ಎದೆ ಬರಿದಾಗಿಹುದು ಪ್ರೇಮದ ನೋವಿನ ಹೊರತು



"ಸಜದಾ" ಎಂಬ ಗಜಲ್ ಸಂಗ್ರಹದಲ್ಲಿ ಲತಾ ಮಂಗೇಶ್ಕರ್ ಅವರು ಹಾಡಿರುವ ಈ ಗಜಲ್ ಕೂಡಾ ಒಂದು.  "ದಿಲ್ ಮೇ ಅಬ್ ದರ್ದ್-ಎ-ಮೊಹಬ್ಬತ್ ಕೆ ಸಿವಾ ಕುಛ್ ಭೀ ನಹೀ." ಇದನ್ನು ಬರೆದವರು ಸಾಹಿರ್ ಭೋಪಾಲಿ ಎಂಬ ಕವಿ. ತುಂಬಾ ಇಂಪಾದ ಗಜಲ್; ಮತ್ತೆ ಮತ್ತೆ ಕೇಳುವಂತಿದೆ.   ಕೇಳಲು ಈ ಲಿಂಕ್ ಅನುಸರಿಸಿ. 

 ಅನೇಕ ಗಜಲ್ ಗಳಂತೆ ಇಲ್ಲೂ ಕೂಡಾ ವಿಷಾದದ ದಟ್ಟ ಛಾಯೆ ಕಂಡು ಬರುತ್ತದೆ.  ಇಲ್ಲಿ ವ್ಯಕ್ತವಾದ ಭಾವನೆಗಳನ್ನು ಒಬ್ಬ ಪ್ರೇಮಿ ತನ್ನ ಭಗ್ನ ಪ್ರೇಮವನ್ನು ಕುರಿತು ಹಾಡುತ್ತಿರಬಹುದು; ಅಥವಾ ಆಧ್ಯಾತ್ಮಿಕ ಸ್ತರದಲ್ಲಿ ಈ ಗಜಲ್ ಭಗವಂತನಿಗೆ ಕವಿಯ ಸಮರ್ಪಣ ಎಂದು ಕೂಡಾ ಪರಿಗಣಿಸಬಹುದು.  ಕವಿ ಯಾವುದೋ ದುಃಖದ ಸನ್ನಿವೇಶದಲ್ಲಿ ಸಿಲುಕಿದ್ದಾನೆ.  ತನ್ನ ಪಾಪಗಳ ಬಗ್ಗೆ ಅವನಿಗೆ ಪಶ್ಚಾತ್ತಾಪ ಉಕ್ಕುತ್ತಿದೆ. ಈ ಸ್ಥಿತಿಯಲ್ಲಿ  ತನಗೆ ಇನ್ನೇನೂ ಬೇಡ ಎಂಬ ವಿರಕ್ತಿ ಅವನಲ್ಲಿ ಹುಟ್ಟಿದೆ.  "ಆದದ್ದೆಲ್ಲಾ ಒಳಿತೇ ಆಯಿತು" ಎಂಬ ದಾಸವಾಕ್ಯದಂತೆ "ನನಗೆ ಒದಗಿದ ಈ ದುಃಖ ನನಗೆ ಬಿಡುಗಡೆಯನ್ನೇ ತಂದಿದೆ," ಎಂದು ಕವಿ ಯೋಚಿಸುತ್ತಾನೆ.  ಈ ಗಜಲ್ ಭಾಷಾಂತರ ನನಗೆ ತೃಪ್ತಿ ಕೊಟ್ಟಿದೆ. ಮೂಲದ ಲಯವನ್ನು ತಕ್ಕಮಟ್ಟಿಗೆ ಹಿಡಿದಿದ್ದೇನೆ ಎನ್ನಿಸಿದೆ. ಕನ್ನಡದಲ್ಲಿ ಹಾಡಲು ಲತಾ ಮಂಗೇಶ್ಕರ್ ಅವರನ್ನು ಒಪ್ಪಿಸುವುದೊಂದೇ ಉಳಿದ ಕೆಲಸ!


ಮೂಲ ಗಜಲ್ : ಸಾಹಿರ್ ಭೋಪಾಲಿ 
ಕನ್ನಡಕ್ಕೆ : ಸಿ. ಪಿ, ರವಿಕುಮಾರ್ 


ಎದೆ ಬರಿದಾಗಿಹುದು ಪ್ರೇಮದ ನೋವಿನ ಹೊರತು 
ಬದುಕಿನಲೇನುಳಿದಿದೆ ಆರಾಧನೆಯನು ಹೊರತು 

ನನ್ನೊಳೇನಿದೆ ನಿನ್ನ ಔನ್ನ್ಯತ್ಯಕೆ ಸರಿಸಮ ಕೊಡುಗೆ? 
ಬರಿದೇ ಪ್ರೇಮದ ಹೊರತು ಬರಿದಾಗಿದೆ ಸೆರಗು 

ದೈವವೇ! ಕೇಳದಿರು ನನ್ನ ಪಾಪಗಳ ಲೆಕ್ಕ  
ಕಣ್ಣು ಬರಿದಾಗಿಹುದು ಅಶ್ರುಧಾರೆಯನು ಹೊರತು 

ಬಿಡುಗಡೆ ನೀಡದೆ ಹೋಗಿದ್ದರೆ ನನಗೀ ಅಳಿವು 
ಬದುಕಿನಲೇನಿದೆ ಸಂತಾಪದ ಬೇಡಿಯ ಹೊರತು 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)