ನನ್ನ ಗೆಳೆಯ


ಮೂಲ: ವಿಲಿಯಮ್ ಆಗ್ಯುದೆಲೋ (ಕೊಲಂಬಿಯಾ ದೇಶ, ದಕ್ಷಿಣ ಅಮೆರಿಕಾ)
ಕನ್ನಡಕ್ಕೆ: ಸಿ. ಪಿ. ರವಿಕುಮಾರ್ 

Image result for colombia hacienda

ಹಿನ್ನೆಲೆ: ಮಾದಕವಸ್ತುಗಳನ್ನು ರಫ್ತು ಮಾಡುವ ಧಂದೆಯೇ  ದೊಡ್ಡದಾಗಿರುವ ಕೊಲಂಬಿಯಾ ರಾಷ್ಟ್ರದಲ್ಲಿ "ಡ್ರಗ್ ಲಾರ್ಡ್" ಗಳದ್ದೇ ರಾಜ್ಯ. ಇಂಥ ಕಡೆ ನಡೆದ ಒಂದು ಮಾನವೀಯ ದುರಂತವನ್ನು ಈ ಕವಿತೆ ಹೇಳುತ್ತದೆ. ಹುಟ್ಟಾ ಕೃಷಿಕನಾದ ಒಬ್ಬ ಸಾಮಾನ್ಯ ರೈತನ ಜೀವನ ಹೇಗೆ ಬದಲಾಗಿಹೋಯಿತು ಎಂಬುದರ ಉಲ್ಲೇಖ ಈ ಕವಿತೆಯಲ್ಲಿದೆ. 


ಟೊಮಾಸ್ ಆರ್ಗ್ವೆಲ್ಲೋ ಸ್ಯಾಂಡೋವಾಲ್, ಅಧ್ಯಕ್ಷರ ಸೋದರಳಿಯ,
ನೋಡಲು ಒಳ್ಳೆ ಪುರಾತನ ಗ್ರೀಕ್ ಮೂರ್ತಿಯ ಹಾಗಿದ್ದಾನೆ,
ಮನೆಯ ಬಾಗಿಲಷ್ಟೇ ಎತ್ತರ, ಎದೆಯ ಮೇಲೆ ಹೊರೆ ರೋಮ,
ತೊಟ್ಟ ಒಣಹುಲ್ಲಿನ  ಟೊಪ್ಪಿಗೆಯ ಕೆಳಗೆ ಹೊಂಬಣ್ಣದ ಹೆಲ್ಮೆಟ್, 
ಗದ್ದದ ತುಂಬಾ ಹರಡಿದ ಬೆಳ್ಳಿಬಣ್ಣದ ಒತ್ತಾದ ಗಡ್ಡ,
ಬೆಕ್ಕಿನ ಕಣ್ಣುಗಳಲ್ಲಿಲ್ಲ ಕಿಂಚಿತ್ತೂ ಭಯ.

ಇವನ ಪಳಗಿದ ಕಣ್ಣು ನೋಡಿದ ಕೂಡಲೇ 
ಲೆಕ್ಕ ಹಾಕುತ್ತದೆ ಆಕಳಿನ ಪೃಷ್ಠದ ಅಗಲ. 
ಹುಲ್ಲಿನಲ್ಲಿ ಗುರುತಿಸುತ್ತಾನೆ ಜಿಂಕೆಯ ಹೆಜ್ಜೆ ,
ಅದು ಎಳೆಹುಲ್ಲಿಗೆ ಬಾಯಿ ಹಾಕಿದ ಸ್ಥಾನ,
ಆರ್ಮಾಡಿಯೋ ವಾಸಿಸುವ ಗುಹೆ, ಶಾಡ್ ಮೀನಿನ ಸಂಚಾರವನ್ನು
ದೂರದಿಂದಲೇ ಗುರುತಿಸಬಲ್ಲ, 
ರೈಫಲ್ ಹಿಡಿದ ರೀತಿಯಿಂದಲೇ  ಗುರಿ ಹೇಳಬಲ್ಲ,
ಮಚ್ಚಿನ ಹೊಡೆತವನ್ನು ವಿಮರ್ಶಿಸಬಲ್ಲ.

ಹೆಣ್ಣು ಕುದುರೆಮರಿಯ ಕಾಲು ನೀವುತ್ತಾ
ಪ್ರೀತಿಯಿಂದ  ಪಳಗಿಸುತ್ತಾನೆ.
ನಡುನಡುವೆ ಮದೇರೋ ಮರಗಳನ್ನು ನೆಟ್ಟು
ಅವನು ಕಟ್ಟುವ ಬೇಲಿಗಳು ಭದ್ರವಾಗಿರುತ್ತವೆ,
ಬೆಟ್ಟಕ್ಕೆ ಹೋದಾಗ  ನಿಮಗೆ ಬಾಯಾರಿದರೆ
ಪೊದೆಗಳ ಮೇಲೆ ಬಿದ್ದ  ಶುದ್ಧ ನೀರನ್ನು ಕುಡಿಯಲು ಕೊಡುತ್ತಾನೆ.

ಅವನ ಸುಂದರ ಬಂಗಲೆಯನ್ನು
ಅವರು ತೆಗೆದುಕೊಂಡರು.
ಅಲ್ಲಿ ಅವನೀಗ ಆಳಾಗಿ ದುಡಿಯುತ್ತಾನೆ.
ಟೊಮಾಸ್ ಆರ್ಗ್ವೆಲ್ಲೋ ಸ್ಯಾಂಡೋವಾಲ್
ತನ್ನ ಬಡತನವನ್ನು ಕುರಿತು ಮಾತಾಡುತ್ತಾನೆ
ರಾಜಮನೆತನದವರು ತಮ್ಮ ಪೂರ್ವಜರ ಬಗ್ಗೆ ಮಾತಾಡುವ ಹಾಗೆ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)