ಎಷ್ಟು ಮೋಹಕವಾಗಿದೆ ಹೊಸಪಲ್ಲವಿ!

ಮೂಲ ಸಾನೆಟ್ : ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್ 
ಕನ್ನಡಕ್ಕೆ: ಸಿ. ಪಿ. ರವಿಕುಮಾರ್ 

Image result for hopeಕವಿತಾಸ್ವಾದನೆ: ಇದು ಸಾನೆಟ್ಸ್ ಫ್ರಂ ದ ಪೋರ್ಚುಗೀಸ್ ಸಂಗ್ರಹದ ಏಳನೇ ಸಾನೆಟ್.  ಇದಕ್ಕೆ ಹಿಂದಿನ ಸಾನೆಟ್ಟುಗಳ ಅನುವಾದವನ್ನು ನೀವು ಇದೇ ಬ್ಲಾಗಿನಲ್ಲಿ ಓದಬಹುದು. ಪ್ರಸ್ತುತ ಕವಿತೆಯಲ್ಲಿ ಕವಯಿತ್ರಿಯು  ತನ್ನಲ್ಲಿ ಅಂಕುರಿತವಾದ ಪ್ರೇಮವು ತನ್ನನ್ನು ಸಾವಿನ ಅಂಚಿನಿಂದ ಹೇಗೆ ಕಾಪಾಡಿತು ಎಂಬ ಕೃತಜ್ಞತಾ ಭಾವನೆಯನ್ನು ವ್ಯಕ್ತಗೊಳಿಸುತ್ತಿದ್ದಾಳೆ. 





ಇಡಿಯ ವಿಶ್ವದ ರೂಪವೇ ಬದಲಾದಂತೆ ನನಗೆ ತೋರುತ್ತದೆ,
ಕೇಳಿದಾಗಿನಿಂದಲೂ ನಿನ್ನಾತ್ಮದ  ಹೆಜ್ಜೆಸಪ್ಪಳ! ಹಗುರ,
ಓ ಬಹು ಹಗುರ ನಡೆಯಲ್ಲಿ  ಬಂದು ನಿಂತಿಹುದು ಹತ್ತಿರ,
ನನಗೂ ಮತ್ತು ಆ ಭಯಾನಕ ಅಂಚಿಗೂ ನಡುವೆ. 
ನಿಸ್ಸಂದೇಹವೂ ಅದು ಸಾವಿನಂಚು, ಮುಳುಗುತ್ತಿದ್ದೆನೇನೋ ನಾನು,
ಪ್ರೇಮದ ಸುಳಿಯಲ್ಲಿ ಸಿಲುಕದಿದ್ದರೆ, ನನ್ನ ಜೀವನಕ್ಕೆ 
ಪ್ರಾಪ್ತವಾಗದಿದ್ದರೆ ಹೀಗೆ ಹೊಸ ನರ್ತನದ ಹೆಜ್ಜೆ!
ಸ್ವೀಕರಿಸುವೆ ದೈವ ನನಗಿತ್ತ ಪ್ರಸಾದರೂಪದ ಜೇನು,
ನಿನ್ನ ಸಾನ್ನಿಧ್ಯವು ಅದಕ್ಕೆ ನೀಡುತ್ತಿದೆ ಅಪೂರ್ವ ಸವಿ!
ಸ್ವರ್ಗವೆಂಬುದು ನನ್ನ ಹೊಸ ವಿಳಾಸದ ಹೆಸರು,
ನೀನಿರುವ ಸ್ಥಾನಕ್ಕೆ ಬೇರೇನೆಂದು ಕರೆಯಬಹುದು?
ಕೊಳಲ ದನಿಯಲ್ಲಿ ಎಷ್ಟು ಮೋಹಕವಾಗಿದೆ ಹೊಸಪಲ್ಲವಿ!
ಹಾಗೇಕೆಂದು ಹಾಡುವ ಗಂಧರ್ವರಿಗೂ ಗೊತ್ತು-
ಅವರ ಗಾನದಲ್ಲಿ ಸೇರಿಕೊಂಡಿರುವೆ ನೀನೆಂಬ ಗುಟ್ಟು. 


ಕಾಮೆಂಟ್‌ಗಳು

  1. The face of all the world is changed, I think,
    Since first I heard the footsteps of thy soul
    Move still, oh, still, beside me, as they stole
    Betwixt me and the dreadful outer brink
    Of obvious death, where I, who thought to sink,
    Was caught up into love, and taught the whole
    Of life in a new rhythm. The cup of dole
    God gave for baptism, I am fain to drink,
    And praise its sweetness, Sweet, with thee anear.
    The names of country, heaven, are changed away
    For where thou art or shalt be, there or here;
    And this ... this lute and song ... loved yesterday,
    (The singing angels know) are only dear,
    Because thy name moves right in what they say.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)