ಪಾತಕ (ಕವಿತೆ)
ಸಿ.ಪಿ. ರವಿಕುಮಾರ್
ಪರಿಸರ ದಿನಾಚರಣೆ
ತ್ಯಾಜ್ಯ ನಿರ್ವಹಣೆ
ಇವನ್ನೆಲ್ಲಾ ನಾವು
ಪೋಸ್ಟ್ ಮಾಡುತ್ತಿರುವಾಗ
ಅಲ್ಲೆಲ್ಲೋ
ಅಲೀಗಢದಲ್ಲಿ
ಎರಡು ವರ್ಷದ ಹಸುಳೆಯನ್ನು
ಕತ್ತು ಹಿಸುಕಿ
ತ್ಯಾಜ್ಯಕ್ಕಿಂತಲೂ ಕಡೆಯಾಗಿ
ಎಸೆದ ಸುದ್ದಿ ಓದಿ
ಪರಿಸರದ ಬಗ್ಗೆ ಗಾಬರಿಯಾಗಿದ್ದೇನೆ
ಪರಿಸರದ ಸಮಸ್ಯೆ ಏನು ಮಹಾ ಅನ್ನಿಸಿದೆ
ಇಲ್ಲೇ ಬೆಂಗಳೂರಲ್ಲಿ ...
ಸಾಲದ ಹೊರೆಗೆ ತತ್ತರಿಸಿ
ಒಬ್ಬ ತಂದೆ
ಹೆಂಡತಿ ಮಗನನ್ನು ನೇಣಿಗೇರಿಸಿದ ಸುದ್ದಿ ಓದಿ
ಎಕಾನಮಿ ಬಗ್ಗೆ ಭೀತಿಗೊಂಡಿದ್ದೇನೆ
ಹಣ ನೆಟ್ಟು ಬೆಳೆಸುವ ಬ್ಯಾಂಕ್ ಸ್ಕೀಮುಗಳಲ್ಲಿ
ನಾನು ನೆಟ್ಟ ಸಸಿಯಲ್ಲೂ ಕೆಂಪಗಿನದೇನೋ ಕಂಡು
ಅಸಹ್ಯ ಪಟ್ಟುಕೊಂಡಿದ್ದೇನೆ
ಇಷ್ಟೆಲ್ಲಾ ಕಣ್ಣೀರಿನ ನಡುವೆ
ನೀರಿನ ಸಮಸ್ಯೆ ಏನು ಮಹಾ ಅನ್ನಿಸಿದೆ
ಡ್ರಗ್ ಟ್ರಾಫಿಕಿಂಗ್
ಹ್ಯೂಮನ್ ಟ್ರಾಫಿಕಿಂಗ್
ಕಿಡ್ನಿಗಾಗಿ ಮಕ್ಕಳ ಅಪಹರಣ
ಇವನ್ನೆಲ್ಲಾ ಓದಿ ತಲ್ಲಣಗೊಂಡಿದ್ದೇನೆ
ಬೆಂಗಳೂರು ಟ್ರಾಫಿಕ್ ಏನು ಮಹಾ ಅನ್ನಿಸಿದೆ
ಎಂಥ ಕರುಣಾಮಯಿಯಾದರೂ
ದೇವರು ನಮ್ಮನ್ನು ಕ್ಷಮಿಸಲಾರನೆಂದು
ಹತಾಶನಾಗಿದ್ದೇನೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ