ಆಲ್ಬಂ

ಕಂಡಹಾರ್ ನಗರದಲ್ಲಿ ಹುಟ್ಟಿದ ಕವಿ ರೆಜಾ ಮೊಹಮ್ಮದಿ (1979-) ಇಂದಿನ ಪರ್ಷಿಯನ್ ಯುವಕವಿಗಳಲ್ಲಿ ಒಂದು ಪ್ರಮುಖ ಹೆಸರು. ಇರಾನ್ ಮತ್ತು ಲಂಡನ್ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಪಡೆದ ಮೊಹಮ್ಮದಿ ಪ್ರಸ್ತುತ ಕಾಬೂಲ್ ನಗರದಲ್ಲಿ ನೆಲೆಸಿದ್ದಾರೆ.  ಬಿಬಿಸಿ, ದ ಗಾರ್ಡಿಯನ್ ಮೊದಲಾದ ಮಾಧ್ಯಮಗಳಿಗೆ ಅವರು ಹವ್ಯಾಸಿ ವರದಿಗಾರರಾಗಿ ಬರೆಯುತ್ತಾರೆ.  ಈ ಕವಿತೆ ಮೊದಲ ನೋಟಕ್ಕೆ ಒಂದು ಪ್ರೇಮಕವಿತೆಯಂತೆ ತೋರುತ್ತದೆ. ಕವಿತೆಯನ್ನು ಹಾಗೂ ಅರ್ಥೈಸಿಕೊಳ್ಳಬಹುದು. ಆದರೆ ಇಲ್ಲಿ ಬರುವ ಸಖ ಮತ್ತು ಸಖಿ ಅಫ್ಘಾನಿಸ್ತಾನ್ ದೇಶವಾಸಿ ಮತ್ತು ಅಫ್ಘಾನಿಸ್ತಾನ್ ದೇಶ ಕೂಡಾ ಆಗಿರಬಹುದು. ಅಫ್ಘಾನಿಸ್ಥಾನವು ಮೊದಲು ರಷ್ಯಾ ಆನಂತರ ತನ್ನದೇ ದೇಶದ ಉಗ್ರರ ಕೈಯಲ್ಲಿ ಸಿಲುಕಿ ನಲುಗಿದ ದೇಶ.  ಇಂದು ಸ್ವತಂತ್ರ ದೇಶವೆಂಬ ಮೊಹರು ಹೊಂದಿದ್ದರೂ ಅಲ್ಲಿ ಉಗ್ರರ ಕೈವಾಡ ಇಂದಿಗೂ ಗಾಢವಾಗಿದೆ.   ಅನೇಕ ಲೇಖಕರು ಅಫ್ಘಾನಿಸ್ತಾನದ ದುರದೃಷ್ಟದ ಕಥೆಯನ್ನು ಕುರಿತು ಬರೆದಿದ್ದಾರೆ. 

ಆಲ್ಬಂ

ಮೂಲ:  ರೆಜಾ ಮೊಹಮ್ಮದಿ  (ಅಫ್ಘಾನಿಸ್ತಾನ್) 
ಕನ್ನಡಕ್ಕೆ: ಸಿ. ಪಿ. ರವಿಕುಮಾರ್ 

ಚಿತ್ರದಲ್ಲಿ ನಿನ್ನ ಕೈ ನಿನ್ನ ಕೇಶಗಳಲ್ಲಿ ಆಡುತ್ತಿದೆ 
ನಿನ್ನ ಕೇಶಗಳು ನಿನ್ನ ಮುಖದ ಮೇಲೆ ಆಡುತ್ತಿವೆ 
ಮಧು ತುಂಬಿದ ಎರಡು ಬಟ್ಟಲುಗಳು ನಿನ್ನ ಕಣ್ಣುಗಳು 
ಮಧುಪಾನ ಮಾಡಲು ನನ್ನೆದೆ ಹಾತೊರೆಯುತ್ತದೆ 

ಮುಂದಿನ ಚಿತ್ರದಲ್ಲಿ ನೀನು ನನ್ನ ಜೊತೆ ಕುಳಿತಿರುವೆ 
ಮಕ್ಕಳಿಬ್ಬರು ಆಟದಲ್ಲಿ ಮಗ್ನರಾಗಿದ್ದಾರೆ 
ಕೆಲವೊಮ್ಮೆ ನಮ್ಮ ಕೈಗಳು ಬೆಸೆದುಕೊಂಡಿವೆ 
ಕೆಲವೊಮ್ಮೆ ನಮ್ಮ ಭುಜಗಳು ತಾಕುತ್ತವೆ. 


ಮುಂದಿನ ಚಿತ್ರದಲ್ಲಿ ನೀನು ಹೇಳಿಕೊಳ್ಳುತ್ತಿರುವೆ ಸ್ವಗತ:  
"ನಾವಿಬ್ಬರೂ ಒಂದಾಗಿ ಆಡುವುದು ಇಷ್ಟವಿಲ್ಲವೇನೋ ವಿಧಿಗೆ"
ಆದರೆ ನಾನು ಅನ್ನುತ್ತಿದ್ದೇನೆ - "ನಮ್ಮ ತಪ್ಪಲ್ಲ, 
ದೈವವು  ಆಟವಾಡಿತು ನಮ್ಮ ವಿಧಿಯೊಂದಿಗೆ"


ಮುಂದೆ: ಪಂಜರದಲ್ಲಿ ಎರಡು ಪಕ್ಷಿಗಳು 
ಕಾಳುಗಳೊಂದಿಗೆ ಆಡುತ್ತಿವೆ. 
ಮಕ್ಕಳು ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ,
ಮಂದಿ ಆಡುತ್ತಿದ್ದಾರೆ ಮನೆಯಾಟ.  

ಮುಂದೆ: ನಿನ್ನನ್ನು ಕರೆದೊಯ್ದಾಗ 
ಎಲ್ಲವೂ ಸಾಯುತ್ತದೆ: 
ಬದುಕು, ಬದುಕಿನ ಸಂಭ್ರಮ, ಆಟ,

ಇನ್ನೂ ಮುಂದೆ, ನೀನು ಹಿಂದಿರುಗಿ ಬಂದಾಗ
ನದಿಗಳು ಆಡಬಯಸುತ್ತವೆ ಕಣಿವೆಗಳೊಂದಿಗೆ 
ಸುಗಂಧವು ಆಡಬಯಸುತ್ತದೆ ಬಣ್ಣಗಳೊಂದಿಗೆ
ನನ್ನ ಕಣ್ಣುಗಳು ನಿನ್ನನ್ನೇ ಹಿಂಬಾಲಿಸಲು ಬಯಸುತ್ತವೆ 
ತುಂಟ ಜಿಂಕೆಯ ಹಾಗೆ.

ಮುಂದಿನ  ಚಿತ್ರದಲ್ಲಿ ನಿನ್ನ ಬೆರಳುಗಳು ನಿನ್ನ ಕೇಶಗಳಲ್ಲಿ ಆಡುತ್ತವೆ 
ನಿನ್ನ ಕೇಶಗಳು  ನಿನ್ನ ಮುಖದ ಮೇಲೆ ಆಡುತ್ತವೆ, 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)