ಬಲೂನುಗಳು
ಮೂಲ ಕವಿತೆ: ಮೊಸ್ತಫಾ ಇಬ್ರಾಹಿಂ (ಈಜಿಪ್ಟ್)
ಕನ್ನಡಕ್ಕೆ: ಸಿ. ಪಿ. ರವಿಕುಮಾರ್
ವಸ್ತು ಎಷ್ಟು ಗಟ್ಟಿಯಿದೆ ಎಂದು ಪರೀಕ್ಷಿಸಲು
ಕೆಲವೊಮ್ಮೆ ಅದನ್ನು ಮುರಿಯಬೇಕಾಗುತ್ತದೆ.
ನಮಗೆ ಅದು ಬೇಕಾದುದೋ ಎಂದು ಪರೀಕ್ಷಿಸಲು
ಕೆಲವೊಮ್ಮೆ ವಸ್ತುವನ್ನು ತ್ಯಜಿಸಬೇಕಾಗುತ್ತದೆ.
ನಂಬಿಕೆಗಾಗಿ ಪರಿತಪಿಸಿ ಅದೆಷ್ಟು ಜನ ಮಿತ್ರರ ಮೇಲೆ
ಹೊದಿಸಿದೆ ನೀನು ಸುಳ್ಳುಗಾರರೆಂಬ ಆರೋಪ?
ನಂಬಿಕೆಯನ್ನೇನೋ ಗಳಿಸಿಕೊಂಡೆ,
ಆದರೆ ಮಿತ್ರರನ್ನು ಕಳೆದುಕೊಂಡೆ ಪಾಪ!
ಶಕ್ತಿ ಮೀರಿ ಊದುತ್ತಾ ಅದೆಷ್ಟು ಬಲೂನುಗಳನ್ನು ಒಡೆದಿರಬಹುದು ನೀನು?
ಅದರ ಶಕ್ತಿಯ ಮಿತಿಯೇನೋ ಗೊತ್ತಾಯಿತು,
ಆದರೆ ನಿನ್ನ ಬಳಿ ಉಳಿದದ್ದೇನು ವ್ಯಥೆಯನ್ನು ಹೊರತು?
ನಾನು ಬಲೂನುಗಳನ್ನೇಕೆ ಊದುತ್ತೇನೆ ಎಂದು ನನಗೀಗ ಗೊತ್ತು.
ನಾನು ಹಂಬಲಿಸುತ್ತಿದ್ದೆ: ಸಿಕ್ಕುವುದೇ ಕೊನೆಯೇ ಇಲ್ಲದ ವಸ್ತು,
ನನಗೆಂದೂ ಮುಟ್ಟಲಾಗದ ತುದಿಯುಳ್ಳ ವಸ್ತು,
ಒರಗಿಕೊಂಡು ತಳ್ಳಿ ಬೀಳಿಸಿದರೂ ನಿಂತೇ ಇರುವ ಗೋಡೆಗಳು,
ಶಾಶ್ವತವಾದದ್ದು, ನಾನು ಪರೀಕ್ಷಿಸಿದರೂ ಒಡೆಯದ ವಸ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ