ರಂಜಕ (ಕವಿತೆ)
ರಂಜಕ
ಸಿ.ಪಿ. ರವಿಕುಮಾರ್
ಆ ಸಿನಿಮಾದಲ್ಲಿ ಹುಡುಗ ಹುಡುಗಿಯನ್ನು ಪ್ರೇಮಿಸಿದ
ಹುಡುಗಿ ಅದೇ ಹುಡುಗನನ್ನು ಪ್ರೇಮಿಸಿದಳು
ಅವರು ಮದುವೆಯಾಗಲು ಯಾರದ್ದೇ ತಕರಾರಿರಲಿಲ್ಲ
ಯಾವ ಖಳನಾಯಕನೂ ಇರಲಿಲ್ಲ
ಸಿನಿಮಾ ಸಪ್ಪೆಯಾಗಿತ್ತು
ಅವನಿಗೆ ಸೇರಲಿಲ್ಲ
ಆ ಪತ್ರಿಕೆಯಲ್ಲಿ ಕೇವಲ ವರ್ತಮಾನ ಪ್ರಕಟವಾಗುತ್ತಿತ್ತು
ಚರಿತ್ರೆಯ ಪುನರಾವಲೋಕನವಿಲ್ಲ
ಭವಿಷ್ಯದ ಕಾಳಜಿಗಳಿಲ್ಲ
ಇದ್ದದ್ದನ್ನು ಇದ್ದಹಾಗೇ ಬರೆಯುತ್ತಿದ್ದರು
ಅವನು ಪತ್ರಿಕೆಯನ್ನು ಓದಲಿಲ್ಲ
ಟಿವಿ ಹಚ್ಚಿದರೆ
ಯಾವ ವಾಗ್ವಾದಗಳೂ ಇಲ್ಲ
ಶಾಸ್ತ್ರೀಯ ಸಂಗೀತ, ಭರತನಾಟ್ಯ
ಕೃಷಿಕರಿಗೆ ಸಲಹೆ
ಏನೋ ಗಹನ ಚರ್ಚೆ
ಅವನಿಗೆ ಭಾರವೆನ್ನಿಸಿ ಆರಿಸಿದ.
ಹೊರಗೆ ಬಂದು ಸೆಲ್ಫೀ
ಸೆರೆ ಹಿಡಿಯಲು ಪ್ರಯತ್ನಿಸಿದ
ಮೊಬೈಲ್ ಫೋನ್ ಕ್ಯಾಮೆರಾದಲ್ಲಿ
ಫಿಲ್ಟರ್ ಯಾವುದೂ ಇರಲಿಲ್ಲ
ಕಂಡದ್ದನ್ನು ಕಂಡಹಾಗೆ ಸೆರೆಹಿಡಿಯುವ ಕ್ಯಾಮೆರಾ
ಅವನಿಗೆ ಇಷ್ಟವಾಗದೆ ಮುನ್ನಡೆದ
ಪಾರ್ಕಿನಲ್ಲಿ ಕವಿಗೋಷ್ಠಿಯಲ್ಲಿ ಯಾರೂ
ರಾಜಕೀಯ ಕವಿತೆಗಳನ್ನು ಓದಲಿಲ್ಲ
ಘೋಷಣೆ ಕೂಗಲಿಲ್ಲ
ಎಲ್ಲರೂ ಹೂವು, ಬೆಟ್ಟ, ಮರ
ಮತ್ತು ಪ್ರೇಮದ ಕವಿತೆಗಳನ್ನು ಓದುತ್ತಿದ್ದರು
ಚಪ್ಪಾಳೆಗಳು ಜೋರಾಗಿರಲಿಲ್ಲ
ವರದಿಗಾರರೂ ಇರಲಿಲ್ಲ
ಅವನು ನಡುವೆಯೇ ಎದ್ದು ಮನೆಗೆ ಬಂದ
ತಾಯಿ ಬಡಿಸಿದ ಊಟದಲ್ಲಿ ಇದ್ದದ್ದು
ಅತಿರಂಜಿತವಲ್ಲದ
ಮನೆಯ ಹಿತಮಿತ ಅಡುಗೆ.
ಎದೆಯ ತುದಿಯಲ್ಲಿದ್ದ
ಮೆಣಸಿನಕಾಯಿ ರಂಜಕವನ್ನೇ ತಿನ್ನತೊಡಗಿ
ಅದೂ ಸಪ್ಪೆ ಎನ್ನಿಸಿ ಕೈತೊಳೆದು ಮೇಲೆದ್ದ
ಯಾಕೋ ತನ್ನ ಹಸಿವುಗಳನ್ನು
ಈ ಭೂಮಿ ಪೂರೈಸಲಾರದು
ಎನ್ನಿಸತೊಡಗಿ ಅವನು ಹೆದರಿದ
ತಾಯಿ ಅವನ ಕಡೆಗೆ ನೋಡಿ
ನಿನಗೆ ದೃಷ್ಟಿಯಾಗಿದೆ ಎಂದು
ಕಡ್ಡಿ ತರಲು ಒಳಗೆ ಹೋದಳು.
ಅವನು ಹುಲ್ಲುಕಡ್ಡಿಯನ್ನು ಭದ್ರವಾಗಿ ಹಿಡಿದುಕೊಂಡ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ