ಗುಡಿಸಿಲಿನಲ್ಲಿ ಒಪ್ಪುವುದೇ ನಿನ್ನಪೂರ್ವ ಗಾನಧನ?
ಸಾನೆಟ್ಸ್ ಫ್ರಂ ದ ಪೋರ್ಚುಗೀಸ್ - 4
ಮೂಲ ಇಂಗ್ಲಿಷ್ ಕವಿತೆ: ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್
ಕನ್ನಡಕ್ಕೆ : ಸಿ. ಪಿ. ರವಿಕುಮಾರ್
ಕವಿತಾಸ್ವಾದನೆ: ಇದು ಸಾನೆಟ್ಸ್ ಫ್ರಂ ದ ಪೋರ್ಚುಗೀಸ್ ಎಂಬ ಸಂಗ್ರಹದ ನಾಲ್ಕನೇ ಸಾನೆಟ್. ಹಿಂದಿನ ಸಾನೆಟ್ಟುಗಳ ಅನುವಾದ ಇದೇ ಬ್ಲಾಗಿನಲ್ಲಿ ಓದಬಹುದು. ತನ್ನ ಪ್ರೇಮವನ್ನು ಬಯಸಿ ಬಂದ ಪ್ರಿಯಕರನ ನಡೆ ಕವಯಿತ್ರಿಯನ್ನು ಚಕಿತಗೊಳಿಸುತ್ತದೆ. ರಾಬರ್ಟ್ ಬ್ರೌನಿಂಗ್ ವಿಕ್ಟೋರಿಯಾ ಮಹಾರಾಣಿಯ ಕಾಲದ ಒಬ್ಬ ಅಗ್ರಮಾನ್ಯ ಕವಿ ಮತ್ತು ನಾಟಕಕಾರ. ಅವನ ಸ್ಥಾನಮಾನವೇನು, ತನ್ನ ಸ್ಥಾನಮಾನವೇನು ಎಂಬ ಚಿಂತೆ ಕವಯಿತ್ರಿಯನ್ನು ಆವರಿಸಿದೆ. ತನ್ನ ಮನಸ್ಸಿನಲ್ಲಿರುವ ಖಿನ್ನತೆಯನ್ನು ಕುರಿತು ಕೂಡಾ ಅವಳಿಗೆ ಅರಿವಿದೆ. ತನ್ನನ್ನು ಬಯಸಿಬಂದ ಪ್ರಿಯಕರನಿಗೆ ನಿಜಸ್ಥಿತಿಯ ಅರಿವು ಮಾಡಿಕೊಡುವುದು ಕವಯಿತ್ರಿಯ ಆಶಯ.
ಎಲ್ಲಿ ಹರಿಯುವುದೋ ನಿನ್ನ ಉತ್ಕೃಷ್ಟ ಕಾವ್ಯವಾಚನದ ಹೊಳೆ
ನರ್ತಿಸುವ ಜೋಡಿಗಳು ನಿಲ್ಲಿಸಿ ತಮ್ಮ ನರ್ತನ ಅರ್ಧದಲ್ಲೇ
ಆಸ್ವಾದಿಸುತ್ತವಲ್ಲ ನಿನ್ನ ತುಟಿಗಳಿಂದ ಹೊಮ್ಮುವ ದಿವ್ಯಗಾನ!
ನಾಚುತ್ತಿದೆ ನೀನೀಗ ತಟ್ಟುತ್ತಿರುವ ನನ್ನ ಮನೆಬಾಗಿಲಿನ ಚಿಲಕ
ನಿನ್ನ ಕೈಸ್ಪರ್ಶಕ್ಕೆ ಅನರ್ಹವೆಂದು ತಾನು! ಯೋಚಿಸು ಒಂದು ಕ್ಷಣ
ಈ ಗುಡಿಸಿಲಿನಲ್ಲಿ ಒಪ್ಪುವುದೇ ನಿನ್ನಪೂರ್ವ ಗಾನಧನ?
ಇಲ್ಲಿ ಮನೆ ಮಾಡಿಹುದು ಕತ್ತಲಿನಲ್ಲಿ ಗೂಕರಿಸುವ ಘೂಕ!
ನೋಡು ಸರಿಯಾಗಿ ಇನ್ನೊಮ್ಮೆ ನೀನು ಆಯ್ದುಕೊಂಡ ಮನೆ,
ಚೀರುತ್ತವೆ ಅರೆಗತ್ತಲಿನಲ್ಲಿ ತೂಗುವ ಬಾವಲಿಗಳ ಜೊತೆ,
ನಿನ್ನ ಕೊಳಲಿನ ಮೇಲೆ ಹರಿದಾಡುತ್ತಿದೆ ನನ್ನ ಮಿಡತೆ,
ಶ್! ಮಾತಾಡಿದರೆ ಮೊಳಗುತ್ತದೆ ಮರುದನಿ ಒಡನೆ,
ಕವಿದಿರುವ ಮೌನಕ್ಕೆ ಸಾಕ್ಷಿ. ಇಲ್ಲಿ ಕೇಳಿಬರುವ ಒಂದೇ ಸದ್ದು
ಒಳದನಿಯೊಂದು ಒಳಗೊಳಗೇ ಒಂಟಿಯಾಗಿ ಬಿಕ್ಕಿದ್ದು.
(c) 2017, ಸಿ. ಪಿ. ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ