ಒಟ್ಟಿನಲ್ಲಿ

ಮೂಲ: ಮಾರ್ಕೋ ವೆಸೋವಿಚ್ (ಬಾಸ್ನಿಯಾ ದೇಶ)
ಕನ್ನಡಕ್ಕೆ : ಸಿ. ಪಿ. ರವಿಕುಮಾರ್ 
Image result for burial of a bosnian soldier

ಹಿನ್ನೆಲೆ: ಬಾಸ್ನಿಯಾ ದೇಶದ ರಾಜಧಾನಿ ಸರಯೇವೋ ನಗರದಲ್ಲಿ ಕವಿ ಮಾರ್ಕೋ ವೆಸೋವಿಎಚ್  (1945-) ವಾಸವಾಗಿದ್ದಾರೆ.  1992ರಲ್ಲಿ ಯುಗೋಸ್ಲಾವಿಯಾ ಸಂಯುಕ್ತ ರಾಷ್ಟ್ರದಿಂದ ಬಾಸ್ನಿಯಾ ಮುಕ್ತಿ ಘೋಷಿಸಿಕೊಂಡಿತು. ಆಗ  ಮೂರು ವರ್ಷಗಳ ಕಾಲ ನಿರಂತರ ಯುದ್ಧ ನಡೆಯಿತು. ಯುಗೋಸ್ಲಾವಿಯಾದ ಭಾಗವೇ ಆಗಿರಬೇಕು ಎಂದು ಬಯಸುವವರು ಮತ್ತು ಅದು ಮುಕ್ತ ದೇಶವಾಗಿರಬೇಕೆಂದು ಬಯಸುವವರ ನಡುವೆ ನಡೆದ ಯುದ್ಧದಲ್ಲಿ ಸಾಕಷ್ಟು ಹಿಂಸಾಚಾರ ನಡೆಯಿತು.  "ಸಂಜಾತಿ ಪರಿಶುದ್ಧಿ" ಎಂಬ ಹೆಸರಿನಲ್ಲಿ ಸಾವಿರಾರು ಬಾಸ್ನಿಯಾ ವಾಸಿಗಳ ಕೊಲೆ ನಡೆಯಿತು. ಮಾರ್ಕೋ ವೆಸೋವಿಎಚ್ ಈ ಮೂರೂ ವರ್ಷಗಳ ಕಾಲ ಸರಯೇವೋ ನಗರದಲ್ಲೇ ಇದ್ದು ಲೇಖನಗಳ ಮೂಲಕ "ಸಂಜಾತಿ ಪರಿಶುದ್ಧಿ"ಯ ವಿರುದ್ಧ ಮತ್ತು ಸಂಜಾತಿ ವೈವಿಧ್ಯದ ಪರವಾಗಿ ಬರೆದ ಲೇಖಕ. ಪ್ರಸ್ತುತ ಕವಿತೆಯನ್ನು ಈ ಹಿನ್ನೆಲೆಯಲ್ಲಿ ನೋಡಿ. ಕವಿತೆಯ ಪ್ರಾರಂಭದಲ್ಲಿ ಸ್ಮಶಾನದ ಉಲ್ಲೇಖವಿದೆ. ಬಹುಶಃ ಒಬ್ಬ ಬಾಸ್ನಿಯನ್ ಯೋಧನನ್ನು ದಫನದ ಉಲ್ಲೇಖವಿರಬಹುದು.  ಬಾರ್ಲಿಯ ತೆನೆಗಳು ಮತ್ತೆ ಬಲಿಯುತ್ತವೆ ಎಂಬ ಸಾಲಿನಲ್ಲಿ ಮನುಷ್ಯನ ಪುನರ್ಜನ್ಮದ ಬಗ್ಗೆ ಕವಿ ಹೇಳುತ್ತಿರಬಹುದು. ಆಗಿನ್ನೂ ಬಾಸ್ನಿಯಾ ದೇಶಕ್ಕೆ ಯಾವುದೇ ಚರಿತ್ರೆ ಇರಲಿಲ್ಲ.   ಆಕಾಶದ ಉಲ್ಲೇಖ ಇಲ್ಲಿ ಬಂದಿರುವುದಕ್ಕೆ ಬಹುಶಃ ಸತ್ತ ಯೋಧನ ಆತ್ಮವು ಆಕಾಶಕ್ಕೆ ಹೋಗಿ ಸೇರುತ್ತದೆಂಬ ನಂಬಿಕೆ ಕಾರಣವಾಗಿರಬಹುದು. ಆಕಾಶಕ್ಕೆ ಹೋದಾಗ "ನನ್ನದು-ತನ್ನದು" ಎಂಬ ಯಾವ ಪ್ರಭೇದಗಳಿಲ್ಲ.  ಇಲ್ಲಿದ್ದಾಗ ಮಹತ್ತರವೆನ್ನಿಸುವುದು ಮೇಲಿನಿಂದ ನೋಡಿದಾಗ ಯಃಕಶ್ಚಿತ್ ಎಂಬಂತೆ ತೋರುತ್ತದೆ. ಯುದ್ಧ ಕೂಡಾ ಹೀಗೇ. ತನ್ನ ನಾಡಿಗಾಗಿ ಸಂಘರ್ಷ ಹೂಡಿದ ಯೋಧನಿಗೆ ಕವಿ "ನಿನ್ನ ಬಲಿದಾನದಿಂದ ನಿನಗೆ ದೊಡ್ಡದೊಂದು ಕಂಚಿನ ಸ್ಮಾರಕ ಕಟ್ಟುತ್ತಾರೆಂಬ ನಂಬಿಕೆ ನಿನಗಿದ್ದರೆ ಅದನ್ನು ಬಿಟ್ಟುಬಿಡು! ಎತ್ತರವಾಗಿ ನಿಲ್ಲುವ ಘನತೆಯನ್ನು ಮರಗಳಿಂದ ಕಲಿತುಕೋ!" 
  ಎಂದು ಕಿವಿಮಾತು ಹೇಳುತ್ತಿರಬಹುದು. 


ಸ್ಮಶಾನದ ಹತ್ತಿರ ಬೆಳೆದ ಐಲೆಕ್ಸ್ ಪೊದೆಗಳಲ್ಲಿ 
ಎಲೆಗಳು ಪಿಸುಗುಟ್ಟುತ್ತವೆ 
ಭವಿಷ್ಯ ನುಡಿಯುವವೇನೋ ಎಂಬಂತೆ. 
ಬಾರ್ಲಿ ತೆನೆಗಳಲ್ಲಿ ಕಾಳುಗಳು ಬಲಿಯುತ್ತಿವೆ,
ಹೇಗೆಂದರೆ ನೂರಾರು ಸಲ ಅಭಿನಯಿಸಿದ ಪಾತ್ರವನ್ನು 
ಮತ್ತೊಮ್ಮೆ ನಟಿಸಲು ಪ್ರೇಕ್ಷಕರ ಎದುರು ನಿಂತ ನಟರಂತೆ.  

ಹೊಗಳದಿರು  ಆಕಾಶದ ಎದುರು 
ನಿನ್ನ ಜನ್ಮಭೂಮಿಯನ್ನು. 
ಹೊಗಳಬೇಕಾದದ್ದು ಅದು ನಿನ್ನನ್ನು. 

ಮೋಡದಿಂದ ನೋಡಿದಾಗ 
ಈ ಹುಲ್ಲುಗಾವಲುಗಳು ಮತ್ತು ಹೊಲಗಳು 
ಅಂಚೆ ಚೀಟಿಗಳ ಆಲ್ಬಂನಂತೆ; 

ಒಂದು ಇರುವೆಗೆ ಕಂಡಾಗ 
ನಿನ್ನ ಕೈಬೆರಳಲ್ಲಿರುವ ಸಿಗರೆಟ್ ಧೂಮದ ಉಂಗುರ
ಅದೊಂದು ಬೇರೆಯೇ ಲೋಕದಂತೆ! 

ಮತ್ತೊಮ್ಮೆ ಹುಟ್ಟಿ ಬರುವುದಾದರೆ 
ಚರಿತ್ರೆಯಿಲ್ಲದ ಈ ನಾಡಿನಲ್ಲಿ 
ಕಂಚಿನ ಕುದುರೆಯೇರಿದ ಸವಾರನಾಗಿಯೇ -
ಎಂಬಿತ್ಯಾದಿ ಬೆದರಿಕೆ ಹಾಕುವುದನ್ನು ಬಿಟ್ಟುಬಿಡು. 


ನೀನು ಹೊರಡುವ ಮುನ್ನ 
ಈ ಮರಗಳ ತೊಗಟೆಯನ್ನೊಮ್ಮೆ ಸವರಿ ಅನುಭವಿಸು. 
ಎತ್ತರವಾಗಿ ಬೆಳೆದುನಿಲ್ಲುವ ಪಾಠವನ್ನು 
ಅವು ನಿನಗೆ  ಲಾಗಾಯ್ತಿನಿಂದಲೂ ನಿಃಶುಲ್ಕವಾಗಿ ಹೇಳುತ್ತಿವೆ  

ಕಾಮೆಂಟ್‌ಗಳು

  1. SUMMA SUMMARUM
    The leaves of the ilex by the graveyard
    Whisper prophetically.

    And barley-corn ripens
    Like those actors who
    In the same role for the hundredth time
    Stand forth before the audience.

    Yet do not extol,
    To the skies, your native land.
    It ought to extol you.

    Seen from this cloud
    These meadows and fields
    Are a stamp album;

    And to the ant a smoke ring
    Twirling from your cigarette
    Is a whole new landscape!

    And stop threatening for once
    To return next time
    To this handful of land without history
    Only in the shape of a rider in bronze.

    And before you leave
    Stroke the bark of these trees
    Which al the while have given you
    Free lessons in standing tall!

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)