ದೂರವಾಗಿರು ನನ್ನಿಂದ ಎಂದು ನಿನ್ನಲ್ಲಿ ಪ್ರಾರ್ಥಿಸಿದರೂ

ಸಾನೆಟ್ಸ್ ಫ್ರಂ ದ ಪೋರ್ಚುಗೀಸ್ 
ಸಾನೆಟ್ - 6

ಮೂಲ ಇಂಗ್ಲಿಷ್ ಕವಿತೆ: ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್ 
ಕನ್ನಡಕ್ಕೆ: ಸಿ. ಪಿ. ರವಿಕುಮಾರ್ 

Image result for elizabeth browning
ಕವಿತಾಸ್ವಾದನೆ: ಇದು ಸಾನೆಟ್ಸ್ ಫ್ರಂ ದ ಪೋರ್ಚುಗೀಸ್ ಸಂಗ್ರಹದಲ್ಲಿ ಆರನೇ ಸಾನೆಟ್. ಹಿಂದಿನ ಸಾನೆಟ್ಟುಗಳ ಅನುವಾದವನ್ನು ಇದೇ ಬ್ಲಾಗಿನಲ್ಲಿ ಓದಬಹುದು. ಪ್ರಸ್ತುತ ಕವಿತೆಯಲ್ಲಿ ಕವಯಿತ್ರಿ ತನ್ನಲ್ಲಿ ಉಂಟಾದ ಬದಲಾವಣೆಯನ್ನು ತೋಡಿಕೊಳ್ಳುತ್ತಾಳೆ. ಅವಳಲ್ಲಿ ರಾಬರ್ಟ್ ಬ್ರೌನಿಂಗ್ ಅನುರಕ್ತನಾದಾಗ ಅವಳಿಗೆ ಮೊದಲು ಭಯವುಂಟಾಗುತ್ತದೆ. ತನ್ನ ಖಿನ್ನ ಜಗತ್ತಿನಲ್ಲಿ ಅವನಿಗೂ ಹಾನಿಯಾದರೆ ಎಂಬ ಭೀತಿ ಅವಳನ್ನು ಕಾಡುತ್ತದೆ. "ನನ್ನಿಂದ ದೂರವಿರು" ಎಂದು ಅವನಿಗೆ ಹೇಳಿದರೂ ತಾನು ಅವನಿಂದ ದೂರವಿರಬಲ್ಲೆನೇ ಎಂಬ ಅನುಮಾನ ಅವಳನ್ನು ಈಗ ಕಾಡುತ್ತಿದೆ. ತನ್ನ ಸರ್ವಸ್ವವೂ ಈಗ ಅವನಿಂದಲೇ ಎಂಬ ಸಮರ್ಪಣ ಭಾವವನ್ನು ಈ ಕವಿತೆಯಲ್ಲಿ ನೋಡಬಹುದು. 


ದೂರವಾಗಿರು ನನ್ನಿಂದ  ಎಂದು ನಿನ್ನಲ್ಲಿ ಪ್ರಾರ್ಥಿಸಿದರೂ 
ಇರಬೇಕಾಗಬಹುದೇನೋ ಮುಂದೆ ನಿನ್ನ ನೆರಳಿನಲ್ಲೇ. 
ನನ್ನ ಆತ್ಮಕ್ಕೀಗ ನನ್ನ ಬಳಿ ಕೆಲಸವಿಲ್ಲ ಯಾವುದೇ,
ಸ್ವಂತ  ಬಾಳೆಂಬುದು ನನಗಿನ್ನು ಮುಚ್ಚಿದ ಬಾಗಿಲು. 
ಶಾಂತಿ ಎಂಬುದು ಇನ್ನು ಸಿಕ್ಕಲಾರದು ನೀನಿಲ್ಲದೆ,
ಎತ್ತಲಾರೆನೇನೋ ನನ್ನ ಇಚ್ಛೆಯಿಂದ ನನ್ನ ಕಿರುಬೆರಳು,
ನಿನ್ನ ಕೈಬೆರಳಿನ ಸ್ಪರ್ಶಕ್ಕೆ  ಅದು ಹಾತೊರೆಯಬಹುದು. 
ಬಾಯ್ಬಿಡುವಂತೆ ತೋರುತ್ತಿದೆ ಇಳೆ ನಮ್ಮ ನಡುವೆ -
ಗೊಂದಲದಲ್ಲಿ ನನ್ನೊಳಗೆ ಸೇರಿಬಿಟ್ಟಿದೆ ನಿನ್ನ ಹೃದಯ,
ಎರಡೆರಡು ಸಲ ಹೊಡೆದುಕೊಳ್ಳುತ್ತಿದೆ ನನ್ನ ನಾಡಿ. 
ನನ್ನ ಕನಸು-ನನಸುಗಳೆಲ್ಲವೂ ಈಗ ನಿನ್ನ ಜೊತೆಗೂಡಿ -
ಹೇಗೆ ದ್ರಾಕ್ಷಿಯ ರುಚಿಯನ್ನೇ ಹೋಲುವುದೋ ಹಿಂಡಿದ ಮದ್ಯ. 
ಕೂಗಿ ಕರೆದಾಗ ದೇವರನ್ನು ಅವನಿಗೆ ಕೇಳುವುದು ನಿನ್ನದೂ ಹೆಸರು. 
ನನ್ನ ಕಣ್ಣಲ್ಲಿ ಕಾಣುವುದು ದೈವಕ್ಕೆ ನನ್ನ ನಿನ್ನ ಇಬ್ಬರದೂ ಕಣ್ಣೀರು. 



ಕಾಮೆಂಟ್‌ಗಳು

  1. Go from me. Yet I feel that I shall stand
    Henceforward in thy shadow. Nevermore
    Alone upon the threshold of my door
    Of individual life, I shall command
    The uses of my soul, nor lift my hand
    Serenely in the sunshine as before,
    Without the sense of that which I forbore, ..
    Thy touch upon the palm. The widest land
    Doom takes to part us, leaves thy heart in mine
    With pulses that beat double. What I do
    And what I dream include thee, as the wine
    Must taste of its own grapes. And when I sue
    God for myself, He hears that name of thine,
    And sees within my eyes, the tears of two.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)