ಕಣ್ಣಿಗೆ ಹರಿದರ್ಶನದ ದಾಹ (ಸೂರದಾಸರ ರಚನೆ)

"ಅಂಖಿಯಾ ಹರಿದರ್ಶನ್ ಕೀ ಪ್ಯಾಸೀ" ... ಸೂರದಾಸರ ಈ ಗೀತೆಯನ್ನು ಎಂ.ಎಸ್. ಸುಬ್ಬುಲಕ್ಷ್ಮಿ ಅವರ ದಿವ್ಯಕಂಠದಲ್ಲಿ ನೀವು ಕೇಳಬಹುದು.  ಈ ರಚನೆಯಲ್ಲಿ ಸೂರದಾಸರು ತಮ್ಮ ಇಷ್ಟದೈವ ಕೃಷ್ಣನನ್ನು ಕಾಣಲಾರದೇ ತಮಗೆ ಉಂಟಾಗುವ ಸಂಕಟವನ್ನು ತೋಡಿಕೊಂಡಿದ್ದಾರೆ.  ಸೂರದಾಸರು ಹುಟ್ಟಾ ಕುರುಡರಾಗಿದ್ದವರು. ಅವರಿಗೆ ಕೃಷ್ಣನ ದರ್ಶನ ಹೇಗೆ  ಉಂಟಾಯಿತು ಎಂಬುದಕ್ಕೆ ಒಂದು ಕಥೆ ಜನಜನಿತವಾಗಿದೆ.   ಒಮ್ಮೆ ಸೂರದಾಸರು ದಾರಿಯಲ್ಲಿದ್ದ ಬಾವಿಯನ್ನು ಕಾಣದೇ ಅದರೊಳಕ್ಕೆ ಬಿದ್ದರಂತೆ. ಆಗ ಸಾಕ್ಷಾತ್ ಶ್ರೀ ಕೃಷ್ಣನೇ ಬಂದು ಅವರನ್ನು ಬಾವಿಯಿಂದ ಮೇಲೆತ್ತಿ ರಕ್ಷಿಸಿದನಂತೆ.  ಕೃಷ್ಣನ ಸಂಗಡ ಇದ್ದ ರಾಧೆ "ಇವನಿಗಾಗಿ ನೀನೇ ಸ್ವತಃ ಬರುವ ಅಗತ್ಯವೇನಿತ್ತು?" ಎಂದು ಪ್ರಶ್ನಿಸುತ್ತಾಳೆ.  "ಅವನು ನನ್ನ ಪರಮ ಭಕ್ತ" ಎಂದು ಕೃಷ್ಣ ಉತ್ತರಿಸುತ್ತಾನೆ. ಹಾಗೇ "ಅವನ ಬಳಿಗೆ ಹೋಗಬೇಡ," ಎಂದು ಎಚ್ಚರಿಸುತ್ತಾನೆ. ಆದರೆ ರಾಧೆ ಕುತೂಹಲದಿಂದ ಸೂರದಾಸನ ಬಳಿಗೆ ಹೋಗುತ್ತಾಳೆ.  ಆಕೆ ಯಾರೆಂದು ಊಹಿಸಿದ ಸೂರದಾಸರು ಆಕೆಯ ಕಾಲಿನ ಗೆಜ್ಜೆಯನ್ನು ಕಿತ್ತುಕೊಂಡು ಇಟ್ಟುಕೊಳ್ಳುತ್ತಾರೆ.  ರಾಧೆ ಎಷ್ಟು ಬೇಡಿಕೊಂಡರೂ ಕೊಡುವುದಿಲ್ಲ. "ನಾನು ಯಾರು ಗೊತ್ತೇ? ನಾನು ಕೃಷ್ಣನ ಪ್ರಿಯತಮೆ, ರಾಧೆ" ಎಂದು ಆಕೆ ಹೇಳಿದಾಗ ಸೂರದಾಸರು "ನಾನು ಹೇಗೆ ನಂಬಲಿ?  ಕುರುಡನೆಂದು ನೀನು  ಮೋಸ ಮಾಡುತ್ತಿರಬಹುದು!" ಎನ್ನುತ್ತಾರೆ.  ರಾಧೆ ಕೃಷ್ಣನನ್ನು ಪ್ರಾರ್ಥಿಸಿ ಸೂರದಾಸರಿಗೆ ದೃಷ್ಟಿ ನೀಡುವಂತೆ ಬೇಡಿಕೊಳ್ಳುತ್ತಾಳೆ. "ರಾಧೆಯ ಗೆಜ್ಜೆಯ ಬದಲು ಬೇರೇನಾದರೂ ಕೇಳು" ಎಂಬ ಕೃಷ್ಣನ ಮಾತಿಗೆ ಸೂರದಾಸರು  "ನಿನ್ನ ದರ್ಶನ ಪಡೆದ ನಂತರ ನನಗೆ ಇನ್ನೇನೂ ಬೇಡ" ಎಂದು ಉತ್ತರಿಸಿ ರಾಧೆಯ ಗೆಜ್ಜೆಗಳನ್ನು ಮರಳಿಸುತ್ತಾರೆ. ಅದಾದ ನಂತರ "ನಿನ್ನ ದರ್ಶನದ ನಂತರ ನನಗೆ ಬೇರೇನೂ ನೋಡಲು ಇಷ್ಟವಿಲ್ಲ, ನನಗೆ ಮತ್ತೊಮ್ಮೆ ಅಂಧತ್ವ ಕರುಣಿಸು" ಎಂದು ಕೃಷ್ಣನಲ್ಲಿ ಬೇಡುತ್ತಾರೆ.  ಈ ಕಥೆಯ ಹಿನ್ನೆಲೆಯಲ್ಲಿ ರಚನೆಯನ್ನು ಓದಿದಾಗ/ಕೇಳಿದಾಗ ಅದು ನಿಮಗೆ ವಿಶೇಷ ಎನ್ನಿಸಬಹುದು. ಸುಬ್ಬುಲಕ್ಷ್ಮಿಯವರ ಗಾಯನದಲ್ಲಿ ಭಕ್ತಿರಸ ಹೇಗೆ ಪ್ರಧಾನವಾಗಿದೆ ಎಂಬುದನ್ನು ಗಮನಿಸಿ.



ಮೂಲ: ಸಂತ ಕವಿ ಸೂರದಾಸ್ 
ಕನ್ನಡಕ್ಕೆ: ಸಿ.ಪಿ. ರವಿಕುಮಾರ್ 



ಹರಿದರ್ಶನದ ದಾಹ ಕಣ್ಣಿಗೆ 


ಕಾಣಲಾರದೇ ಕಮಲನಯನನ
ಅತಿ ಬೇಸರ ಪ್ರತಿ ಘಳಿಗೆ

ಕೇಸರ ತಿಲಕ, ಮುತ್ತುಗಳ ಹಾರ
ಗೆಜ್ಜೆಸದ್ದುಗಳ ನಡಿಗೆ

ಸ್ನೇಹ ಬೆಳೆಸಿ ತೃಣದಂತೆ ತ್ಯಜಿಸಿರುವೆ
ಬಿಗಿದು ಹಗ್ಗ ಕುತ್ತಿಗೆಗೆ

ಮನದೊಳಗಿನ ವ್ಯಥೆ ಅರಿಯರು ಯಾರೂ
ನಗುವರು, ಸಂಕಟ ನನಗೆ

ಸೂರದಾಸ ಪ್ರಭು ದರ್ಶನವಿಲ್ಲದೆ
ಹೊರಳಾಡುತ್ತಿಹೆ ಹೀಗೆ

(c) ಸಿ. ಪಿ. ರವಿಕುಮಾರ್, 2016 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)