ಹೀಗೇ ಒಮ್ಮೆ ಮೆಲುಕು ಹಾಕುತ್ತಿದ್ದೆ ಥಿಯೋಕ್ರಿಟಸ್ ಹಾಡಿದ ಪಂಕ್ತಿ

ಸಾನೆಟ್ಸ್  ಫ್ರಂ ದ ಪೋರ್ಚುಗೀಸ್ - 1 
ಮೂಲ: ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್ 
ಕನ್ನಡಕ್ಕೆ: ಸಿ. ಪಿ. ರವಿಕುಮಾರ್ 

Image result for browning elizabeth barrett

ಕವಿತಾಸ್ವಾದನೆ:  ಮುಂದೆ ರಾಬರ್ಟ್ ಬ್ರೌನಿಂಗ್ ಕವಿಯ ಪತ್ನಿಯಾದ ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್ 1845-1846 ಅವಧಿಯಲ್ಲಿ ಬರೆದ 44 ಸಾನೆಟ್ಟುಗಳ ಸಂಗ್ರಹದ ಮೊದಲ ಸಾನೆಟ್ ಇದು. ಈ ಸಾನೆಟ್ಟುಗಳು ತೀರಾ ವೈಯಕ್ತಿಕವೆಂಬ ಕಾರಣ ಅವುಗಳನ್ನು ಅಚ್ಚು ಮಾಡಲು ಎಲಿಜಬೆತ್ ಅನುಮಾನಿಸಿದಳಂತೆ. ಆಗ ರಾಬರ್ಟ್ ಬ್ರೌನಿಂಗ್ "ಇವು ಶೇಕ್ಸ್ ಪಿಯರ್ ಕವಿಯ ಸಾನೆಟ್ಟುಗಳ ತರುವಾಯ ಬರೆಯಲಾದ ಅತ್ಯಂತ ಶ್ರೇಷ್ಠ ಸಾನೆಟ್ಟುಗಳು" ಎಂದು ಹುರುದುಂಬಿಸಿ ಅಚ್ಚು ಹಾಕಿಸಿದನಂತೆ.  ಸ್ವಲ್ಪವಾದರೂ ಮುಚ್ಚುಮರೆ ಇರಲೆಂದು ಆಕೆ ಅವುಗಳನ್ನು ಬೇರೆ ಭಾಷೆಯಿಂದ ಅನುವಾದಿಸಿದ ಸಾನೆಟ್ಟುಗಳೆಂದು ಬಿಂಬಿಸಿದಳಂತೆ. ಹೀಗಾಗಿ "ಪೋರ್ಚುಗೀಸ್ ಸಾನೆಟ್ಟುಗಳು" ಎಂಬ ಹೆಸರು ಕೊಡಲಾಯಿತಂತೆ. "ನನ್ನ ಪುಟ್ಟ ಪೋರ್ಚುಗೀಸ್" ಎಂಬುದು  ರಾಬರ್ಟ್ ಬ್ರೌನಿಂಗ್ ಅವಳನ್ನು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು ಕೂಡಾ. ಪ್ರಸ್ತುತ ಕವಿತೆಯಲ್ಲಿ ಒಂದು ಹೆಣ್ಣು ತನ್ನ ಜೀವನದ ಕಳೆದ ವರ್ಷಗಳನ್ನು ಪರಾಮರ್ಶಿಸುತ್ತಾ ಅವುಗಳಲ್ಲಿ ತುಂಬಿರುವ ದುಃಖವನ್ನು ನೆನೆದು ಕಣ್ಣೀರು ಹಾಕುತ್ತಾಳೆ. ಆಗ ಅವಳಿಗೊಂದು ಆಶ್ಚರ್ಯ ಕಾದಿದೆ. 


ಹೀಗೇ ಒಮ್ಮೆ ಮೆಲುಕು ಹಾಕುತ್ತಿದ್ದೆ ಥಿಯೋಕ್ರಿಟಸ್ ಹಾಡಿದ ಪಂಕ್ತಿಗಳು 
ಎಲ್ಲರೂ ಹಂಬಲಿಸುವ, ಮಾಧುರ್ಯ ತುಂಬಿದ ಸಂವತ್ಸರಗಳ ಕುರಿತು,
ಚಾಚಿದ ಪ್ರತಿಯೊಂದರ ಕೈಯಲ್ಲೂ ಇರುತ್ತದಂತೆ ಉಡುಗೊರೆಯೊಂದು,
ಚಿಕ್ಕವರು ದೊಡ್ಡವರೆನ್ನದೆ ಪ್ರತಿಯೊಬ್ಬ ಮರ್ತ್ಯನಿಗೂ: 
 ನೆನೆಯುತ್ತಿರುವಾಗ ಅವನ ಪುರಾತನ ಕಾವ್ಯದ ಸಾಲು,
ಕಾಣತೊಡಗಿತು ಹನಿಗೂಡಿದ ಕಣ್ಗಳಿಗೆ ನನ್ನದೇ ಬಾಳು, 
ನನ್ನ ಸಿಹಿ ಸಂವತ್ಸರಗಳಲ್ಲಿ ತುಂಬಿಕೊಂಡಿದ್ದ ವಿಷಣ್ಣತೆ, ನೋವು,
ಎರಡೂ ಸೇರಿ ನನ್ನಿರುವಿನ ಮೇಲೆ ಕೌಚಿದ ಕರಿನೆರಳು -
ಸ್ಪಷ್ಟವಾಗತೊಡಗಿದಾಗ ಅದರ ರೂಪರೇಖೆ  ಅಳುತ್ತಲೇ 
ಅರಿವಾಯಿತು ನನಗೆ ಹಿಂದೆ ಯಾರೋ ಸರಿದಾಡಿದಂತೆ,
ಯಾರೋ ನನ್ನ ಕೂದಲು ಬಾಚಿ ಹಿಂದಕ್ಕೆಳೆದಂತೆ,
"ನಿನ್ನನ್ನೀಗ ಹಿಡಿದವರು ಯಾರೆಂದು ನಿನ್ನ ಊಹೆ?"
ಅಧಿಕಾರಯುತ ವಾಣಿಗೆ ಹೆದರಿ ತೊದಲಿದಾಗ "ಸಾವೇ?"
"ಊಹೂಂ! ಪ್ರೇಮ!" ಎಂದು ಬೆಳ್ಳಿಯ ಕಂಠ ಉಲಿಯಬೇಕೇ!

(c) 2017, ಸಿ. ಪಿ. ರವಿಕುಮಾರ್ 



ಕಾಮೆಂಟ್‌ಗಳು

  1. I thought once how Theocritus had sung
    Of the sweet years, the dear and wished-for years,
    Who each one in a gracious hand appears
    To bear a gift for mortals, old or young:
    And, as I mused it in his antique tongue,
    I saw, in gradual vision through my tears,
    The sweet, sad years, the melancholy years,
    Those of my own life, who by turns had flung
    A shadow across me. Straightway I was ’ware,
    So weeping, how a mystic Shape did move
    Behind me, and drew me backward by the hair;
    And a voice said in mastery, while I strove–
    “Guess now who holds thee!”–“Death,” I said.
    But, there,
    The silver answer rang, “Not Death, but Love.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)