ನೀರ್ ರಸ ಹರಟೆ

 ನೀರ್ ರಸ ಹರಟೆ


ಎಲ್ಲಾ ಕಡೆಗೂ ನೀರೇ ನೀರು ಎಂದು ಎಲ್ಲರೂ ಕಣ್ಣೀರು ಹಾಕುತ್ತಾ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ.  ನೀರಿಗೆ ಏನಾದರೂ ಬೆರೆಸಿದರೆ ಅದು ವಸ್ತುವಿಶೇಷಗಳನ್ನು ನೀಡಬಲ್ಲದು. ಪ ಪ್ಲಸ್ ನೀರ್ ಈಕ್ವಲ್ಸ್ ಪನೀರ್ ಆದಾಗ ನಿಮಗೆ ಪನೀರ್ ಕೋಫ್ತಾ ನೆನಪಾಗಿ ಬಾಯಲ್ಲಿ ನೀರೂರಿ ಪರಿಸ್ಥಿತಿ ಇನ್ನಷ್ಟು ಕೆಡುವುದು ಎಂದು ನೀವು ಎಸ್ ಪ್ಲಸ್ ನೀರ್ ಈಕ್ವಲ್ಸ್  ಸ್ನೀರ್ ಮಾಡುವುದು ಬೇಡ. ಈಗಾಗಲೇ ಮಠದ ಸೀರ್ ಒಬ್ಬರ ಬಗ್ಗೆ ಟಿವಿ ವಾಹಿನಿಗಳು ಸಾಕಷ್ಟು ಸ್ನೀರ್ ಮಾಡಿ ಮುಖದಲ್ಲಿ ನೀರಿಳಿಸಿವೆ.  ವಾಹಿನಿಗಳ ಈ ಸ್ಲೋಗ-ನೀರಿನಿಂದ ನೊಂದು ಕೆಲವರು ಕಣ್ಣೀರು ಹರಿಸಿ ಕಡಲಲ್ಲದಿದ್ದರೂ ಕೆರೆಕೋಡಿಗಳಂತೂ ಉಂಟಾಗಿವೆ.  ಇನ್ನೂ ಕೆಲವರು ವಾಹಿನಿಗಳು ಪರಿಸ್ಥಿತಿಯನ್ನು ಕರುಣಾಜನಕ ಎಂದು ಕರೆಯುವ ಬದಲು ವರುಣಾಜನಕ ಎಂದು ತಪ್ಪಾಗಿ ಪ್ರಚಾರ ಮಾಡಿದ್ದರಿಂದಲೇ ಈ ರಣರಕ್ಕಸ ರುದ್ರ ರೌರವ  ಮಳೆಗೆ ರೀಸನ್ ಎಂದೂ ಲಾಜಿಕ್ ಹಾಕುತ್ತಿದ್ದಾರೆ.


ಪಯೋನಿಧಿ ಎನ್ನುವಾಗ ಪಯೋ ಅಂದರೆ ಹಾಲು ಎಂದಲ್ಲವೇ? ಪಾಯಸ ಎಂಬ ಪದವೂ ಈ pious ಶಬ್ದದಿಂದಲೇ ಹುಟ್ಟಿದ್ದೆಂದು ಓದಿದ್ದು ನೆನಪು. ಇರಲಿ, ಪಯೋ ಪ್ಲಸ್ ನೀರು ಈಕ್ವಲ್ಸ್  ನಿಧಿ ಎಂಬ ಕೆಮಿಕಲ್ ಸಮೀಕರಣವನ್ನು ಮೊದಲು ಮಾಡಿದ ಪಯೋನೀರ್ ಯಾರು, ಹೇಳಿ!  ಹಾಲಿಗೆ ನೀರು ಬೆರೆಸಿ ಮಾರಬಹುದೆಂಬ ಕಲ್ಪನೆಯನ್ನು ನೋಡಿಯೂ ಹಾಲಲ್ಲಿ ನೀರನ್ನು ಮೊದಲಾರು  ಕಂಡವರು ಎನ್ನದೆ ಡಿವಿಜಿ ಅವರು ಅಕ್ಕಿಯೊಳು ಅನ್ನವನು ಮೊದಲಾರು ಕಂಡವರು ಎಂದೇಕೆ ಹಲುಬಿದರೋ! ಯಂತ್ರಕ್ಕೆ  ಇದ್ದಲು ಎಣ್ಣೆಯನ್ನು ಹಾಕಿ ಓಡಿಸುವುದು ಏನು ಮಹಾ ಹೇಳಿ. ಯಂತ್ರಕ್ಕೆ ನೀರು ಹಾಕಿ ಓಡಿಸಿದರೆ ಅದು ಡಿಯರ್, ಪಯೋನಿಯರ್ ಕೆಲಸ. ಇಂಜಿನ್ ಪ್ಲಸ್ ನೀರ್ ಈಕ್ವಲ್ಸ್ ಇಂಜಿನೀರ್ ಎಂದು ಹೇಳುವುದು ಬೇರೆತಕ್ಕೆ!?


ಗಂಗಾವತರಣ ಎಂದು ಪದ್ಯವನ್ನೇ ಬರೆದ ಬೇಂದ್ರೆ ಅವರಿಗೂ ಹೊಳೆಯದ ಒಂದು ವಿಷಯವನ್ನು ನಿಮಗೆ ಹೇಳುತ್ತೇನೆ, ಕೇಳಿ. ನಿಮ್ಮ ಹೆಡ್ ಫೋನನ್ನು ಕೆಳಗಿಟ್ಟು ಕಿವಿಯನ್ನು ನನಗೆ ಕೊಟ್ಟು ಕೇಳಿ. ನೀರಿಗಾಗಿ ಭಗೀರಥನು ಹೋಗಿದ್ದು ಮೌಂಟನ್ನಿಗೆ ಅಲ್ಲವೇ? ಮೌಂಟನ್ನಿನಿಂದ ಹರಿದು ಬಂದ ನೀರಿಗೆ ಹಿಂದೆ ಮೌಂಟನೀರ್ ಎಂದೂ ಮತ್ತು ಹೀಗೆ ನೀರು ತರಲು ತಪಸ್ಸು ಮಾಡುವುದಕ್ಕೆ ಮೌಂಟನೀರಿಂಗ್ ಎಂದೇ ಹೆಸರಿತ್ತು. ಕಾಲಕ್ರಮೇಣ ಯಾವ ಕಠಿಣ ತಪಸ್ಸೂ ಇಲ್ಲದೆ ನಲ್ಲಿಗಳಲ್ಲೇ ನೀರು ಬರಲು ಪ್ರಾರಂಭವಾದಾಗ  ಈ ಪದದ ಅರ್ಥವನ್ನು ಜನ ತಿರುಚಿದರು. ನೀರನ್ನು ಬಾಟಲಿಯಲ್ಲಿ ತುಂಬಿ ಮೌಂಟನ್ ಹತ್ತಿದರು. ಅದನ್ನೇ ಮೌಂಟನೀರಿಂಗ್ ಎಂದು ಭ್ರಮಿಸಿದರು!


ಹಕ್ಕ ಮತ್ತು ಬುಕ್ಕರ ಹೆಸರನ್ನು ಯಾವುದಾದರೂ ಬುಕ್ಕಲ್ಲಿ ನೀವು ಓದಿರುತ್ತೀರಿ ಬಿಡಿ. ಪಠ್ಯಗಳು ತಿದ್ದುಪಡಿ ಆಗುವ ಮುನ್ನ ಅವರ ಹೆಸರು ಹುಕ್ಕ ಮತ್ತು ಬಕ್ಕ ಎಂದು ಇತ್ತೆಂದು ನಿಮಗೆ ಗೊತ್ತಿತ್ತೇ! ಇವರಲ್ಲಿ ಬಕ್ಕನ ಕಥೆ ಹೆಚ್ಚು ಶೋಭಾಯಮಾನವಾಗಿದೆ. ವಿಜಯನಗರದ ಸ್ಥಾಪನೆ ಇನ್ನೂ ಆಗಿರಲಿಲ್ಲ. ಬಕ್ಕನು ಕಾಡಿಗೆ ಹೋಗಿ ಸೌದೆ ತಂದು ಅಡಿಗೆ ಮಾಡಲು ಸಿದ್ಧನಾಗುತ್ತಿದ್ದನು. ಅವನ ತಲೆಯ ಮೇಲೆ ಟಪ್ ಎಂದು ಎಂದು ನೀರಿನ ಹನಿ ಬಿತ್ತು. ಏನಾಶ್ಚರ್ಯ! ಮಳೆಯೇ ಕಾಣದಿದ್ದ ಪ್ರದೇಶದಲ್ಲಿ ಪುಷ್ಟ ವೃಷ್ಟಿ!  ಬಕ್ಕನಿಗೆ ಇದರಿಂದ ಸ್ಫೂರ್ತಿ ಉಕ್ಕಿ ಕೂಡಲೇ ತನ್ನ ಕತ್ತಿ ಹಿರಿದು ಝಳಪಿಸುತ್ತಾ "ಇದೇ ಪ್ರದೇಶದಲ್ಲಿ ನಾವು ಹೊಸ ನಗರ ಸ್ಥಾಪಿಸೋಣ!" ಎಂದು ಕೂಗಿದನಂತೆ. ಬಕ್ಕನು ಹೀಗೆ ನೀರಹನಿಯನ್ನು ಸ್ಪರ್ಶಿಸಿ ಆವೇಶ ಪಡೆದು ಕತ್ತಿ ಝಳಪಿಸಿದ್ದ ಕಾರಣವೇ ಬಕ್ಕನೀರ್ ಎಂಬ ಪದದ ಸೃಷ್ಟಿ ಆಯಿತಂತೆ.


ಈ ನೀರ್ ರಾಮಾಯಣ ಓದುತ್ತಾ ನಿಮಗೆ ಎಳನೀರು ಕುಡಿಯಬೇಕು ಎಂದೋ ನೀರುದೋಸೆ ತಿನ್ನಬೇಕು ಎಂದೋ ಒತ್ತಾಸೆಯಾಗಿರಬಹುದು. ಸರಿ, ಹೋಗಿಬನ್ನಿ.  ವೆನ್ ರೋಮ್ ವಾಸ್ ಬರ್ನಿಂಗ್ ನೀರೋ ವಾಸ್ ಡ್ರಿಂಕಿಂಗ್ ವಾಟರ್ ಎಂಬ ಗಾದೆಯೇ ಇದೆ.  ಅವನು ಕುಡಿದದ್ದು ನೀರೋ ಅಥವಾ ಮತ್ತೇನೋ ಎಂಬ ಸ್ವಾರಸ್ಯವನ್ನು ನಿಮಗೆ ಇನ್ನೊಮ್ಮೆ ಹೇಳುತ್ತೇನೆ.


ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)