ವಿಶ್ವಕರ್ಮ ಡೇ ಮತ್ತಿತರ ನೆನಪುಗಳು

 


ಐಐಟಿಯಲ್ಲಿ ನಡೆಯುತ್ತಿದ್ದ ಪೂಜೆ ಎಂದರೆ ವಿಶ್ವಕರ್ಮ ಡೇ ಮಾತ್ರ ಎಂದು ನನ್ನ ನೆನಪು. ನಮ್ಮ ಡಿಪಾರ್ಟ್ಮೆಂಟಿನ ಕಂಟ್ರೋಲ್ ಲ್ಯಾಬಿನಲ್ಲೋ ಅಥವಾ ಪವರ್ ಸಿಸ್ಟಮ್ಸ್ ಲ್ಯಾಬಿನಲ್ಲೋ ಇದನ್ನು ಆಯೋಜಿಸುತ್ತಿದ್ದರು.  ಬಹುಶಃ ದಕ್ಷಿಣದಲ್ಲಿ ಆಯುಧಪೂಜೆ ಇದ್ದಂತೆ ಉತ್ತರದಲ್ಲಿ ವಿಶ್ವಕರ್ಮ ಡೇ. ವಿಶ್ವಕರ್ಮ ಒಬ್ಬ ಇಂಜಿನಿಯರ್ ಎಂಬ ನಂಬಿಕೆಯಿಂದಲೋ ಏನೋ ಈ ರೂಢಿ ನಡೆದುಬಂದಿದೆ.  ಎಲ್ಲರಿಗೂ ಆಹ್ವಾನವಿರುತ್ತಿತ್ತು. ಬರುತ್ತಿದ್ದವರು ಕಡಿಮೆ.  ನಮ್ಮ ಡಿಪಾರ್ಟ್ಮೆಂಟಿನ ಕ್ಲಾಸ್ ಡಿ ನೌಕರರಾದ ಪಂಡಿತ್ ಜೀ ಪೂಜೆ ಸಲ್ಲಿಸುತ್ತಿದ್ದರು. ಎಲ್ಲ ಲ್ಯಾಬ್ ಸಹಾಯಕ ಸಿಬ್ಬಂದಿಯೂ ಜರೂರಾಗಿ ಸೇರುತ್ತಿದ್ದರು. ಪೂಜೆಯ ನಂತರ ಎಲ್ಲರಿಗೂ ಸಿಹಿತಿಂಡಿ ಪ್ರಸಾದ ಸಿಕ್ಕುತ್ತಿತ್ತು.  ಪೂಜೆಗೆ ಬೇಕಾದ ಹಣವನ್ನು ಡಿಪಾರ್ಟ್ಮೆಂಟಿನ ಸಿಬ್ಬಂದಿಯಿಂದ ಚಂದಾ ರೂಪದಲ್ಲಿ ಪಡೆದುಕೊಳ್ಳುತ್ತಿದ್ದರು. 


ಐಐಟಿಯಲ್ಲಿದ್ದ ಕನ್ನಡ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸೇರಿ ಗಣೇಶನ ಹಬ್ಬ ಆಚರಿಸುವುದು ಕೂಡಾ ರೂಢಿಯಾಗಿತ್ತು. ಪ್ರೊ ಇಂದಿರೇಶನ್ ಅವರು ಐಐಟಿಯಲ್ಲಿ ಇದ್ದಷ್ಟು ದಿವಸವೂ ಅವರ ಮನೆಯಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು.  ಏನಿಲ್ಲವೆಂದರೂ ಐವತ್ತು ಜನ ಸೇರುತ್ತಿದ್ದರು. ಹಾಡು, ಭಜನೆ ಕಾರ್ಯಕ್ರಮಗಳ ನಂತರ ಎಲ್ಲರಿಗೂ ಪ್ರಸಾದ ಸಿಕ್ಕುತ್ತಿತ್ತು. ಇದಕ್ಕೆ ಚಂದಾ ಕೇಳುವ ಸಂಪ್ರದಾಯ ಇರಲಿಲ್ಲ.  ಪ್ರೊ ಇಂದಿರೇಶನ್ ಅವರು ನಿವೃತ್ತರಾದ ನಂತರ ಪ್ರೊ ಸುಬ್ಬರಾವ್ ಅಥವಾ ಪ್ರೊ ಮೂರ್ತಿ ಅವರ ಮನೆಯಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನೂ ಕೆಲವು ಕನ್ನಡಿಗ ಪಿಎಚ್.ಡಿ. ವಿದ್ಯಾರ್ಥಿಗಳು ಮುಂದಾಳುತನ ವಹಿಸಿ ನಡೆಸುತ್ತಿದ್ದರು. ಇದನ್ನು ಐಐಟಿಯ ಸ್ಟೂಡೆಂಟ್ ಆಕ್ಟಿವಿಟಿ ಸೆಂಟರಿನಲ್ಲಿ ನಡೆಸುತ್ತಿದ್ದರು. ಕನ್ನಡ  ವಿದ್ಯಾರ್ಥಿಗಳು ಮತ್ತು ಅವರ ಮನೆಯವರು ಎಲ್ಲರಿಗೂ ಆಹ್ವಾನವಿರುತ್ತಿತ್ತು. ಮನರಂಜನೆ ಕಾರ್ಯಕ್ರಮಗಳು ಇರುತ್ತಿದ್ದವು. ನನ್ನ ಮಿತ್ರ ಶ್ರೀರಾಮ್ ಹೆಗಡೆ ಅವರ ಒತ್ತಾಯಕ್ಕೆ ಕಟ್ಟುಬಿದ್ದು ನಾನೂ ಒಮ್ಮೆ ಕವನ ಓದಿದ್ದು ನೆನಪಿದೆ. ಐಐಟಿಯಲ್ಲಿ ನಾನಿದ್ದ ಹತ್ತು ವರ್ಷಗಳ ಅವಧಿಯಲ್ಲಿ ಬರೆದ ಕೆಲವೇ ಕವಿತೆಗಳಲ್ಲಿ ಇದೂ ಒಂದು. ಐಐಟಿ ಪಕ್ಕದಲ್ಲಿದ್ದ ಲಕ್ಕಿ ರೆಸ್ಟೋರಾಂ (ರೆಸ್ಟೋರೆಂಟ್) ಕುರಿತ ಈ ಕವಿತೆ ಮುಂದೆ ನನ್ನ "ಬ್ರೇಕಿಂಗ್ ನ್ಯೂಸ್" ಸಂಗ್ರಹದಲ್ಲಿ ಸೇರಿತು. 


ಲಕ್ಕಿ ರೆಸ್ಟೋರೆಂಟ್ ಬಹಳ ಆಯಕಟ್ಟಿನ ಸ್ಥಾನದಲ್ಲಿತ್ತು. ಐಐಟಿ ಪಕ್ಕದಲ್ಲಿದ್ದ  ಜಿಯಾಸರಾಯ್ ಎಂಬ ಹಳ್ಳಿಯಲ್ಲಿ ಈ ರೆಸ್ಟೋರೆಂಟ್ ಇದೆ. ಹಿಂದೆ ಜಿಯಾ ಸರಾಯ್ ಮತ್ತು ಐಐಟಿ ನಡುವಿನ ಕಾಂಪೌಂಡ್ ಗೋಡೆಯಲ್ಲಿ ಒಂದು ಗೇಟ್ ಇತ್ತು. ಗೇಟ್ ಪಕ್ಕದಲ್ಲೇ ಲಕ್ಕಿ ರೆಸ್ಟೋರೆಂಟ್. ಹೀಗಾಗಿ ಐಐಟಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಲಕ್ಕಿ ರೆಸ್ಟೋರೆಂಟ್ ಒಂದು ಗೇಟ್ ವೇ ಅಂದರೂ ಸರಿಯೇ. ಅಲ್ಲಿಗೆ ಹೋಗುತ್ತಿದ್ದವರು ಪೋಸ್ಟ್ ಗ್ರಾಜುಯೆಟ್ ವಿದ್ಯಾರ್ಥಿಗಳು ಮತ್ತು ಐಐಟಿ ಸಿಬ್ಬಂದಿ. ನಾನು ಐಐಟಿ ಸೇರಿದಾಗ ಒಂದು ರಸ್ತೆಬದಿಯ ಢಾಬಾ ಮಾದರಿಯಲ್ಲಿದ್ದ ಲಕ್ಕಿ ರೆಸ್ಟೋರೆಂಟ್  ಕ್ರಮೇಣ ನಾನಾಬಗೆಯ ಸೌಲಭ್ಯಗಳನ್ನು ಪಡೆದುಕೊಂಡಿತು. ಕಲರ್ ಟಿವಿ.ಬಂತು. ಮುಂದೆ ಏರ್ ಕಂಡೀಷನ್ ಇರುವ ರೂಮ್ ಬಂತು. ಸಾದಾ ಬೆಂಚುಗಳ ಬದಲು ಸುಖಾಸೀನಗಳು ಬಂದವು.  ಲಕ್ಕಿ ರೆಸ್ಟೋರೆಂಟ್ ಪಕ್ಕದಲ್ಲಿ ದೊಡ್ಡ ಕಡಾಯಿಯಲ್ಲಿ ಸಮೋಸಾ, ಜಿಲೇಬಿ ಕರಿಯುವವಮೊಬ್ಬ ಸದಾ ಇರುತ್ತಿದ್ದ, ಎಂಥಾ ಬೇಸಗೆಯಲ್ಲೂ ಕೂಡಾ.  ಐಐಟಿಯಲ್ಲಿ ನಡೆಯುವ ಎಲ್ಲ ಸಭೆಸೆಮಿನಾರುಗಳಿಗೂ ಲಕ್ಕಿಯ ಸಮೋಸಾ ಬರುತ್ತಿತ್ತು.   ಚಳಿಗಾಲದಲ್ಲಿ "ಲಕ್ಕಿ ಸೇ ಸಮೋಸಾ ಮಂಗವಾಲೋ" ಎಂಬುದು ಆಗಾಗ ಕೇಳಿಬರುತ್ತಿದ್ದ ಆಪ್ಯಾಯಕರ ಸಂಭಾಷಣೆ.  ಲಕ್ಕಿ ರೆಸ್ಟೋರೆಂಟಿನ ಹಲವಾಯಿ ಮಾಡುತ್ತಿದ್ದ ಗಾಜರ್ ಕಾ ಹಲ್ವಾ ಕೂಡಾ ಪ್ರಸಿದ್ಧ. ದೆಹಲಿಯ ಚಳಿಯಲ್ಲಿ ಈ ಬಿಸಿ ಹಲ್ವಾ ಸವಿಯಬೇಕು. ಹಲ್ವಾ ಮೇಲ್ಪದರದಲ್ಲಿರುವ ಒಣದ್ರಾಕ್ಷಿ, ಬಾದಾಮಿ,‌ ಗೋಡಂಬಿ, ಪಿಸ್ತಾ ಇವುಗಳನ್ನು ಆಸ್ವಾದಿಸುತ್ತಾ.  ತೀರಾ ಎಳೆಯ ಮಕ್ಕಳು ಇಲ್ಲಿ ಎಂಜಲು ಪ್ಲೇಟ್ ಎತ್ತುವ ಕೆಲಸಕ್ಕೆ ಬರುತ್ತಿದ್ದರು. ಒಂದು ಮಗುವಂತೂ ಬಹುಶಃ ಎಂಟು ವರ್ಷದ ಹುಡುಗ. ಅದಕ್ಕೆ ಒಂದು ರೂಪಾಯಿ ಭಕ್ಷೀಸ್ ಕೊಟ್ಟರೆ ಅದರ ಮುಖ ಅರಳಿಬಿಡುತ್ತಿತ್ತು.


ಐಐಟಿಯಲ್ಲಿ ಬಹಳ ಜನ ಪೋಸ್ಟ್ ಗ್ರಾಜುಯೆಟ್ ವಿದ್ಯಾರ್ಥಿಗಳು ಸಿವಿಲ್ ಸರ್ವಿಸಸ್ ಪರೀಕ್ಷೆಗಳಿಗೆ ತಯಾರಾಗುತ್ತಿದ್ದರು. ಎಷ್ಟೋ ಜನ ಐಐಟಿಯೇತರ ವಿದ್ಯಾರ್ಥಿಗಳು ಕೂಡಾ ಐಐಟಿ ಲೈಬ್ರರಿಯಲ್ಲಿ ಬಂದು ಈ ಪರೀಕ್ಷೆಯ ತಯಾರಿ ಮಾಡಿಕೊಳ್ಳುತ್ತಿದ್ದರೆಂದು ಕೇಳಿದ್ದೇನೆ. ಇವರು ಜಿಯಾಸರಾಯಿಯಲ್ಲಿದ್ದ ಪೀಜೀ ಹಾಸ್ಟೆಲುಗಳಲ್ಲಿ ರೂಮ್ ಮಾಡಿಕೊಂಡಿರುತ್ತಿದ್ದರು. ಲಕ್ಕಿ  ರೆಸ್ಟೋರೆಂಟ್ ಅಲ್ಲದೆ ಊಟ ಮಾಡಲು ಅವರಿಗೆ ಅಲ್ಲೇ ಎಲ್ಲ ಅನುಕೂಲಗಳೂ ಇದ್ದವು. ಗ್ರೀನ್ ಹಟ್ ಎಂಬ ಹೆಸರಿನ ಒಂದು ಖಾನಾವಳಿ ಪ್ರಾರಂಭವಾಯಿತು. ಅಲ್ಲಿ ಮನೆಯ ಸರಳ ಅಡುಗೆಯ ಥಾಲಿ ಊಟ ಸಿಕ್ಕುತ್ತಿತ್ತು. ಅಲ್ಲೇ ಫೋಟೋ ಕಾಪಿ ಅಂಗಡಿಯಲ್ಲಿ ಮೂರು ಹೊತ್ತೂ ವ್ಯಾಪಾರ ನಡೆಯುತ್ತಿತ್ತು. ಪರೀಕ್ಷೆಗಳು ಸಮೀಪಿಸಿದಾಗಲಂತೂ ಇಪ್ಪತ್ನಾಲ್ಕು ಗಂಟೆಯ ವ್ಯಾಪಾರ. ಥೀಸಿಸ್ ಟೈಪ್ ಮಾಡುವುದು, ಥೀಸಿಸ್ ಬೈಂಡ್ ಮಾಡುವುದು, ಮುಖಪುಟದ ಮೇಲೆ ಚಿನ್ನದ ಬಣ್ಣದ ಎಂಬಾಸಿಂಗ್ ಮಾಡುವುದು, ಹೀಗೆ ನೂರೆಂಟು ಸೇವೆಗಳು. ಹುಡುಗರು ಆಗ  ಫ್ಲಾಪಿ ಡಿಸ್ಕ್ ಮೇಲೆ ತಮ್ಮ ಥೀಸಿಸ್ ತೆಗೆದುಕೊಂಡು ಹೋಗಿ ಪ್ರಿಂಟ್ ಮಾಡಿಸುತ್ತಿದ್ದರು. ಹೀಗೆ ಹೋದ ಡಿಸ್ಕ್ ಮೇಲೆ ನಾನಾ ವೈರಸ್ ತಂತ್ರಾಂಶಗಳು ಸೇರಿಕೊಂಡು ಬರುತ್ತಿದ್ದವು. 


ಒಂದು ದಿನ ಈ ಸಂಭ್ರಮಗಳಿಗೆ ತೆರೆ ಬಿತ್ತು.  ಐಐಟಿಯಲ್ಲಿ ಕೆಲವು ಕಳವು ಪ್ರಕರಣಗಳಾದವು. ಆಗ ನಮ್ಮ ಡೈರೆಕ್ಟರ್ ಆಗಿದ್ದ ಪ್ರೊ. ರಾಜು ಜಿಯಾಸರಾಯಿಗೂ ಮತ್ತು ಐಐಟಿಗೂ ನಡುವಣ ಗೇಟ್ ಮುಚ್ಚಿಸುವ ನಿರ್ಧಾರ ಕೈಗೊಂಡರು. ಇದು ವ್ಯಾಪಾರಿಗಳೆಲ್ಲರಿಗೂ ಬಹಳ ದೊಡ್ಡ ಆಘಾತವಾಗಿರಬೇಕು. ಸಾಕಷ್ಟು ಪ್ರತಿಭಟನೆಗಳು ನಡೆದವು. ಪ್ರೊ ರಾಜು ಜಗ್ಗಲಿಲ್ಲ. ಒಂದು ದಿನ ಗೇಟ್ ಬಳಿ ಒಮ್ಮೆಲೇ ಒಂದು ದೇವರ ಮೂರ್ತಿಯ ಉದ್ಭವವಾಯಿತು. ಇದ್ದಕ್ಕಿದ್ದಂತೆ ಒಂದು ಪುಟ್ಟ ಗುಡಿಯೂ ಮೇಲೆದ್ದಿತು. ಗುಡಿ ಗೇಟ್ ಇದ್ದ ಸ್ಥಾನದಲ್ಲೇ ಇತ್ತು! ಈಗ ಗೇಟ್ ಮುಚ್ಚಿಸುವುದು ಅಸಾಧ್ಯ.  ಪ್ರೊ ರಾಜು ಅವರು ಆರ್ಕಿಯಾಲಾಜಿಕಲ್ ಸೊಸೈಟಿ ಆಫ್ ಇಂಡಿಯಾದವರನ್ನು ಕರೆದು ಸರ್ವೆ ಮಾಡಿಸಿ ಈ ದೇವಾಲಯ ಹಳೆಯದಲ್ಲ, ಇದು ಇತ್ತೀಚಿನದು ಎಂದು ಸರ್ಟಿಫಿಕೇಟ್ ಪಡೆದು ದೇವಾಲಯವನ್ನು ಮುಚ್ಚಿ ಗೇಟ್ ಕೂಡಾ ಮುಚ್ಚಿಸಿದರು. ಅನಂತರ ನಾವು ಲಕ್ಕಿ ರೆಸ್ಟೋರೆಂಟಿನಲ್ಲಿ ಚಹಾ ಕುಡಿಯುವುದು ನಿಂತಿತು. ಈಗ ಐಐಟಿಯಲ್ಲೇ ಟೀ, ಕಾಫಿ ಸ್ಟಾಲುಗಳು ಬಂದವು. ಅನೇಕ ವರ್ಷಗಳ ಬಳಿಕ ನಾನು ಐಐಟಿಗೆ ಭೇಟಿ ನೀಡಿದಾಗ ಬಹಳ ಆಧುನಿಕವೆನ್ನಿಸುವ ಕೆಫೆ ಕಾಫಿ ಡೇ ಮಾದರಿಯ ರೆಸ್ಟೋರೆಂಟ್ ಸ್ಥಾಪಿತವಾಗಿತ್ತು. 


#ನೆನಪುಗಳು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)