ಮಳೆನಾಡಮ್ಮನ ಮಡಿಲಿನಲಿ


ಎಲೆಲೆ ರಸ್ತೆ ಏನ್ ಅವ್ಯವಸ್ಥೆ ಅಂತ ಬರೆದ ರಾಜರತ್ನಂ ಬರಿಗಾಲಿನಲ್ಲಿ ಓಡಾಡುತ್ತಿದ್ದವರು. ಒಮ್ಮೆ ಗಾಜು ತುಳಿದು ಗಾಯವಾಗಿ ಅದು ಅತಿರೇಕಕ್ಕೆ ಹೋಗಿ ಇನ್ನೇನು ತಮ್ಮ ಕಾಲನ್ನೇ ಕಳೆದುಕೊಳ್ಳುವ ಸ್ಥಿತಿ ಬಂದು ಸ್ವಲ್ಪದರಲ್ಲೇ ಪಾರಾದರು.


ಇವತ್ತಿನ  ಬೆಂಗ್ಳೂರಿನ ರಸ್ತೆಗಳ ಸ್ಥಿತಿ ನೋಡಿದ್ದರೆ ರತ್ನ ಅದೇನೇನು ಹೇಳುತ್ತಿದ್ದನೋ! ಸಿಲಿಕಾನ್ ಸಿಟಿ ತನ್ನ ಹೆಸರನ್ನು ಅನ್ವರ್ಥಗೊಳಿಸಲು ಹೊರಟಿದೆ. ಮೆಟ್ರೋ ಕಾಮಗಾರಿ ನಡೆಸುವ ಸಂಸ್ಥೆ ಮಾಡುತ್ತಿರುವ ತಾತ್ಕಾಲಿಕ ಬದಲಾವಣೆಗಳನ್ನು ನೋಡಿ ನಗಬೇಕೋ ಅಳಬೇಕೋ ಗೊತ್ತಾಗದಂತಾಗಿದೆ. ಕ್ಷಿಪ್ರಗತಿಯಲ್ಲಿ ನಡೆಯುವ ಈ ರಸ್ತಾ ರೋಕೋ ಚಳವಳಿಗಳಿಂದ ಗೂಗಲ್ ಕೂಡಾ ತನ್ನ ಮಾರ್ಗದರ್ಶನ ಸಾಮರ್ಥ್ಯವನ್ನು ಕಳೆದುಕೊಂಡು ಚಾಲಕರನ್ನು ಚಕ್ರವ್ಯೂಹಗಳಿಗೆ ತಳ್ಳುತ್ತಿದೆ.  


ಇತ್ತ ಮಳೆಯ ಕಾರಣ ನಗರವು ಹೊಂಡಾಸಿಟಿಯಾಗಿದೆ. ಮೊನ್ನೆ ನನ್ನ ಕಣ್ಣಮುಂದೆಯೇ ಒಂದು ಸ್ಕೂಟರಿನಲ್ಲಿ ಕುಳಿತ ಇಬ್ಬರು ಯುವತಿಯರು ಒಂದು ಹೊಂಡದಲ್ಲಿ ಸಿಕ್ಕಿಹಾಕಿಕೊಂಡರು. ಅದೃಷ್ಟವಶಾತ್ ಏನೂ ದುರ್ಘಟನೆ ನಡೆಯಲಿಲ್ಲ.  ಗಂಡಸರು ಅನೇಕರು ಅವರ ರಕ್ಷಣೆಗೆ ಧಾವಿಸಿದರು. ಪಾಪ ನಿಜಕ್ಕೂ ಕಾಲುಜಾರಿ ಬಿದ್ದಿದ್ದ ಇನ್ನೊಬ್ಬ ವ್ಯಕ್ತಿಯನ್ನು ಯಾರೂ ಕ್ಯಾರೇ ಅನ್ನಲಿಲ್ಲ.  ಇನ್ನು ಜನರು ಎಲ್ಲೆಲ್ಲೂ ಹಾಕುವ ತಿಪ್ಪೆಯ ರಾಶಿ ಮಳೆಯಲ್ಲಿ ಎಲ್ಲಾ ಕಡೆಗೂ ಹರಿಯುತ್ತಿದೆ. ಒಂದು ಐ.ಟಿ. ಸಂಸ್ಥೆಯ ಆಫೀಸ್ ಎದುರಿಗೇ ಒಂದು ತಿಪ್ಪೆಯ ರಾಶಿಯನ್ನು ನೋಡಿ ಇವರು ಗಾರ್ಬೇಜ್ ಕಲೆಕ್ಷನ್ ಆಲ್ಗರಿತಮ್ಮನ್ನು ಜನರು ಗಂಭೀರವಾಗಿ ಸ್ವೀಕರಿಸಿದಂತಿದೆಯಲ್ಲಾ ಎಂದು ಬಾಯ ಮೇಲೆ ಬೆರಳಿಡುವಂತಾಯಿತು. ಇತ್ತ ತಿಪ್ಪೆ ಅತ್ತ ಹೊಂಡ ಇವುಗಳ ನಡುವೆ ಬಸ್ ಸ್ಟಾಪಿಗೆ ನಾಜೂಕಾಗಿ ನಡೆದುಹೋಗುವಾಗ ಅಂಬಿಗ ನಾ ನಿನ್ನ ನಂಬಿದೆ ಎಂದು ಹಾಡಿಕೊಂಡೇ ದಾಟಬೇಕಾಯಿತು.


ಜನರು ರಸ್ತೆ ದಾಟಲು ಹರಸಾಹಸ ಪಡುತ್ತಿದ್ದಾರೆ.  ಒನ್ ವೇ ಇದ್ದರೂ ಕೆಲವು ಮಹಾಶಯರು  ಅರ್ಧ ಕಿಲೋಮೀಟರ್ ಸಾಗಿ ಯೂಟರ್ನ್ ತೆಗೆದುಕೊಳ್ಳಬೇಕಾದ ಕಠಿಣ ಶಿಕ್ಷೆಗೆ ಹೆದರಿ ವಿರುದ್ಧ ದಿಕ್ಕಿನಲ್ಲೇ ಜುಂ ಎಂದು ಬರುತ್ತಿದ್ದಾರೆ. ಇವರ ಅರಿವಿಲ್ಲದೆ ರಸ್ತೆಯಲ್ಲಿ ನಿಂತು ಬಸ್ಸಿಗಾಗಿ ಕಾಯುತ್ತಾ ನಿಂತವರು ಒಮ್ಮೆಲೇ ಹಿಂದಿನಿಂದ ಬಂದ ವಾಹನಕ್ಕೆ ಹೆದರಿ ಕುಪ್ಪಳಿಸಿ ನದಿ-ದಡ ಆಡುತ್ತಿದ್ದಾರೆ.  ಯಾವುದೇ ಹಾರ್ನ್ ಇತ್ಯಾದಿ ಸೂಚನೆ ಇಲ್ಲದೆ ಅವರನ್ನು ಹೀಗೆ ತಬ್ಬಿಬ್ಬು ಮಾಡಿದ ಖುಷಿಯಲ್ಲಿ ಈ ಒನ್ ವೇ ಧೀರರು ನಗುತ್ತಾ ತಮ್ಮ ಕೆಲಸವಾಯಿತಲ್ಲಾ ಎಂಬ ವಿಜಯೋತ್ಸಾಹದಲ್ಲಿ ಸಾಗುತ್ತಿದ್ದಾರೆ. 


ಬಸ್ ನಿಲ್ದಾಣದ ಮುಂದಿರುವ ಫುಟ್ ಪಾತನ್ನು ಬೋಂಡಾ ಇತ್ಯಾದಿ ಮಾರುವವರು ಆಕ್ರಮಿಸಿಕೊಂಡು ತಮ್ಮ ರಾಜ್ಯ ಸ್ಥಾಪಿಸಿದ್ದಾರೆ. ಹೀಗಾಗಿ ಪ್ರಜೆಗಳು ರಸ್ತೆಯ ಮೇಲೇ ನಿಂತು ಬಸ್ಸಿನ ನಿರೀಕ್ಷಣೆಯಲ್ಲಿದ್ದಾರೆ.  ಅಗೋ ಒಂದು ಟೂರಿಸ್ಟ್ ಐರಾವತವು ಬಂದು ರಸ್ತೆಯ ಬಹುಭಾಗವನ್ನು ಆಕ್ರಮಿಸಿಕೊಂಡು ನಿಂತಿತು. ಅದರ ಹಿಂದೆ ಬರುತ್ತಿರುವ ನೀಲಿ ಹಸಿರು ಕೆಂಪು ಬಸ್ಸುಗಳಲ್ಲಿ ತಮ್ಮದು ಯಾವುದು 3ಎಂದು ಜನರು ತಮ್ಮ.ಕತ್ತುಗಳನ್ನು ಎತ್ತೆತ್ತಿ ನೋಡುತ್ತಿದ್ದಾರೆ.  ವಿಧಾತನಲ್ಲಿ ಎಳ್ಳಷ್ಟಾದರೂ ಇನೋವೇಷನ್ ಪ್ರಜ್ಞೆ ಇದ್ದಿದ್ದರೆ ಜನರ ಕತ್ತುಗಳನ್ನು ಬೇಕಾದಾಗ ನೀಳವಾಗುವಂತೆ ಮತ್ತು ಬೇಡದಾಗ ಕುಗ್ಗುವಂತೆ ರೂಪಿಸುತ್ತಿದ್ದನು. ಸ್ಟೀವ್ ಜಾಬ್ಸ್ ಪರಬೊಮ್ಮನಿಗೆ ಖಂಡಿತವಾಗಿಯೂ ಈ ಸಲಹೆಯನ್ನು ಕೊಟ್ಟಿರಬಹುದು. ಬ್ರಹ್ಮನಂಥ  ಕ್ರಿಯೇಟಿವ್ ಜೀನಿಯಸ್ ಇದ್ದರೆ ಸಾಲದು. ಸ್ಟೀವ್‌ನಂಥ ಒಬ್ಬ ಪ್ರೋಗ್ರಾಮ್ ಮ್ಯಾನೇಜರ್ ಇರಬೇಕು, ಹೇಳುತ್ತೇನೆ ಕೇಳಿ.  


ಅಯ್ಯೋ ಅಲ್ಲಿ ನೋಡಿ. ಜನರು ಕಾದು ನಿಂತಿದ್ದ ಬಸ್  ಐರಾವತವು ಅಡ್ಡ ಬಂದ ಕಾರಣ ಅತ್ತಣಿಂದತ್ತಲೇ ಹೊರಟುಹೋಗುತ್ತಿದೆ! ,ಜನರು ಓಡಿಕೊಂಡು ಕೈಯಾಡಿಸುತ್ತಾ ಅದನ್ನು ಹಿಮ್ಮೆಟ್ಟುತ್ತಿದ್ದಾರೆ.


ನನ್ನ ಬಸ್ ಬಂದಿತು. ನನ್ನ ಕೈಯಲ್ಲಿರುವ ಬೆಳಗಿನ ಪತ್ರಿಕೆಯನ್ನು ಕೊಳವೆಯಾಕಾರದಲ್ಲಿ ಸುತ್ತಿ ಅದನ್ನು ಕತ್ತಿಯಂತೆ ಝಳಪಿಸುತ್ತಾ  ನಾನು ಚಾಲಕನ ಗಮನವನ್ನು ಸೆಳೆಯುವುದರಲ್ಲಿ ಸಫಲನಾಗಿದ್ದೇನೆ.  ದಿಗ್ವಿಜಯದ ನಗೆ ಬೀರುತ್ತಾ ನಾನು ಬಸ್ ಹತ್ತುತ್ತೇನೆ. ದಿನಪತ್ರಿಕೆಯ ಈ ಉಪಯುಕ್ತತೆಯ ಕಾರಣದಿಂದಲೇ ನಾನು ಇನ್ನೂ ನನ್ನ ಚಂದಾ ಮುಂದುವರೆಸುತ್ತಿದ್ದೇನೆ.  ಜಿಟಿಜಿಟಿ ಮಳೆಯ ದಿನಗಳಲ್ಲಿ  ಒಮ್ಮೊಮ್ಮೆ ನನಗೆ ದಿನಪತ್ರಿಕೆಯು ಕೊಡೆಯಾಗಿ ಕೆಲಸಕ್ಕೆ ಬರುತ್ತಿದೆ.  ಮಳೆನೀರು ಸೀಟಿನ ಮೇಲೆ ಬಿದ್ದಿದೆಯೇ? ಏಕೆ ಚಿಂತಿಸುವಿರಿ! ಜಾಹೀರಾತು ಪುಟಗಳನ್ನು ಹರಡಿ ಕೂಡಬಹುದು.  ಟ್ರಾಫಿಕ್ಕಿನಲ್ಲಿ ಸಿಕ್ಕಿಹಾಕಿಕೊಂಡು ನಿಮ್ಮ ಬುತ್ತಿಯನ್ನು ಬಸ್ಸಿನಲ್ಲೇ ತಿನ್ನಬೇಕಾದ ವಿಷಮ ಪರಿಸ್ಥಿತಿ ಬಂದಿದೆಯೇ? ಕೈಯೊರೆಸಲು ನೀರು ನ್ಯಾಪ್ಕಿನ್ ಇಲ್ಲವೆಂದು ಯೋಚಿಸುತ್ತಿರುವಿರಾ? ಆ ಡೊಂಕಣಬರಹದ ಪುಟವನ್ನು ಹೊರತೆಗೆಯಿರಲ್ಲ! ಸಿಕ್ಕಲಿ ಅದಕ್ಕೂ ಸದ್ಗತಿ!


ಸರಿಯಪ್ಪ ಇಷ್ಟು ಸಾಕು. ಇನ್ನು ಬಸ್ಸಿನಲ್ಲಿ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ.  ಫೇಸ್ ಬುಕ್ ಗೆಳೆಯರು ಹಾಕಿದ ತಿಂಡಿತೀರ್ಥ ಮದುವೆಮುಂಜಿ ಮೀಮುಸ್ಕಾಮು ಇತ್ಯಾದಿಗಳನ್ನು ನೋಡಿ ಲೈಕ್ ಒತ್ತಬೇಕಲ್ಲ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)