ಇನ್ನೂ ಹತ್ತು ಲಿಮರಿಕ್

ಇನ್ನೂ ಹತ್ತು ಲಿಮರಿಕ್ 

ಸಿ. ಪಿ. ರವಿಕುಮಾರ್ 


೧. ಡಬ್!

ಹಾಲಿವುಡ್ ಸಿನಿಮಾದಲ್ಲಿ ಹಾರರ್ ದೃಶ್ಯ
ಕನ್ನಡಕ್ಕೆ ಅನುವಾದಿಸಿದ ಸ್ಕ್ರೀನ್ ರೈಟರ್ ಶಿಷ್ಯ
ಕಟ್ ಎಂದು ಕೂಗಿದರು ನಿರ್ದೇಶಕರು ಒಮ್ಮೆಲೇ
"ಎದೆ ಡಬ್ ಡಬ್ ಅಂತಿದೆ ಅಂತ ಬರೀಬಹುದೇನಲೇ?
ಡಬ್ಬಿಂಗ್ ಇದೆಯೋ ಇಲ್ವೋ ಮೊದ್ಲು ತಿಳ್ಕೋ ವಿಷ್ಯಾ"


೨. ಅನುವಾದ 

ಇದ್ದಳೊಬ್ಬಳು ಅನುರೂಪಾ ಅಂತ
ಅಟೆಂಡ್ ಮಾಡಿದಳು ಅನುವಾದ ಕಮ್ಮಟ
ಈಗ ಗಂಡನ ಜೊತೆಗೆ ಬರಿಯ ವಾಗ್ವಾದ
ಅವನು "ಮಸಾಲೆ" ಎಂದರೆ ಇವಳು "ಬೇಡ, ಸಾದಾ"
ಇದು ಅನು-ವಾದ ಕಮ್ಮಟದ ಪುಟ್ಟ ಅಪಘಾತ

೩. ಡಬ್ಬಿ 

ಸಾಹಿತ್ಯ ಸಮ್ಮೇಳನದಲ್ಲಿ ಊಟಕ್ಕೆ ಲೈನು
ನಿಂತಿದ್ದನು ಕವಿಯೊಬ್ಬ ಕ್ಯೂನಲ್ಲಿ ತಾನೂ
ಸರದಿ ಬಂದಾಗ ತಟ್ಟೆಯಲ್ಲಲ್ಲದೇ
ಡಬ್ಬಿಯಲ್ಲೂ ಕೊಂಡೊಯ್ದ ನಾಲಕ್ಕು ಫೇಡೆ
"ಡಬ್ಬಿಂಗಿಗೆ ಈಗ ಪರವಾಗಿದೆ ಕಾನೂನು"

೪. ಜಾಹೀರಾತು 

ಕುಡಿತದ ಸಮಸ್ಯೆಯೇ? ಚಿಂತಿಸದಿರಿ!
ನಮ್ಮಲ್ಲಿ ಪರಿಹಾರವಿದೆ, ಡೋಂಟ್ ವರಿ!
ಕೆಳಗೆ ಕೊಟ್ಟಿದೆ ನೋಡಿ ಮೊಬೈಲ್ ಸಂಖ್ಯೆ
ವಾರಕ್ಕೆ ಏಳು ದಿನ ಇಪ್ಪತ್ನಾಲಕ್ಕು ಗಂಟೆ
ಕಾಲ್ ಮಾಡಿದರೆ ಮನೆಗೇ ಮಾಡುವೆವು ಡೆಲಿವರಿ"

೫. ಸಂತಾ 

ಸಂತಾಸಿಂಗ್ ಮನೆಗೆ ಬಂದಾಗ ಬಂತಾ
ತನ್ನ ಇಂಗ್ಲಿಷ್ ಸ್ವಲ್ಪ ತೋರಿಸೋಣ ಅಂತಾ
"ಐ ಆಮ್ ಸರ್ದಾರ್ ಅಂಡ್ ಶೀ ಈಸ್ ಸರದಾರ್ನೀ
ಹೀ ಈಸ್ ಮೈ ಕಿಡ್ ಅಂಡ್ ಶೀ ಈಸ್ ಮೈ ಕಿಡ್ನೀ"
ಎಂದು ಹೆಂಡತಿ ಮಕ್ಕಳ ಜೊತೆಗೆ ಹಲ್ಕಿರಿಯುತ್ತ ನಿಂತ

೬. ಮುಖಾರವಿಂದ 

ಸೆಲ್ಫಿಗಾಗಿ ಕೈ ಎತ್ತಿ ಮುಖ ಅರಳಿಸಿ ದೇಶಾವರಿ
ನಗುವ ಸುಂದರಿಯನ್ನು ನೋಡಿ ಮುಗುಳ್ನಕ್ಕ ನರಹರಿ
ಕ್ಲಿಕ್ ಮಾಡಿದ ಕೂಡಲೇ ಆಕೆ
ಒಮ್ಮೆಲೇ ಬದಲಾದದ್ದೇಕೆ
ಗಂಟುಮುಖ ಹಾಕಿ ನಡೆದಳು ಕ್ರೂರಿ!

೭. ಶಿಶುಪಾಲನೆ 

ವಿಚಿತ್ರ ಅಂದರೆ ಏನು ಅಂದ್ರಾ
ಹೇಳ್ತೀನಿ ಕೇಳಿ ಅಂದ್ರು ಶ್ರೀ ಬಿಂದ್ರಾ
ನನ್ನ ಮೊಮ್ಮಗನ ನರ್ಸರಿಗೆ ಏನು
ಹೆಸರು ಇಟ್ಟಿದ್ದಾರೆ ಅಂತೀಯಾ ವೇಣು,
'ಶ್ರೀಕೃಷ್ಣ ಶಿಶುಪಾಲನ ಕೇಂದ್ರ'

೮. ಚಾರ್ 

ನನಗಿಷ್ಟದ ರಾಗ ಚಾರುಕೇಶಿ
ಎಂದಾಗ ಪಂಡಿತ್ ಶಿವಕಾಶಿ
ಹೌದು ನಿಮಗದು ಒಪ್ಪುವುದು ಬಹಳ
ಎಂದುಲಿದಳು ಶಿಷ್ಯೆ ಮಿಸ್ ಸರಳಾ
ನೋಡುತ್ತಾ ನಾಲ್ಕು ತಲೆಗೂದಲ ಕೇಶರಾಶಿ


೯. ಕಟ್ 

ಸಮ್ಮೇಳನದಲ್ಲಿ ಸಾಹಿತಿ
ಕಂಡು 50% ರಿಯಾಯಿತಿ
ಕೊಂಡ ಇಂಗ್ಲಿಷ್ ನಿಘಂಟು
ತೆರೆದಾಗ ಎದೆ ಧಸಕ್ಕೆಂತು
ಏ ಟು ಎಮ್ ಮಾತ್ರವೇ ಇತ್ರೀ

೧೦.  ವಿಸ್ತರಣೆ 

ಯಾವಾಗ ವಿಸ್ತರಿಸುವಿರಿ ಕ್ಯಾಬಿನೆಟ್ಟು
ಎಂದು ಸಚಿವರು ಹಿಡಿದಿರುವಾಗ ಜುಟ್ಟು
ಆದಾಯ ವ್ಯಯ ಬಜೆಟ್ಟು
ಇದಕ್ಕೆಲ್ಲಾ ಎಲ್ಲಿ ಪುರುಸೊತ್ತು
ಬಂದು ಭಯಂಕರ ಸಿಟ್ಟು ವಿನಾಯಿತಿಯಲ್ಲಿ ಕಟ್ಟು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)