ಕ್ಸು ಲಿಷೀ - ಮೂರು ಕವಿತೆಗಳು

ಮೂಲ: ಕ್ಸು ಲಿಷೀ (ಚೈನೀಸ್) 
ಕನ್ನಡಕ್ಕೆ : ಸಿ. ಪಿ. ರವಿಕುಮಾರ್ 

ಕವಿತೆ ಓದುವ ಮುನ್ನ:  ಫಾಕ್ಸ್ ಕಾನ್ ಕಂಪನಿಯ ಫ್ಯಾಕ್ಟರಿಯಲ್ಲಿ ಕಾರ್ಮಿಕನಾಗಿದ್ದ ಕ್ಸು ಲಿಷೀ (೧೯೯೦-೨೦೧೪) ಎಂಬ ತರುಣ ತನ್ನ ೨೪ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡ. ಈತನ ಹಾಗೇ ಶೆನ್ ಜೆನ್ ಪ್ರಾಂತದಲ್ಲಿ ಫಾಕ್ಸ್ ಕಾನ್ ಫ್ಯಾಕ್ಟರಿಗಳಲ್ಲಿ ಅನೇಕ ಕಾರ್ಮಿಕರು ತಮ್ಮ ದುರ್ಭರ ಜೀವನ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಾಗ ಪಾಶ್ಚಿಮಾತ್ಯ ಮಾಧ್ಯಮಗಳ ಗಮನ ಅತ್ತ ಹರಿಯಿತು.   ಒಟ್ಟು ಹದಿನೆಂಟು ಜನ ಫ್ಯಾಕ್ಟರಿಗಳ ಕಟ್ಟಡದ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದರು. ಇವರಲ್ಲಿ ೧೪ ಮಂದಿ ಸಾವನ್ನಪ್ಪಿದರು. ಇವರಲ್ಲಿ ಕ್ಸು ಲಿಷೀ ಕೂಡಾ ಒಬ್ಬ. ಮರಣದ ನಂತರ ಈತನ ಸ್ನೇಹಿತರು ಇವನ ಕವಿತೆಗಳನ್ನು ಅಚ್ಚುಮಾಡಿದರು. ಇವನ ಕವಿತೆಗಳಲ್ಲಿ ಫ್ಯಾಕ್ಟರಿ ಕಾರ್ಮಿಕರ ಕರಾಳ ಬದುಕಿನ ನೆರಳು ಗಾಢವಾಗಿದೆ. ಕವಿತೆಗಳಲ್ಲಿರುವ ಸೂಕ್ಷ್ಮತೆ ಮತ್ತು ಜಾಣ್ಮೆ ನಮ್ಮ ಮನಸ್ಸನ್ನು ಮಿಡಿಯುತ್ತವೆ.  ಈತನ ಮೂರು ಕವಿತೆಗಳ ಭಾಷಾಂತರ ಕೆಳಗೆ ಕೊಟ್ಟಿದೆ. 


ಕೆಳಕ್ಕೆ ಬಿದ್ದಾಗ ಸ್ಕ್ರೂಮೊಳೆ 

ಓವರ್ ಟೈಮ್ ರಾತ್ರಿಯಲ್ಲಿ
ಒಂದು ಸ್ಕ್ರೂಮೊಳೆ ಕೆಳಗೆ ಬಿದ್ದುಹೋಯಿತು
ಒಂದು ಸಣ್ಣ ಕಿಂಕಿಣಿ ಸದ್ದು, ಅಷ್ಟೆ.
ಯಾರೂ ಗಮನಿಸುವುದಿಲ್ಲ.
ಇಂಥದ್ದು ಹಿಂದೆಯೂ ಆಗಿದೆ.
ಇಂಥದೇ ರಾತ್ರಿಯಲ್ಲಿ
ಯಾರೋ ಒಬ್ಬರು ನೆಲಕ್ಕೆ ಬಿದ್ದಾಗ.


ಭವಿಷ್ಯವಾಣಿ 

ಹಳ್ಳಿಯ ಹಿರೀಕರು ಹೇಳುತ್ತಾರೆ,
ನಾನು ಅಜ್ಜನ ಹಾಗೇ ಕಾಣುತ್ತೇನಂತೆ.
ಪದೇಪದೇ ಕೇಳಿ ನಾನೂ ನಂಬತೊಡಗಿದ್ದೇನೆ.
ಹೋಲಿಕೆಗಳು ಕಾಣತೊಡಗಿವೆ ನನಗೂ
ಅಜ್ಜನ ಮತ್ತು ನನ್ನ ಮುಖಚರ್ಯೆಗಳಲ್ಲಿ,
ಸ್ವಭಾವದಲ್ಲಿ, ಹವ್ಯಾಸಗಳಲ್ಲಿ
ನಾವಿಬ್ಬರೂ ಒಂದೇ ಗರ್ಭದಿಂದ ಬಂದವರೇನೋ
ಎನ್ನುವಷ್ಟರಮಟ್ಟಿಗೆ

ಅವನಿಗೆ ಬೊಂಬುಕೋಲು ಎಂಬ ಅಡ್ಡಹೆಸರಿತ್ತು
ನನಗೆ ಅಡ್ಡಹೆಸರು ಮಡಿಕೋಲು

ಅವನು ತನ್ನ ಭಾವನೆಗಳನ್ನು ನುಂಗಿಕೊಳ್ಳುತ್ತಿದ್ದ
ನನ್ನದು ಅತಿವಿಧೇಯ ಸ್ವಭಾವ

ಅವನಿಗೆ ಒಗಟು ಬಿಡಿಸುವ 
ಹವ್ಯಾಸ 
ನನಗೆ ಭವಿಷ್ಯವಾಣಿಗಳಲ್ಲಿ ಆಸಕ್ತಿ

೧೯೪೩ರ ಶರತ್ಕಾಲದಲ್ಲಿ ಜಪಾನಿನ ಪಿಶಾಚಿಗಳು
ಆಕ್ರಮಣ ಮಾಡಿ ಅಜ್ಜನನ್ನು ಜೀವಂತ ಸುಟ್ಟುಹಾಕಿದರು
ಆಗ ಅವನಿಗೆ ೨೩ ವರ್ಷ.
ಈ ವರ್ಷ ನನಗೆ ೨೨ ತುಂಬಿ ಬೀಳುತ್ತದೆ ೨೩.

ಕೊನೆಯ ಸ್ಮಶಾನ 

ಯಂತ್ರವು ತಲೆಯಾಡಿಸುತ್ತಿದೆ ವಿದಾಯಪೂರ್ವಕವಾಗಿ. 

ವರ್ಕ್ ಶಾಪುಗಳಲ್ಲಿ ಶೇಖರಿಸಿಡಲಾಗಿದೆ 
ರೋಗಗ್ರಸ್ತ ಕಬ್ಬಿಣ
ಪರದೆಗಳ ಹಿಂದೆ ಪಗಾರ. 
ಹೇಗೆ ಯುವಕಾರ್ಮಿಕರು ತಮ್ಮ ಹೃದಯದ ತಳದಲ್ಲಿ 
ಬಚ್ಚಿಟ್ಟುಕೊಳ್ಳುತ್ತಾರೋ ಪ್ರೇಮವನ್ನು, ಹಾಗೆ. 
ವ್ಯವಧಾನವಿಲ್ಲದೆ ಅವರು ವ್ಯಕ್ತಗೊಳಿಸದ ಭಾವನೆಗಳು  
ಹುಡಿಯಾಗಿ ಉರುಳುತ್ತವೆ ಕೆಳಗೆ.

ಅವರ ಹೊಟ್ಟೆಗಳು ಕಬ್ಬಿಣದ ಎರಕ
ಅವುಗಳಲ್ಲಿ ತುಂಬಿದೆ ಸಲ್ಫ್ಯೂರಿಕ್ ಮತ್ತು ನೈಟ್ರಿಕ್ ಆಮ್ಲ 
ಅವರ ಕಣ್ಣಿನ ನೀರನ್ನೂ ಕಸಿದುಕೊಳ್ಳುತ್ತದೆ ಉದ್ಯಮ
ಜಾರಿ ಕೆಳಗೆ ಬೀಳುವ ಮುನ್ನ 

ಕಾಲ ಹರಿಯುತ್ತದೆ ಹೊಳೆಯಂತೆ. 
ಮಂಜಿನ ಮೋಡದಲ್ಲಿದ್ದಂತೆ ತಲೆ 
ಅವರು ದುಡಿಯುತ್ತಾರೆ, 
ಉತ್ಪನ್ನಗಳ ಭಾರಕ್ಕೆ ಜಗ್ಗುತ್ತದೆ ಅವರ ಆಯಸ್ಸು,
ನೋವು ಓವರ್ ಟೈಮ್ ದುಡಿಯುತ್ತದೆ ಹಗಲಿರುಳೂ 

ವಯಸ್ಸಿಗೆ ಮುಂಚೆಯೇ ತಲೆ ಸುತ್ತುವುದು ಸಾಮಾನ್ಯ 
ದುಡಿಮೆಗೆ ಕಿತ್ತುಬರುವ ಚರ್ಮ 
ಅಲ್ಯೂಮಿನಿಯಂ ಮಿಶ್ರಲೋಹದ ಪ್ಲೇಟುಗಳ ಮೇಲೆ 
ಪೊರೆಯಾಗಿ ಶೇಖರಗೊಳ್ಳುತ್ತದೆ


ಕೆಲವರು ಹೇಗೋ ತಡೆದುಕೊಳ್ಳುತ್ತಾರೆ
ಉಳಿದವರು ಜಡ್ಡುಬಿದ್ದಿದ್ದಾರೆ
ನಾನು ಇವರಿಬ್ಬರ ನಡುವೆ ತೂಕಡಿಸುತ್ತಾ ಕಾಯುತ್ತಿದ್ದೇನೆ 
ನನ್ನ ಯೌವ್ವನದ ಕೊನೆಯ ಸ್ಮಶಾನ. 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)