ವಿನಾಶ ಮತ್ತು ವಿಕಾಸ (ವಿಜ್ಞಾನ ಕವಿತೆ )
ಅರವತ್ತಾರು ದಶಲಕ್ಷ ವರ್ಷಗಳ ಆಚೆಯ ಹಿಂಸಾಯುಗ
ಆಗಿನ್ನೂ ಭೂವಲಯದಲ್ಲಿರಲಿಲ್ಲ ಹಿಮಾಚ್ಛಾದಿತ ಧ್ರುವಗಳು
ಹರಡಿಕೊಂಡಿತ್ತು ಎಲ್ಲೆಲ್ಲೂ ದಟ್ಟಕಾಡು
ಓಡಾಡಿಕೊಂಡಿದ್ದವು ಕೋರೆದಾಡೆಗಳ ಡೈನೋಸಾರ್ ಸರೀಸೃಪಗಳು
ಕಂಡದ್ದನ್ನು ಕಬಳಿಸುವುದಷ್ಟೇ ಕಲಿತಿದ್ದ ಕ್ರೂರ ಮೃಗಗಳು
ಹಾರಾಡಲು ಕಲಿತ ಟೆರೋಸಾರ್ ಖಗಗಳು
ಇದೀಗ ಇನ್ನೂ ಬಲಿಯುತ್ತಿತ್ತು ವಿಕಾಸದ ರೆಕ್ಕೆ
ಹುಟ್ಟಿಕೊಂಡಿದ್ದವು ಕೆಲವು ನೆಲವಕ್ಕಿ
ಡೈನೋಸಾರ್ ಕಣ್ತಪ್ಪಿಸಿ ತಿನ್ನುತ್ತಿದ್ದವು ಕಾಳನ್ನು ಹೆಕ್ಕಿ
ಬದುಕಿದ್ದವು ಹೇಗೋ ಬಡಪಕ್ಷಿ
ಆಗ
ನಡೆಯಿತೊಂದು ಅಕಲ್ಪಿತ ಘಟನೆ
ನಡೆಸಿ ಕ್ರೂರಮೃಗ ಹನನ
ನೀಡಲೋ ಎಂಬಂತೆ ಭೂಮಿಗೆ ಉಪಶಮನ
ಯಾವುದೋ ಶಕ್ತಿಯ ಅದ್ಭುತ ನಟನೆ:
ಭೂಮಿಗೆ ಲಕ್ಷಾಂತರ ಮೈಲಿ ದೂರದಲ್ಲಿ
ಸೂರ್ಯನ ಸುತ್ತ ಸುತ್ತುತ್ತಿದ್ದ ಒಂದು ಹೆಬ್ಬಂಡೆ --
ಬ್ರಹ್ಮಾಸ್ತ್ರದಂತಿರುವ ಆಸ್ಟೆರಾಯ್ಡು --
ಗರಗರ ಸುತ್ತುತ್ತ
ಮಹಾವೇಗದಲ್ಲಿ ಚಲಿಸುತ್ತ
ತ್ಯಜಿಸಿ ತನ್ನ ಪ್ರದಕ್ಷಿಣಾ ಪಥ
ತೊಟ್ಟು ನಿರ್ನಾಮದ ಶಪಥ
ಉರಿಯುತ್ತ ಉಲ್ಕೆಯಂತೆ
ನೇರವಾಗಿ ಅಪ್ಪಳಿಸಿತಂತೆ
ಭೂಮಿಯ ಎದೆಯನ್ನು ಹಾಯ್ದು
ಸೃಷ್ಟಿಸಿತಂತೆ ಆಳವಾದ ಗಾಯ
ಹನ್ನೆರಡು ಮೈಲಿ ಆಳ
ತೊಂಬತ್ತು ಮೈಲಿ ವಿಸ್ತೀರ್ಣದ ಹಳ್ಳ
ಉರಿದು ಭಸ್ಮವಾದವು ಅರಣ್ಯ
ಬೂದಿಯಾಯಿತು ಬೃಹತ್ ಡೈನೋಸಾರ್ ಸಂತತಿ
ಟೆರೋಸಾರ್ ಸಮೂಹಕ್ಕೂ ಅದೇ ದುರ್ಗತಿ
ಉಳಿದುಕೊಂಡವು ಹೇಗೋ ಪುಣ್ಯ
ಭೂಮಿಯನ್ನೇ ನಂಬಿದ್ದ ನಗಣ್ಯ ನೆಲವಕ್ಕಿ
ಕಣ್ಣು ಪಿಳಿಪಿಳಿ ಬಿಟ್ಟು ನೋಡಿ
ಮತ್ತೆ ಹೊರಟವು ಕಾಳು ತಿನ್ನಲು ಹೆಕ್ಕಿ
ಉರುಳಿತು ವಿಕಾಸದ ಚಕ್ರ
ಇತಿಹಾಸದ ಗೆರೆಯೇ ವಕ್ರ
ಸ್ತಬ್ಧವಾಯಿತು ಡೈನೋಸಾರ್ ಅಟ್ಟಹಾಸ
ಪುಟ್ಟನೆಲವಕ್ಕಿಗಳಿಗೆ ವಿಕಾಸದ ಅವಕಾಶ
ಮತ್ತೆ ಚಿಗುರಿತು ಬೂದಿಯೊಳಗಿಂದ ಹಸಿರು
ಧರಿಸಿದಳು ಭೂರಮೆಯು ಮತೊಮ್ಮೆ ಬಸಿರು
ನಿಡುಸುಯ್ದು ಇಷ್ಟು ದಿನ ಹಿಡಿದಿಟ್ಟಿದ್ದ ಉಸಿರು
ಸ್ಥಿರವಾಯಿತು ನಿಸರ್ಗದ ಉಶ್ವಾಸ ನಿಶ್ವಾಸ
ಕಬಳಿಸಲೆಂದೇ ಹುಟ್ಟಿದ್ದ ಡೈನೋಸಾರ್ ವಂಶ
ಎದುರಾಳಿಯ ಎಲುಬನ್ನೂ ಪುಡಿಮಾಡಿ
ಜಗಿಯಬಲ್ಲ ದಂಷ್ಟ್ರ
ಹೊಂದಿದ್ದ ಟೀರೆಕ್ಸ್ ಇತ್ಯಾದಿ ಜಂತು
ಕಡಿದಂತೆ ಜೀವತಂತು
ಒಂದೇ ಏಟಿಗೆ ಧ್ವಂಸ
ಉಳಿದದ್ದು ಕಾಳು ಹೆಕ್ಕಿ ಬದುಕಿದ ನೆಲವಕ್ಕಿ
ಸಿಕ್ಕಿದ್ದರಲ್ಲೇ ಕಾಣುತ್ತಿತ್ತು ಆತ್ಮತೃಪ್ತಿ
ಮಿತಬಾಳು ಚಿರವೆಂಬುದಕ್ಕೆ ಜೀವಂತ ಸಾಕ್ಷಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ