ಮೂರನೆಯ ಜಾವ

Man Standing on Clif
ಕವಿತೆಯ ಸ್ವಾರಸ್ಯ: ಪ್ರಶ್ನೆಗಳನ್ನು ಕೇಳುವುದು ಮನುಷ್ಯನ ಸ್ವಭಾವ. ವಿಜ್ಞಾನಕ್ಕೆ ಪ್ರತಿಯೊಂದು ವಿಷಯವನ್ನೂ ಕುರಿತು ಅದಮ್ಯ ಕುತೂಹಲ. ತಾರೆಗಳಿಂದ ಬಂದ ಬೆಳಕು ಅದೆಷ್ಟೋ ಕೋಟಿ ವರ್ಷಗಳ ಹಿಂದೆ ಹುಟ್ಟಿದ್ದು ಎನ್ನುತ್ತದೆ ವಿಜ್ಞಾನ. ಈಗ ನಮಗೆ ಕಾಣುವುದು ಹಿಂದೆಂದೋ ನಡೆದದ್ದರ ಪ್ರತಿಫಲನ.  ಒಂದು ರಾತ್ರಿ ಕವಿಗೆ ಮೂರನೆಯ ಜಾವದಲ್ಲಿ ಎಚ್ಚರವಾದಾಗ ಕಿಟಕಿಯಿಂದ ತಾರೆಗಳನ್ನು ನೋಡುತ್ತಾನೆ. ಅವನಿಗೆ ತಾರೆಗಳ ಬೆಳಕಿನ ಕುರಿತಂತೆ ಪ್ರಶ್ನೆಯೊಂದು ಹೊಳೆಯುತ್ತದೆ.  ತಾನೂ ಜೀವಿಸುತ್ತಿರುವುದು ಯಾವುದೋ  ಹಳೆಯದನ್ನೇ ಎಂಬ ಆಲೋಚನೆ ಅವನಿಗೆ ಬರುತ್ತದೆ ("ಪುನರಪಿ ಜನನಂ").  ಪ್ರಶ್ನೆಗಳನ್ನು ಕೇಳುತ್ತಾ ವಸ್ತುವಿನ ತೀರಾ ಹತ್ತಿರಕ್ಕೆ ಬಂದಾಗ ಉತ್ತರ ನಮಗೆ ದಕ್ಕುವುದೇ? ಎಲ್ಲವೂ ಗೋಜಲಾಗಿ "ಅಳಿಸಿಹೋಗುತ್ತಲೇ ಇದ್ದವು ಚಹರೆಯಿಂದ ಪದಗಳು." 


 ಮೂರನೆಯ ಜಾವ 


ಮೂಲ ಹಿಂದಿ ಕವಿತೆ: ಮೋಹನ್ ರಾಣಾ 
ಕನ್ನಡಕ್ಕೆ : ಸಿ. ಪಿ. ರವಿಕುಮಾರ್ 

ನಾನು ತಾರೆಗಳನ್ನು ನೋಡಿದಾಗ ದೂರದಲ್ಲಿ 
ನನ್ನ ಮತ್ತು ಅವುಗಳ ನಡುವಿನ ದೂರದಿಂದ 
ಅವು ನನಗೆ ಕಂಡದ್ದು ಈ ಕ್ಷಣದಲ್ಲಿ 
ಮಿನುಗುವ ಕಳೆದುಹೋದ ಕ್ಷಣಗಳಂತೆ 
ಕತ್ತಲಿನ ಅನಂತತೆಯಲ್ಲಿ 
ಬೆಳಗಿನ ಬೆನ್ನು ಹತ್ತಿದ ರಾತ್ರಿಯಲ್ಲಿ 
ಈ ಮೂರನೆಯ ಜಾವ 


ನನಗೆ ನಿರ್ಧರಿಸಲು ಸಾಧ್ಯವಾಗದು 

 ಜೀವನವನ್ನು ಜೀವಿಸುತ್ತಿದ್ದೇನೋ ಇದೇ ಮೊದಲ ಸಲ 
ಅಥವಾ ಇದನ್ನು ಮರೆತು ಜೀವಿಸುತ್ತಾ 
ಪುನರಾವರ್ತಿಸುತ್ತಿದೇನೋ 
ಉಸಿರಿನ ಯಾವುದೋ ಹಳೆಯ ಕ್ಷಣವನ್ನೇ ಸದಾ 

ಮೀನು ಕೂಡಾ ನೀರು ಕುಡಿಯುತ್ತದೋ 
ಸೂರ್ಯನಿಗೂ ಸೆಕೆಯಾಗುತ್ತದೋ 
ಬೆಳಕಿಗೂ ಒಮ್ಮೊಮ್ಮೆ ಕಾಣುತ್ತದೋ ಕತ್ತಲು 
ಮಳೆಯೂ ಕೆಲವೊಮ್ಮೆ ನೆನೆಯುತ್ತದೋ 
ನನ್ನ ಹಾಗೆ ಕನಸುಗಳೂ ಪ್ರಶ್ನೆಗಳನ್ನು ಕೇಳುತ್ತವೋ ನಿದ್ರೆಯನ್ನು ಕುರಿತು 

ದೂರ ದೂರ ಬಹಳ ದೂರ  ಸಾಗಿದೆ ನಾನು
ತಾರೆಗಳನ್ನು ನೋಡಿದಾಗ ಬಹಳ ಹತ್ತಿರದಿಂದ 
ಇಡೀ ದಿವಸ ಮಳೆ ಸುರಿಯುತ್ತಲೇ ಇತ್ತು 
 ಅಳಿಸಿಹೋಗುತ್ತಲೇ ಇದ್ದವು ನಿನ್ನ ಚಹರೆಯಿಂದ ಪದಗಳು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)