದು ತಿಳಿದಿದ್ದ ನನ್ನ ಹೆಂಡತಿ ಮಗಳಿಗೆ ಸ್ವಲ್ಪ ಕಾಫಿ ಕುಡಿಸಿ ಡಾಕ್ಟರಿಗೆ ಫೋನ್ ಮಾಡಿ ಹೋದಳು. ದೂರದ ಡಾಕ್ಟರ್ ...