ತುಲಸೀದಾಸರ ದ್ವಿಪದಿಗಳು - 2

ತುಲಸೀದಾಸರ ದ್ವಿಪದಿಗಳು - 2 

ಸಿ. ಪಿ. ರವಿಕುಮಾರ್ 
ಭಯ-ಲೋಭಗಳಿಂದ ಸವಿಮಾತಾಡಿದರೆ ವೈದ್ಯನೂ ಮಂತ್ರಿಯೂ ಗುರುವೂ 
ನಿಶ್ಚಿತವಾಗಿ ರಾಜ್ಯವೂ ದೇಹ ಧರ್ಮಗಳು ಬೇಗ ನಾಶವಾಗುವುವು


ಇದರ ಅರ್ಥವನ್ನು ಇನ್ನೂ ಬಿಡಿಸಿ ಹೇಳಬೇಕೆಂದರೆ ಹೀಗೆ : ಯಾವಾಗ ರಾಜ್ಯದ ಮಂತ್ರಿಯು ಭಯ ಅಥವಾ ಲೋಭದಿಂದ ರಾಜನಿಗೆ ನಿಜಾಂಶದ ಬದಲು ರಾಜ್ಯದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಸುಳ್ಳು ಹೇಳುತ್ತಾನೋ ಆಗ ರಾಜ್ಯ ನಾಶದ ದಾರಿ ಹಿಡಿಯುತ್ತದೆ. ಯಾವಾಗ ರೋಗಿಗೆ ವೈದ್ಯನು ಲೋಭದಿಂದ ನಿಜವಾದ ಕಾಯಿಲೆಯನ್ನು ತಿಳಿಸದೆ ಎಲ್ಲವೂ ಸೌಖ್ಯವೆಂದು ಸವಿಮಾತಾಡುತ್ತಾನೋ ಆಗ ರೋಗಿಯ ದೇಹ ನಾಶವಾಗತೊಡಗುತ್ತದೆ. ಯಾವಾಗ ಗುರುವಾದವನು ಶಿಷ್ಯರ ತಪ್ಪುಗಳನ್ನು ತಿದ್ದದೇ ಅವರನ್ನು ಸ್ವಾರ್ಥಕ್ಕಾಗಿ ಹೊಗಳುತ್ತಾನೋ, ಆಗ ಧರ್ಮವು ನಾಶವಾಗುತ್ತದೆ.

ತುಲಸಿ, ಹೊಂದಬಯಸುವೆಯಾ ಬೆಳಕು, ಹೊರಗಲ್ಲದೆ ಒಳಗೂ? 
ನಾಲಗೆಯ ಹೊಸ್ತಿಲ ಮೇಲೆ ರಾಮನಾಮದ ಮಣಿದೀಪ ಬೆಳಗು

ತಾತ್ಪರ್ಯ: ನಾಲಗೆಯ ಮೇಲೆ ರಾಮನಾಮವಿದ್ದರೆ ಹೊಸ್ತಿಲ ಮೇಲೆ ದೀಪವಿಟ್ಟಂತೆ (ಮನದ) ಒಳಗನ್ನೂ ಹೊರಗನ್ನೂ ಬೆಳಗುತ್ತದೆ. ರಾಮನ ಹೆಸರನ್ನು ಕೇಳಿದವರಿಗೂ ಹೇಳಿದವರಿಗೂ ಬೆಳಕಾಗುತ್ತದೆ.

ಯಾರು ಪಡೆಯುತ್ತಾರೋ ಕೀರ್ತಿ ಪರರ ಕೀರ್ತಿಗೆ ಮಾಡಿ ಘಾಸಿ
ಅವರ ಮುಖಕ್ಕೆ ಹತ್ತುತ್ತದೆ ಎಷ್ಟು ತೊಳೆದರೂ ಹೋಗದ ಮಸಿ

ತಾತ್ಪರ್ಯ: ಸ್ವಂತ ಸಾಧಿಸಲು ಸಾಧ್ಯವಾಗದವನು ಇನ್ನೊಬ್ಬನ ಕೀರ್ತಿಗೆ ಧಕ್ಕೆ ತರುವ ಮೂಲಕ ಪಡೆಯಲು ಹೊರಟರೆ ಅವನ ಮುಖಕ್ಕೆ ತೊಳೆಯಲಾರದಂಥ ಮಸಿ ಹತ್ತಿಕೊಳ್ಳುತ್ತದೆ ಎಂದು ತುಲಸೀದಾಸರು ಎಚ್ಚರಿಸುತ್ತಿದ್ದಾರೆ. ಮ್ಯಾಕ್ ಬೆತ್ ನನ್ನು (ರಾಜನ) ಕೊಲೆಗೆ ಪ್ರಚೋದಿಸಿದ ಲೇಡಿ ಮ್ಯಾಕ್ ಬೆತ್ "ಪರ್ಶಿಯಾದ ಎಲ್ಲ ಸುಗಂಧದ್ರವ್ಯಗಳೂ ನನ್ನ ಕೈಗೆ ಹತ್ತಿಕೊಂಡಿರುವ ರಕ್ತದ ವಾಸನೆಯನ್ನು ತೊಡೆಯಲಾರವು!" ಎಂದು ಹಲುಬುವುದು ನೆನಪಾಗುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)