ಗ್ರಂಥಾಲಯದಲ್ಲಿ ಕವನವಾಚನ

ಸಿ. ಪಿ. ರವಿಕುಮಾರ್
(17 ನವೆಂಬರ್, 2016)


ಗ್ರಂಥಾಲಯ ಸಪ್ತಾಹ ಆಚರಣೆಯ ಪರವಾಗಿ ಒಂದು ಕಾವ್ಯವಚನ ಕಾರ್ಯಕ್ರಮಕ್ಕೆ ಬನ್ನಿ ಎಂದು ಗೆಳೆಯ ಅಭಿನವ ರವಿಕುಮಾರ್ ಕರೆ ಮಾಡಿದರು. ಸಾಲದೆಂಬಂತೆ "ತೊಗೊಳ್ಳಿ, ಶ್ರೀನಿವಾಸ್ ಅವರೂ ನಿಮ್ಮ ಜೊತೆ ಮಾತಾಡುತ್ತಾರೆ," ಎಂದು ಫೋನ್ ವರ್ಗಾಯಿಸಿದರು. "ರವಿಕುಮಾರ್, ನೀವು ಖಂಡಿತ ಬರಬೇಕಪ್ಪ." ಎಂದು ಆತ್ಮೀಯವಾಗಿ ಕರೆದವರು "ಶೂದ್ರ" ಶ್ರೀನಿವಾಸ್.  ಅವರು ನನ್ನ ಹಿತೈಷಿಗಳು.   ನ್ಯಾಷನಲ್ ಕಾಲೇಜಿನಲ್ಲಿ ನನಗೆ ಕನ್ನಡ ಪಾಠ ಹೇಳಿದ  ಕೆ.ಎನ್.ಎನ್. ಮತ್ತು ಎಚ್.ಎಸ್.ಎಂ.ಆರ್. ಇವರಿಬ್ಬರೂ ನನ್ನನ್ನು ಕುರಿತು ಆಡಿರಬಹುದಾದ ಒಳ್ಳೆಯ ಮಾತುಗಳು ನನಗೆ ಎಷ್ಟೋ ಜನ ಹಿತೈಷಿಗಳನ್ನು ಸಂಪಾದಿಸಿಕೊಟ್ಟಿದೆ!

ಕಾವ್ಯವಾಚನದಲ್ಲಿ ಮುಖ್ಯ ಅತಿಥಿಯಾಗಿ ಬಂದವರು ಪ್ರಸ್ತುತ ಕನ್ನಡ ಕಾವ್ಯ ಸಂದರ್ಭದಲ್ಲಿ ಅತ್ಯಂತ ಮುಖ್ಯ ಕವಿಯೆಂದು ಗುರುತಿಸಲ್ಪಡುವ ಎಚ್.ಎಸ್. ವೆಂಕಟೇಶಮೂರ್ತಿ.  ಎಚ್ಚೆಸ್ವಿ ಅವರ ಕಾವ್ಯದ ಹರಹು ಬಹಳ ದೊಡ್ಡದು. ಮಕ್ಕಳ ಕವಿತೆಯಿಂದ ಹಿಡಿದು ಮಹಾಕಾವ್ಯದವರೆಗೆ. ಅವರನ್ನು ಮತ್ತೊಮ್ಮೆ ನೋಡುವ ಮತ್ತು ಅವರ ಮಾತು ಕೇಳುವ ಅವಕಾಶ ನನಗೆ ಸಿಕ್ಕಿತು.
ಜಯನಗರದ ನಗರ ಕೇಂದ್ರ ಗ್ರಂಥಾಲಯದೊಂದಿಗೆ ತಮಗಿರುವ ಸಂಬಂಧವನ್ನು ಎಚ್.ಎಸ್.ವಿ. ನೆನೆಸಿಕೊಂಡರು. "ನಾನು ಬೆಂಗಳೂರಿಗೆ ಬಂದಾಗ ಮೊದಲು ನೆಲೆಸಿದ್ದು ಜಯನಗರದಲ್ಲಿ. ಪಾಠ ಹೇಳಿ ಮನೆಗೆ ಬಂದ ಮೇಲೆ ಸಂಜೆ ವಾಕಿಂಗ್ ಹೊರಟು ಇಲ್ಲಿಗೆ ಬರುತ್ತಿದ್ದೆ, ಪುಸ್ತಕಗಳನ್ನು ತಿರುವಿಹಾಕುತ್ತಿದ್ದೆ," ಎಂದು ಮೆಲುಕು ಹಾಕಿದರು. ಹಿಂದಿದ್ದ ಸರ್ಕ್ಯುಲೇಟಿಂಗ್ ಲೈಬ್ರರಿಗಳನ್ನು ನೆನೆಸಿಕೊಂಡರು.  ಚಿಕ್ಕಂದಿನಲ್ಲಿ  ಜಯನಗರದ ಕೇಂದ್ರ ಗ್ರಂಥಾಲಯಕ್ಕೆ ನಾನೂ ಅನೇಕ ಬಾರಿ ಭೇಟಿ ಕೊಟ್ಟಿದ್ದೇನೆ. ಆಗ ಇಂದಿನ ಟ್ರಾಫಿಕ್ ಸಮಸ್ಯೆ ಇರಲಿಲ್ಲ. ಜಯನಗರದಲ್ಲಿ ಓಡಾಡುವುದೇ ಆಗೊಂದು ಸೊಗಸಾದ ಅನುಭವವಾಗಿತ್ತು. ರಸ್ತೆಯ ಎರಡೂ ಕಡೆಗೆ ಮರಗಳು. ಎಲ್ಲಿ ನೋಡಿದರೂ ಸಸ್ಯಸಮೃದ್ಧಿ. ಇಂದಿನ ಜನನಿಬಿಡ, ವಾಹನನಿಬಿಡ ರಸ್ತೆಗಳನ್ನು ಮಾತ್ರ ಕಂಡವರಿಗೆ ನಾನು ಹೇಳುವ ಮಾತು ಅರ್ಥವೇ ಆಗುವುದಿಲ್ಲ. ಅಂದಿನ ರಸ್ತೆಗಳ ಶಾಂತಿಯನ್ನು ಅನುಭವಿಸಿದವರಿಗೆ ನಾನು ಏನು ಹೇಳುತ್ತಿದ್ದೇನೆ ಎಂಬುದು ಚೆನ್ನಾಗಿ ಗೊತ್ತು. ಹೀಗಾಗಿ ಅದರ ಬಗ್ಗೆ ಬರೆಯುವುದರಲ್ಲಿ ಪ್ರಯೋಜನವಿಲ್ಲವೆಂದೇ ನನಗೆ  ತೋರುತ್ತದೆ!

ಇರಲಿ, ಈಗ ಎಚ್.ಎಸ್.ವಿ. ಅವರ ಭಾಷಣಕ್ಕೆ ಮರಳೋಣ.  ಸಭಿಕರಲ್ಲಿ ಅಕ್ಕಪಕ್ಕದ ಶಾಲೆಗಳಾದ ವಿಜಯಾ ಹೈಸ್ಕೂಲ್, ರಾಣಿ ಸರಳಾದೇವಿ ಶಾಲೆ ಮೊದಲಾದ ಸ್ಕೂಲುಗಳ ಮಕ್ಕಳು ದೊಡ್ಡಸಂಖ್ಯೆಯಲ್ಲಿದ್ದರು.  ಎಚ್.ಎಸ್.ವಿ. ತಮ್ಮ ನಾಟಕವೊಂದು ಹೈಸ್ಕೂಲ್ ಪಠ್ಯಪುಸ್ತಕದಲ್ಲಿ ಸೇರ್ಪಡೆಯಾಗಿರುವುದನ್ನು ನೆನೆಸಿಕೊಂಡರು. "ಪಠ್ಯಪುಸ್ತಕದಲ್ಲಿ ನಮ್ಮ ಕಪ್ಪು-ಬಿಳುಪು ಚಿತ್ರ ಮುದ್ರಿಸಿರುತ್ತಾರೆ. ನಿಜವಾಗಿ ಅದೊಂದು ಅಭಾವ ಚಿತ್ರ! ಕವಿಯು ನಿಜರೂಪದಲ್ಲಿ ಹೇಗೆ ಕಾಣುತ್ತಾರೆ ಎಂದು ಮಕ್ಕಳಿಗೆ ಗೊತ್ತೇ ಇರುವುದಿಲ್ಲ! ಇಂಥ ಕಾರ್ಯಕ್ರಮಗಳನ್ನು ಗ್ರಂಥಾಲಯಗಳಲ್ಲಿ ನಡೆಸುವುದು ಮತ್ತು ಮಕ್ಕಳಿಗಾಗಿ ನಡೆಸುವುದು ಬಹಳ ಒಳ್ಳೆಯ ನಿರ್ಧಾರ" ಎಂದು ಶ್ಲಾಘಿಸಿದರು.  ಕನ್ನಡ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೆ ಹೋಗಿ ಅದರ ಏಕಪ್ರಕಾರವನ್ನು ಅನುಭವಿಸಿದ ಯಾರಿಗಾದರೂ ಅವರ ಮಾತು ಅರ್ಥವಾದೀತು. ಈ ಕಾರ್ಯಕ್ರಮಗಳಿಗೆ ಬರುವವರು ಬಹುಮಟ್ಟಿಗೆ ಸ್ವತಃ ಲೇಖಕರು ಅಥವಾ ಪತ್ರಕರ್ತರು.  ಕನ್ನಡ ಪುಸ್ತಕಗಳ ಓದುಗರು ಯಾರು? ಅವರನ್ನು ಮುಟ್ಟುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಕಷ್ಟ. ಕನ್ನಡ ಓದುಗರನ್ನು ಟ್ರಾಕ್ ಮಾಡುವ ಮತ್ತು ಅವರ ಒಂದು ಕುಟುಂಬವನ್ನು ಬೆಳೆಸುವ ಬಗ್ಗೆ ಎಚ್.ಎಸ್.ವಿ. ಅವರ ಆಲೋಚನೆ ಒಳ್ಳೆಯದೇ. ಇಂದಿನ ಆನ್ಲೈನ್ ವಿಶ್ವದಲ್ಲಿ ಇದು ಸ್ವಲ್ಪಮಟ್ಟಿಗೆ ಸಾಧ್ಯವಾಗಬಹುದು. ಆದರೆ ಕನ್ನಡದಲ್ಲಿ ಆನ್ಲೈನ್ ಸಾಹಿತ್ಯದ ಪ್ರಮಾಣ ಹೆಚ್ಚಿಲ್ಲ. ಓದುಗರ ಸಂಖ್ಯೆ ಎಷ್ಟು ಎಂದು ಅಂದಾಜು ಮಾಡಲು ನನಗೆ ಧೈರ್ಯ ಬರುತ್ತಿಲ್ಲ. ಹಲವು ಸಾವಿರ ಇರಬಹುದೇ?    ಎಚ್.ಎಸ್.ವಿ. ತಾವು ಅಮೆರಿಕಾ ಪ್ರವಾಸದ ಸಂದರ್ಭದಲ್ಲಿ ಕಂಡ ಒಂದು ಸನ್ನಿವೇಶವನ್ನು ತಿಳಿಸಿದರು. ಅಲ್ಲಿ ಸಾಹಿತ್ಯಕ ಕಾರ್ಯಕ್ರಮಗಳು ಹೇಗೆ ನಡೆಯುತ್ತವೆ ಎಂಬ ಕುತೂಹಲದಿಂದ ನ್ಯೂಜರ್ಸಿಯಲ್ಲಿದ್ದ ಅವರ ಸ್ನೇಹಿತರೊಂದಿಗೆ ಅವರು ಒಂದು ಕಾರ್ಯಕ್ರಮ ನೋಡಲು ಹೋದರು. ಕಾರ್ಯಕ್ರಮ ಇದ್ದದ್ದು ಒಂದು ಲೈಬ್ರರಿಯಲ್ಲಿ. ನಾಲ್ಕುಗಂಟೆಯಾದರೂ ಯಾವ ಸಭಿಕರ ಸುಳಿವೂ ಇರಲಿಲ್ಲ. ಸಮಯ ಸಮೀಪಿಸುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಲೈಬ್ರರಿಯ ಒಂದು ಭಾಗದಲ್ಲಿ ಒಮ್ಮೆಲೇ ಕುರ್ಚಿಗಳು ಅವತರಿಸಿದವು. ಕೆಲವೇ ನಿಮಿಷಗಳಲ್ಲಿ ಸುಮಾರು ನೂರು ಜನ ಶ್ರೋತೃಗಳು ಬಂದು ಕುಳಿತರು. ಇವರಲ್ಲಿ ಬಹಳಜನ ಲೈಬ್ರರಿಗೆ ಬಂದ ಓದುಗರು. ಪುಸ್ತಕದ ಲೇಖಕರೂ ಬಂದರು. ಪುಸ್ತಕವನ್ನು ಪರಿಚಯಿಸಿದ್ದು ಗ್ರಂಥಾಲಯದ ಮುಖ್ಯಸ್ಥರು. ಯಾವುದೇ ಸದ್ದುಗದ್ದಲವಿಲ್ಲದೆ ಪುಸ್ತಕ "ಬಿಡುಗಡೆ" ಒಂದು ಅರ್ಧ ಗಂಟೆಯಲ್ಲಿ ಮುಗಿದುಹೋಯಿತು. ಎಲ್ಲದಕ್ಕಿಂತ ಮುಖ್ಯವಾಗಿ ಲೇಖಕರು ಸಹಿ ಹಾಕಿಕೊಟ್ಟ ಪುಸ್ತಕಗಳು ಅಲ್ಲೇ ನೂರರ ಸಂಖ್ಯೆಯಲ್ಲಿ ಮಾರಾಟವಾದವು.

ನಮ್ಮಲ್ಲಿ ಪುಸ್ತಕಗಳ ಪ್ರಕಟಣೆ/ಮಾರಾಟದ ಕಷ್ಟದ ಬಗ್ಗೆ ಎಚ್.ಎಸ್.ವಿ. ಮಾತಾಡಿದರು.  ದೊಡ್ಡ ಲೇಖಕರಿಗೆ ಮಾತ್ರ ಇಂದು ಪ್ರಕಾಶಕರು ಲಭ್ಯ. ಉಳಿದವರು ತಮ್ಮದೇ ಹಣ ಹಾಕಿ ತಾವೇ ಪುಸ್ತಕ ಪ್ರಕಟಿಸುವ ಸಂದರ್ಭ ಇಂದು ಇದೆ.  ನನ್ನದೇ ಅನುಭವ ಹೇಳುವುದಾದರೆ ನನ್ನ ಏಕೈಕ ಕವನಸಂಕಲನ "ದಂತಪಂಕ್ತಿ"ಯನ್ನು  ದಿ| ಶ್ರೀನಿವಾಸರಾಜು ಅವರು ಪ್ರಕಟಿಸದೆ ಇದ್ದರೆ ನಾನು ಬಹುಶಃ ಪ್ರಕಟಿಸುವ ಸಾಹಸಕ್ಕೇ ಹೋಗುತ್ತಿರಲಿಲ್ಲ. ಅಭಿನವ ಪ್ರಕಾಶನದವರು ನನ್ನ "ಕಂಪ್ಯೂಟರ್-ಗೊಂದು ಕನ್ನಡಿ" ಪುಸ್ತಕವನ್ನು ಹೊರತಂದಿದ್ದು 1990ರ ಆದಿಭಾಗದಲ್ಲಿ.  ಅದಾದ ನಂತರ ರಾಜು ಮೇಷ್ಟ್ರು ನನ್ನಿಂದ ಬರೆಸಿದ ಪುಸ್ತಕವೊಂದು ಪ್ರಕಟವಾಗುವ ಮುನ್ನವೇ ಅವರು ಕಾಲವಾದರು. ಹಸ್ತಪ್ರತಿ ನನ್ನ ಬಳಿಯೇ ಉಳಿಯಿತು. ಅದನ್ನು ಈಗಾಗಲೇ ಎರಡುಸಲ ತಿದ್ದಿದ್ದೇನೆ.  ತನಗೆ ಬಿಡುಗಡೆಯೇ  ಬೇಡವೆಂದು ನನ್ನ ಬಳಿಯೇ ಸುಖವಾಗಿ ಇದ್ದುಬಿಟ್ಟಿದೆ!   ಮದುವೆ ಸಮಾರಂಭಗಳಲ್ಲಿ  ಉಡುಗೊರೆ ಕೊಡುವ ಬದಲು ಪುಸ್ತಕಗಳನ್ನು ನೀಡಬೇಕೆಂದು ಎಚ್.ಎಸ್.ವಿ. ಸಲಹೆ ನೀಡಿದರು. "ಕೋಟಿಗಟ್ಟಲೆ ಖರ್ಚು ಮಾಡಿ ಮದುವೆ ಮಾಡುತ್ತಾರೆ. ಉಡುಗೊರೆಯ ರೂಪದಲ್ಲಿ ಪುಸ್ತಕಗಳನ್ನು ಕೊಡಬಹುದು. ಆದರೆ ಈ ಮದುವೆಗಳಲ್ಲಿ ಇಂದು ಮನರಂಜನೆಗಾಗಿ ಹೆಚ್ಚು ಖರ್ಚಾಗುತ್ತಿದೆ. ಜನರಿಗೆ ತೆಂಗಿನಕಾಯಿ ಕೊಟ್ಟು ಕಳಿಸುತ್ತಾರೆ. ಅದರಿಂದ ತಲೆ ಚಚ್ಚಿಕೊಳ್ಳಬೇಕು, ಅಷ್ಟೇ!" ಎಂದು ವ್ಯಸನಪಟ್ಟರು.

ಚಿತ್ರ: ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರು ಕವಿತೆ ಓದುತ್ತಿರುವಾಗ

ಎಲ್ಲರ ಅಪೇಕ್ಷೆಯ ಮೇರೆಗೆ ತಮ್ಮ ಕವನವೊಂದನ್ನು ಎಚ್.ಎಸ್.ವಿ. ಓದಿದರು. ಮಹಾಭಾರತದಲ್ಲಿ ನಡೆದ ಒಂದು ಪ್ರಸಂಗವನ್ನು ಕುರಿತು ಬರೆದ ಕವಿತೆ. ಮರದ ಮೇಲಿರುವ ಹಕ್ಕಿಯನ್ನು ಹೊಡೆದುರುಳಿಸಲು ದ್ರೋಣಾಚಾರ್ಯರು ಪಾಂಡವರಿಗೆ ಹೇಳುತ್ತಾರೆ. ಆಗ ಅರ್ಜುನ ತನಗೆ ಹಕ್ಕಿಯ ಕಣ್ಣು ಮಾತ್ರ ಕಾಣುತ್ತಿದೆ ಎಂದಿದ್ದು ಎಲ್ಲರಿಗೂ ತಿಳಿದ ವಿಷಯ. ಆದರೆ ಯುಧಿಷ್ಠಿರನಿಗೆ ಕಂಡದ್ದೇನು?  ಇದು ಕವಿಯ ಕಲ್ಪನೆಯಲ್ಲಿ ಕವಿತೆಯಾಗಿ ಅರಳಿದೆ. ಮರ, ತುದಿಯ ಟೊಂಗೆ, ಅಲ್ಲಾಡುವ ಎಲೆಗಳು, ಹಕ್ಕಿ, ಹಕ್ಕಿಯ ಬೆನ್ನಿನ ಮೇಲೆ ಜಾರುವ ಬಣ್ಣ, ಹಕ್ಕಿಯ ಕಣ್ಣು - ಇವೆಲ್ಲವೂ ಯುಧಿಷ್ಠಿರನಿಗೆ ಕಾಣುತ್ತವೆ.  ಎಲ್ಲೋ ನೋಡಿದಂತಹ ಹಕ್ಕಿಯ ಕಣ್ಣಿನಲ್ಲಿ ತಾಯಿಯ ಮಮತೆ ಕಂಡು ಅವನು ಹಕ್ಕಿಗೆ ಬಾಣ ಹೊಡೆಯಲಾರದೆ ಸೋಲುತ್ತಾನೆ. ಆದರೆ ಕವಿಯ ದೃಷ್ಟಿಯಲ್ಲಿ ಅವನೇ ಗೆಲ್ಲುತ್ತಾನೆ. ಎಲ್ಲವನ್ನೂ ಬದಿಗಿಟ್ಟು ಹಕ್ಕಿಯ ಕಣ್ಣನ್ನು ಮಾತ್ರ ನೋಡಿ ಅದನ್ನು ಹೊಡೆದುರುಳಿಸುವ ಅರ್ಜುನನಿಗೆ ಹೋಲಿಸಿದಾಗ  ಸಮಗ್ರದೃಷ್ಟಿಯಿಂದ ನೋಡುವ ಯುಧಿಷ್ಠಿರನ ಮನಸ್ಸಿನಲ್ಲಿ  ಮಾನವ ಸಹಜ ಕಕ್ಕುಲತೆ ಹುಟ್ಟುತ್ತದೆ.  ಮಕ್ಕಳಿಗೆ ಇದೇ ಉದಾಹರಣೆಯಾಗಬೇಕು ಎಂಬುದು ಕವಿಯ ಆಶಯ.


ಚಿತ್ರ: ನಾನು "ಹರೀಶ್ ನಂಜಪ್ಪ ಅವರಿಗೆ" ಎಂಬ ಕವಿತೆ ಓದಿದೆ

ಅನೇಕ ಕವಿಗಳು, ಕವಯಿತ್ರಿಯರು  ಕಾವ್ಯವಾಚನ ಕಾರ್ಯಕ್ರಮದಲ್ಲಿ ತಮ್ಮ ಕವಿತೆಯ ಜೊತೆಗೆ ತಮಗೆ ಇಷ್ಟವಾದ ಬೇರೊಬ್ಬ ಕವಿಯ ಕವಿತೆಯನ್ನೂ ಓದಿದರು. ಅಡಿಗ, ಬೇಂದ್ರೆ, ಜಿ.ಎಸ್.ಎಸ್., ತಿರುಮಲೇಶ್ - ಹೀಗೆ ಅನೇಕ ಕವಿಗಳ ಕವಿತೆಗಳನ್ನು ವಾಚಿಸುವ ಮೂಲಕ ಕನ್ನಡ ಸಾಹಿತ್ಯದ ಪರಿಚಯವೂ ಸಭಿಕರಿಗೆ ಈ ಕವಿಗಳು ನೀಡಿದರು. ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದು ಗ್ರಂಥಾಲಯ ಇಲಾಖೆಯ ಶ್ರೀ ಹೊಸಮನಿ. ಅವರೂ ಉದಯೋನ್ಮುಖ ಕವಿಗಳು. ತಮ್ಮ "ಗ್ರಂಥಾಲಯ" ಎಂಬ ಕವಿತೆಯನ್ನು ಅವರು ಓದಿದರು. ಶಾಲಾ ಮಕ್ಕಳಿಗೆ ಗ್ರಂಥಾಲಯದ ಸಿಬ್ಬಂದಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕವಿಗಳಿಗೂ ಉತ್ತಮ ಪುಸ್ತಕಗಳನ್ನು ಉಡುಗೊರೆ ನೀಡಿದ್ದು ಉತ್ತಮ ನಿರ್ಧಾರ. ನನಗೆ ಪು.ತಿ.ನ, ಟ್ರಸ್ಟ್ ಪ್ರಕಟಿಸಿದ "ಮಲೆದೇಗುಲ" ಪುಸ್ತಕ ಸಿಕ್ಕಿತು. ಅತ್ಯಂತ ಸುಂದರವಾಗಿ ಮುದ್ರಣಗೊಂಡ ಪುಸ್ತಕ. ಪ್ರತಿಯೊಂದು ಪುಟದಲ್ಲೂ ವಿಶೇಷ ವಿನ್ಯಾಸ. ಪ್ರತಿಯೊಂದು ಪುಟದಲ್ಲೂ ಮೇಲುಕೋಟೆ ದೇವಸ್ಥಾನದ ಸುಂದರ ಚಿತ್ರಗಳು. ಕನ್ನಡದಲ್ಲಿ ಬಹುಶಃ ಇಷ್ಟು ಸುಂದರವಾಗಿ ಮುದ್ರಣಗೊಂಡ ಪುಸ್ತಕಗಳು ಬಹಳ ಇಲ್ಲ.




ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)