ನೀರಿನ ಬಣ್ಣ
ಮೂಲ ಹಿಂದಿ ಕವಿತೆ: ಮೋಹನ್ ರಾಣಾ
ಕನ್ನಡಕ್ಕೆ : ಸಿ. ಪಿ. ರವಿಕುಮಾರ್
ದಿನ ಬೆಳಗಾದರೆ ಸುರಿಯುವ ಮಳೆ
ತೊಳೆಯಲು ಬಂದಂತಿದೆ ನಮ್ಮೆಲ್ಲ ಶಾಶ್ವತ ಕಲೆ
ಆದರೆ ಅದಕ್ಕೆ ಸಾಧ್ಯವಾದದ್ದು
ಈ ಹಳೇ ಶರ್ಟಿನ ಬಣ್ಣವನ್ನು ಮಾಸಲು ಮಾಡಿದ್ದು
ಮತ್ತು ಗೋಡೆಗಳಿಂದ
ಕಳೆದ ಋತುಮಾನಗಳ ನೆನಪುಗಳನ್ನು
ತೊಳೆದು ಹಾಕಿದ್ದು, ಅಷ್ಟೇ.
ಇದು ಬೇಸಗೆಯಲ್ಲ,
ಶರತ್ಕಾಲವಲ್ಲ, ಚಳಿಗಾಲವೂ ಅಲ್ಲ:
ನಾನೇ ಕೆಲವೊಮ್ಮೆ ಗುರುತಿಸಿದರೂ
ಮರೆತುಬಿಡುತ್ತೇನೆ ಬೇಗ.
ಇಷ್ಟೊಂದು ಮಳೆಯ ನಂತರ
ನನ್ನ ಶರ್ಟಿನ ಎಲ್ಲಾ ಬಣ್ಣಗಳೂ ಹೋಗಿ
ಕೊನೆಗೆ ಉಳಿಯುತ್ತದೇನೋ
ನೀರಿನ ಬಣ್ಣ.
ಕವಿತೆಯ ಸ್ವಾರಸ್ಯ: ಮಳೆ ಬಂದಾಗ ಶರ್ಟಿನ ಬಣ್ಣ ಮಾಸುವುದು ಸಹಜ. ಮೊದಲು ಈ ಕವಿತೆಯನ್ನು ಅದರ ಸಾಧಾರಣ ಅರ್ಥದಲ್ಲಿ ಓದಿ. ನಂತರ ಮಳೆ ಮತ್ತು ಬಣ್ಣ ಇವುಗಳಿಗೆ ಯಾವುದಾದರೂ ವಿಶೇಷ ಅರ್ಥವಿದೆಯೇ ಎಂದು ಯೋಚಿಸಿ. ಪ್ರತಿನಿತ್ಯ ನಾವು ಅನೇಕ ಬಗೆಯ "ಮಳೆ"ಗಳನ್ನು ಎದುರಿಸುತ್ತೇವೆ - ಉದಾಹರಣೆಗೆ ನಮ್ಮ ಮೇಲೆ ಸುರಿಯುವ ಅಭಿಪ್ರಾಯಗಳ ಮಳೆ. ಇವು ನಮ್ಮಿಂದ ನಮ್ಮತನವನ್ನು ಸ್ವಲ್ಪಸ್ವಲ್ಪವೇ ಅಳಿಸುತ್ತಿವೆ ಎಂದು ನಿಮಗೂ ಅನ್ನಿಸಿರಬಹುದು. ಕವಿತೆಯನ್ನು ಈ ಬೆಳಕಿನಲ್ಲಿ ಹಿಡಿದು ನೋಡಿ. ಕವಿ ತಾನು ಋತುಮಾನಗಳನ್ನು ಮರೆತು ಬಿಡುತ್ತೇನೆ ಎಂದು ಹೇಳುತ್ತಿರುವುದು ಯಾಕೆ? ಋತುಮಾನಗಳನ್ನು ಗುರುತಿಸುವುದು ಕಷ್ಟವೇಕೆ ಆಗುತ್ತಿದೆ? ಬೇಸಗೆಯಲ್ಲಿ ಎ.ಸಿ. ಮತ್ತು ಚಳಿಗಾಲದಲ್ಲಿ ಹೀಟರ್ ಬಳಸುವವರಿಗೆ ಇದು ಸುಲಭವಾಗಿ ಅರ್ಥವಾಗುತ್ತದೆ!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ