ಶಾಂತಿ
ಕವಿತಾಸ್ವಾದನೆ: ಬೇಕೆಂದರೆ ಮೊದಲು ಕವಿತೆಯನ್ನು ಓದಿ ಆನಂತರ ಈ ಟಿಪ್ಪಣಿಯನ್ನು ಓದಿ. ಡಯಾನಾ ಆನ್ಫಿಮಿಯಾಡಿ ಜಾರ್ಜಿಯಾ ದೇಶದ ಕವಯಿತ್ರಿ. ಈ ಕವಿತೆಯನ್ನು ಎರಡು ಸ್ತರಗಳಲ್ಲಿ ನೋಡಬಹುದು. ಮೊದಲನೆಯದು ವ್ಯಕ್ತಿಗತ ಸ್ತರ. ನಮ್ಮ ಬದುಕಿನಲ್ಲಿ ಶಾಂತಿಯನ್ನು ನಾವು ಅನುಭವಿಸಬೇಕಾದರೂ ನೋವು ಮತ್ತು ಭೀತಿಗಳ ನಡುವೆಯೇ ಎಂಬುದು ಒಂದು ಧ್ವನಿ. ನಾಳೆ ಏನಾಗುತ್ತದೋ ಎಂಬ ಭೀತಿಯಲ್ಲೇ ಇಂದು ಎಲ್ಲರೂ ಬದುಕುತ್ತಿದ್ದೇವೆ. ಇನ್ನೊಂದು ಸ್ತರದಲ್ಲಿಯೂ ಕವಿತೆಯನ್ನು ನೋಡಬಹುದು. ಇದಕ್ಕಾಗಿ ಜಾರ್ಜಿಯಾ ದೇಶದ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕು. ಟರ್ಕಿ, ಆರ್ಮೀನಿಯಾ, ರಷ್ಯಾ ಇವುಗಳನ್ನು ಹೊಂದಿಕೊಂಡಿದೆ ಜಾರ್ಜಿಯಾ. ಹಿಂದೊಮ್ಮೆ ರಷ್ಯಾ ದೇಶದೊಂದಿಗೆ ಯುದ್ಧದಲ್ಲಿ ಪಾಲ್ಗೊಂಡಿದ್ದ ಜಾರ್ಜಿಯಾಗೆ ಸದಾ ರಷ್ಯಾ ದೇಶದ ಭಯ ಕಾಡುತ್ತಲೇ ಇರುತ್ತದೆ. ಪೂರ್ವ ಯೂರೋಪಿನಲ್ಲಿದ್ದರೂ ಪಾಶ್ಚಿಮಾತ್ಯ ದೇಶಗಳ ಧೋರಣೆಯನ್ನು ಒಪ್ಪಿಕೊಂಡ ಜಾರ್ಜಿಯಾ ದೇಶದ ಶಾಂತಿಯನ್ನು ಕುರಿತೂ ಲೇಖಕಿ ಬರೆದಿರಬಹುದು.
ಶಾಂತಿ
ಮೂಲ: ಡಯಾನಾ ಆನ್ಫಿಮಿಯಾಡಿ
ಕನ್ನಡಕ್ಕೆ: ಸಿ. ಪಿ. ರವಿಕುಮಾರ್
ಶಾಂತಿ ಎಂಬ ಪದವನ್ನು ನನಗೆ ನಾನೇ
ಹೇಗೆ ಒಗ್ಗಿಸಿಕೊಂಡೆ ಎಂಬುದೇ ಒಂದು ಸೋಜಿಗ ನನಗೆ.
ಕೈಗವಸಿನ ಹಾಗೆ ಎಳೆದುಕೊಂಡೆ ನನ್ನತ್ತ.
ಸ್ಕಾರ್ಫ್ ಹಾಗೆ ಹೊದ್ದು ಸರಿಪಡಿಸಿಕೊಂಡೆ.
ನನ್ನ ಹಾಸಿಗೆಯ ಚಾದರ ಮಾಡಿಕೊಂಡೆ ಅದನ್ನು.
ದಿಂಬನ್ನು ಕೊಡವಿ ಡುಮ್ಮ ಮಾಡುವಂತೆ ಹಿಗ್ಗಿಸಿದೆ ನನ್ನ ಆಸೆಗಳನ್ನು.
ಅರವತ್ತು ವಾಟ್ ಬಲ್ಬನ್ನು ಕೂಡಾ ಪಳಗಿಸಿದೆ.
ನನ್ನ ಟೆಂಟ್ ಸುತ್ತಲೂ ಹಳ್ಳ ತೋಡಿ ತುಂಬಿಸಿದೆ ಅದರಲ್ಲಿ ನೋವು.
ಮತ್ತು ಬಾಗಿಲಿನಲ್ಲಿ ಕಟ್ಟಿಹಾಕಿದೆ ಭೀತಿಯೆಂಬ ತೋಳವನ್ನು.
ಶಾಂತಿ ಎಂಬ ಪದಕ್ಕೆ ನಾನು ಹೇಗೆ ಹೊಂದಿಕೊಂಡೆ
ಎಂಬುದೇ ಆಶ್ಚರ್ಯ ನನಗೆ.
ಇಷ್ಟಾದರೂ ನಾನು ಮಲಗಿದ್ದೇನೆ
ಒಂದು ವ್ಯಾಕುಲ ಭೋಜ ವೃಕ್ಷದ ಮೇಲೆ
ಕಣ್ಣುಗಳನ್ನು ಅಗಲವಾಗಿ ತೆರೆದುಕೊಂಡು.
ಶಾಂತಿ ಎಂಬ ಪದವನ್ನು ನನಗೆ
ಹೇಗೆ ಹೊಂದಿಸಿಕೊಂಡೆ ಎಂಬುದೇ ಒಂದು ಸೋಜಿಗ ನನಗೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ