ನಾನೇ ಮಾಡಿದ ಅಡುಗೆ



"ನೋಡಿ, ನಮ್ಮ ಫ್ರೆಂಡ್ ಒಬ್ಬರು ಹಾಕಿರೋ ಪಟ!" ಎಂದು ಮರಿಗೌಡ ಫೋನ್ ಮುಂದೆಮಾಡಿದರು.

ಚಪಾತಿ, ಪಲ್ಯ.

"ಇದೇನು ಈ ಸ್ತರಕ್ಕೆ ಇಳಿದು ಹೋಗಿದೆ ನಿಮ್ಮ ಸ್ನೇಹವಲಯ! ಬೇರೆ ಏನೂ ಹಂಚಲು ಇಲ್ಲ ಅಂತ ಹಂಚುತ್ತಾರೆ ಚಪಾತಿ ಪಲ್ಯ!" ಎಂದು ನಾನು ವಲಯ, ಪಲ್ಯ ಇವುಗಳನ್ನು ಪ್ರಾಸ ಮಾಡಲು ತ್ರಾಸ ಪಡುತ್ತಾ ಆಶುಕವಿತ್ವ ಮಾಡಿದೆ.


ರಾಜಾರಾಂ ಸುಮ್ಮನಿರದೆ "ಅಯ್ಯೋ ದಿಸ್ ಈಸ್ ಬೆಟರ್ ದ್ಯಾನ್ ಜೀ ಎಂ ಅಂಡ್ ಜೀ ಎನ್, ಫ್ರೆಂಡ್ ಶಿಪ್ ರಿಯಲಿ ಬಿಗಿನ್ಸ್ ಟು ಸಿಂಕ್ ದೆನ್!" ಎಂದು ತಮ್ಮ ಇಂಗ್ಲಿಷ್ ಕವಿತ್ವ ಮೆರೆದರು. ಫ್ರೆಂಡ್ ಶಿಪ್ ಎಂಬಲ್ಲಿ ಶಿಪ್ ಮತ್ತು ಸಿಂಕ್ ಎಂಬುದರ ದ್ವಂದ್ವಾರ್ಥ ನನಗೆ ಇಷ್ಟವಾಗಿ ನಾನು ನಕ್ಕೆ. ಮರಿಗೌಡರು ನಗಲಿಲ್ಲ.


"ನೋಡಿ, ಇದು ಸೀರಿಯಸ್ ಮ್ಯಾಟರ್. ಅವರು ಹಾಕಿರೋ ಬೇರೆ ಪಟಗಳು ನೋಡಿ" ಎಂದು ಸ್ಕ್ರಾಲ್ ಮಾಡಿದರು. ವೆಜಿಟಬಲ್ ಭಾತ್, ವಾಂಗಿ ಭಾತ್, ಅನ್ನ ಸಾರು, ಇತ್ಯಾದಿ. 


"ಯಾಕ್ರೀ ಅವರ ಮನೆಯವರು ಬರ್ಗರ್, ಪಾಸ್ಟಾ, ಕೇಕ್, ಇದನ್ನೆಲ್ಲ ಮಾಡಲ್ವಾ! ಇದೇನು ಮಹಾ ಅನ್ನ ಸಾರು, ತುಂಬಾ ಬೋರು!"


"ನೋಡಿ ನಿಮ್ಮಂಥವರು ಹೀಗೆ ಹೇಳೋದರಿಂದಲೇ ಕಣ್ರೀ ನಮ್ಮ ಸನಾತನ ಧರ್ಮಕ್ಕೂ ಈ ಗತಿ ಬಂದಿರೋದು" ಎಂದು ಮರಿಗೌಡ ಮುನಿಸು ತೋರಿಸಿದರು.


"ನೋಡಿ ಮರಿಗೌಡ, ಸಿರಿಧಾನ್ಯ ಈಸ್ ಓಕೆ. ನವಣೆ ಉಪ್ಪಿಟ್ಟು, ರಾಗಿ ಮುದ್ದೆ, ಇವೆಲ್ಲ ಸ್ಪೆಷಲ್ ಕ್ಯಾಟಗರಿಯಲ್ಲೇ ಬರುತ್ವೆ. ನಮ್ಮ ಫ್ರೆಂಡ್ ಒಬ್ಬರು ಆಗಾಗ ರಾಗಿ ಮುದ್ದೆ ಸಾರು ಫೋಟೋ ಹಾಕ್ತಾರೆ. ಪ್ರತಿ ಸಲವೂ ಅದಕ್ಕೆ ಇನ್ನೂರು ಲೈಕ್ ಬರುತ್ತೆ. ಸರ್ ನಮಗೆ ಪಾರ್ಸಲ್ ಕಳಿಸಿ ಇತ್ಯಾದಿ ಕಾಮೆಂಟ್ಸ್ ಕೂಡಾ ಬರುತ್ತೆ.  ಅವರು ಒಂದೇ ಫೋಟೋ ಇಟ್ಟುಕೊಂಡು ಅದನ್ನೇ ಎಡಿಟ್ ಮಾಡಿ ಮತ್ತೆ ಮತ್ತೆ ಹಾಕ್ತಾರೆ ಅಂತ ಒಬ್ಬರು ಪ್ರೂವ್ ಮಾಡಿ ತೋರಿಸಿಬಿಟ್ಟರು."  ಎಂದು ರಾಜಾರಾಂ ಉಸಿರು ಬಿಗಿಹಿಡಿದು ಹೇಳಿದರು.


"ಓಹ್ ಮೈ ಗಾಡ್!" ಎಂದು ನಾನು ಉದ್ಗರಿಸಿದೆ. ನಾನು ತಿಂದ ಮಿರ್ಚಿ ಬಜ್ಜಿ ವಿಪರೀತ ಖಾರ ಇತ್ತು. ಗಟಗಟನೆ ನೀರು ಕುಡಿದೆ.


"ಅದು ಹೇಗೆ ಹೇಳೋದಕ್ಕೆ ಆಗತ್ತೆ ರಾಜಾರಾಂ! ಅವರ ಮನೇಲಿ ರಾಗಿ ಮುದ್ದೆ ಆಗಾಗ ಮಾಡೋದು ಅಂಥಾ ಆಶ್ಚರ್ಯ ಏನಲ್ಲ!"


"ನಾವೂ ಹಾಗೇ ಅಂದುಕೊಂಡಿದ್ವಿ. ಬಟ್ ಮಶೀನ್ ಲರ್ನಿಂಗ್ ಸುಳ್ಳು ಹೇಳಲ್ಲ. ಅವರ ಎಲ್ಲಾ ಚಿತ್ರಗಳೂ ಒಂದೇ ಚಿತ್ರದ ಮಾರ್ಪಡಿಕೆಗಳು ಅಂತ ಅದು ಪ್ರೂಫ್ ಕೊಟ್ಟಿದೆ. ಅಷ್ಟೇ ಅಲ್ಲ, ಮೂಲ ಚಿತ್ರ ಕೂಡಾ ಅವರದ್ದು ಅಲ್ಲ, ಎಲ್ಲಿಂದಲೋ ಇಳಿಸಿದ್ದು ಅಂತ ಲಿಂಕ್ ಕೊಟ್ಟಿದೆ!"


"ಓಹ್ ಮೈ ಗಾಡ್!" ಎಂದು ಈಗ ಮರಿಗೌಡ ಉದ್ಗರಿಸಿದರು. ಅವರೂ ಮಿರ್ಚಿ ಬೋಂಡಾ ತಿನ್ನುತ್ತಾ ಇದ್ದ ಕಾರಣ ನಾನು ಕೂಡಲೇ ನೀರಿನ ಲೋಟ ಅವರ ಕಡೆಗೆ ಸರಿಸಿದೆ.


ನೀರು ಕುಡಿದರೂ ಮರಿಗೌಡ ಇನ್ನೂ ಪೂರ್ತಿಯಾಗಿ ಚೇತರಿಸಿಕೊಂಡಿರಲಿಲ್ಲ ಎಂದು ನಮಗೆ ತಿಳಿಯಿತು. ವೇಟರ್ ಭಯ್ಯಾ ಪ್ರತ್ಯಕ್ಷನಾಗಿ "ಸಾಬ್ ಜೀ, ಚಾಯ್, ಕಾಫಿ, ಜೂಸ್, ಐಸ್ ಕ್ರೀಮ್..." ಎಂದು ಕೇಳಿದ. ನಾನು ಮರಿಗೌಡ ಅವರಿಗೆ ಮ್ಯಾಂಗೋ ಐಸ್ ಕ್ರೀಮ್ ಮತ್ತು ನನಗೆ ವ್ಯಾನಿಲಾ ಐಸ್ ಕ್ರೀಮ್ ಹೇಳಿದೆ. ರಾಜಾರಾಂ ಕಾಫಿ ಹೇಳಿದರು.


ಐಸ್ ಕ್ರೀಮ್ ಬರುವವರೆಗೂ ನಾವು ಯಾರೂ ಮಾತಾಡಲಿಲ್ಲ. ಮರಿಗೌಡರು ಮ್ಯಾಂಗೋ ಐಸ್ ಕ್ರೀಮ್ ಬಾಯಿಗೆ ಹಾಕಿಕೊಂಡ ನಂತರ ನಾನು "ಇಷ್ಟಾಗಿ ನಿಮಗೆ ಚಪಾತಿಪಲ್ಯ ವಾಂಗೀ ಭಾತ್ ಪಿಕ್ಚರ್ ಕಳಿಸಿದ್ದು ಯಾರು ಅಂತ ಹೇಳಿ ಮೊದಲು" ಎಂದೆ.


"ನನ್ನ ಭಾಮೈದ" ಎಂದರು ಮರಿಗೌಡ ತಗ್ಗಿದ ಧ್ವನಿಯಲ್ಲಿ.


"ಓಹ್, ಅಂದರೆ ನಿಮ್ಮ ಸಿಸ್ಟರ್ ಮಾಡಿರೋ ಅಡಿಗೆಯನ್ನು ಅವರು ಅಷ್ಟೊಂದು ಇಷ್ಟ ಪಡ್ತಾರೆ ಅನ್ನಿ."


"ಇದು ನನ್ನ ಸಿಸ್ಟರ್ ಮಾಡಿದ ಅಡುಗೆ ಅಲ್ಲ."


ಅವರ ಈ ಮಾತುಗಳಿಂದ ಯಾಕೋ ಮಿಸ್ಟರಿ ಬಹಳ ಗಾಢವಾಗುತ್ತಿದೆ ಎನ್ನಿಸಿತು. ಅನೇಕಾನೇಕ ತಿರುವುಗಳು ನಮಗೆ ಹೊಳೆದವು.  ಈ ಕಥೆಯಲ್ಲಿ ಮರೀಗೌಡರ ಸಿಸ್ಟರ್ ಅಲ್ಲದೇ ಇನ್ನೊಬ್ಬರು ಯಾರಾದರೂ ಇರಬಹುದಾ ಎಂಬ ಆಲೋಚನೆ ನನಗೆ ಮತ್ತು ರಾಜಾರಾಂ ಅವರಿಗೆ ಒಮ್ಮೆಲೇ ಹೊಳೆದು ನಾವು ಪರಸ್ಪರ ನೋಡಿಕೊಂಡದ್ದನ್ನು ಮರಿಗೌಡ ಗಮನಿಸಿ "ಇಲ್ಲ ಇಲ್ಲ ಹಾಗೇನೂ ಇಲ್ಲ" ಎಂದರು.


"ಏನಿಲ್ಲ?"


"ನನಗೆ ಗೊತ್ತು ನೀವು ನೆಟ್ ಫ್ಲಿಕ್ಸ್  ಸೀರಿಯಲ್ ನೋಡಿ ನಿಮ್ಮ ಮನಸ್ಸಿಗೆ ಏನೇನೋ ಯೋಚನೆ ಬರುತ್ತೆ. ಇಲ್ಲಿ ಹಾಗೆಲ್ಲ ಏನೂ ಇಲ್ಲ. ನನ್ನ ತಂಗಿಗೆ ಮದುವೆ ಆಗಿ ಇಬ್ಬರು ಮಕ್ಕಳು. ನನ್ನ ಭಾಮೈದ ಹಾಗೆಲ್ಲ ಬೇರೆ ಯಾರನ್ನೂ ಕಣ್ಣೆತ್ತಿ ನೋಡಲ್ಲ. ನೋಡಿದರೆ ನನ್ನ ತಂಗಿ ಬಿಡಬೇಕಲ್ಲ!" ಎಂದು ತಮ್ಮ ತಂಗಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು.


"ಮರಿಗೌಡ, ಈಗ ಕಾಲ ಮುಂಚಿನ ಹಾಗಿಲ್ಲ. ಕಣ್ಣೆತ್ತಿ ನೋಡಬೇಕಾಗಿಲ್ಲ. ಮೊಬೈಲ್ ಇದೆಯಲ್ಲ!" ಎಂದು ತಮ್ಮ ಮೊಬೈಲ್ ಫೋನನ್ನು ಮೇಲೆತ್ತಿ ಝಳಪಿಸಿದರು 


"ಅದೂ ಸಾಧ್ಯ ಇಲ್ಲ. ಅವನ ಮೊಬೈಲ್ ಪಾಸ್ವರ್ಡ್ ಚೇಂಜ್ ಮಾಡೋದು ನನ್ನ ತಂಗಿ. ಅವನಿಗೆ ಆಪ್ ಡೌನ್ ಲೋಡ್ ಮಾಡಿಕೊಡೋದು ನನ್ನ ತಂಗಿ."


ಮರಿಗೌಡರ ತಂಗಿ ಬಗ್ಗೆ ನಮಗೆ ಅಪೂರ್ವ ಗೌರವ ಮೂಡಿತು. ಇದಲ್ಲವೇ ಪತಿವ್ರತೆಯ ಲಕ್ಷಣ!


ಆದರೆ ನಮ್ಮ ಮಿಸ್ಟರಿ ಈಗ ಇನ್ನಷ್ಟು ಗಾಢವಾಯಿತು. ಭಾಮೈದ ಹಾಕಿದ ಮೈದಾಲೆಸ್ ಕೇಕ್ ಮಾಡಿದ್ದು ಮರಿಗೌಡರ ತಂಗಿ ಅಲ್ಲ. ಚಪಾತಿ ಪಲ್ಯವೂ ಆಕೆಯ ಸೃಷ್ಟಿಯಲ್ಲ. ಭಾಮೈದ ಇನ್ನಾವ ಭಾಮೆಯತ್ತಲೂ ನೋಡುವ ಚಾನ್ಸೇ ಇಲ್ಲ ...


"ಗೌಡರೇ ಇದೇನೋ ಬಹಳ ಗೂಢವಾಗಿದೆ" ಎಂದು ರಾಜಾರಾಂ ಹೇಳಿದರು.


ನಾನು "ನಿಮ್ಮ ತಂಗಿಗೆ ಈ ಪಿಕ್ಚರ್ಸ್ ಬಗ್ಗೆ ಗೊತ್ತೇ?" ಎಂದು ಕೇಳಿದೆ.


"ಗೊತ್ತಿಲ್ಲದೆ ಏನು! ಅವಳೇ ನನಗೆ ಫಾರ್ವರ್ಡ್ ಮಾಡಿದ್ದು."


"ಓಹ್, ನಿಮ್ಮ ಭಾಮೈದ ಅವರಿಗೇ ಕಳಿಸಿದ್ದಾರಾ!"


"ಇಡೀ ವಾಟ್ಸಪ್ ಗ್ರೂಪಿಗೆ ಕಳಿಸಿದಾನೆ."


"ಪಿಕ್ಚರ್ ಬಗ್ಗೆ ಏನು ಹೇಳಿದ್ದಾರೆ?"


"ಮೇಡ್ ಇನ್ ಇಲಿನಾಯ್ಸ್ ಅಂತ ಅದೇನೋ ಬರೆದಿದ್ದಾನೆ. ಅದನ್ನು ನೋಡಿ ನನ್ನ ತಂಗಿ ಗಾಬರಿ ಆಗಿದ್ದಾಳೆ.  ಏನ್ರೀ ಇದು ಇಲಿನಾಯ್ಸ್ ಅಂದ್ರೆ!"


"ಇಲಿನಾಯ್ಸ್ ಅಲ್ಲ, ಇಲಿನಾಯ್. ಅಮೆರಿಕಾದಲ್ಲಿ ಒಂದು ರಾಜ್ಯ!" ಎಂದು ರಾಜಾರಾಂ ತಿದ್ದಿದರು. "ಶಿಕಾಗೋ ಇರೋದು ಅಲ್ಲೇ."


"ಓಹ್ ಹೌದಾ! ಚಿಕಾಗೋಗೇ ಹೋಗಿರೋದು ನಮ್ಮ ಚಿನ್ನೇಗೌಡ."


"ಯೂ ಮೀನ್ ಭಾಮೈದ?"


"ಹೂಂ. ಅವನ ಹೆಸರು ಚಿನ್ನೇಗೌಡ. ಅವನು ಆಫೀಸ್ ಕೆಲಸಕ್ಕೆ ಅಂತ  ಚಿಕಾಗೋಗೆ ಹೋಗಿದಾನೆ."


"ಓಹೋ ಮತ್ತೆ ಮಿಸ್ಟರಿ ಸಾಲ್ವ್ಡ್... ಅಲ್ಲಿಗೆ ಹೋಗಿ ಅವನೇ ಚಪಾತಿ ಪಲ್ಯ ವಾಂಗೀ ಭಾತ್ ಇದೆಲ್ಲಾ ಮಾಡಿ ಪಿಕ್ಚರ್ ಹಾಕಿರಬೇಕು!"


"ನಿಮಗೆ ಭ್ರಮೆ! ಚಿನ್ನೇಗೌಡ ಚಪಾತಿ ಮಾಡೋದು ಹಾಗಿರಲಿ ಒಂದು ಚಮಚ ಅಲ್ಲಿಂದ ಇಲ್ಲಿ ಇಟ್ಟವನಲ್ಲ.  ಅಂಥವನು ಈಗ ವಾಂಗೀಭಾತ್ ಅಂತೆ, ಆದಂತೆ ಇದಂತೆ!"


"ನೋಡಿ ಈಗ ಎಲ್ಲ ರೆಸಿಪಿ ಸಿಕ್ಕುತ್ತೆ. ಪಾಪ ಆಸೆ ಪಟ್ಟು ಕಲಿತಿರಬಹುದು."


"ನಾನೂ ನನ್ನ ತಂಗಿಗೆ ಅದೇ ಹೇಳಿದೆ. ಅವಳು ಅಣ್ಣಾ ಇಪ್ಪತ್ತು ವರ್ಷದಲ್ಲಿ ಒಂದು ರಾಗಿ ಗಂಜಿ ಮಾಡಿಕೊಳ್ಳಲಿಲ್ಲ, ಈಗ ಎಲ್ಲಿಂದ ಚಪಾತಿಪಲ್ಯ ಅಂತ ಅತ್ತುಕೊಂಡಳು."


"ನೋಡಿ ನಿಮ್ಮ ತಂಗಿ ಸ್ವಲ್ಪ ಕಂಟ್ರೋಲ್ ಫ್ರೀಕ್ ಥರಾ ಅನ್ನಿಸುತ್ತೆ. ಅವರಿಗೆ ಏನೂ ಮಾಡೋಕೆ ಬಿಡಲ್ಲ. ಪಾಪ ಅದಕ್ಕೇ ಅಮೆರಿಕಾಗೆ ಹೋದಾಗ ಈ ಅಡುಗೆ ಎಲ್ಲಾ ಮಾಡಿಕೊಂಡು ಮಜವಾಗಿ ಕಾಲ ಹಾಕ್ತಿದಾರೆ" ಎಂದು ರಾಜಾರಾಂ ತಮ್ಮ ಮನೋವಿಶ್ಲೇಷಣೆ ಮಂಡಿಸಿದರು.


"ಅಯ್ಯೋ ಹಾಗೆಲ್ಲ ಇಲ್ಲ. ಅವಳು ಇವನಿಗೆ ಅಡುಗೆ ಹೇಳಿಕೊಡೋಕೆ ತುಂಬಾ ಪ್ರಯತ್ನ ಪಟ್ಟಳು. ಹೆಂಗಸರಿಗೆ ಫ್ರೀ ಪ್ರಯಾಣ ಅಂತ ಬಂದಾಗ ಒಂದೆರಡು ವಾರ ನಾನೂ ಅಲ್ಲಿ ಇಲ್ಲಿ ಓಡಾಡಿಕೊಂಡು ಬರ್ತೀನಿ, ನೀನು ಅಷ್ಟು ದಿನ ಅಡುಗೆ ಮಾಡಿಕೊಂಡಿರು ಅಂತ ಇನ್ನಿಲ್ಲದ ಹಾಗೆ ಹೇಳಿದಳು. ಕೇಳಬೇಕಲ್ಲ ಅವನು! ಚಿಕಾಗೋಗೆ ಹೋಗೋವಾಗ ಅವನ ಜೊತೆ ಚಕ್ಕಲಿ, ಚೂಡಾ, ಇನ್ಸ್ಟೆಂಟ್ ಉಪ್ಪಿಟ್ಟು, ಇನ್ಸ್ಟೆಂಟ್ ಅವಲಕ್ಕಿ ಎಲ್ಲಾ ಜೋಡಿಸಿ ಕಳಿಸಿದ್ದು ಇವಳೇ!"


"ಅಷ್ಟೆಲ್ಲ ಇದ್ದಾಗ ಅಡುಗೆ ಮಾಡೋ ಖಯಾಲಿ ಯಾಕೆ!"


"ಅದೇ ನಂಗೂ ನನ್ನ ತಂಗಿಗೂ ಗೊತ್ತಾಗ್ತಿಲ್ಲ."


"ಅವರ ಆಫೀಸಿನಿಂದ ಬೇರೆ ಯಾರಾದರೂ ಜೊತೆಗೆ ಹೋಗಿದ್ದಾರಾ?"


"ನಾನು ಫೋನ್ ಮಾಡಿ ಕೇಳಿದೆ."


"ಏನಂತೆ?"


"ಹೂಂ. ಐದೋ ಆರೋ ಜನ ಹೋಗಿದ್ದಾರಂತೆ. ಅವರಲ್ಲಿ ಚಂಪಕ ಅನ್ನೋರು ಕೂಡಾ ಇದ್ದಾರಂತೆ "


"..."


"ನೋಡಿ ಅದೇ ನನ್ನ ತಂಗಿಗೂ ಮನಸ್ಸಿನಲ್ಲಿ ಕುಕ್ತಾ ಇದೆ. ಚಂಪಕ ಮಾಡೋ ಚಪಾತಿ ನಾನು ಮಾಡೋ ಚಕ್ಕಲಿ ರವೆ ಉಂಡೆಗಿಂತ ಹೆಚ್ಚಾಗಿ ಹೋಯ್ತಾ ಅಂತ ಒಂದೇ ಸಮನೆ ಕಣ್ಣೀರು ಹಾಕ್ತಾ ಇದಾಳೆ."


"ಅಲ್ಲ, ನೀವು ಚಿನ್ನೇಗೌಡ ಅವರನ್ನು ಕೇಳಿದಿರಾ?"


"ಇಲ್ಲ."


"ಛೇ. ತೊಗೊಳ್ಳಿ ಫೋನು. ಡಯಲ್ ಮಾಡಿ."  ಎಂದು ರಾಜಾರಾಂ ಆಜ್ಞೆ ಮಾಡಿದರು.


ಮರಿಗೌಡ ಫೋನ್ ಮಾಡಿದಾಗ ಕರ್ ಕರ್ ಅಂತ ಒಂದು ಹತ್ತು ಸಲ ರಿಂಗ್ ಆದ ಮೇಲೆ ಯಾರೋ ನಿದ್ದೆಗಣ್ಣಿನಲ್ಲಿ ಹಲೋ ಎಂದರು.


"ನಾನು ಮಾತಾಡೋದು ಕಣೋ, ಮರಿ!"


ಅಲ್ಲಿಂದ ಒಂದೆರಡು ಕ್ಷಣ ಏನೂ ಉತ್ತರ ಬರಲಿಲ್ಲ.


"ಓಹ್ ಭಾವಯ್ಯ! ಎಲ್ಲಾ ಚೆನ್ನಾಗಿದೀರಾ!?"


"ಹೂಂ. ನೀನು ಚೆನ್ನಾಗಿದೀಯಾ!?"


"ಹೂಂ. ಏನು ವಿಷಯ! ಈಗ ಇಲ್ಲಿ ಬೆಳಗ್ಗೆ ನಾಲಕ್ಕು."


"ಓಹ್. ಗೊತ್ತಾಗಲಿಲ್ಲ ಕಣೋ. ಅಂದಹಾಗೆ ನೀನು ಅದೇನೋ ಚಪಾತಿ, ಪಲ್ಯ ಎಲ್ಲಾ ಮಾಡ್ತೀಯಂತೆ!"


ಅಲ್ಲಿಂದ ಮೌನ.


"ಕೇಳಿಸ್ತಾ  ಇದೆಯಾ. ಹಲೋ ಹಲೋ ಹಲೋ."


"ಕೇಳಿಸ್ತಿದೆ ಭಾವಯ್ಯ. ಅದನ್ನು ಕೇಳೋಕೆ ಫೋನ್ ಮಾಡಿದ್ರಾ!"


"ಹೆ ಹೆ. ಚಿನ್ನೆಗೌಡ, ನೀನು ಯಾವಾಗ ಇದೆಲ್ಲ ಕಲ್ತೆ!"


"ಕಲ್ತಿಲ್ಲ."


"ಮತ್ತೆ ಅದೆಲ್ಲ ಯಾರು ಮಾಡಿದ್ದು! ನೀನು ಫೋಟೋ ಹಾಕಿದ್ದೆ!"


"ಓಹೋ ಅದನ್ನು ನೋಡಿ ನಿಮಗೆ ಏನೋ ಅನುಮಾನ ಬಂತು ಅಂತ ಕಾಣತ್ತೆ..."


"..."


"ನೋಡಿ ಭಾವಯ್ಯ. ಇಲ್ಲಿ ನನ್ನ ಜೊತೇಲಿ ಬಂದವರು ನಾನು ಅಮೆರಿಕಾದಲ್ಲಿ ಅದು ಮಾಡಿದೆ, ಇದು ಮಾಡಿದೆ ಅಂತ ಮೆಸೇಜ್ ಹಾಕ್ತಾನೆ ಇರ್ತಾರೆ.  ಅದಕ್ಕೆ ಅವರ ಹೆಂಡತಿಯರು ಲೈಕ್ ಹಾಕೋದು, ಕಾಮೆಂಟ್ ಹಾಕೋದು ಎಲ್ಲಾ ನಡೀತಿರುತ್ತೆ .

ಅದಕ್ಕೆ ನಾನೇ ಒಂದೆರಡು ಪಿಕ್ಚರ್ ಡೌನ್ ಲೋಡ್ ಮಾಡಿ ನಾನೇ ಮಾಡಿದ್ದು ಅಂತ ಹಾಕಿದ್ದೆ. ನಿಮ್ಮ ತಂಗಿ ಅದಕ್ಕೆ ಒಂದು ಕಾಮೆಂಟ್ ಇರಲಿ, ಒಂದು ಲೈಕ್ ಕೂಡಾ ಹಾಕಿಲ್ಲ!"


"ಅಷ್ಟೇ ತಾನೇ! ನಾಳೆ ಅವಳಿಗೆ ಹತ್ತು ಕಾಮೆಂಟ್ ಹಾಕೋಕೆ ಹೇಳ್ತೀನಿ. ನೀನು ನಿದ್ದೆ ಮಾಡು. ಸಾರಿ ಫಾರ್ ದ ಟ್ರಬಲ್. "


ನಾವು ಮುಖಮುಖ ನೋಡಿಕೊಂಡೆವು. ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ಆದರೆ ಅದಕ್ಕಿಂತಲೂ ಲೈಕ್ ಹಾಕಿಸಿಕೊಳ್ಳುವ ಆತುರ ಎಲ್ಲಕ್ಕಿಂತ ತೀಕ್ಷ್ಣ ಅಂತ ಯಾರೋ ಒಬ್ಬರು ಕವಿ ಬರೆದಿದ್ದಾರೆ. ಚಿನ್ನೆಗೌಡನ ಅನ್ನದಾತಳಿಗೆ  ಅನ್ನದಾತುರ ಮೀರಿದ ಮನ್ನಣೆಯ ದಾಹ ಅರ್ಥವಾಗದೆ ಇಷ್ಟೆಲ್ಲಾ ಅನರ್ಥಕ್ಕೆ ಕಾರಣವಾಯಿತು. ಪಾಪ ಅವನಿಗೆ ಚೌತಿಯ  ಚಂದ್ರನನ್ನು ನೋಡದೆ ಅಪವಾದ ಸಿಕ್ಕುವುದರಲ್ಲಿತ್ತು.


"ಅಬ್ಬಾ ಈಗ ನನಗೆ ಸಮಾಧಾನ ಆಯ್ತು. ಇನ್ನೊಂದು ಮ್ಯಾಂಗೋ ಐಸ್ ಕ್ರೀಮ್ ಹೇಳೋಣವಾ" ಎಂದು ಮರಿಗೌಡ ಸೀಟಿಗೆ ಒರಗಿಕೊಂಡು ಕೇಳಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)