ಮೇಲೆತ್ತಿದಂತೆ ಎಲೆಕ್ಟ್ರಾ ಚಿತಾಭಸ್ಮಕರಂಡಕವನ್ನು

ಸಾಣೆಟ್ಸ್ ಫ್ರಂ ದ ಪೋರ್ಚುಗೀಸ್ - ಸಾನೆಟ್ 5 
ಮೂಲ ಇಂಗ್ಲಿಷ್ ಕವಿತೆ: ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್ 
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ 



ಕವಿತಾಸ್ವಾದನೆ:  ಇದು ಸಾನೆಟ್ಸ್ ಫ್ರಂ ದ ಪೋರ್ಚುಗೀಸ್ ಎಂಬ ಸಂಗ್ರಹದ ಐದನೇ ಸಾನೆಟ್.  ಹಿಂದಿನ ಸಾನೆಟ್ಟುಗಳ ಅನುವಾದ ಇದೇ ಬ್ಲಾಗಿನಲ್ಲಿ  ಓದಬಹುದು. ಈ  ಸಾನೆಟ್ಟಿನಲ್ಲೂ ಕವಯಿತ್ರಿಯು ತನ್ನ ಅಳುಕನ್ನು ಹೊರಗೆಡಹುತ್ತಾಳೆ. ರಾಬರ್ಟ್ ಬ್ರೌನಿಂಗ್ ಅವಳಲ್ಲಿ ತನ್ನ ಪ್ರೇಮವನ್ನು ತೋಡಿಕೊಂಡಿದ್ದಾನೆ. ಆದರೆ ತನ್ನೊಳಗಿನ ದುಃಖವು ಅವನಿಗೆ ಹಾನಿ ಮಾಡಬಹುದೆಂಬ ಭೀತಿ ಕವಯಿತ್ರಿಯನ್ನು ಕಾಡುತ್ತದೆ. ಚಿತಾಭಸ್ಮವನ್ನು ಹೊತ್ತ ಹೆಣ್ಣೊಬ್ಬಳ ಚಿತ್ರವನ್ನು ಈ ಸಾನೆಟ್ಟಿನಲ್ಲಿ ಬಳಸಲಾಗಿದೆ. ಗ್ರೀಕ್ ನಾಟಕವೊಂದರ ನಾಯಕಿ ಎಲೆಕ್ಟ್ರಾ ತನ್ನ ತಂದೆಯ ಚಿತಾಭಸ್ಮವನ್ನು ಕರಂಡಕದಲ್ಲಿ ಹೊತ್ತಳಂತೆ. ಕವಯಿತ್ರಿಯೂ ತನ್ನ ಹೃದಯದಲ್ಲಿ ಇಂಥದ್ದೇ ಯಾವುದೋ ನೋವನ್ನು ಹೊತ್ತಿದ್ದಾಳೆ.  







ಹಿಂದೊಮ್ಮೆ ಎಲೆಕ್ಟ್ರಾ ಮೇಲೆತ್ತಿದಂತೆ ಚಿತಾಭಸ್ಮಕರಂಡಕವನ್ನು 
ನನ್ನ ಹೃದಯದ ಭಾರವನ್ನು ತುಟಿಕಚ್ಚಿ ಮೇಲೆತ್ತಿ  
ಸುರಿಯುವೆನು ನಿನ್ನ ಪಾದಗಳಲ್ಲಿ ಹೊಗೆಯಾಡುವ ಬೂದಿ 
ನಿನ್ನ ಕಣ್ಣುಗಳಲ್ಲಿ ನೆಟ್ಟು ನನ್ನ ಕಣ್ಣು 
ಇದೋ ನೋಡು ನನ್ನೊಳಗೆ ಹುದುಗಿದ್ದ ದುಃಖ  
ಹೇಗೆ ಮಿನುಗುತ್ತಿವೆ ನೋಡು ಹಾರಾಡುವ ಕೆಂಪುಕಿಡಿ
ಕಂದುಬಣ್ಣದ ಬೂದಿಯ ಹಿನ್ನೆಲೆಯಲ್ಲಿ; ನಿನ್ನ ಕಾಲಿನ ಹಿಮ್ಮಡಿ 
ತುಳಿದು ನಂದಿಸುತ್ತಾ ಸಾಗಿದರೆ ಕೂಡಬಹುದೇನೋ ಲೆಕ್ಕ. 
ನೀನು ಕಾಯುತ್ತಾ ಕುಳಿತೆಯಾದರೆ ನನ್ನ ಪಕ್ಕ 
ಬೀಸುವ ಗಾಳಿಗೆ ಮೇಲೆದ್ದು ಭಸ್ಮದ ಹುಡಿ 
ಮಲೀನಗೊಳಿಸೀತು ನಿನ್ನ ಕೀರ್ತಿಕೌಮುದಿ
ನಿನ್ನ ಶಿರಮುಕುಟವೂ ನೀಡಲಾರದು ನಿನಗೆ ಶ್ರೀರಕ್ಷ ,
ದಹಿಸಬಹುದು ನಿನ್ನ ಕೀರ್ತಿಶಿಖೆ ಬೂದಿಯೊಳಗಿನ ಕೆಂಡ 
ಹೊರಡು! ದೂರವಿರುವುದೇ ಒಳಿತು ಓ ಗೆಳೆಯ, ನನ್ನಿಂದ. 

(c) 2017, ಸಿ. ಪಿ. ರವಿಕುಮಾರ್ 

ಕಾಮೆಂಟ್‌ಗಳು

  1. I lift my heavy heart up solemnly,
    As once Electra her sepulchral urn,
    And, looking in thine eyes, I overturn
    The ashes at thy feet. Behold and see
    What a great heap of grief lay hid in me,
    And how the red wild sparkles dimly burn
    Through the ashen greyness. If thy foot in scorn
    Could tread them out to darkness utterly,
    It might be well perhaps. But if instead
    Thou wait beside me for the wind to blow
    The grey dust up, . . . those laurels on thine head,
    O my Belovèd, will not shield thee so,
    That none of all the fires shall scorch and shred
    The hair beneath. Stand farther off then! go.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)