ಹೋಲಿ ಕೇ ರಂಗ್

 


ಆಕಾಶದಲ್ಲಿ ತೂತು ಬಿದ್ದಹಾಗೆ ಎಂದು ಮಳೆಯನ್ನು ವರ್ಣಿಸುವುದನ್ನು ನೀವೂ ಕೇಳಿರಹುದು.   ಇಂಥ ಮಾತು ಬರಲು ಆಕಾಶವು ದೊಡ್ಡ ಹೊದಿಕೆಯಂತೆ ನಮ್ಮ ಭೂಗೋಳವನ್ನು ಸುತ್ತುವರೆದಿದೆ ಎಂಬ ಕಲ್ಪನೆಯೇ ಆಗಿದೆ.     ಆಕಾಶವೇ ಬೀಳಲಿ ಮೇಲೆ ಎಂಬ ಚಿತ್ರಗೀತೆ ಬರೆದ ಕವಿಗೂ ಇಂಥದ್ದೇ ಕಲ್ಪನೆ ಇದೆ.  ಒಮ್ಮೆಲೇ ಮೇಲಿಂದ ಒಂದು ಹೊದಿಕೆ ನಮ್ಮೆಲ್ಲರ ಮೇಲೆ ಇದ್ದರೆ ಏನು ಗತಿ! ಈ ಹೊದಿಕೆ ಎಷ್ಟು ಭಾರವೋ ಯಾರಿಗೆ ಗೊತ್ತು! ಹತ್ತಿಯಂತಹ ಮೋಡಗಳನ್ನು ನೋಡಿ ಅಷ್ಟೇನೂ ಭಾರ ಇರಲಾರದು ಎಂಬ ಧೈರ್ಯ ತೆಗೆದುಕೊಳ್ಳಬೇಕು.  ಬೆಳಗಿನ ಹೊತ್ತು ಬಿದ್ದರೆ ನಕ್ಷತ್ರಗಳು ಬೀಳಲಾರವು.  ರಾತ್ರಿಯ ಹೊತ್ತು ಬಿದ್ದರೆ   ನಮ್ಮ ತಾರಾಗತಿ ಏನಾಗುತ್ತದೋ ಹೇಳಲಾರೆ.   ಇಷ್ಟೆಲ್ಲಾ ಆದರೂ ನಾಯಕಿಗೆ "ನಾ ನಿನ್ನ ಕೈ ಬಿಡೆನು" ಎಂದು ಆಶ್ವಾಸನೆ ಕೊಡುತ್ತಿರುವ ನಾಯಕನ ಪ್ರೇಮವನ್ನು ಏನೆಂದು ವರ್ಣಿಸಲಿ? ಬಾನೆತ್ತರ ಎಂದು ವರ್ಣಿಸಿದರೆ ಅಯ್ಯೋ ಬಾನು ಗ್ರೌಂಡ್ ಲೆವೆಲ್ಲಿಗೆ ಬಂದಿದೆಯಲ್ಲ ಎಂದು ನೀವು ಸಾಯಿರಾ ಬಾನು ರೀತಿಯಲ್ಲಿ ಕೂಗಬಹುದು.  ಹಿಂದಿ ಚಿತ್ರಗೀತೆಗಳಲ್ಲಿ ನಾಯಕರು ಆಕಾಶ ಬೀಳುವ ಬಗ್ಗೆ ಹಾಡಿದ್ದನ್ನು ನಾನೆಂದೂ ಕೇಳಿಲ್ಲ. ಆಕಾಶದಿಂದ ತಾರೆಗಳನ್ನು ಕಿತ್ತು ತರುತ್ತೇನೆ ಎಂದು ಆಶ್ವಾಸನೆ ಇತ್ತು ನಾಯಕನು ನಾಯಕಿಯ  ಹೃದಯವನ್ನು ಗೆಲ್ಲುವುದು ಅಲ್ಲಿಯ ರೀತಿ.  ನಮ್ಮ ಕನ್ನಡ ನಾಯಕರು ಹಾಗೆಲ್ಲ ಒಂದೆರಡು ತಾರೆಗಳನ್ನು ತಂದರೆ ನಾಯಕಿಗೆ ತೃಪ್ತಿಯಾಗದು ಎಂದು ಬಲ್ಲವರು. ನನ್ನ ಅಮ್ಮನಿಗೆ ಒಂದು ತರಬೇಕಿತ್ತು, ನನ್ನ ಕಸಿನ್ ಸಿಸ್ಟರ್ ಕೇಳಿದರೆ ಇಲ್ಲ ಅನ್ನೋದಕ್ಕೆ ಸಾಧ್ಯವೇ ಎಂದೆಲ್ಲ ನಾಯಕಿ ಪ್ರಾರಂಭಿಸಿದರೆ ಎಂಬ ಭಯದಿಂದ ಇಡೀ ಆಕಾಶವನ್ನು ಕೆಳಗಿಳಿಸುವ ಪ್ಲಾನ್ ಹಾಕುವುದು ಕನ್ನಡಿಗರ ಗುಣ. 


ಆಕಾಶದ ಹೊದಿಕೆ ಮೇಲಿಂದ ಧೊಪ್ಪನೆ ಬೀಳದಿದ್ದರೂ ಅದರಲ್ಲಿ ತೂತುಗಳು ಬೀಳಬಹುದು ಎಂಬ ಜಾನಪದ ಕಲ್ಪನೆಯನ್ನು ನೋಡಿ. ಎಲ್ಲರ ಮನೆಯ ದೋಸೆಯೂ ತೂತೇ ಎಂದು ಜಾಣ್ಮೆ ತೋರಿದವರು ನಮ್ಮ ಜಾನಪದರು. ಎಲ್ಲರ ಮನೆಯ ವಡೆಯೂ ತೂತು ಎಂದು ಅವರು ಹೇಳಲಿಲ್ಲ ಎಂದು ಗಮನಿಸಿರಿ.  ಮದ್ದೂರಿನ ಮಂದಿಗೆ ವಡೆಯಲ್ಲಿ ತೂತು ಮಾಡದೇ  ಪ್ರೊಟೀನ್ ಯುಕ್ತ  ಬೇಳೆಗಳಿಂದ ಅದನ್ನು ಹೋಲ್ ಸಮ್ ಆಹಾರವನ್ನಾಗಿ ತಯಾರಿಸುವ ಐಡಿಯಾ ಆಗಲೇ ಹೊಳೆದಿತ್ತು.  ಬಡವರಾದ ನಮ್ಮ ಜಾನಪದ ಕವಿಗಳಿಗೆ ಎಲ್ಲರ ಮನೆಯ ಹೊದಿಕೆಯಲ್ಲೂ ತೂತುಗಳು ಇರುವುದು ಗೊತ್ತಿತ್ತು. ಅದಕ್ಕೆ ತೇಪೆ ಹಾಕಿ (ಟೇಪ್ ಎಂಬ ಪದಕ್ಕೆ ತೇಪೆ ಎಂಬುದೇ ಮೂಲ ಎಂದು ಗಮನಿಸಿ) ಮುಚ್ಚುವುದನ್ನು ಜಾನಪದ ಕವಿಯ ಹೆಂಡತಿ, ತಾಯಿ ಮತ್ತು ಅಕ್ಕಂದಿರು ಬಲ್ಲವರಾಗಿದ್ದರು.  ತೇಪೆಗಳ ಟೇಪೆಸ್ಟ್ರಿಯೇ ಆಗಿದ್ದ ಹೊದಿಕೆಯನ್ನು ಹೊದ್ದು ಮಲಗಿದ ಜಾನಪದ ಕವಿಗೆ ಬಾನಿನ ಹೊದಿಕೆಯಲ್ಲೂ ಇಂಥ  ರಂಧ್ರಗಳು ಬೀಳಬಹುದು ಎಂಬ ಯೋಚನೆ ಸಹಜವಾಗಿ ಮೂಡಿತು.  ಸೋರುತಿಹುದು ಮನೆಯ ಮಾಳಿಗೆ ಎಂದು ಹೆಂಡತಿ ಪ್ರತಿದಿನ ಅವನಿಗೆ ನೆನಪಿಸುತ್ತಿರುವ ಕಾರಣ  ತೂತಾದ ಹೊದಿಕೆಯಂಥ ಆಕಾಶದಿಂದ  ಮಳೆ ಸೋರಬಹದು ಎಂಬ ಆಲೋಚನೆ ಕವಿಗೆ ಹೊಳೆಯಿತು.  ಆಕಾಶಾತ್ ಪತಿತಮ್ ತೋಯಂ.  ಎಲೈ ಪತಿಯೇ ಆಕಾಶದಿಂದ ಬೀಳುವ ಮಳೆ ನನ್ನನ್ನು ತೊಯ್ಯಿಸುತ್ತಿದೆ.   ತೂತುಗಳಿಂದ ಪತಿತವಾದ ಆಕಾಶದಿಂದ ತೋಯುವಷ್ಟು ನೀರು ಸುರಿಯುತ್ತಿದೆ. 


ತೂತು ಬೀಳುವುದು ಬರೀ ಆಕಾಶದಲ್ಲಿ ಮಾತ್ರವಲ್ಲ. ಈನಡುವೆ ಬೆಂಗಳೂರಿನ ಹಾದಿ ಬೀದಿಗಳಲ್ಲಿ ಬಿದ್ದ ತೂತುಗಳ ಬಗ್ಗೆ ಕಿವಿ ತೂತು ಬೀಳುವಷ್ಟು ಮಾತು ಕೇಳುತ್ತಿದೆ.  ಪಾಟ್ ಹೋಲ್ ಪಾಟ್ ಹೋಲ್ ಯಾವ ಪಾಟಿ ಪಾಟ್ ಹೋಲ್ ಎಂದು ಒಬ್ಬರು ಪಾಟೀ ಸವಾಲು ಮಾಡಿದ್ದಾರೆ. ಬೆಂಗಳೂರು ಈಗ ಹೋಲಿ ಸಿಟಿ ಎಂದು ಮತ್ತೊಬ್ಬರು ಗೇಲಿ ಮಾಡಿದ್ದಾರೆ.  ಬೆಂಗಳೂರಿನ ಕಟ್ಟಾ ಅಭಿಮಾನಿಯೊಬ್ಬರು ಇದಕ್ಕೆ ಕೆರಳಿ ಡೆಲ್ಲಿ ಈಸ್ ಹೋಲಿಯರ್ ದ್ಯಾನ್ ದೌ, ಬೆಂಗಳೂರು ಎಂದು ಮರು ಟ್ವೀಟ್ ಮಾಡಿದ್ದಾರಂತೆ.  ಹಿಂದೊಮ್ಮೆ ಕೃಷ್ಣನು ಗೋಪಿಯರ ತಲೆಯ ಮೇಲಿದ್ದ ಹಾಲಿನ ಪಾಟ್ ಗೆ ಕವಣೆಯಿಂದ ಕಲ್ಲು ಬೀರಿ ಪಾಟ್ ಹೋಲ್ ಮಾಡಿದ್ದು ಪಾಠಕರಿಗೆ ಗೊತ್ತಿಲ್ಲವೇ? ಹಾಲಿನಲ್ಲಿ ನೆನೆದ ಗೋಪಿಯರು  ಯಶೋದೆಯ ಬಳಿ ಬಂದು ದೂರು ಹೇಳುತ್ತಿದ್ದರಂತೆ.  ಬೆಂಗಳೂರಿನ ಪಾಟ್ ಹೋಲಿನಲ್ಲಿ ಸೇರಿದ ಕೊಚ್ಚೆ ನೀರಿನಲ್ಲಿ ನೆನೆದ ಪಾಪಿಗಳು ಗೋಪಿಯರ ಹಾಗೆ ದೂರು ಹೇಳಿಕೊಳ್ಳುತ್ತಿದ್ದಾರೆ.  ಕೆಲವರು ಪಾಟ್ ಹೋಲನ್ನು ದಾಟುವುದನ್ನೇ ಒಂದು ಆಟ ಮಾಡಿಕೊಂಡುಬಿಟ್ಟಿದ್ದಾರೆಂದು ಒಬ್ಬರು ವರದಿ ಮಾಡಿದ್ದಾರೆ. ವೀಲಿಂಗ್ ಮಾಡುವ ಹುಡುಗರು  ಈ ಪಾಟ್ ಹೋಲ್ ಮೇಲೆ ನಾನು ಸ್ಕೂಟರ್ ಎಗರಿಸಿ ಓಡಿಸಿದರೆ ಎಷ್ಟು ಕೊಡ್ತೀಯಾ ಎಂದು ಬೆಟ್ ಕಟ್ಟುತ್ತಿದ್ದಾರಂತೆ.  ಹಿಂದಿಯಲ್ಲಿ ತೂ ಡಾಲ್ ಡಾಲ್ ಮೈ ಪಾತ್ ಪಾತ್ ಎಂಬ ಹೇಳಿಕೆ ಇದೆ. ನೀನು ಕೊಂಬೆಯ ಮೇಲೆ ಬಂದರೆ ನಾನು ಪಾತಿಯಲ್ಲಿ ಅಟ್ಟಿಸಿಕೊಂಡು ಬರುವೆ. ಇದರಿಂದ ಪ್ರಭಾವಿತರಾದ ಕೆಲವರು ತೂ ಪಾಟ್ ಪಾಟ್ ಮೈ ಡಾಲ್ ಡಾಲ್ ಎಂದು ರಸ್ತೆಗೆ ಹೇಳುತ್ತಿದ್ದಾರಂತೆ. ನೀನು ಪಾಟ್ ಹೋಲಿನಿಂದ ನನ್ನನ್ನು ತಡೆಗಟ್ಟಿದರೆ ನಾನು ಕೊಂಬೆಗಳಿಂದ ಕೊಂಬೆಗೆ ಟಾರ್ಜಾನ್ ಮಾದರಿಯಲ್ಲಿ ಹಾರಿ ಬರುತ್ತೇನೆ ಎಂದು ಅಟ್ಟಹಾಸ ಮಾಡುತ್ತಿರುವರಂತೆ. ಒಟ್ಟಿನಲ್ಲಿ ಹೋಲಾಹಲವೋ ಹೋಲಾಹಲ. 


ಬೆಂಗಳೂರಿನ ಪಾಟ್ ಹೋಲ್ ಕುರಿತು ಬಂದ ಟ್ವೀಟ್ ಗಳನ್ನು ಓದಿದ ಇಲಾನ್ ಮಸ್ಕ್  ಅವರಿಗೆ ಒಮ್ಮೆಲೇ ಮಂಗಳ ಮತ್ತಿತರ ಗ್ರಹಗಳ ಮೇಲಿರುವ ಹಳ್ಳಗಳ ನೆನಪಾಗಿ ಅಲ್ಲಿಗೆ ಹೋದಾಗ ಹೇಗಪ್ಪಾ ಗಾಡಿ ಓಡಿಸೋದು ಎಂಬ ಚಿಂತೆ ಉಂಟಾಗಿದೆಯಂತೆ.  ಟೆಸ್ಲಾ ಗಾಡಿಗೆ ಸಾಫ್ಟ್ವೇರ್ ಬರೆದವರ ಆನ್ಲೈನ್ ಮೀಟಿಂಗ್ ಕರೆದು ಕೂಡಲೇ ಬೆಂಗಳೂರಿನಲ್ಲಿ ಒಂದು ಟೆಸ್ಟ್ ಡ್ರೈವ್ ಮಾಡಿಕೊಂಡು ಬನ್ನಿ, ಪಾಟ್ ಹೋಲ್ ನಡುವೆ ಗಾಡಿಯನ್ನು ಓಡಿಸುವ ಸಾಫ್ಟ್ವೇರ್ ಕೂಡಲೇ ಸಿದ್ಧ ಪಡಿಸಿ ಎಂದು ಖಡಕ್ ಆಜ್ಞೆ ಮಾಡಿದ್ದಾರಂತೆ.  ಗೂಗಲ್ ಸ್ಥಿತಿ ಏನೂ ಭಿನ್ನವಾಗಿಲ್ಲ.  ಗೂಗಲ್ ಅಕ್ಕ ಬೆಂಗಳೂರಿನ ಹಳೆಯ ಮ್ಯಾಪ್ ಬಳಸಿ ಮೇಕ್ ಎ ರೈಟ್ ಅಟ್ ದ ನ್ ನೆಕ್ಸ್ಟ್ ಇಂಟರ್ ಸೆಕ್ಷನ್ ಎಂದಾಗ ಗಾಡಿಯನ್ನು ಬಲಕ್ಕೆ ತಿರುಗಿಸಿದವರು ನೆಲ ಎಂದು ನಂಬಿ ಜಲಕ್ಕೆ ಬಿದ್ದ ದುರ್ಯೋಧನನವೋಲ್  ಪಾಟ್ ಹೋಲಿಗೆ ಗಾಡಿಯನ್ನು ತಿರುಗಿಸಿ ಯೂ ಹಾವ್ ಪುಟ್ ಮೀ ಇನ್ ಎ ಪಾಟ್ ಎಂದು ಗೊಣಗುತ್ತಿದ್ದಾರಂತೆ.  ಗೂಗಲ್ ಅಕ್ಕ ಆಗ ದ್ರೌಪದಿಯ ಹಾಗೆ ನಗದಿದ್ದರೂ ಜನ ಕೋಪ ಮಾಡಿಕೊಂಡು ತಮ್ಮ ಕೋಪವನ್ನು ಸಾಮಾಜಿಕ ತಾಣಗಳಲ್ಲಿ ತೋಡಿಕೊಳ್ಳುತ್ತಿದ್ದಾರಂತೆ.   ಬೆಂಗಳೂರು ರಸ್ತೆಗಳಲ್ಲಿ ದಾರಿ ಹುಡುಕುವುದು ಮೆಷೀನ್ ಲರ್ನಿಂಗ್ ಅಲ್ಗಾರಿತಂಗೂ ಕೂಡಾ ಚಾಲೆಂಜ್ ನೀಡಬಲ್ಲದು ಎಂದು ಗೂಗಲ್ ಪ್ರೋಗ್ರಾಮರ್ಸ್ ತಂಡವು ಸೋಲು ಒಪ್ಪಿಕೊಡಿದೆಯಂತೆ. ನೆನ್ನೆ ಟೂ ವೇ ಇದ್ದದ್ದು ಇಂದು ವನ್ ವೇ, ಏಕಾ ಏಕಿ ರೋಡ್ ನಡುವೆ ಉದ್ಭವವಾದ ಮಾರುತಿ, ಒಮ್ಮೆಲೇ ರಾಜಧಾನಿಗೆ ಬಂದಿಳಿದ ಎಮ್ಮೆಲೇಗಾಗಿ ಬ್ಲಾಕ್ ಆದ ರಸ್ತೆಗಳು ಇಷ್ಟೆಲ್ಲಾ ಇರುವಾಗ ಮಳೆ ಮತ್ತು ಪಾಟ್ ಹೋಲ್ ಕೂಡಾ ಸೇರಿಕೊಂಡು ಎಲೆಲೆ ಬಿಗ್ ಡೇಟಾ ಏನ್ ನಿನ್ನ ಮಾಟ ಎಂದು ರತ್ನನ ಶೈಲಿಯಲ್ಲಿ ಕೇಳುತ್ತಿದ್ದಾರಂತೆ. ಇವೆಲ್ಲಾ ನಿನಗೆ ಹೇಗೆ ಗೊತ್ತು ಎಂದು ನೀವು ಕೇಳಿದರೆ ಮೌನ ಮುರಿದ ವಿಕ್ರಮನನ್ನು ಬೆನ್ನು ಬಿಟ್ಟು ಹಾರಿಹೋದ ಬೇತಾಳದಂತೆ ನಾನು ಹಾರಿ ಹೋಗುತ್ತೇನೆ. 


ಸಿ. ಪಿ. ರವಿಕುಮಾರ್


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)