ಮೂರು ವ್ಯಾಲೆಂಟೈನ್ ಗುಲಾಬಿಗಳು

 

ಮೂರು ವ್ಯಾಲೆಂಟೈನ್ ಗುಲಾಬಿಗಳು




(೧)


"ಕಾಸಿಮಿರ್! ಕಾಸಿಮೀರ್! ಎಲ್ಲಿ ಹೋದ ಈ ಹುಡುಗ!" 


ತಾಯಿ ತನ್ನ ಮಗನನ್ನು ಜೋರಾಗಿ ಕರೆಯುತ್ತಾ ತಲೆಬಾಗಿಲಿನ ಹತ್ತಿರ ಬಂದಳು. ಅವರದ್ದು ದೊಡ್ಡ ಮನೆ. ಮಹಡಿಯ ಮೂರು ಕೋಣೆಗಳಲ್ಲದೆ ಕೆಳಗೆ ನಾಲ್ಕು ಕೋಣೆಗಳು, ದೊಡ್ಡ ಬೈಠಕ್ ಖಾನೆ. ಆರು ಮಕ್ಕಳ ದೊಡ್ಡ ಸಂಸಾರ. ಕಾಸಿಮಿರ್ ಹಿರಿಯ ಮಗ. ತಂದೆತಾಯಿಯ ಅಚ್ಚುಮೆಚ್ಚು. ಗಣಿತದಲ್ಲಿ ಅವನು ತುಂಬಾ ಪ್ರತಿಭಾಶಾಲಿ ಎಂದು ಅವನ ಶಾಲೆಯ ಉಪಾಧ್ಯಾಯರು ಮನೆಗೇ ಬಂದು ತಿಳಿಸಿದ್ದರು. "ನಿಮ್ಮ ಹುಡುಗ ಮುಂದೆ ಖಂಡಿತಾ ದೊಡ್ಡ ಗಣಿತಶಾಸ್ತ್ರಜ್ಞ ಆಗುತ್ತಾನೆ, ನೋಡುತ್ತಿರಿ! ಅವನನ್ನು ಮುಂದೆ ಓದಿಸಿ. ಕಾಲೇಜಿಗೆ ಹೋಗಿ ಪಿಎಚ್. ಡಿ. ಮಾಡಲಿ. ನಾನು ಈ ಮಾತನ್ನು ಎಲ್ಲಾ ಪೋಷಕರಿಗೂ ಹೇಳುವುದಿಲ್ಲ!" ಎಂದು ಪ್ರೊ. ಕಮಿನ್ಸ್ಕಿ ಹೇಳುತ್ತಿದ್ದಾಗ ತಾಯಿಯ ಎದೆ ಹೆಮ್ಮೆಯಿಂದ ಉಬ್ಬಿತು. ಅವಳು ತಟ್ಟೆಯಲ್ಲಿ ಎಲೆಕೋಸಿನ ಖಾದ್ಯಗಳನ್ನು ತಂದಿಟ್ಟಳು. ಬಟ್ಟಲಿಗೆ ಬಿಸಿ ಚಹಾ ಸುರಿದು "ದಯವಿಟ್ಟು ಸ್ವೀಕರಿಸಿ" ಎಂದಳು. ಪ್ರೊ. ಕಮಿನ್ಸ್ಕಿ ತೆರಳಿದ ಮೇಲೆ ಅವಳು ಪತಿಯ ಕಡೆ ನೋಡಿ "ನಮ್ಮ ಕಾಸಿಮಿರ್ ಖಂಡಿತಾ ಪೋಲೆಂಡ್ ದೇಶಕ್ಕೆ ಹೆಸರು ತರುತ್ತಾನೆ!" ಎಂದಳು. ಹಳೆಯದನ್ನೆಲ್ಲ ನೆನೆದು ಅವಳ ಕಂಠ ಗದ್ಗದವಾಯಿತು.


ಕ್ಯಾಸಿಮಿರಾ ಮನೆಯ ಬಾಗಿಲಿನಲ್ಲಿ ನಿಂತು ಸುತ್ತಲೂ ನೋಡಿದಳು. ದೂರದಲ್ಲಿ ಕ್ಯಾಸಿಮಿರ್ ಬರುತ್ತಿದ್ದುದು ಕಾಣಿಸಿತು. ಅವನ ಕೈಯಲ್ಲಿ ಪುಸ್ತಕಗಳ ಹೊರೆ ಇತ್ತು. ಇಪ್ಪತ್ತರ ಹರೆಯದ ತರುಣ. ತನ್ನ ಅಪ್ಪನದೇ ತದ್ರೂಪು. ತಾಯಿ ಮಗನ ಕಡೆಗೆ ಹೆಮ್ಮೆಯಿಂದ ನೋಡಿದಳು. ಅವನು ಈಗ ಕ್ರಾಕಾವ್ ನಗರದಲ್ಲಿ ವಿಶ್ವವಿದ್ಯಾನಿಲಯದಲ್ಲಿ ಪಿಎಚ್. ಡಿ. ವಿದ್ಯಾರ್ಥಿ. ಚಳಿಗಾಲದ ರಜೆಗೆಂದು ಮನೆಗೆ ಬಂದಿದ್ದಾನೆ. ರಜೆಯಲ್ಲೂ ಅವನ ಓದು ಮುಂದುವರೆದಿದೆ. ಗ್ರಂಥಾಲಯಕ್ಕೆ ಹೋಗಿ ಅಲ್ಲಿ ಇಡೀ ದಿನ ಕಳೆಯುತ್ತಾನೆ. ಸರಿರಾತ್ರಿಯಲ್ಲೂ ಮೋಂಬತ್ತಿಯ ಬೆಳಕಿನಲ್ಲಿ ಓದುತ್ತಾ ಬರೆಯುತ್ತಾ ಕುಳಿತಿರುತ್ತಾನೆ. ಅವಳು ಅಡುಗೆಮನೆಗೆ ಹೋಗಿ "ಬೇಗ ಬಿಸಿ ಚಹಾ ಸಿದ್ಧ ಮಾಡು! ಕಟ್ಲೆಟ್ ತಟ್ಟೆಯಲ್ಲಿ ಹಾಕಿ ಸಿದ್ಧ ಮಾಡು. ಕಾಸಿಮಿರ್ ಬರುತ್ತಿದ್ದಾನೆ!" ಎಂದು ಅಡುಗೆಯ ಜುಜಾನಾಗೆ ನಿರ್ದೇಶಗಳನ್ನು ಕೊಟ್ಟಳು. ಅವಳು ತಟ್ಟೆಯನ್ನು ಹೊತ್ತು ಬರುವಾಗ ಸ್ಟಾನಿಸ್ಲಾನ ಕೋಣೆಯಲ್ಲಿ ಪಾಠ ನಡೆಯುತ್ತಿದ್ದುದು ಕೇಳಿಸಿತು. ಅವಳು ಬಾಗಿಲಿಗೆ ಕಿವಿಗೊಟ್ಟು ಒಂದೆರಡು ಕ್ಷಣ ನಿಂತಳು. ಕಳೆದ ತಿಂಗಳು ಕೆಲಸಕ್ಕೆ ಸೇರಿದ ಗವರ್ನೆಸ್ ಮರಿಯಾ ತಾಳ್ಮೆಯಿಂದ ಗಣಿತದ ಪಾಠ ಹೇಳುತ್ತಿದ್ದಳು. ತಾಯಿ ತೃಪ್ತಿಯ ಭಾವನೆಯಿಂದ ಕಾಸಿಮಿರ್ ಕೋಣೆಗೆ ಹೋದಳು.


ವಾರ್ಸಾದಲ್ಲಿ ಚಳಿಗಾಲ ಕ್ರೂರವಾಗಿರುತ್ತದೆ. ಕ್ಯಾಸಿಮಿರಾ ಮಕ್ಕಳ ಚಳಿಗಾಲದ ಉಡುಪುಗಳನ್ನು ಅಟ್ಟದಿಂದ ಕೆಳಕ್ಕಿಳಿಸಿ ಅವುಗಳನ್ನು ಮಕ್ಕಳ ಮೇಲೆ ಪರೀಕ್ಷಿಸಿ ನೋಡಿದಳು. ಮಕ್ಕಳು ಎಷ್ಟು ಬೇಗ ಬೆಳೆದುಬಿಡುತ್ತಾರೆ! ಈ ವರ್ಷದ ಕ್ರಿಸ್ಮಸ್ ಹಬ್ಬಕ್ಕೆ ಹೊಸ ಟೋಪಿಗಳನ್ನು ಖರೀದಿಸಬೇಕು. ಆರು ಮಕ್ಕಳಲ್ಲಿ ಇಬ್ಬರಿಗೆ ಹೊಸ ಕೋಟ್ ಬೇಕು. ಕಾಸಿಮಿರ್ ಈಗ ಬೇರೆ ನಗರದಲ್ಲಿ ವಾಸಿಸುತ್ತಿರುವ ಹುಡುಗ. ಅವನಿಗೆ ಒಂದು ಹೊಸ ಕೋಟ್ ಬೇಕು. ತಮ್ಮ ಗವರ್ನೆಸ್ ಮರಿಯಾ ಬಳಿ ಹೆಚ್ಚು ಉಡುಪುಗಳು ಇದ್ದಂತೆ ಕಾಣದು. ಅವಳಿಗೂ ಒಂದು ಸ್ವೆಟರ್ ಖರೀದಿಸಬೇಕು. ಪಾಪದ ಪ್ರಾಣಿ. ಇಡೀ ದಿವಸ ಐದು ಮಕ್ಕಳಿಗೆ ಪಾಠ ಹೇಳಬೇಕು. ರಷ್ಯನ್, ಫ್ರೆಂಚ್, ಜರ್ಮನ್, ಗಣಿತ, ವಿಜ್ಞಾನ, ಒಂದೇ ಎರಡೇ! ಆದರೆ ಅವಳು ಯಾವ ತಕರಾರೂ ಇಲ್ಲದೆ ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗುತ್ತಿದ್ದಾಳೆ. ಅವಳು ವಸ್ತ್ರಗಳ ಖರೀದಿಗಾಗಿ ಕುದುರೆಗಾಡಿಯಲ್ಲಿ ಹೊರಟಳು.


ಅಂದು ಕ್ಯಾಸಿಮಿರ್ ಮನೆಗೆ ಬಂದಾಗ ಎಂದಿನಂತೆ ತಾಯಿಯ ಸ್ವಾಗತ ಸಿಕ್ಕಲಿಲ್ಲ. ಅವನು ತನ್ನ ಕೋಣೆಗೆ ಹೋಗಿ ಬಟ್ಟೆ ಬದಲಾಯಿಸಿದ. ಚಳಿಗಾಲದಲ್ಲಿ ಬೇಗ ಕತ್ತಲಾಗುವ ಕಾರಣ ಮೋಂಬತ್ತಿ ಹಚ್ಚಿದ. ಅವನಿಗೆ ಬಿಸಿ ಚಹಾ ಬೇಕೆನಿಸಿತು. ತಾಯಿ ಅಡುಗೆಮನೆಯಲ್ಲಿ ಇರಬಹುದು ಎಂದು ತರ್ಕಿಸಿ ಅವನು ಕೆಳಗೆ ಬಂದ. ಅಡುಗೆಮನೆಯಲ್ಲಿ ಯಾರೂ ಇರಲಿಲ್ಲ. ಅಡುಗೆಮನೆಯ ಹತ್ತಿರದಲ್ಲಿದ್ದ ಕೋಣೆಯಲ್ಲಿ ಮೋಂಬತ್ತಿಯ ಬೆಳಕು ಕಂಡಿತು. ಅವನು ಬಾಗಿಲು ತಟ್ಟಿದ.


ಇಪ್ಪತ್ತರ ಹರೆಯದ ಒಬ್ಬಳು ಯುವತಿ ಬಾಗಿಲು ತೆರೆದಳು. ತೆಳ್ಳನೆಯ ಮೈಕಟ್ಟು. ಅವಳು ಕಪ್ಪು ಬಣ್ಣದ ತಲೆಗೂದಲನ್ನು ಚಿಕ್ಕದಾಗಿ ಕತ್ತರಿಸಿಕೊಂಡಿದ್ದಳು. ಕಣ್ಣುಗಳಲ್ಲಿ ಸೀಳುನೋಟ. ಕೈಯಲ್ಲಿ ಪುಸ್ತಕ ಹಿಡಿದಿದ್ದಳು. ಇಬ್ಬರ ಕಣ್ಣುಗಳೂ ಒಂದೆರಡು ಕ್ಷಣ ಒಂದುಗೂಡಿದವು.


"ನೀನು ನನ್ನ ತಮ್ಮ ತಂಗಿಯರಿಗೆ ಗವರ್ನೆಸ್ ಅಲ್ಲವೇ?" ಎಂದ.


"ಹೌದು, ನೀನು ಮನೆಯ ಹಿರಿಯ ಮಗ ಕಾಸಿಮಿರ್. ಕ್ರಾಕಾವ್ ನಗರದಲ್ಲಿ ಗಣಿತದಲ್ಲಿ ಪಿಎಚ್. ಡಿ. ಮಾಡುತ್ತಿರುವೆ, ಅಲ್ಲವೇ?"


"ಹೌದು! ನನ್ನ ತಾಯಿ ಎಲ್ಲಿ ಅಂತ ಹುಡುಕುತ್ತಿದ್ದೆ."


"ಓಹ್, ಅದೇ ನಿಮ್ಮ ಸಂಶೋಧನೆಯ ವಿಷಯವೇ?"


ಅವನು ನಕ್ಕ. 


"ನಿನ್ನ ತಾಯಿ ಮಕ್ಕಳಿಗೆ ಕ್ರಿಸ್ಮಸ್ ಉಡುಪು ಖರೀದಿಸಲು ಹೋಗಿದ್ದಾರೆ. ಊಟದ ವೇಳೆಗೆ ಬರುತ್ತಾರೆ. ನಿನಗೆ ಫ್ಲಾಸ್ಕಿನಲ್ಲಿ ಚಹಾ ತುಂಬಿಸಿ ನಿನ್ನ ಕೋಣೆಯಲ್ಲಿ ಇಟ್ಟಿದ್ದಾರೆ."


"ಓಹ್! ನಾನು ಗಮನಿಸಲಿಲ್ಲ!"


"ಪಿಎಚ್. ಡಿ. ಮಾಡುವವರು ಗಮನಿಸದೆ ಇದ್ದರೆ ಹೇಗೆ!"


ಅವನು ಮತ್ತೆ ನಕ್ಕ. "ನಿನಗೆ ಅಭ್ಯಂತರ ಇಲ್ಲದಿದ್ದರೆ ನೀನೂ ನನ್ನೊಂದಿಗೆ ಚಹಾ ಕುಡಿಯಬಹುದು" ಎಂದ.


"ಚಹಾ ಕುಡಿಯಲು ಯಾರಾದರೂ ಎಂದಾದರೂ ಅಭ್ಯಂತರ ಹೊಂದಿದ್ದಾರಾ!" ಎಂದು ಅವಳು ಅವನನ್ನು ಅನುಸರಿಸಿದಳು. ಅವನ ಕೋಣೆ ಅಸ್ತವ್ಯಸ್ತವಾಗಿತ್ತು. ಎಲ್ಲಾ ಕಡೆಗೆ ಪುಸ್ತಕಗಳು ಬಿದ್ದಿದ್ದವು. ಅವಳು ಕುತೂಹಲದಿಂದ ಕೆಲವು ಪುಸ್ತಕಗಳನ್ನು ಕೈಗೆತ್ತಿಕೊಂಡು ನೋಡಿದಳು. ಅವನು ಬಟ್ಟಲಿಗೆ ಚಹಾ ಬಗ್ಗಿಸಿದ.


"ನೀನು ವಾರ್ಸಾ ವಿಶ್ವವಿದ್ಯಾಲಯದಲ್ಲಿ ಪಿಎಚ್. ಡಿ. ಮಾಡಬಹುದಾಗಿತ್ತಲ್ಲ!" ಎಂದು ಅವಳು ಚಹಾ ಗುಟುಕರಿಸಿದಳು.


"ನನಗೆ ಇಲ್ಲಿ ಸ್ಕಾಲರ್ಶಿಪ್ ಸಿಕ್ಕಲಿಲ್ಲ. ಇಲ್ಲಿ ನಮಗೆ ಅನೇಕ ಜನ ಶತ್ರುಗಳು ಇದ್ದಾರೆ. ನನ್ನ ತಾಯಿ ನಾನು ಹುಟ್ಟುವ ಮುಂಚೆ ರಷ್ಯನ್ ಆಳ್ವಿಕೆಯ ವಿರುದ್ಧ ನಡೆದ ಬಂಡಾಯದಲ್ಲಿ ಭಾಗವಹಿಸಿದ್ದಳು. ಅವಳು ಆಗ ಸೆರೆಮನೆ ವಾಸ ಅನುಭವಿಸಿದಳು."


"ಓಹ್. ಅವರು ಗಟ್ಟಿ ಹೆಂಗಸು ಎಂದು ನೋಡಿದರೆ ತಿಳಿಯುತ್ತದೆ."


"ಅವಳ ತಂದೆ ಕೂಡಾ ಸೆರೆಮನೆಗೆ ಹೋಗಬೇಕಾಯಿತು. ನನ್ನ ಅಜ್ಜ ಸೆರೆಮನೆಯಲ್ಲೇ ಸತ್ತುಹೋದ."


ಅವಳು ಸುಮ್ಮನಿದ್ದಳು.  


"ನಿನ್ನ ಪಿಚ್. ಡಿ. ವಿಷಯ ಏನು?"


ಅವನು ಈ ಪ್ರಶ್ನೆ ನಿರೀಕ್ಷಿಸಿರಲಿಲ್ಲ. ಅವನು ವಿವರಿಸಲು ಪ್ರಯತ್ನಿಸಿದ. ಅವಳು ಕೇಳಿಸಿಕೊಂಡು ಇನ್ನೂ ಕೆಲವು ಪ್ರಶ್ನೆಗಳನ್ನು ಕೇಳಿದಳು. ಅವಳು ತುಂಬಾ ಸೂಕ್ಷ್ಮಮತಿ ಎಂದು ತಿಳಿಯಲು ಅವನಿಗೆ ಬಹಳ ಹೊತ್ತು ಬೇಕಾಗಲಿಲ್ಲ.


"ನಿನಗೂ ಪಿಎಚ್.ಡಿ. ಸಂಶೋಧನೆ ಮಾಡುವ ಖಯಾಲಿ ಇದೆಯೋ ಹೇಗೆ?" ಎಂದು ಅವನು ತಮಾಷೆ ಮಾಡಿದ.


ಅವಳು "ಹೌದು" ಎಂದಾಗ ಅವನು ದಂಗಾದ.


"ನಾನು ಮತ್ತು ನನ್ನ ಅಕ್ಕ ಇಬ್ಬರಿಗೂ ಹೆಚ್ಚಿಗೆ ಓದಬೇಕೆಂಬ ಬಯಕೆ. ಆದರೆ ನಿನಗೆ ಗೊತ್ತೇ ಇದೆಯಲ್ಲ. ಇಲ್ಲಿ ಎಲ್ಲಾ ಕಡೆ ರಷ್ಯನ್ ಪ್ರಾಬಲ್ಯ. ಅವರು ಹೆಣ್ಣು ಮಕ್ಕಳಿಗೆ ಕಾಲೇಜ್ ವಿದ್ಯಾಭ್ಯಾಸಕ್ಕೆ ಅನುಮತಿ ನೀಡುವುದಿಲ್ಲ. ನಾನು ಮತ್ತು ಅಕ್ಕ ಬ್ರೋನಿಸ್ಲಾವಾ ಇಬ್ಬರೂ ಗುಪ್ತವಾಗಿ ಹಾರಾಡುವ ಯೂನಿವರ್ಸಿಟಿಯನ್ನು ಸೇರಿಕೊಂಡು ನಮ್ಮ ವಿದ್ಯಾಭ್ಯಾಸ ಮುಂದುವರೆಸಿದೆವು."


"ಓಹ್. ನಿನ್ನ ಅಕ್ಕ ನಿನ್ನ ತಂದೆತಾಯಿಯ ಜೊತೆ ಇದ್ದಾಳೆಯೇ!" 


"ನನ್ನ ತಾಯಿ ನಾನು ಚಿಕ್ಕ ಹುಡುಗಿಯಾಗಿದ್ದಾಗ ತೀರಿಕೊಂಡಳು. ನನ್ನ ಇನ್ನೊಬ್ಬ ತಂಗಿ ಕೂಡಾ."


ಅವಳ ಮುಖದ ಮೇಲೆ ದುಃಖದ ಛಾಯೆ ಕವಿಯಿತು.


"ಓಹ್. ನನ್ನನ್ನು ಕ್ಷಮಿಸಿ."


"ಇರಲಿ. ಬ್ರೋನಿ ಈಗ ಪ್ಯಾರಿಸ್ ನಗರದಲ್ಲಿ ಓದಲು ಹೋಗಿದ್ದಾಳೆ. ಅವಳ ವಿದ್ಯಾಭ್ಯಾಸಕ್ಕೆ ಬಹಳ ಹಣ ಬೇಕು. ಅದಕ್ಕೇ ನಾನು ಗವರ್ನೆಸ್ ಕೆಲಸಕ್ಕೆ ಸೇರಿದೆ. ನಾನು ಅವಳಿಗೆ ಹಣ ಕಳಿಸುತ್ತೇನೆ. ಮುಂದೆ ನಾನೂ ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ಪಿಎಚ್. ಡಿ. ಮಾಡಲು ಹೋದಾಗ ಅವಳು ನನಗೆ ಸಹಾಯ ಮಾಡುತ್ತಾಳೆ.'


ಅವನು ಅವಾಕ್ಕಾಗಿ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ. ವಿದ್ಯಾಭ್ಯಾಸದಲ್ಲಿ ಇಷ್ಟೊಂದು ಆಸಕ್ತಿ ಉಳ್ಳ ಹೆಣ್ಣನ್ನು ಅವನು ಎಂದೂ ನೋಡಿರಲಿಲ್ಲ. ಅವಳ ವ್ಯಕ್ತಿತ್ವಕ್ಕೂ ತನ್ನ ವ್ಯಕ್ತಿತ್ವಕ್ಕೂ ಇರುವ ಸಾಮ್ಯ ಅವನನ್ನು ಅವಳತ್ತ ಸೆಳೆಯಿತು.


"ನಾನು ಈಗ ಹೊರಡಬೇಕು. ನಾಳೆಯ ಪಾಠಗಳಿಗೆ ತಯಾರಿ ಮಾಡಿಕೊಳ್ಳಬೇಕಲ್ಲ!"


"ನನಗೆ ಹಸಿವಾಗಿದೆ. ನಿಮಗೆ ಆಗಿಲ್ಲವೇ?"


"ನನಗೆ ಕೈಯಲ್ಲಿ ಪುಸ್ತಕ ಇದ್ದರೆ ಹಸಿವೇ ಆಗುವುದಿಲ್ಲ!'


"ನಾನು ನಿಮ್ಮನ್ನು ನೋಡಿದ್ದು ಇದೇ ಮೊದಲ ಸಲ. ನೀವು ನಮ್ಮ ಜೊತೆಗೆ ಮೇಜಿನ ಮೇಲೆ ಯಾಕೆ ಊಟ ಮಾಡುವುದಿಲ್ಲ?"


ಅವಳು ಸುಮ್ಮನಿದ್ದಳು. ಅವನಿಗೆ ಸೂಕ್ಷ್ಮ ತಿಳಿಯಿತು. ತನ್ನ ತಾಯಿ ಅವಳನ್ನು ಊಟದ ಮೇಜಿಗೆ ಆಹ್ವಾನಿಸುವುದಿಲ್ಲ! ಅವನಿಗೆ ಏನು ಹೇಳಬೇಕೋ ತಿಳಿಯಲಿಲ್ಲ.


"ಅಡುಗೆಯ ಜೂಜನ್ ಮತ್ತು ನಾನು ಒಟ್ಟಿಗೆ ಅಡುಗೆಮನೆಯಲ್ಲಿ ಊಟ ಮಾಡುತ್ತೇವೆ. ಸರಿ, ನಾನು ಹೊರಡುವೆ" ಎಂದು ಅವಳು ಎದ್ದಳು.


ಅವನು ಅವಳ ಕಡೆಗೆ ನೋಡಿದ. ಮೋಂಬತ್ತಿಯ ಬೆಳಕಿನಲ್ಲಿ

ಅವಳು ಸಹಜ ಸುಂದರಿ ಎಂದು ಅವನಿಗೆ ತೋರಿತು. ಅವನ ಮನಸ್ಸಿನಲ್ಲಿ ಹಿಂದೆಂದೂ ಇಲ್ಲದ ಒಂದು ಅಪರಿಚಿತ ನೋವು ಮೇಲೆದ್ದಿತು. ಅವನು ಅವಳು ಹೋಗುವುದನ್ನೇ ನೋಡುತ್ತಾ ನಿಂತಿದ್ದ. ಬಾಗಿಲು ಮುಚ್ಚಿ ಅವಳು ಕೆಳಗಿಳಿದು ಹೋದಳು. ಅವನು ಮೇಜಿನ ಮುಂದೆ ಬಹಳ ಹೊತ್ತು ಸುಮ್ಮನೇ ಕುಳಿತಿದ್ದ.



(೨)


ಆರು ಮಕ್ಕಳ ಮನೆಯಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ತಯಾರಿ ಮಾಡಿಕೊಳ್ಳುವುದು ಸುಲಭವೇ! ಕ್ಯಾಸಿಮಿರಾ ಒಂದು ತಿಂಗಳಿನಿಂದ ಈ ತಯಾರಿಗಳಲ್ಲಿ ತೊಡಗಿದ್ದಾಳೆ. ಎಲ್ಲರಿಗೂ ಉಡುಪುಗಳ ಉಡುಗೊರೆ ಸಿದ್ಧವಾಗಿದೆ. ಮನೆಯನ್ನು ಸಿಂಗರಿಸುವ ಕೆಲಸ ಆಗುತ್ತಿದೆ. ಒಣಹುಲ್ಲು ತಂದು ಅದರಿಂದ ನಕ್ಷತ್ರದ ಆಕಾರಗಳನ್ನು ಸೃಷ್ಟಿಸಿ ಬಣ್ಣ ಹಾಕಿ ಬಟ್ಟೆಗಳ ಮೇಲೆ ಅವುಗಳನ್ನು ಹೊಲೆದು ಸಿದ್ಧಗೊಳಿಸಬೇಕು. ಈ ಬಟ್ಟೆಗಳನ್ನು ಮನೆಯ ಗೋಡೆಗಳಿಗೆ ತೂಗುಹಾಕಬೇಕು. ಫಿರ್ ಮರಗಳ ಶಾಖೆಗಳನ್ನು ಕತ್ತರಿಸಿ ತಂದು ಕುಂಡಗಳಲ್ಲಿ ನೆಟ್ಟು ಮನೆಯ ಬೈಠಕ್ಕಿನಲ್ಲಿ ಇಡಬೇಕು. ಪುಟ್ಟ ಮಕ್ಕಳಿಗೆ ಮೊಟ್ಟೆಗಳ ಆಕಾರದ ಸಕ್ಕರೆ ಅಚ್ಚುಗಳನ್ನು ಮಾಡಿ ಅವುಗಳನ್ನು ಅಲಂಕರಿಸಬೇಕು. ಕ್ರಿಸ್ಮಸ್ ಹಿಂದಿನ ದಿವಸ ವಿಜಿಲಿಯಾ ಇರುತ್ತದೆ. ಅಂದು ಮಾಂಸಾಹಾರ ವರ್ಜ್ಯ. ಅಂದಿನ ಔತಣಕ್ಕಾಗಿ ಹಲವಾರು ಬಗೆಯ ಸಸ್ಯಾಹಾರಗಳು ಸಿದ್ಧವಾಗಬೇಕು. ಒಬ್ಬರಿಗೊಬ್ಬರು ನೀಡಿ ಶುಭಾಶಯ ಕೋರಲು ತೆಳ್ಳನೆಯ ಕ್ರಿಸ್ಮಸ್ ವೇಫರ್ ಸಿದ್ದವಾಗಬೇಕು. ಯಾರ ಮನೆಯಲ್ಲಿ ಎಂಥ ವೇಫರ್ ಇತ್ತು ಎಂಬುದೆಲ್ಲ ಹೆಂಗಳೆಯರ ಚರ್ಚೆಯ ವಿಷಯ. ಹೀಗಾಗಿ ಏನಾದರೂ ವಿಶೇಷ ಇರಬೇಕು. ಈ ಸಲ ವೇಫರ್ ಮೇಲೆ ಯೇಸು ಕ್ರಿಸ್ತನ ಶಿಲುಬೆಯ. ಚಿತ್ರ ಮೂಡಿಸಬೇಕೆಂದು ಕ್ಯಾಸಿಮಿರಾ ನಿರ್ಧರಿಸಿದ್ದಾಳೆ. ಜೂಜನ್ ಜೊತೆಗೆ ಇಡೀ ದಿನ ಅವಳು ಈ ತಯಾರಿಗಳಲ್ಲಿ ವ್ಯಸ್ತಳಾಗಿರುತ್ತಾಳೆ. ಹೀಗಾಗಿ ಅವಳಿಗೆ ಮನೆಯಲ್ಲಿ ಬೇರೆ ಕೆಲಸಗಳ ಕಡೆ ಅಷ್ಟು ಗಮನವಿರಲಿಲ್ಲ. ತಾಯಿ ಅಡುಗೆಮನೆಯಲ್ಲಿ ಇದ್ದಾಗ ಕಾಸಿಮಿರ್ ಗುಟ್ಟಾಗಿ ಬಂದು ಮರಿಯಾಳನ್ನು ಕಾಣುತ್ತಿದ್ದ. ಅವರು ಅನೇಕಾನೇಕ ವಿಷಯಗಳ ಬಗ್ಗೆ ಹರಟೆ ಹೊಡೆಯುತ್ತಿದ್ದರು. ಗಣಿತದ ಪ್ರಮೇಯಗಳನ್ನು ಕುರಿತು ಕೂಡಾ. 


ಒಂದು ದಿನ ಅವನು ಅವಳ ಕೋಣೆಗೆ ಬಂದಾಗ ಅವಳ ಕೈಯಲ್ಲಿ ಒಂದು ಪತ್ರ ಇದ್ದಿದ್ದು ಕಂಡಿತು. ಅವಳು ಪತ್ರವನ್ನು ತದೇಕಚಿತ್ತತೆಯಿಂದ ಓದುತ್ತಿದ್ದಳು. ಅವಳ ಕಣ್ಣುಗಳು ಕೆಂಪಾಗಿದ್ದವು. ಅವಳು ಅಳುತ್ತಿದ್ದಳು ಎಂಬುದು ಸ್ಪಷ್ಟವಾಗಿತ್ತು.


“ಏನಾಯಿತು, ಮರಿಯಾ?” ಎಂದು ಅವನು ಕಳಕಳಿಯಿಂದ ಕೇಳಿದ.


ಅವಳು ಸುಮ್ಮನಿದ್ದಳು.


“ಇದು ಯಾರ ಪತ್ರ? ನಿನ್ನ ತಂದೆಯದೇ? ಅಕ್ಕನದ್ದೇ?”


“ಬ್ರೋನಿಯಾ ಬರೆದದ್ದು. ಪ್ಯಾರಿಸ್ ನಿಂದ.”


“ಅಳುವಂಥದ್ದು ಏನು ಆಯಿತು? ಅವಳು ಕ್ಷ್ಮೇಮ ತಾನೇ?”


“ಹೂಂ.”


“ಮತ್ತೆ ? ಅವಳ ವಿದ್ಯಾಭ್ಯಾಸ ?”


“ಚೆನ್ನಾಗಿ ನಡೆದಿದೆ ಎಂದು ಬರೆದಿದ್ದಾಳೆ.”


“ಮತ್ತೆ ನೀನೇಕೆ ಅಳುತ್ತಿದ್ದೀ!”


“ನನಗೆ ಮುಂದೆ ಓದಬೇಕು ಎಂದು ಎಷ್ಟೊಂದು ಆಸೆ ಇದೆ, ಕ್ಯಾಸಿಮಿರ್! ನನ್ನ ಒತ್ತಾಸೆ ನಿನಗೆ ಅರ್ಥ ಆಗುವುದೋ ಇಲ್ಲವೋ! ನಿನ್ನನ್ನು ಯಾರಾದರೂ ವಿಶ್ವವಿದ್ಯಾಲಯಕ್ಕೆ ಬರದಂತೆ ತಡೆದು ಮನೆಗೆ ಕಳಿಸಿಬಿಡುತ್ತಾರೆ ಅಂತ ಭಾವಿಸು. ಆಗ ನಿನಗೆ ಹೇಗೆ ಅನ್ನಿಸಬಹುದು?”


ಅವನು ಸುಮ್ಮನಿದ್ದ. ಅಂತಹ ಸನ್ನಿವೇಶವನ್ನು ಅವನಿಗೆ ಊಹಿಸಿಕೊಳ್ಳಲು ಸಾಧ್ಯವಾಗಲಿಲ್ಲ.


“ನನಗೆ ಈಗಿಂದ ಈಗಲೇ ಪ್ಯಾರಿಸ್ ವಿಶ್ವವಿದ್ಯಾಲಯಕ್ಕೆ ಹೋಗಿಬಿಡುವ ಮನಸ್ಸಾಗುತ್ತಿದೆ. ಅಲ್ಲಿ ಪ್ರಯೋಗಾಲಯಗಳಲ್ಲಿ ಸಂಶೋಧನೆ ಮಾಡುವ ಮನಸ್ಸಾಗುತ್ತಿದೆ. ಬ್ರೋನಿಯಾ ಎಷ್ಟೊಂದು ವರ್ಣಿಸಿ ಬರೆದಿದ್ದಾಳೆ ಅಲ್ಲಿಯ ವಾತಾವರಣವನ್ನು! ನಾನು ಇಲ್ಲಿ ನನ್ನ ಸಮಯ ವ್ಯರ್ಥ ಮಾಡುತ್ತಿದ್ದೇನೆ ಎನ್ನಿಸುತ್ತಿದೆ!”


ಅವನು ಅವಳ ಕೈಗಳನ್ನು ಹಿಡಿದುಕೊಂಡ. “ಹಾಗೆನ್ನಬೇಡ, ಇಲ್ಲೂ ಪರಿಸ್ಥಿತಿ ಬದಲಾಗುತ್ತದೆ, ನೋಡುತ್ತಿರು!”


“ನಮ್ಮ ಜನ ಬದಲಾಗಬೇಕು, ಕಾಸಿಮಿರ್. ಹೆಣ್ಣಿನ ಕೆಲಸ ಎಂದರೆ ಮದುವೆಯಾಗಿ ಮಕ್ಕಳನ್ನು ಹಡೆಯುವುದು, ಅಡುಗೆ ಮಾಡುವುದು, ಮನೆಯನ್ನು ಸ್ವಚ್ಛ ಮಾಡುವುದು ಇದಿಷ್ಟೇ ಎಂದು ಎಲ್ಲಿಯವರೆಗೆ ಜನ ನಂಬುತ್ತಾರೋ ಅಲ್ಲಿಯವರೆಗೆ ಈ ಪರಿಸ್ಥಿತಿ ಬದಲಾಗದು.”


“ಈಗಾಗಲೇ ಲೇಖಕರು, ಲೇಖಕಿಯರು ಸ್ತ್ರೀಯರ ಹಕ್ಕುಗಳ ಬಗ್ಗೆ ಬರೆಯುತ್ತಿದ್ದಾರೆ. ಪರಿಸ್ಥಿತಿ ಬದಲಾಗುತ್ತದೆ.”


“ಆದೀತು. ಬಹಳ ನಿಧಾನವಾಗಿ. ನಮ್ಮ ದೇಶದ ದುರದೃಷ್ಟ ನೋಡು. ಮೂರು ವಿಭಿನ್ನ ದೇಶಗಳು ನಮ್ಮನ್ನು ಹಂಚಿಕೊಂಡು ಆಳುತ್ತಿವೆ! ಇದ್ದಿದ್ದರಲ್ಲಿ ಪ್ರಷ್ಯನ್ ಆಡಳಿತ ಇರುವ ಪೋಸೆನ್ ಪ್ರಾಂತದಲ್ಲಿ ಹೆಂಗಸರಿಗೆ ಒಂದಿಷ್ಟು ಸ್ವಾತಂತ್ರ್ಯ ಇದೆ. ಆದರೆ ಅಲ್ಲಿ ಉನ್ನತ ಶಿಕ್ಷಣ ಸೌಲಭ್ಯವಿಲ್ಲ. ಇಲ್ಲಿಯ ರಷ್ಯನ್ ಆಡಳಿತ ಹೆಂಗಸರ ಕಾಲೇಜ್ ಶಿಕ್ಷಣವನ್ನು ವಿರೋಧಿಸುತ್ತದೆ. ಅವರು ರಷ್ಯನ್ ಅಧಿಕಾರವನ್ನು ಪ್ರಶ್ನಿಸಬಹುದು ಎಂಬ ಕಾರಣಕ್ಕೆ. ನಿನ್ನ ತಾಯಿಯೇ ಉದಾಹರಣೆ ಇಲ್ಲವೇ? ನನ್ನ ಮನೆಯಲ್ಲೂ ಆಗಿದ್ದು ಅದೇ. ಮನೆಯಲ್ಲಿ ತಾಯಿಗೆ ಶಿಕ್ಷಣ ದೊರೆತರೆ ಅವಳ ಮೂಲಕ ಇಡೀ ಕುಟುಂಬಕ್ಕೆ ಶಿಕ್ಷಣ ದೊರೆಯುತ್ತದೆ. ಇದು ರಷ್ಯನ್ ಆಡಳಿತಕ್ಕೆ ಇಷ್ಟವಿಲ್ಲ. ಮನೆಗೆ ದುಡಿದು ತರಬೇಕಾದ ಹೊಣೆಗಾರಿಕೆ ಇರುವ ಗಂಡಸರಲ್ಲಿ ಎಷ್ಟು ಜನ ಉನ್ನತ ಶಿಕ್ಷಣಕ್ಕಾಗಿ ಹೋಗುತ್ತಾರೆ? ನಮ್ಮ ದೇಶವನ್ನು ತಹಬಂದಿಯಲ್ಲಿ ಇಟ್ಟುಕೊಳ್ಳಲು ನಮಗೆ ಹೆಚ್ಚು ಶಿಕ್ಷಣ ನೀಡದೇ ಇರುವುದೇ ಮೇಲು ಎಂದು ರಷ್ಯನ್ ಆಡಳಿತಕ್ಕೆ ಗೊತ್ತು. ನನ್ನ ತಂದೆ ಒಂದಲ್ಲ ಎರಡು ಶಾಲೆಗಳಿಗೆ ನಿರ್ದೇಶಕರಾಗಿದ್ದರು. ರಷ್ಯನ್ ಆಡಳಿತದ ನೀತಿಗಳನ್ನು ವಿರೋಧಿಸಿದರು. ರಷ್ಯನ್ ಆಡಳಿತ ಶಾಲೆಗಳಲ್ಲಿ ಪ್ರಯೋಗಶಾಲೆಗಳೇ ಇರಕೂಡದು ಎಂದು ನಿಯಮ ಮಾಡಿದಾಗ ನನ್ನ ತಂದೆ ಪ್ರಯೋಗಾಲಯದ ಉಪಕರಣಗಳನ್ನು ನಮ್ಮ ಮನೆಗೇ ತಂದರು. ಮನೆಯಲ್ಲೇ ಒಂದು ಪ್ರಯೋಗಶಾಲೆ ಮಾಡಿಕೊಟ್ಟರು. ನನ್ನ ಬಾಲ್ಯ ಪ್ರಯೋಗಶಾಲೆಯಲ್ಲಿ ಕಳೆಯಿತು. ನಾನು ಹತ್ತು ವರ್ಷದ ಹುಡುಗಿಯಾಗಿದ್ದಾಗ ನನಗೆ ಶಾಲೆಯಲ್ಲಿ ಚಿನ್ನದ ಪದಕ ಸಿಕ್ಕಿತು. ಮುಂದೆ ಕೂಡಾ ನನ್ನ ಎಲ್ಲಾ ಶಿಕ್ಷಕರೂ ನನ್ನನ್ನು ಸದಾ ಹೊಗಳುತ್ತಲೇ ಇದ್ದರು. ನೀನು ಪ್ಯಾರಿಸ್ ದೇಶಕ್ಕೆ ಹೋಗಿ ಉನ್ನತ ವ್ಯಾಸಂಗ ಮಾಡು ಎಂದು ಎಲ್ಲರೂ ಸಲಹೆ ಕೊಟ್ಟರು. ಹೀಗೆ ಅವೆಲ್ಲ ಬಿಟ್ಟು ಮಕ್ಕಳಿಗೆ ಶಾಲೆಯ ಪಾಠ ಹೇಳುವುದು ನನಗೆ ಸುಲಭವಲ್ಲ!”


ಅವಳ ಕಂಠ ಗದ್ಗದವಾಯಿತು. ಕಾಸಿಮಿರ್ ಅವಳ ಕೈಗಳನ್ನು ಚುಂಬಿಸಿದ. “ಸಮಾಧಾನ ಮಾಡಿಕೋ, ಮರಿಯಾ!” ಎಂದ. “ಮರಿಯಾ, ನಿನ್ನ ತಂದೆ ನಿನ್ನ ವ್ಯಾಸಂಗಕ್ಕೆ ಹಣ ನೀಡುವುದಿಲ್ಲವೇ?” ಎಂದು ಕೇಳಿದ. 


ಅವಳು ನಕ್ಕಳು.


“ನಮಗೆ ಎರಡೂ ಕಡೆಯಿಂದ ವಂಶಸ್ಥ ಆಸ್ತಿ ಬೇಕಾದಷ್ಟು ಇತ್ತು. ಆದರೆ ಎಲ್ಲವನ್ನೂ ರಷ್ಯನ್ ಆಡಳಿತ ಕಬಳಿಸಿತು. ನಮ್ಮ ತಂದೆಯನ್ನು ಉನ್ನತ ಹುದ್ದೆಯಿಂದ ತೆಗೆದು ಹಾಕಿತು. ನನ್ನ ತಾಯಿಗೆ ಬಹುಶಃ ಇದೆಲ್ಲ ತಡೆದುಕೊಳ್ಳುವ ಶಕ್ತಿ ಇರಲಿಲ್ಲ. ಅವರು ಟಿಬಿ ರೋಗಕ್ಕೆ ತುತ್ತಾದರು. ನಾವು ಇನ್ನೂ ಪುಟ್ಟ ಮಕ್ಕಳು. ನನ್ನ ತಂದೆ ಸಣ್ಣಪುಟ್ಟ ಉದ್ಯೋಗಗಳನ್ನು ಹಿಡಿದು ನಮ್ಮನ್ನು ಸಾಕಿದರು. ನನ್ನ ತಂಗಿ ಒಬ್ಬಳು ಟೈಫಸ್ ಜ್ವರಕ್ಕೆ ಬಲಿಯಾದಳು. ಆಗ ನಾನು ಮಾತಾಡುವುದನ್ನೇ ನಿಲ್ಲಿಸಿ ಮಂಕಾಗಿಬಿಟ್ಟಿದ್ದೆನಂತೆ. ಒಂದು ವರ್ಷ ನಾನು ನನ್ನ ತಂದೆಯ ಸಂಬಂಧಿ ಒಬ್ಬರ ಮನೆಯಲ್ಲಿ ಚೇತರಿಸಿಕೊಂಡೆ. ನನ್ನ ತಂದೆ ತಮ್ಮ ಮಕ್ಕಳನ್ನು ಅವಲಂಬಿಸದೆ ಇರುವುದೇ ದೊಡ್ಡ ವಿಷಯ. ನಾನು ಮುಂದೆ ಓದಬೇಕೆಂಬ ಆಸೆ ಅವರಿಗೂ ಬಲವಾಗಿದೆ. ತಾನು ಅದಕ್ಕಾಗಿ ಏನೂ ಸಹಾಯ ಮಾಡಲು ಆಗದು ಎಂಬ ಕೊರಗೂ ಅವರಿಗೆ ಇದೆ.”


“ಮರಿಯಾ, ನಾನು ನಿನಗೊಂದು ಮಾತು ಹೇಳಲೇ?”


ಅವಳು ಸುಮ್ಮನೆ ಅವನ ಕಡೆಗೆ ನೋಡಿದಳು.


“ನಾವು ಮದುವೆ ಆದರೆ ಸಮಸ್ಯೆ ಬಗೆ ಹರಿಯುತ್ತದೆ! ನನ್ನ ತಂದೆತಾಯಿ ಸ್ಥಿತಿವಂತರು. ನಮ್ಮಿಬ್ಬರನ್ನೂ ಪ್ಯಾರಿಸ್ ವಿಶ್ವವಿದ್ಯಾಲಯಕ್ಕೆ ವ್ಯಾಸಂಗ ಮಾಡಲು ಕಳಿಸುವಷ್ಟು ಅವರು ಶ್ರೀಮಂತರು.”


ಅವಳು ಆವಾಕ್ಕಾಗಿ ಅವನ ಕಡೆಗೆ ನೋಡಿದಳು. ಎಲ್ಲೋ ದೂರದಲ್ಲಿ ಒಂದು ಆಶಾಕಿರಣ ಹೊಳೆದಂತೆ ಅವಳಿಗೆ ಭಾಸವಾಯಿತು. ಅವಳ ಮೌನವನ್ನು ಅವನು ಸಮ್ಮತಿಯ ಲಕ್ಷಣ ಎಂದು ಭಾವಿಸಿದ. ಅವಳ ತೋಳುಗಳ ಸುತ್ತ ತನ್ನ ತೋಳುಗಳನ್ನು ಬಳಸಿ ಅವಳನ್ನು ಆಲಂಗಿಸಿಕೊಂಡ. ಅವನ ನಿಷ್ಕಲ್ಮಶ ಪ್ರೇಮದ ಸುಂದರ ಅನುಭೂತಿಯಲ್ಲಿ ಅವಳು ಕಣ್ಮುಚ್ಚಿದಳು.


ಕ್ರಿಸ್ಮಸ್ ಹಬ್ಬದ ಹಿಂದಿನ ದಿವಸದ ವಿಜಿಲಿಯಾ ಔತಣಕೂಟಕ್ಕೆ ಕ್ಯಾಸಿಮಿರಾ ಮನೆಯ ನೌಕರರನ್ನೂ ಕರೆದಳು. ಜೂಜನ್, ಜೋಸೆಫ್, ಮತ್ತು ಮರಿಯಾ ಕೂಡಾ ಊಟದಮನೆಗೆ ಬಂದರು. ಮೇಜಿನ ಮೇಲೆ ಅನೇಕ ಬಗೆಯ ವ್ಯಂಜನಗಳನ್ನು ಪಿಂಗಾಣಿಯ ಭರಣಿಗಳಲ್ಲಿ ಜೋಡಿಸಿಟ್ಟಿದ್ದರು. ಮೊಂಬತ್ತಿಗಳನ್ನು ಹಚ್ಚಿಟ್ಟು ಬೆಳಕು ಮಾಡಲಾಗಿತ್ತು. ಕೋಣೆಯಲ್ಲಿ ಬೆಂಕಿಯ ಗೂಡಿನಲ್ಲಿ ದೊಡ್ಡ ಬೆಂಕಿ ಉರಿಯುತ್ತಿತ್ತು. ಹೊರಗೆ ಕೊರೆಯುವ ಚಳಿ ಇದ್ದರೂ ಕೋಣೆ ಬೆಚ್ಚಗೆ ಹಿತವಾಗಿತ್ತು. ಎಲ್ಲರೂ ಒಳ್ಳೆಯ ಉಡುಪುಗಳನ್ನು ತೊಟ್ಟು ಬಂದಿದ್ದರು. ಪರಸ್ಪರ ಉತ್ಸಾಹದಿಂದ ಮಾತಾಡಿಕೊಳ್ಳುತ್ತಿದ್ದರು.


“ನಮ್ಮ ಮನೆಯಲ್ಲಿ ಇವೆಲ್ಲಾ ಆಚರಣೆಗಳು ಇಲ್ಲ” ಎಂದು ಮರಿಯಾ ಜೂಜನ್ ಹತ್ತಿರ ಹೇಳಿಕೊಂಡಳು. 


“ಓಹ್! ಯಾಕೆ?”


“ನನ್ನ ತಾಯಿ ಕ್ಯಾಥಲಿಕ್ ಆಗಿದ್ದರು. ಅವರಿಗೆ ಟಿಬಿ ರೋಗ ಬಂದು ತೀರಿಕೊಂಡ ನಂತರ ನನ್ನ ಒಬ್ಬ ತಂಗಿಯೂ ಜ್ವರಕ್ಕೆ ಬಲಿಯಾದಳು. ನಮ್ಮ ತಂದೆ ಚರ್ಚಿಗೆ ಹೋಗುವುದನ್ನು ನಿಲ್ಲಿಸಿಬಿಟ್ಟರು. ನಮಗೆ ಯಾವ ಆಚರಣೆಗಳಲ್ಲೂ ನಂಬಿಕೆ ಇಲ್ಲ. ಇವತ್ತು ಯೇಸು ಕ್ರಿಸ್ತನ ಹುಟ್ಟುಹಬ್ಬದ ಆಚರಣೆ ಎನ್ನುವುದು ಬಿಟ್ಟರೆ ನನಗೆ ಬೇರೆ ಏನೂ ಗೊತ್ತಿಲ್ಲ.”


“ನೋಡು, ಮೇಜಿನ ಮೇಲೆ ಹದಿಮೂರು ಬಗೆಯ ಖಾದ್ಯದ ಪದಾರ್ಥಗಳನ್ನು ಜೋಡಿಸಿದೆ. ಯೇಸು ಮತ್ತು ಅವನ ಹನ್ನೆರಡು ಅನುಯಾಯಿಗಳ ನೆನಪಿನಲ್ಲಿ. ಇವತ್ತು ಯಾವ ಪದಾರ್ಥದಲ್ಲೂ ಯಾವುದೇ ಮಾಂಸ ಇರುವುದಿಲ್ಲ. ಮೇಜಿನ ತುದಿಯಲ್ಲಿ ಇಟ್ಟಿರುವ ಹರಿವಾಣದಲ್ಲಿ ಜೋಡಿಸಿ ಇಟ್ಟಿರುವುದು ಓಪ್ಲಟೆಕ್. ತೆಳ್ಳನೆಯ ವೇಫರ್. ಪ್ರತಿಯೊಂದರ ಮೇಲೂ ಕಡ್ಡಿಯಿಂದ ಚಿತ್ರ ಕೊರೆದು ತಯಾರಿಸಲು ನನಗೆ ಒಂದು ವಾರ ಬೇಕಾಯಿತು. ಪ್ರತಿಯೊಬ್ಬರೂ ಪ್ರತಿಯೊಬ್ಬರಿಗೂ ಒಂದು ಓಪ್ಲಟೆಕ್ ಕೊಟ್ಟು ಕ್ರಿಸ್ಮಸ್ ಶುಭಾಶಯ ಹೇಳಬೇಕು. ಅನಂತರವೇ ಊಟ.”


“ಇವತ್ತು ಮಾಂಸಾಹಾರ ಏಕೆ ತಿನ್ನುವುದಿಲ್ಲ?”


“ಯೇಸು ಕ್ರಿಸ್ತನಿಗೆ ಮೀನಿನ ಹೊರತು ಬೇರೆ ಯಾವ ಮಾಂಸವೂ ಲಭ್ಯವಿರಲಿಲ್ಲ.”


“ಹದಿಮೂರು ಬಗೆಯ ಅಡುಗೆ, ಅದೂ ಮಾಂಸವಿಲ್ಲದ ಅಡುಗೆ!”


“ಹೂಂ. ಎಲೆಕೋಸಿನ ಸೂಪ್, ಅಣಬೆಯ ಸೂಪ್, ತರಕಾರಿಯ ಕೋಸಂಬರಿ, ಹೀಗೆ ಹಲವು ರೀತಿಯ ಅಡುಗೆಗಳನ್ನು ತಯಾರಿಸಲು ನಾನು ಮತ್ತು ಮದಾಂ ಕ್ಯಾಸಿಮಿರಾ ಒಂದು ತಿಂಗಳಿನಿಂದ ಸಿದ್ಧತೆ ಮಾಡಿಕೊಂಡಿದ್ದೇವೆ. ಮೂರು ದಿನಗಳಿಂದ ಶ್ರಮ ಪಟ್ಟಿದ್ದೇವೆ. ಇವತ್ತು ಮೇಜಿನ ಮೇಲೆ ಹುಲ್ಲು ಹಾಸಿ ಅದರ ಮೇಲೆ ಬಟ್ಟೆ ಹರಡಿದ್ದೇವೆ. ಯೇಸು ಕ್ರಿಸ್ತ ಹುಟ್ಟಿದ್ದು ಒಂದು ಹುಲ್ಲಿನ ಬಣವೆಯ ಮೇಲೆ, ಒಂದು ಪ್ರಾಣಿಗಳ ಲಾಯದಲ್ಲಿ, ಅಲ್ಲವೇ! ಎಲ್ಲಾ ದೇವರ ಇಚ್ಛೆ!” ಎಂದು ಜೂಜನ್ ತನ್ನ ಕೊರಳಿನಲ್ಲಿದ್ದ ಶಿಲುಬೆಗೆ ಮುತ್ತಿಟ್ಟಳು.


ಕ್ಯಾಸಿಮಿರಾ ತನ್ನ ಗಂಡನಿಗೆ ಪ್ರಾರ್ಥನೆ ಓದುವಂತೆ ತಿಳಿಸಿದಳು. ಪ್ರಾರ್ಥನೆಯ ನಂತರ ಎಲ್ಲರೂ ಓಪ್ಲಟೆಕ್ ಚೂರುಗಳನ್ನು ಪರಸ್ಪರರಿಗೆ ಹಂಚಿ ಶುಭಾಶಯಗಳನ್ನು ತಿಳಿಸಿದರು. ನಂತರ ಭೋಜನ ಪ್ರಾರಂಭವಾಯಿತು. ಕ್ಯಾಸಿಮಿರಾ ಮಕ್ಕಳಿಗೆ ತಟ್ಟೆಯಲ್ಲಿ ಬಡಿಸಿ ಅವರನ್ನು ಮೇಜಿನ ಮುಂದೆ ಕೂಡಿಸಿದಳು. ದೊಡ್ಡವರು ತಮ್ಮ ತಟ್ಟೆಗಳಿಗೆ ತಾವೇ ಬಡಿಸಿಕೊಂಡು ಕುಳಿತರು. ಊಟ ರುಚಿಯಾಗಿತ್ತು. ಹೊರಗೆ ಹಿಮ ಬೀಳುತ್ತಿತ್ತು. ಕ್ಯಾಸಿಮಿರಾ ತನ್ನ ಹಿರಿಯ ಮಗನಿಗೆ ವಿಶೇಷ ಆಸ್ಥೆಯಿಂದ ಉಪಚರಿಸುತ್ತಿದ್ದಳು. “ನೀನಿನ್ನು ಬರುವುದು ಯಾವಾಗಲೋ! ಹೀಗೆ ಕುಟುಂಬದ ಜೊತೆ ಕೂತು ಊಟ ಮಾಡುವುದು ಯಾವಾಗಲೋ! ನಿನಗೆ ಇಷ್ಟವಾದ ಅಣಬೆಯ ಸೂಪ್ ಮಾಡಿಸಿದ್ದೇನೆ. ನೆನೆಸಿದ ಗೋಧಿಯ ಕೋಸಂಬರಿ ನಿನಗೆ ಇಷ್ಟ ಅಲ್ಲವೇ?” ಎನ್ನುತ್ತಾ ಸುಳಿದಾಡಿದಳು.


ಊಟದ ನಂತರ ಎಲ್ಲರೂ ಬೈಠಕ್ ಖಾನೆಯಲ್ಲಿ ಸೇರಿದರು. ಕಾಸಿಮಿರ್ ಪಿಯಾನೋ ನುಡಿಸಿದ. ಅವನ ತಮ್ಮತಂಗಿಯರು ಯೇಸುಕ್ರಿಸ್ತನ ಸ್ತುತಿಗಳನ್ನು ಹಾಡಿದರು. ಜೂಜನ್ ಎಲ್ಲರಿಗೂ ಬಿಸಿ ಚಹಾ ತಂದಳು. ನಂತರ ಕುಟುಂಬದವರು ಕುದುರೆ ಗಾಡಿಗಳಲ್ಲಿ ಕುಳಿತು ಚರ್ಚಿಗೆ ಹೊರಟರು. ಇಂದು ಚರ್ಚಿನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು.  


“ನಿಮಗೆ ಅಭ್ಯಂತರ ಇಲ್ಲದಿದ್ದರೆ ನಾನು ಮನೆಯಲ್ಲೇ ಇರುತ್ತೇನೆ” ಎಂದು ಮರಿಯಾ ಹೇಳಿದಾಗ ಕ್ಯಾಸಿಮಿರಾಗೆ ತಬ್ಬಿಬ್ಬಾಯಿತು. ಆದರೆ ತನ್ನ ಭಾವನೆಗಳನ್ನು ತೋರ್ಪಡಿಸದೆ “ನಿನ್ನ ಇಷ್ಟ” ಎಂದಷ್ಟೇ ಹೇಳಿದಳು.


ಮರಿಯಾ ಕಿಟಕಿಯಿಂದ ನೋಡುತ್ತಾ ನಿಂತಳು. ಕುದುರೆಗಾಡಿಗಳು ಹಿಮದಿಂದ ಆವೃತವಾದ ರಸ್ತೆಯಲ್ಲಿ ಮೆಲ್ಲನೆ ಸಾಗಿದವು. ಗಾಡಿಗೆ ಕಟ್ಟಿದ ಗಂಟೆಗಳ ಸದ್ದು ಕತ್ತಲುರಾತ್ರಿಯಲ್ಲಿ ಅನುರಣಿಸಿತು.


(೩)


ಎಲ್ಲರೂ ಚರ್ಚಿಗೆ ತೆರಳಿದ ನಂತರ ಮನೆ ಬಿಕೋ ಎನ್ನಿಸಿತು. ಅವಳು ಮೋಂಬತ್ತಿಯನ್ನು ಹಿಡಿದು ತನ್ನ ಕೋಣೆಗೆ ಬಂದಳು. ಮಲಗಿದರೂ ಅವಳಿಗೆ ನಿದ್ದೆ ಹತ್ತಲಿಲ್ಲ. ಮೋಂಬತ್ತಿಯ ಬೆಳಕಿನಲ್ಲಿ ಒಂದಿಷ್ಟು ಓದಲು ಪ್ರಯತ್ನಿಸಿದಳು. ಮೊಟ್ಟಮೊದಲ ಸಲ ಅವಳಿಗೆ ಓದಿನಲ್ಲಿ ಆಸಕ್ತಿ ಹುಟ್ಟಲಿಲ್ಲ. ಇದೇಕೆ ಹೀಗೆಂದು ಅವಳಿಗೆ ದಿಕ್ಕು ತೋರದಂತೆ ಆಯಿತು. ಕಾಸಿಮಿರನ ಮುಖ ಅವಳ ಮುಂದೆ ಬಂದು ಓದಿಗೆ ಅಡಚಣೆ ಉಂಟುಮಾಡುತ್ತಿತ್ತು.


ಎಷ್ಟು ಒಳ್ಳೆಯವನು ಕಾಸಿಮಿರ್! 


ಅವಳ ಮೈ ನವಿರೆದ್ದಿತು. ಅವನ ಮಾತುಗಳು ನೆನಪಾದವು. ಅವನು ತನ್ನ ಬಗ್ಗೆ ಹುಟ್ಟಿದ ಕನಿಕರದಿಂದ ಮದುವೆಯ ಪ್ರಸ್ತಾಪ ಮಾಡಿರಬಹುದೇ? ಅವಳು ಕಣ್ಣೀರು ಹಾಕುವ ಸ್ವಭಾವದವಳು ಅಲ್ಲವೇ ಅಲ್ಲ. ಆದರೆ ಅಕ್ಕ ಬ್ರೋನಿಯಾ ಪ್ಯಾರಿಸ್ ವಿಶ್ವವಿದ್ಯಾಲಯದ ವಾತಾವರಣವನ್ನು ವರ್ಣಿಸಿ ಬರೆದದ್ದು ಓದಿ ಅವಳಿಗೆ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಸಾರ್ಬಾನ್ ಎಂದೇ ಪ್ರಸಿದ್ಧವಾದ ವಿಶ್ವವಿದ್ಯಾಲಯ. ಎಂತೆಂಥ ಘಟಾನುಘಟಿಗಳು ಅಲ್ಲಿ ಕೆಲಸ ಮಾಡಿದ್ದಾರೆ! ಆಂತ್ವಾನ್ ಲವಾಸಿಯೇ, ಲೂಯಿ ಪಾಶ್ಚರ್ ಮೊದಲಾದ ವಿಜ್ಞಾನಿಗಳು,ವಾಲ್ಟೇರ್, ಬಾಲ್ಜಾಕ್ ಮೊದಲಾದ ಚಿಂತಕರು, ಲೇಖಕರು, … ಇಂಥ ಜ್ಞಾನದೇಗುಲವನ್ನು ತಾನು ಪ್ರವೇಶಿಸುವೆನೇ? ಎಂದು? ಅವಳು ಭಾವುಕ ಸ್ವಭಾವದವಳಲ್ಲ. ಆದರೆ ಅಂದು ಅವಳಿಗೆ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ. ತನ್ನ ಕಣ್ಣೀರು ನೋಡಿ ಕಾಸಿಮಿರ್ ಉದ್ವೇಗದಿಂದ ತನಗೆ ಮದುವೆಯ ಪ್ರಸ್ತಾಪ ನೀಡಿರಬಹುದೆ?


ಹಾಗಲ್ಲ ಎಂದು ಅವಳ ಆಂತರ್ಯ ನುಡಿಯಿತು. ತನ್ನನ್ನು ಮೊದಲ ಸಲ ಸಂಧಿಸಿದಾಗಲೇ ಅವನು ತನ್ನನ್ನು ಆರಾಧನಾ ಭಾವದಿಂದ ನೋಡುತ್ತಿದ್ದುದು ತನಗೆ ಗಮನಕ್ಕೆ ಬಂದಿಲ್ಲವೇ? ತಾನು ಗಣಿತದಲ್ಲಿ ಅವನ ಸಮಕ್ಕೆ ನಿಲ್ಲಬಲ್ಲೆ ಎಂಬ ಕಾರಣಕ್ಕೆ ಅವನಿಗೆ ತನ್ನನ್ನು ಕುರಿತು ಅಭಿಮಾನ ಮೂಡಿರಬಹುದೆ? ತನ್ನನ್ನು ಯಾರೂ ಅಪ್ರತಿಮ ಸುಂದರಿ ಎಂದು ಎಂದೂ ಕರೆದಿಲ್ಲ! ಅವಳು ತನ್ನ ಕೋಣೆಯಲ್ಲಿದ್ದ ಕನ್ನಡಿಯ ಮುಂದೆ ನಿಂತು ತನ್ನ ಪ್ರತಿಬಿಂಬ ನೋಡಿಕೊಂಡಳು. ಮೋಂಬತ್ತಿಯ ಬೆಳಕಿನಲ್ಲಿ ಅವಳು ತನ್ನ ಬಿಂಬವನ್ನು ವಿಮರ್ಶಾತ್ಮಕವಾಗಿ ನೋಡಿದಳು. ಅಂದು ಅವಳು ತನ್ನ ಬಳಿ ಇದ್ದ ಒಂದೇ ವಿಶೇಷ ಉಡುಪನ್ನು ಧರಿಸಿದ್ದಳು. ಅವಳು ಬಾಚಣಿಗೆ ಕೈಗೆತ್ತಿಕೊಂಡು ಸಣ್ಣದಾಗಿ ಕತ್ತರಿಸಿದ ತನ್ನ ತಲೆಗೂದಲನ್ನು ಬಾಚಿ ಓರ ಮಾಡಿದಳು. ತಾನು ಅಪ್ರತಿಮ ಸುಂದರಿ ಅಲ್ಲದೇ ಇದ್ದರೂ ತೆಗೆದುಹಾಕುವಂತೆಯೂ ಇಲ್ಲ! ಕಾಸಿಮಿರ್ ತನ್ನಲ್ಲಿ ನಿಜಕ್ಕೂ ಅನುರಕ್ತನಾಗಿರಬಹುದು. ತನ್ನ ಬುದ್ಧಿಶಕ್ತಿಯ ಜೊತೆಗೆ ತನ್ನ ದೇಹಸೌಂದರ್ಯವನ್ನೂ ವ್ಯಕ್ತಿತ್ವವನ್ನೂ ಮೆಚ್ಚಿರಬಹುದು!


ಅವಳು ತನ್ನನ್ನು ತಾನೇ ಪ್ರಶ್ನಿಸಿಕೊಂಡಳು. ನಾನು ಅವನಲ್ಲಿ ಅನುರಕ್ತಳಾಗಿರುವೆನೋ ಇಲ್ಲವೋ? ವಾರದ ಹಿಂದೆ ಅವನು ನನ್ನ.ಕೋಣೆಯ ಬಾಗಿಲು ತಟ್ಟಿದಾಗ ಅವನನ್ನು ನೋಡಿದ ಕೂಡಲೇ ತನ್ನ ಮನಸ್ಸಿನಲ್ಲಿ ಏನೋ ಒಂದು ಅಪರಿಚಿತ ಭಾವನೆ ಸುಳಿದುಹೋಗಿದ್ದು ಸುಳ್ಳೇ? ಅದನ್ನು ಹತ್ತಿಕ್ಕಲು ನಾನು ಪ್ರಯತ್ನ ಪಟ್ಟಿದ್ದು ಸುಳ್ಳೇ? ನನಗೆ ಅವನ ತಾಯಿಯನ್ನು ಕಂಡರೆ ಇರುವ ಭೀತಿಯೂ ಅದಕ್ಕೆ ಕಾರಣವಿರಬಹುದೇ? ಕ್ಯಾಸಿಮಿರಾ ಒಬ್ಬ ಗಟ್ಟಿ ಹೆಂಗಸು. ತನ್ನ ಕುಟುಂಬ ಅವಳಿಗೆ ಅತ್ಯಂತ ಹೆಚ್ಚಿನ ಮೌಲ್ಯದ ವಸ್ತು. ಹಿರಿಯ ಮಗ ಕಾಸಿಮಿರ್ ಓದಿನಲ್ಲಿ ಮುಂದಿರುವ ಬಗ್ಗೆ ಅಪಾರ ಹೆಮ್ಮೆ. ಆಕೆಗೆ ತನ್ನ ಬಗ್ಗೆ ಎಂಥ ಭಾವನೆ ಇರಬಹುದು? ತಾನು ಗವರ್ನೆಸ್ ಕೆಲಸಕ್ಕೆ ಅರ್ಜಿ ಹಾಕಿಕೊಂಡಾಗ ತನ್ನನ್ನು ನಖಶಿಖಾಂತ ಪರೀಕ್ಷೆಗೆ ಒಳಪಡಿಸಿದ್ದು ಅವಳಿಗೆ ನೆನಪಾಯಿತು. ಅದೆಷ್ಟು ಪ್ರಶ್ನೆಗಳನ್ನು ಮದಾಂ ಕ್ಯಾಸಿಮಿರಾ ಕೇಳಿದಳು! ನಿನ್ನ ತಂದೆಯ ಹೆಸರೇನು, ತಾಯಿಯ ಹೆಸರೇನು, ಅವರು ಎಲ್ಲಿಯವರು, ಅವರ ಉದ್ಯೋಗವೇನು, ನೀನು ಎಷ್ಟು ಓದಿರುವೆ, ನಿನಗೆ ಎಷ್ಟು ಭಾಷೆಗಳು ಬರುತ್ತವೆ, ನೀನು ಸಿಗರೆಟ್ ಸೇದುತ್ತೀಯಾ, ನಿನಗೆ ಯಾರಾದರೂ ಗಂಡು ಸ್ನೇಹಿತರು ಇದ್ದಾರಾ … ತಿಂಗಳಿಗೆ ಕೊಡಬೇಕಾದ ಸಂಬಳ ನಿಗದಿಪಡಿಸುವಾಗಲೂ ಅದೆಷ್ಟು ಚೌಕಾಸಿ! ನಿನಗೆ ನಾನು ಒಳ್ಳೆಯ ಕೋಣೆ ಕೊಡುತ್ತಿದ್ದೇನೆ, ನನ್ನ ಮಕ್ಕಳಿಗೆ ಈಗಾಗಲೇ ಪೋಲಿಷ್ ಭಾಷೆ ಬರುತ್ತದೆ, ಅಲ್ಪ ಸ್ವಲ್ಪ ರಷ್ಯನ್ ಕೂಡಾ ಮಾತಾಡುತ್ತಾರೆ, ಅವರಿಗೆ ಗಣಿತವೂ ಅಷ್ಟು ಕಷ್ಟವಲ್ಲ, … 


ಬೈಠಕ್ ಖಾನೆಯ ಗಡಿಯಾರ ರಾತ್ರಿಯ ಹನ್ನೆರಡು ಗಂಟೆ ಆಯಿತೆಂದು ಸೂಚಿಸಿತು. ಅವಳು ಮನೆಯಲ್ಲಿ ಒಬ್ಬಂಟಿ ಇದ್ದಾಗ ಗಡಿಯಾರದ ಗಂಟೆ ಅವಳನ್ನು ಬೆಚ್ಚಿ ಬೀಳಿಸಿತು. ಈಗ ಚರ್ಚಿನಲ್ಲಿ ಪ್ರಾರ್ಥನೆಗಳು ನಡೆಯುತ್ತಿರುತ್ತವೆ. ಕಾಸಿಮಿರ್ ತನ್ನ ಕುಟುಂಬದ ಜೊತೆಗೆ ಕುಳಿತಿರುತ್ತಾನೆ. ಅವನು ಏನು ಯೋಚಿಸುತ್ತಿರಬಹುದು? ತನ್ನ ಬಗ್ಗೆ ಯೋಚಿಸುತ್ತಿರಬಹುದೇ? … ಅವಳು ಅವನ ಮುಖವನ್ನು ಕಲ್ಪಿಸಿಕೊಂಡಳು. ಅವನ ಹೊಂಬಣ್ಣದ ಕೂದಲು, ಅವನ ನೀಲಿಬಣ್ಣದ ಹೊಳೆಯುವ ಕಣ್ಣುಗಳು ನೆನಪಾದವು. ತನಗೆ ಅರಿವಿಲ್ಲದೆ ತಾನು ಮುಗುಳುನಗುತ್ತಿರುವ ಅನುಭೂತಿ ಅವಳಿಗೆ ಉಂಟಾಗಿ ಅವಳ ಕೆನ್ನೆಗಳು ಬಿಸಿಯಾದವು.


***


ಕ್ರಿಸ್ಮಸ್ ದಿವಸ ಎಲ್ಲರಿಗೂ ಕ್ಯಾಸಿಮಿರಾ ಉಡುಗೊರೆಗಳನ್ನು ಕೊಟ್ಟಳು. ರಾತ್ರಿ ತಡವಾಗಿ ಮಲಗಿದ ಕಾರಣ ಮಕ್ಕಳು ಬೆಳಗ್ಗೆ ತಡವಾಗಿ ಎದ್ದರು. ತಾಯಿ ಅವರಿಗೆ ಉಪಾಹಾರ ಕೊಡುತ್ತಿದ್ದ ವೇಳೆಯಲ್ಲಿ ಸಂದರ್ಭ ನೋಡಿಕೊಂಡು ಕ್ಯಾಸಿಮಿರ್ ಮರಿಯಾಳ ಕೋಣೆಯ ಬಾಗಿಲು ತಟ್ಟಿದ. ಅವಳು ಅವನನ್ನು ನೋಡಿ ಹೆದರಿ “ನಿನ್ನ ತಾಯಿ ನೋಡಿದರೆ!” ಎಂದು ಉದ್ಗರಿಸಿದಳು. ಅವನು ಅವಳ ಬಾಯಿಯ ಮೇಲೆ ಬೆರಳಿಟ್ಟು “ಹುಷ್!” ಎಂದ. ತನ್ನ ಕಿಸೆಯಿಂದ ಅವನು ಒಂದು ಪುಟ್ಟ ಪೆಟ್ಟಿಗೆಯನ್ನು ತೆಗೆದು ಅವಳ ಮುಂದೆ ಹಿಡಿದ.


“ಇದೇನು!” ಎಂದು ಅವಳು ಬೆದರಿದಳು.


“ತೆಗೆದು ನೋಡು!”


ಪೆಟ್ಟಿಗೆಯಲ್ಲಿ ಬೆಳ್ಳಿಯಲ್ಲಿ ಮಾಡಿದ ಆಭರಣವಿತ್ತು. ತಲೆಕೂದಲಿಗೆ ಸಿಕ್ಕಿಸುವ ಪಿನ್. ಎರಡು ಬೆಳ್ಳಿ ಗುಲಾಬಿಗಳುಳ್ಳ ಪಿನ್ ನೋಡಲು ಸುಂದರವಾಗಿತ್ತು. 


“ಇದು ನನಗಾ!” ಎಂದು ಅವಳು ಕೇಳಿದಳು 


“ಇಲ್ಲಿ ಬೇರೆ ಯಾವ ಚೆಲುವೆಯೂ ನನಗೆ ಕಾಣುತ್ತಿಲ್ಲ. ಹಾಗಾಗಿ ಅದು ನಿನಗೇ ಎನ್ನಿಸುತ್ತದೆ.”


ಅವಳು ನಕ್ಕಳು. “ನೀನು ಇದನ್ನು ಯಾವಾಗ ಖರೀದಿಸಿದೆ?”


“ನೆನ್ನೆ. ನನ್ನ ಸ್ಕಾಲರ್ಶಿಪ್ ಹಣದಲ್ಲಿ ಕೊಂಡಿದ್ದೇನೆ.”


“ಓಹ್!”


“ಮರಿಯಾ, ಇದು ನಿನಗೆ ನಾನು ಕೊಡುತ್ತಿರುವ ಮೊದಲ ಉಡುಗೊರೆ. ಕೊಡು, ನಾನೇ ಅದನ್ನು ಸಿಕ್ಕಿಸುತ್ತೇನೆ.”


ಅವನು ಪಿನ್ ಸಿಕ್ಕಿಸುವಾಗ ಅವಳಿಗೆ ನೋವಾಯಿತು.


“ನೀನು ಗಣಿತದ ಪ್ರಮೇಯ ಬಿಡಿಸಲು ಮಾತ್ರ ಲಾಯಕ್ಕು! ಕೊಡು, ನಾನೇ ಹಾಕಿಕೊಳ್ಳುತ್ತೇನೆ!” ಎಂದು ಅವಳು ನಕ್ಕಳು.


“ಸರಿ, ನಾನು ಬರುತ್ತೇನೆ! ಅಮ್ಮ ನನ್ನನ್ನು ಹುಡುಕುತ್ತಿರಬಹುದು!” ಎಂದು ಅವನು ಹೊರಟ. ಅಂದು ಊಟಕ್ಕೆ ಎಲ್ಲರೂ ಕುಳಿತಾಗ ಕ್ಯಾಸಿಮಿರಾ ಮರಿಯಾಳ ತಲೆಯಲ್ಲಿರುವ ಬೆಳ್ಳಿಯ ಆಭರಣದ ಕಡೆಗೆ ಕುತೂಹಲದಿಂದ ನೋಡಿದಳು.


***

ಕ್ರಿಸ್ಮಸ್ ಹಬ್ಬದ ತರುವಾಯ ಎರಡೇ ದಿನಗಳ ನಂತರ ಕಾಸಿಮಿರ್ ಹೊರಟುನಿಂತ. ಕ್ಯಾಸಿಮಿರಾ ಅವನ ಜೊತೆಗೆ ಕಳಿಸಲು ಅನೇಕ ತಿನಿಸುಗಳನ್ನು ಸಿದ್ಧಪಡಿಸಿದಳು. ಚಳಿಗಾಲಕ್ಕೆ ಬೇಕಾದ ಉಣ್ಣೆಯ ಬಟ್ಟೆಗಳನ್ನು ಜೋಡಿಸಿದಳು. ರೈಲ್ವೆ ಸ್ಟೇಷನ್ನಿಗೆ ಕುದುರೆಗಾಡಿಯಲ್ಲಿ

ಕುಟುಂಬದ ಸದಸ್ಯರು ಎಲ್ಲರೂ ಹೊರಟರು. ತನ್ನ ಕಿಟಕಿಯಿಂದ ಗಾಡಿ ಹೊರಡುವುದನ್ನು ನೋಡುತ್ತಾ ಮರಿಯಾ ನಿಂತಿದ್ದಳು.


“ಮರಿಯಾ, ನಿನ್ನ ಕಣ್ಣಲ್ಲೇಕೆ ನೀರು!” 


ಮರಿಯಾ ಅವಾಕ್ಕಾಗಿ ಹಿಂದೆ ತಿರುಗಿದಳು. ಜೂಜನ್ ಅವಳತ್ತ ನೋಡುತ್ತಾ ನಿಂತಿದ್ದಳು.


“ಏನಿಲ್ಲ! ನನಗೆ ನನ್ನ ಅಕ್ಕನನ್ನು ಹೀಗೇ ಬೀಳ್ಕೊಟ್ಟದ್ದು ನೆನಪಾಯಿತು! ಅವಳು ಈಗ ಎಷ್ಟು ದೂರದಲ್ಲಿದ್ದಾಳೆ! ತಿಂಗಳಿಗೊಮ್ಮೆ ಪತ್ರ ಬರೆಯುತ್ತಾಳೆ.”


“ಜೀವನ ಎಂದರೆ ಅಷ್ಟೇ, ಮರಿಯಾ. ರೈಲ್ವೆ ಕ್ಯಾಬಿನ್ ಹಾಗೆ. ಜನ ಹತ್ತುತ್ತಾರೆ, ಇಳಿದು ಹೋಗುತ್ತಾರೆ. ನಮ್ಮ ಜೊತೆಗೇ ಬರುವವರು ಯಾರೂ ಇಲ್ಲ!” ಎಂದು ಜೂಜನ್ ನಕ್ಕಳು.


“ನಾನು ನಿನಗೆ ಪ್ರತಿವಾರವೂ ಪತ್ರ ಬರೆಯುತ್ತೇನೆ. ಅದನ್ನು ಮನೆಯ ವಿಳಾಸಕ್ಕೆ ಕಳಿಸುವುದು ಕ್ಷೇಮವಲ್ಲ. ನಾನು ಒಂದು ಪೋಸ್ಟ್ ಬಾಕ್ಸ್ ನಂಬರಿಗೆ ಕಳಿಸುತ್ತೇನೆ. ನೀನು ಪ್ರತಿವಾರವೂ ಹೋಗಿ ಪತ್ರವನ್ನು ಪಡೆದುಕೊಂಡು ಓದಬೇಕು. ನನ್ನ ವಿಳಾಸ ಇಲ್ಲಿದೆ. ನೀನು ಪೋಸ್ಟ್ ಆಫೀಸಿಗೆ ಹೋದಾಗ ನನಗೆ ಪತ್ರ ಬರೆಯುವುದನ್ನು ಮರೆಯಬೇಡ!” ಎಂದು ಕಾಸಿಮಿರ್ ಅವಳಿಗೆ ಹೇಳಿದ್ದ.


ಅವನು ಮಾತಿಗೆ ತಕ್ಕಂತೆ ನಡೆದುಕೊಂಡ. ಜನವರಿಯ ಕ್ರೂರ ಚಳಿಗಾಲದಲ್ಲಿ ಅವನ ಪತ್ರಗಳು ಅವಳ ಹೃದಯವನ್ನು ಬೆಚ್ಚಗೆ ಮಾಡುತ್ತಿದ್ದವು.


(೪)


ಜನವರಿ ಮುಗಿದು ಫೆಬ್ರುವರಿ ಕಾಲಿಟ್ಟಿತು. ಮರಿಯಾ ಮತ್ತು ಕಾಸಿಮಿರ್ ನಡುವೆ ಪತ್ರ ವ್ಯವಹಾರ ನಿರಂತರವಾಗಿ ಸಾಗಿತು. ಕಾಸಿಮಿರ್ ತನ್ನ ಸಂಶೋಧನೆ ಕುರಿತು ಬರೆಯುತ್ತಿದ್ದ.  ಅವನು ಹೆಚ್ಚು ಸಂಶೋಧಕರು ಆರಿಸಿಕೊಳ್ಳದ ವಿಷಯವನ್ನು ಆರಿಸಿಕೊಂಡಿದ್ದ. ಅದನ್ನು ಕುರಿತು ಮರಿಯಾಗೆ ಪತ್ರದಲ್ಲಿ ಬರೆದಾಗ ಅವಳು ಆಸಕ್ತಿಯಿಂದ ಪ್ರಶ್ನೆಗಳನ್ನು ಮಾರೋಲೆಯಲ್ಲಿ ಬರೆದು ಕಳಿಸುತ್ತಿದ್ದಳು. ಅವಳ ಹರಿತವಾದ ಗ್ರಹಣಶಕ್ತಿಯನ್ನು ಕಂಡು ಅವನು ಪ್ರಭಾವಿತನಾಗಿದ್ದ. ಹಾಗೆಂದು ಅವನು ಅನೇಕ ಸಲ ಬರೆದಿದ್ದ ಕೂಡಾ. “ಮರಿಯಾ, ನೀನು ಖಂಡಿತಾ ಮುಂದೆ ಓದಬೇಕು. ಜಗತ್ತಿಗೆ ನೀನು ನಿನ್ನ ಸಂಶೋಧನೆಯ ಮೂಲಕ ಮುಂದೊಂದು ದಿವಸ ಬಹಳ ದೊಡ್ಡ ಕೊಡುಗೆ ನೀಡುವೆ ಎಂದು ನನಗೆ ಸಂಪೂರ್ಣ ಭರವಸೆ ಇದೆ. ನಿನ್ನ ಸ್ನೇಹ ದೊರೆತದ್ದು ನನ್ನ ಅದೃಷ್ಟವೆಂದು ಭಾವಿಸುತ್ತೇನೆ.” 


ಕಾಸಿಮಿರನ ತಮ್ಮಂದಿರು ಮತ್ತು ತಂಗಿಯರು ಕೂಡಾ ಮರಿಯಾಳ ಪಾಠಗಳಿಂದ ಪ್ರಭಾವಿತರಾಗಿದ್ದರು.  ವ್ಲಾಡಿಸ್ಲಾವ್, ಜೂಲಿಯಸ್, ಮತ್ತು ಸ್ಟಾನಿಸ್ಲಾ ತಮ್ಮಂದಿರು.  ಬ್ರಾನಿಸ್ಲಾವಾ ಮತ್ತು ಆನ್ ತಂಗಿಯರು.  ಕಾಡಿಮಿರ್ ಹೇಗೆ ಗಣಿತದಲ್ಲಿ ಮುಂದಿದ್ದನೋ ಹಾಗೆ ಜೂಲಿಯಸ್ ಜರ್ಮನ್ ಭಾಷೆಯ ಕಲಿಕೆಯಲ್ಲಿ ಮುಂದಿದ್ದ.  ಭಾಷೆಗಳನ್ನು ಕಲಿಯುವುದು ಅವನಿಗೆ ಸುಲಭವಾಗಿತ್ತು. ಇದನ್ನು ಕುರಿತು ಮರಿಯಾ ಒಮ್ಮೆ ಕಾಸಿಮಿರನಿಗೆ ಬರೆದಿದ್ದಳು. “ಕೆಲವು ಮಕ್ಕಳಿಗೆ ಭಾಷೆ ಎಷ್ಟು ಸುಲಭವಾಗಿ ಒಲಿಯುತ್ತದೆ! ಸಂಶೋಧಕನಿಗೆ ಭಾಷೆಯ ಬಳಕೆಯೂ ಮುಖ್ಯ. ನೀನು ನಿನ್ನ ಗಣಿತದ ಪುಸ್ತಕಗಳ ಜೊತೆಗೆ ಸಾಹಿತ್ಯವನ್ನೂ ಒಂದಿಷ್ಟು ಓದುವುದು ಒಳಿತು.” ಕೊನೆಯ ಮಗು ಎಂದು ಆನ್ ಎಲ್ಲರ ಮುದ್ದಿಗೆ ಪಾತ್ರಳಾಗಿದ್ದವಳು. ಅವಳಿಗೆ ಓದಿನಲ್ಲಿ ಹೆಚ್ಚು ಆಸಕ್ತಿ ಇರಲಿಲ್ಲ. ಅವಳ ಶಾಲೆಯ ಉಪಾಧ್ಯಾಯಿನಿ ಒಂದೆರಡು ಸಲ ಚೀಟಿ ಬರೆದು ಕಳಿಸಿದ್ದರು ಕೂಡಾ. ಅವಳನ್ನು ಬಗ್ಗಿಸಲು ಮರಿಯಾ ಬಹಳ ಹೆಣಗಿದಳು.  ಒಂದು ದಿನ ಶಾಲೆಯಲ್ಲಿ ಕೊಟ್ಟ ಗಣಿತದ ಗೃಹಕಾರ್ಯವನ್ನು ಎಂಟು ವರ್ಷದ ಆನ್ ಹೇಳದೆ ಮುಚ್ಚಿಟ್ಟ ಕಾರಣ ಮರುದಿನ ಉಪಾಧ್ಯಾಯಿನಿ ಚೀಟಿ ಕಳಿಸಿದರು.  ಅವಳು ಅದನ್ನು ತಂದೆ ತಾಯಿಯರಿಗೆ ಕೊಡುವಳೋ ಇಲ್ಲವೋ ಎಂದು ಅನುಮಾನಿಸಿ ಅವಳ ಅಕ್ಕ ಬ್ರೋನಿಯಾಳ ಕೈಯಲ್ಲಿ ಕಳಿಸಿದರು. ಕ್ಯಾಸಿಮಿರಾ ಕೋಪಗೊಂಡು ಮರಿಯಾಳಿಗೆ ಹೇಳಿಕಳಿಸಿದಳು.


“ಆನ್ ಉಪಾಧ್ಯಾಯಿನಿ ಚೀಟಿ ಕಳಿಸಿದ್ದಾರೆ.”


“ಓಹ್.ಅವಳು ಏನೂ ಹೇಳಲಿಲ್ಲ.”


“ಅವಳಿಗೆ ಗೊತ್ತಿಲ್ಲ. ಬ್ರೋನಿಯ ಜೊತೆ ಕಳಿಸಿದ್ದಾರೆ.”


ಮರಿಯಾ ಚೀಟಿಯನ್ನು ಓದಿದಳು.


“ಅವಳಿಗೆ ಗೃಹಕಾರ್ಯ ಇತ್ತೆಂದು ನಿನಗೆ ಗೊತ್ತಿತ್ತೇ?”


“ಇಲ್ಲ. ನಾನು ನೆನ್ನೆ ಅವಳಿಗೆ ಪೋಲಿಷ್ ಪಾಠ ಹೇಳಿದೆ.”


“ಅವಳ ಮೇಲೆ ಇನ್ನೂ ಹೆಚ್ಚಿನ ನಿಗಾ ಇಡು. ನೆನಪಿರಲಿ, ನೀನು ಅವಳ ಗವರ್ನೆಸ್.”


ಮರಿಯಾಗೆ ಏನೂ ಹೇಳಲು ತೋಚಲಿಲ್ಲ.


“ನೀನು ಹೋಗಬಹುದು,” ಎಂದು ಕ್ಯಾಸಿಮಿರಾ ಚುಟುಕಾಗಿ ಹೇಳಿದಳು.


ಅಂದು ಆನ್ ಪಾಠಕ್ಕೆ ಬಂದಾಗ ಮರಿಯಾ “ಆನ್, ಗಣಿತದಲ್ಲಿ ಗೃಹಕಾರ್ಯ ಕೊಟ್ಟಿದ್ದರಂತೆ. ನನಗೆ ಯಾಕೆ ಹೇಳಲಿಲ್ಲ?” ಎಂದು ಕೇಳಿದಳು.


ಆನ್ ಸುಮ್ಮನಿದ್ದಳು.


“ನಿನಗೆ ಗಣಿತ ಇಷ್ಟ ಇಲ್ಲವೇ?”


“ಊಹೂಂ.”


“ಮತ್ತೆ ನಿನಗೆ ಯಾವ ವಿಷಯ ಇಷ್ಟ?”


“ನನಗೆ ಶಾಲೆ ಇಷ್ಟವಿಲ್ಲ.”


“ಆನ್, ಶಾಲೆಯಲ್ಲಿ ಉಪಧ್ಯಾಯರು ಚೆನ್ನಾಗಿ ಪಾಠ ಮಾಡುವುದಿಲ್ಲವೇ?”


ಆನ್ ಸುಮ್ಮನಿದ್ದಳು.


“ಮತ್ತೇನು ಸಮಸ್ಯೆ?”


“ನಾಟಕದಲ್ಲಿ ನನಗೆ ರಾಜಕುಮಾರಿಯ ಪಾತ್ರ ಕೊಡಲಿಲ್ಲ.”


“ಯಾವ ನಾಟಕ?”


“ವ್ಯಾಲೆಂಟೈನ್ಸ್ ದಿವಸ ಮಾಡುವ ನಾಟಕ.”


“ನಿನಗೆ ಯಾವ ಪಾತ್ರ ಕೊಟ್ಟರು?”


“ಕಪ್ಪೆಯ ಪಾತ್ರ.”


“ಓಹ್. ಅದು ಒಳ್ಳೆಯ ಪಾತ್ರ! ನಿನಗೆ ಇಷ್ಟ ಆಗಲಿಲ್ಲವೆ?”


“ಊಹೂಂ. ನಾನು ರಾಜಕುಮಾರಿಯ ಉಡುಪು ಹಾಕಿಕೊಂಡು ಹಾಡು ಹೇಳಬೇಕು.   ನನಗೆ ಕಪ್ಪೆಯ ಪಾತ್ರ ಬೇಡ.”


“ಯಾಕೆ ಬೇಡ?”


“ಛೀ. ಕಪ್ಪೆ ನೋಡೋದಕ್ಕೆ ಏನು ಚೆನ್ನಾಗಿರತ್ತೆ!”


“ಕಪ್ಪೆ ನೀರಿನಲ್ಲೂ ಬದುಕುತ್ತದೆ, ನೆಲದ ಮೇಲೂ ಬದುಕುತ್ತದೆ ಗೊತ್ತಾ!”


ಆನ್ ಸುಮ್ಮನೇ ಇದ್ದಳು.


“ಕಪ್ಪೆ ಕೊಳವನ್ನು ಶುದ್ಧವಾಗಿಡುತ್ತೆ. ಕಪ್ಪೆ ಇಲ್ಲದೆ ಇದ್ದರೆ ಸೊಳ್ಳೆಗಳು ಹೆಚ್ಚುತ್ತವೆ. ಕಪ್ಪೆ ಸೊಳ್ಳೆಗಳನ್ನು ತಿಂದುಹಾಕಿಬಿಡುತ್ತೆ.”


“ಛೀ.”


“ಅದಕ್ಕೆ ಯಾಕೆ ಅಸಹ್ಯ ಪಡುತ್ತೀ? ಸಣ್ಣ ಜೀವಿಗಳನ್ನು ದೊಡ್ಡ ಜೀವಿಗಳು ತಿನ್ನುತ್ತವೆ. ಅದು ಪ್ರಕೃತಿಯ ನಿಯಮ. ಕಪ್ಪೆ ನಮಗೆ ತುಂಬಾ ಉಪಕಾರಿ. ನನಗೆ ಯಾರಾದರೂ ಕಪ್ಪೆಯ ಪಾತ್ರ ಕೊಟ್ಟರೆ ನಾನು ಮಾಡುತ್ತೇನೆ.”


ಆನ್ ನಕ್ಕಳು. 


“ಅಂದಹಾಗೆ ರಾಜಕುಮಾರಿ ಏನು ಮಾಡುತ್ತಾಳೆ?’


“ಅವಳು ಹಾಡು ಹೇಳಿ ಚೆಂಡಿನ ಆಟ ಆಡುತ್ತಾಳೆ!’


“ಓಹ್. ಅವಳ ಚೆಂಡನ್ನು ಕಪ್ಪೆ ತಂದುಕೊಡತ್ತೆ ಅಲ್ಲವಾ? ಕಪ್ಪೆ ಒಂದು ರಾಜಕುಮಾರ ಆಗಿಬಿಡುತ್ತೆ. ಅಲ್ಲವಾ?”


“ನಿನಗೆ ಹೇಗೆ ಗೊತ್ತು!’


“ಈ ನಾಟಕ ನಮ್ಮ ಶಾಲೆಯಲ್ಲೂ ಮಾಡಿಸಿದ್ದರು!’


ಆನ್ ಬೆರಗಾಗಿ ನೋಡಿದಳು. “ನೀನು ಕಪ್ಪೆ ಆಗಿದ್ದೆಯಾ?”


“ಹೌದು!”


ಕೊನೆಗೂ ಆನ್ ಕಪ್ಪೆಯ ಪಾತ್ರ ಮಾಡಲು ಒಪ್ಪಿಕೊಂಡಳು. ಅವಳ ಶಾಲೆಯ ಸಮಸ್ಯೆ ಪರಿಹಾರವಾಯಿತು. ಇದನ್ನು ಮರಿಯಾ ಪತ್ರದಲ್ಲಿ ಬರೆದು ಕಾಸಿಮಿರನಿಗೆ ಕಳಿಸಿದಳು.


ಅವನು ಮಾರೋಲೆಯಲ್ಲಿ ಬರೆದ: “ವ್ಯಾಲೆಂಟೈನ್ಸ್ ದಿವಸ ರಾಜಕುಮಾರಿ ಕಪ್ಪೆಯನ್ನು ಚುಂಬಿಸಿದರೆ ಅದು ರಾಜಕುಮಾರನಾಗಿ ಬದಲಾಯಿತಂತೆ! ನೀನು ಕಪ್ಪೆಯ ಪಾತ್ರ ಮಾಡಿದ್ದು ನನಗೆ ತಿಳಿದಿರಲಿಲ್ಲ. ರಾಜಕುಮಾರ ಕಪ್ಪೆಯನ್ನು ಚುಂಬಿಸಿದರೆ ಅದು ರಾಜಕುಮಾರಿ ಆದೀತೇ ಎಂದು ಯೋಚಿಸುತ್ತಿದ್ದೇನೆ! ನಾನು ಈ ಪ್ರಯೋಗವನ್ನು ಮಾಡಲೇಬೇಕೆಂದು ನಿರ್ಧರಿಸಿದ್ದೇನೆ. ವ್ಯಾಲೆಂಟೈನ್ಸ್ ದಿವಸ ನಾನು ಮನೆಗೆ ಬರುತ್ತೇನೆ. ಈಗಾಗಲೇ ರೈಲಿಗೆ ಟಿಕೆಟ್ ಕಾದಿರಿಸಿದ್ದೇನೆ.”


ಅವಳಿಗೆ ಓದಿ ನಗು ಬಂತು. ಮರುಕ್ಷಣವೇ ಅವಳ ಮನಸ್ಸು ಪ್ರಫುಲ್ಲವಾಯಿತು. ಕಾಸಿಮಿರ್ ಬರುತ್ತಾನೆ! ಅವನು ಹೊರಟುನಿಂತ ಕ್ಷಣದಿಂದ ತನ್ನ ಮನಸ್ಸು ಬಾಡಿದ್ದು ಅವಳ ಗಮನಕ್ಕೆ ಬಾರದೇ ಇರಲಿಲ್ಲ. ಅವಳು ಆದಷ್ಟೂ ತನ್ನನ್ನು ಕೆಲಸದಲ್ಲಿ ತೊಡಗಿಸಿಕೊಂಡು ತನ್ನ ಬೇಸರವನ್ನು ಮರೆಯಲು ಯತ್ನಿಸುತ್ತಿದ್ದಳು. ಅವನ ಪತ್ರಗಳನ್ನು ಮತ್ತೆ ಮತ್ತೆ ಓದುತ್ತಿದ್ದಳು. ಅವನಿಗೆ ಏನು ಬರೆಯಲಿ ಎಂದು ಯೋಚಿಸುತ್ತಿದ್ದಳು. ಅವನು ಬರುತ್ತಿದ್ದಾನೆ ಎಂಬ ಸುಳಿವು ಸಿಕ್ಕ ಕೂಡಲೇ ಅವಳ ಮನಸ್ಸು ಗರಿಗೆದರಿತು.  ಇಂದು ಆಗಲೇ ಫೆಬ್ರುವರಿ ಆರನೇ ತಾರೀಕು! ಅವನು ಬರಲು ಹೆಚ್ಚೆಂದರೆ ಒಂದು ವಾರ ಉಳಿದಿದೆ, ಅಷ್ಟೇ. 


ಅವನು ಎಷ್ಟು ದಿವಸ ಇರುತ್ತಾನೋ? ಎಷ್ಟು ಹೊತ್ತಿಗೆ ಬರುತ್ತಿದ್ದಾನೋ? ಯಾವ ರೈಲಿನಲ್ಲಿ.ಬರುತ್ತಾನೋ? ಈ ಯಾವ ವಿವರಗಳನ್ನೂ ಕಾಸಿಮಿರ್ ಕೊಟ್ಟಿಲ್ಲ.  ಅವಳಿಗೆ ಅವನ ಮೇಲೆ ಕೋಪ ಬಂತು. ಈ ವಿವರಗಳು ತನಗೆ ತಿಳಿದಾದರೂ ತಾನು ಏನು ಮಾಡಬಹುದು ಎಂದು ಅವಳಿಗೆ ತೋಚಿತು. ಅವನನ್ನು ಎದುರುಗೊಳ್ಳಲು ತಾನು ಸ್ಟೇಷನ್ನಿಗೆ ಹೋಗಬಹುದೇ? ಅವನಿಗಾಗಿ ಏನಾದರೂ ಅಡುಗೆ ಮಾಡಬಹುದೇ? ಅವನೊಂದಿಗೆ ಸುತ್ತಾಡಲು ಹೋಗಬಹುದೇ? ಇದು ಯಾವುದೂ ಸಾಧ್ಯವಿಲ್ಲ ಎಂಬ ಯೋಚನೆ ಅವಳ ಧೃತಿಗೆಡಿಸಿ ಅವಳಿಗೆ ಮೈ ಪರಚಿಕೊಳ್ಳುವಂತೆ ಆಯಿತು.  


ಅವನು ಕೊಟ್ಟ ಬೆಳ್ಳಿಯ ಪಿನ್ ಕೈಗೆತ್ತಿಕೊಂಡು ಅದನ್ನು ತದೇಕಚಿತ್ತದಿಂದ ನೋಡಿದಳು. ನಂತರ ಅವಳು ಒಂದು ಪತ್ರ ಬರೆದಳು. “ನೀನು ಬರುತ್ತಿರುವ ವಿಷಯ ನನಗೆ ಸಂತೋಷವನ್ನೂ ದುಃಖವನ್ನೂ ಏಕಕಾಲದಲ್ಲಿ ಉಂಟುಮಾಡಿದೆ. ನೀನು ನನಗಾಗಿ ಬರುತ್ತಿರುವುದು ನನಗೆ ಸಂತೋಷ ನೀಡಿದೆ. ಆದರೆ ನಿನ್ನನ್ನು ಎದುರುಗೊಂಡು ನಿನ್ನೊಂದಿಗೆ ಕಾಲ ಕಳೆಯಲು ಆಗದೆಂಬ ಆಲೋಚನೆ ನನ್ನನ್ನು ದುಃಖಕ್ಕೆ ತಳ್ಳಿದೆ. ಹೆಚ್ಚೆಂದರೆ ನಾವು ಸಮಯ ಸಾಧಿಸಿ ಎಲ್ಲಾದರೂ ಒಂದಷ್ಟು ಹೊತ್ತು ಸಂಧಿಸಬಹುದು. ನೀನು ಬಹುಶಃ ಹೆಚ್ಚು ದಿವಸ ಇರಲಾರೆ.  ಹೀಗಾಗಿ ನಿನ್ನ ಕುಟುಂಬದವರು ನಿನ್ನ ಜೊತೆ ಕಾಲ ಕಳೆಯಲು ಉತ್ಸುಕತಾಗಿರುತ್ತಾರೆ. ನಾನು ನನ್ನ ಕೋಣೆಯಲ್ಲಿ ನಿನ್ನ ನಿರೀಕ್ಷೆಯಲ್ಲಿ ಕುಳಿತಿರಬೇಕು! ಈ ಬಗೆಯ ರಹಸ್ಯ ಪ್ರೀತಿ ನನ್ನಿಂದ ಆಗದು, ಕಾಸಿಮಿರ್. ನೀನು ಒಂದು ನಿರ್ಧಾರ ತೆಗೆದುಕೊಳ್ಳಬೇಕು. ನಾನು ನಿನ್ನ ಮೇಲೆ ಹೀಗೆ ಒತ್ತಡ ಹಾಕುತ್ತಿರುವುದಕ್ಕೆ ನನ್ನನ್ನು ಕ್ಷಮಿಸು. ನಿನ್ನನ್ನು ನಾನು ಅತೀವವಾಗಿ ಪ್ರೀತಿಸುತ್ತೇನೆ ಎಂಬುದನ್ನು.ಮರೆಯಬೇಡ.”


ಅವಳ ಕಣ್ಣುಗಳು ಮಂಜಾದವು. ಪತ್ರವನ್ನು ಲಕೋಟೆಯಲ್ಲಿ ಇಟ್ಟು ಅದನ್ನು ಅಂಚೆಪೆಟ್ಟಿಗೆಗೆ ಹಾಕಿ ಬಂದಮೇಲೆ ತನ್ನ ಹಾಸಿಗೆಯ ಮೇಲೆ ಮಲಗಿ ಮುಖ ಮುಚ್ಚಿಕೊಂಡು ಅವಳು ಅತ್ತಳು.  ಅಂದು ಅವಳು ಪಾಠ ಹೇಳಲು ಜೋಸೆಫನ ಕೋಣೆಗೆ ಹೋಗುವಾಗ ಶ್ರೀಮತಿ ಕ್ಯಾಸಿಮಿರ್ ಎದುರಾದಳು. ಅವಳು ಒಳ್ಳೆಯ ಲಹರಿಯಲ್ಲಿದ್ದಳು. ಮರಿಯಾಳ ಕಡೆಗೆ ನೋಡಿ “ನಿಮ್ಮ ಕಣ್ಣುಗಳು ಯಾಕೆ ಕೆಂಪಾಗಿವೆ?” ಎಂದಳು. 


“ಏನಿಲ್ಲ, ಸ್ವಲ್ಪ ತಲೆನೋವು ಎಂದು ಮಲಗಿದ್ದೆ.”


“ನಾನು ಜೂಜನ್ ಜೊತೆ ಮಾತಾಡುತ್ತೇನೆ. ಬಿಸಿ ಚಹಾ ಕಳಿಸುತ್ತೇನೆ. 


“ಧನ್ಯವಾದಗಳು, ಮದಾಂ ಕ್ಯಾಸಿಮಿರ್!” ಎಂದು ಅವಳು ಕ್ಷೀಣವಾಗಿ ನಕ್ಕಳು.


( ೫)


ಮನೆಯಲ್ಲಿ ವಿಶೇಷ ಭೋಜನಕ್ಕೆ ತಯಾರಿಗಳು ನಡೆಯುತ್ತಿರುವುದು ಮರಿಯಾಳ ಗಮನಕ್ಕೆ ಬಾರದೇ ಇರಲಿಲ್ಲ. ಜೂಲಿಯಸ್ ಜೊತೆಗೆ ಪಾಠಕ್ಕೆ ಕುಳಿತಾಗ ಅಡುಗೆಮನೆಯಿಂದ ಬರುವ ಪರಿಮಳ ಅವನನ್ನು ವಿಚಲಿತಗೊಳಿಸುತ್ತಿತ್ತು. ಅವಳು ಪುಸ್ತಕ ಮುಚ್ಚಿ, “ಜೂಲಿಯಸ್. ಹೀಗೆ ಪಾಠ ಮುಂದೆ ಸಾಗುವುದಿಲ್ಲ. ನಿನಗೆ ಹಸಿವಾಗುತ್ತಿದೆ ಎಂದು ತೋರುತ್ತಿದೆ, ನಾವು ಅಡುಗಮನೆಗೆ ಹೋಗಿ ಜೂಜನ್ ಏನು ತಯಾರಿಸುತ್ತಿದ್ದಾಳೋ ನೋಡೋಣ. ನಿನಗೆ ಅದರಲ್ಲಿ ಒಂದು ಪಾಲು ಸಿಕ್ಕಬಹುದು!” ಎಂದು ಮುಗುಳ್ನಕ್ಕಳು. 


ಅವನು ನಾಚಿ ತಲೆ ತಗ್ಗಿಸಿದ.


“ಇದಕ್ಕೆ ಯಾಕೆ ನಾಚಿಕೆ! ನಡಿ, ಹೋಗೋಣ.”


“ಇಲ್ಲ, ಇಲ್ಲ, ಅದು ಅಣ್ಣ ಕಾಸಿಮಿರ್ ಬರುತ್ತಿದ್ದಾನಲ್ಲ, ಅವನಿಗಾಗಿ ಅಮ್ಮ ವಿಶೇಷ ಭೋಜನ ತಯಾರಿಸಲು ಹೇಳಿದ್ದಾಳೆ.”


“ಓಹ್, ಹಾಗೋ!”


“ಮೊನ್ನೆ ಕಾಸಿಮಿರ್ ತಾರು ಕಳಿಸಿದ್ದ. ಅವನು ಇವತ್ತು ಬರುತ್ತಿದ್ದಾನೆ..ಇವತ್ತು ವ್ಯಾಲೆಂಟೈನ್ಸ್ ದಿವಸ ಅಲ್ಲವಾ?”


“ಹೌದಲ್ಲ! ನಿನ್ನ ವ್ಯಾಲೆಂಟೈನ್ ಯಾರು, ಜೂಲಿಯಸ್? ನಿನಗೆ ಒಬ್ಬ ಗೆಳತಿ ಇರುವಳೇನು?”


ಅವನು ಸ್ವಲ್ಪ ನಾಚಿ ತಲೆ ತಗ್ಗಿಸಿದ.


“ಓಹ್, ಹಾಗೆಂದರೆ ಇದ್ದಾಳೆ ಎಂದು ಅರ್ಥ! ಏನು ಅವಳ ಹೆಸರು!”


“ಹಾನಾ!”


“ನಿನ್ನ ತರಗತಿಯಲ್ಲಿ ಇದ್ದಾಳಾ?”


“ಹೂಂ.”


“ಅವಳಿಗೆ ಉಡುಗೊರೆ ಏನು ಕೊಡುತ್ತೀ?”


“ಜೂಜನ್ ನನಗೆ ಒಂದು ತುಂಡು ಕೇಕ್ ಪೇಪರಿನಲ್ಲಿ ಸುತ್ತಿ ಕೊಡಲು ಒಪ್ಪಿದ್ದಾಳೆ.”


*ಓಹ್, ನಿನ್ನ ಗಮನ ಅಲ್ಲಿ ಯಾಕಿದೆ ಎಂದು ಗೊತ್ತಾಯಿತು!”


ಅವನು ನಕ್ಕ.


“ವ್ಲಾಡಿಸ್ಲಾವ್ ಕಥೆ ಏನು? ಅವನಿಗೂ ಒಬ್ಬ ಗೆಳತಿ ಇರುವಳೋ ಹೇಗೆ?”


“ಇದ್ದಾಳೆ. ಅವಳ ಹೆಸರು ಒಲಿವಿಯಾ. ಅವನು ಅವಳಿಗೆ ಕೊಡಲು ಒಂದು ಕರ್ಚೀಫ್ ಕೊಂಡುಕೊಂಡಿದ್ದಾನೆ. ಅವನಿಗೆ ತಿಂಗಳ ಖರ್ಚಿಗೆ ಹಣ ಸಿಕ್ಕುತ್ತದೆ. ಅವನಿಗೆ ಹದಿನಾರು ವರ್ಷ ಆಗಿದೆಯಲ್ಲ!”


“ಓಹ್. ಬ್ರೋನಿಯಾ ಕಥೆ ಏನು?”


ಮರಿಯಾ ಹಿಂದೆಂದೂ ಹೀಗೆ ಪಠ್ಯೇತರ ವಿಷಯಗಳನ್ನು ಕುರಿತು ಮಾತಾಡಿರಲಿಲ್ಲ. ಹದಿಮೂರು ವರ್ಷದ ಹುಡುಗನಿಗೆ ಇವತ್ತು ಪಾಠ ಇರಲಾರದು ಎನ್ನಿಸಿ ಉತ್ಸುಕತೆಯಿಂದ ಮಾತಾಡಿದ. “ಬ್ರೋನಿಯನ್ನು ನಮ್ಮ ನೆರೆಮನೆಯ ಫಿಲಿಪ್ ನೃತ್ಯಕೂಟಕ್ಕೆ ಕರೆದಿದ್ದಾನೆ. ಅಮ್ಮ ಅವಳಿಗೆ ವಿಶೇಷ ಉಡುಪು ಸಿದ್ಧಪಡಿಸಿದ್ದಾಳೆ. ಕೆಂಪು ಗುಲಾಬಿ ಇರುವ ಬಿಳಿ ಬಣ್ಣದ ಡ್ರೆಸ್.”


“ಸರಿ! ಇನ್ನು ಆನ್ ಕಥೆ ಏನು, ಅದೂ ಹೇಳಿಬಿಡು!”


ಅವನು ನಕ್ಕ. “ಅವಳಿಗೆ ಇನ್ನೂ ಏಳು ವರ್ಷ! ಅವಳು ಕಪ್ಪೆ ಡ್ರೆಸ್ ಹಾಕಿಕೊಂಡು ನಾಟಕ ಮಾಡಲು ಹೋಗುತ್ತಾಳೆ! ಅವಳು ಅಪ್ಪನನ್ನೇ ವ್ಯಾಲೆಂಟೈನ್ ಮಾಡಿಕೊಂಡಿದ್ದಾಳೆ. ಅಪ್ಪನ ಮುದ್ದಿನ ಮಗಳು!”


“ಹೌದು, ಅವಳು ನನಗೂ ಕಪ್ಪೆಯ ಡ್ರೆಸ್ ತೋರಿಸಿದಳು!”


“ಅವಳು ಅದನ್ನು ತೋರಿಸದೇ ಇರೋರು ಯಾರಾದರೂ ಇದ್ದರೆ ಅದೇ ಆಶ್ಚರ್ಯ!”


ಇಬ್ಬರೂ ನಕ್ಕರು. ಅವರು ಅಡುಗೆಮನೆಗೆ ಹೋದರು. ಜೂಜನ್ ಅನೇಕ ಕೆಲಸಗಳನ್ನು ಒಮ್ಮೆಲೇ ಮಾಡುತ್ತಾ ವ್ಯಸ್ತಳಾಗಿದ್ದಳು. ಇವರನ್ನು ನೋಡಿ ಅವಳು ಮುಗುಳ್ನಕ್ಕಳು. 


“ಜೂಜನ್, ಕೇಕ್ ಸಿದ್ಧವಾಯಿತೇ?” ಎಂದು ಜೂಲಿಯಸ್ ಕೇಳಿದ. 


ಹರಿವಾಣದಲ್ಲಿ ಆರಲು ಇಟ್ಟಿದ್ದ ಕೇಕ್ ನೋಡಲು ಆಕರ್ಷಕವಾಗಿತ್ತು. ಜೂಜನ್ ಅದನ್ನು ಮುಟ್ಟಿ ಆರಿದೆ ಎಂದು ಖಚಿತ ಪಡಿಸಿಕೊಂಡು ಅದರಿಂದ ಒಂದು ತುಂಡನ್ನು ಕತ್ತರಿಸಿ ಪೇಪರಿನಲ್ಲಿ ಸುತ್ತಿ ಹುಡುಗನಿಗೆ ಕೊಟ್ಟಳು. ಇನ್ನೊಂದು ತುಂಡನ್ನು ಒಂದು ತಟ್ಟೆಯಲ್ಲಿಟ್ಟು ಮರಿಯಾಗೆ ಕೊಟ್ಟಳು. ಮರಿಯಾ ಒಂದು ಫೋರ್ಕ್ ಕೇಳಿ ಪಡೆದಳು. ಮರಿಯಾ ಮತ್ತು ಜೂಲಿಯಸ್ ಕೋಣೆಗೆ ಮರಳಿದರು. ತಟ್ಟೆಯಲ್ಲಿದ್ದ ಕೇಕ್ ಚೂರನ್ನು ಎರಡು ಭಾಗ ಮಾಡಿ ಒಂದನ್ನು ಜೂಲಿಯಸ್ ಕಡೆ ತಳ್ಳಿ “ತೊಗೋ!” ಎಂದಳು. ಅವನು ಖುಷಿಯಿಂದ ತಿಂದ.


“ಮರಿಯಾ, ನಿನ್ನ ವ್ಯಾಲೆಂಟೈನ್ ಯಾರು?” ಎಂದು ಹುಡುಗ ಕೇಳಿದ.


“ನಾನು ನಿನ್ನನ್ನು ಕೇಳೋಣ ಅಂದುಕೊಂಡಿದ್ದೆನಪ್ಪ. ನೀನು ನೋಡಿದರೆ ಆಗಲೇ ಬೇರೆ ಯಾರನ್ನೋ ಹುಡುಕಿಕೊಂಡು ಬಿಟ್ಟಿದ್ದೀಯ!”


ಅವನು ಜೋರಾಗಿ ನಕ್ಕ. 


“ನಿಮಗೆ ನಾನು ತೀರಾ ಚಿಕ್ಕವನು! ಕಾಸಿಮಿರ್ ನಿಮಗೆ ಸರಿ ಹೋಗುತ್ತಾನೆ!”


ಅವಳ ಮುಖ ಕೆಂಪಾಯಿತು. ಆದರೂ ಸಾವರಿಸಿಕೊಂಡು “ಅವನು ಕೂಡಾ ಬೇರೆ ಯಾರನ್ನೋ ಹುಡುಕಿಕೊಂಡುಬಿಟ್ಟಿರಬಹುದು!” ಎಂದು ಅಳುಮೋರೆ ಮಾಡಿದಳು.


“ಇಲ್ಲ. ಕಳೆದ ವರ್ಷ ಅವನು ಓದಲು ಕಾರ್ಕಾವ್ ಗೆ ಹೋದಾಗ ಅವನು ಮತ್ತು ಸೆಸಿಲಿಯಾ ಬೇರೆಯಾರಾದರು.”


“ಓಹ್!”


“ಹೂಂ. ಅವಳನ್ನು ಅಣ್ಣ ಬಹಳ ಹಚ್ಚಿಕೊಂಡಿದ್ದ. ಆದರೆ ಅವನು ಓದಲು ಹೋಗುವುದು ಅವಳಿಗೆ ಇಷ್ಟ ಇರಲಿಲ್ಲ. ಬೇರೆ ಹುಡುಗನ ಜೊತೆ ಅವಳ ಮದುವೆ ಆಯಿತು.”


ಅವಳು ಸುಮ್ಮನಿದ್ದಳು.


“ಇವತ್ತು ಅಣ್ಣ ಬರುತ್ತಾನಲ್ಲ. ಆಗ ನಾನು ಅವನಿಗೆ ಹೇಳುತ್ತೇನೆ. ಮರಿಯಾ ನಿನಗೆ ಒಳ್ಳೆಯ ಗೆಳತಿ ಆಗುತ್ತಾಳೆ ಅಂತ.”


“ಅಯ್ಯೋ, ಹಾಗೆಲ್ಲ ಏನೂ ಹೇಳಲು ಹೋಗಬೇಡ!”


“ನನ್ನ ಅಣ್ಣ ತುಂಬಾ ಭೋಳೆ ಸ್ವಭಾವದವನು. ಅವನಿಗೆ ಇದೆಲ್ಲ ಗೊತ್ತಾಗುವುದಿಲ್ಲ.”


ಅವಳಿಗೆ ನಗು ತಡೆಯಲು ಆಗಲಿಲ್ಲ.


ಅವರ ಸಂಭಾಷಣೆ ಅಲ್ಲಿಗೇ ನಿಂತಿತು. ತಲೆಬಾಗಿಲಿನ ಹತ್ತಿರ ಕುದುರೆ ಸಾರೋಟು ಬಂದ ಸದ್ದಾಯಿತು. ಕುದುರೆಯ ಗೆಜ್ಜೆಯ ಸದ್ದು ಮತ್ತು ಕೊರಳಿಗೆ ಕಟ್ಟಿದ ಗಂಟೆಯ ಸದ್ದು ಸ್ಪಷ್ಟವಾಗಿ ಕೇಳಿತು.


“ಓಹ್! ಅಣ್ಣ ಬಂದ ಎಂದು ತೋರುತ್ತದೆ! ಅವಳನ್ನು ಕರೆದುಕೊಂಡು ಬರಲು ಅಪ್ಪ, ಅಮ್ಮ ಮತ್ತು ಆನ್ ಹೋಗಿದ್ದರು!”


ಹೀಗೆಂದು ಜೂಲಿಯಸ್ ಮೇಲೆದ್ದು “ಇವತ್ತಿಗೆ ಇಷ್ಟು ಪಾಠ ಸಾಕು ಅಲ್ಲವೇ ಮರಿಯಾ?” ಎಂದು ಕೇಳಿದ. 


“ನಾನು ನಿನಗೆ ಪಾಠ ಹೇಳಿದ್ದು ಅಷ್ಟರಲ್ಲೇ ಇದೆ! ಬದಲಿಗೆ ನೀನೇ ನನಗೆ ಪಾಠ ಹೇಳಿದೆ!” ಎಂದು ನಕ್ಕಳು. ಅವಳ ನಗುವನ್ನು ಸಮ್ಮತಿ ಎಂದೇ ತಿಳಿದು ಅವನು ಕೋಣೆಯ ಹೊರಗೆ ಓಡಿದ. ಅವಳು ಮೇಲೆದ್ದು ತನ್ನ ಕೋಣೆಗೆ ಹೋದಳು.


ಕೋಣೆಯ ಕಿಟಕಿಯಲ್ಲಿ ನಿಂತಾಗ ಅವಳಿಗೆ ಹೊರಗಿನ ದೃಶ್ಯ ಕಾಣಿಸಿತು. ಕಾಸಿಮಿರ್ ಕೆಳಗೆ ಇಳಿದು ತನ್ನ ಕೋಟಿನ ಜೋಬಿನಲ್ಲಿ ಕೈಯಿಟ್ಟುಕೊಂಡು ನಿಂತಿದ್ದ. ರಾತ್ರಿ ಹಿಮ ಬಿದ್ದಿತ್ತು. ಸೂರ್ಯನ ಬೆಳಕು ಬಹಳ ಕ್ಷೀಣವಾಗಿತ್ತು. ಅವನು ಕೆಂಪು ಬಣ್ಣದ ಕೋಟ್ ತೊಟ್ಟಿದ್ದ. ತಲೆಗೆ ಚರ್ಮದ ಟೋಪಿ ಇಟ್ಟುಕೊಂಡು ಕುತ್ತಿಗೆಗೆ ಮಫ್ಲರ್ ಸುತ್ತಿದ್ದ. ಅವನು ಉಸಿರಾಡಿದಾಗ ಬಾಯಿಂದ ಹೊಗೆ ಏಳುತ್ತಿತ್ತು. ಸಾರೋಟಿನಿಂದ ಅವನ ತಂದೆ ಇಳಿದರು. ಅವರ ಸಹಾಯ ಪಡೆದು ಆನ್ ಕೂಡಾ ಇಳಿದಳು. ನಂತರ ಮದಾಂ ಕ್ಯಾಸಿಮಿರಾ. ಕೊನೆಗೆ ಇನ್ನೊಬ್ಬ ಯುವತಿ. ಅವಳು ಬೆಲೆಬಾಳುವ ಮಿಂಕ್ ಕೋಟ್ ತೊಟ್ಟಿದ್ದಳು. ತಲೆಗೆ ಸುಂದರವಾದ ಸ್ಕಾರ್ಫ್ ಸುತ್ತಿಕೊಂಡಿದ್ದಳು. ಅವರು ಎಲ್ಲರೂ ಒಳಗೆ ಬಂದಿದ್ದು ಕಾಣಿಸಿತು.


ಮರಿಯಾ ಮೇಜಿನ ಮುಂದೆ ಕುಳಿತು ಪುಸ್ತಕಗಳ ಮೇಲೆ ಕಣ್ಣಾಡಿಸಿದಳು. ಅದೇಕೋ ಓದುವ ಮನಸ್ಸಾಗಲಿಲ್ಲ. ಅವಳ ಮನಸ್ಸು ಡೋಲಾಯಮಾನವಾಗಿತ್ತು. ಕಾಸಿಮಿರ್! ಅವನನ್ನು ನೋಡಲು, ಅವನೊಂದಿಗೆ ಮಾತಾಡಲು ಅವಳ ಹೃದಯ ತವಕಿಸಿತು. ಅವನು ಅದೇ ಮನೆಯಲ್ಲಿ ಇದ್ದರೂ ಅವನನ್ನು ಸಂಧಿಸಲಾರದ ತನ್ನ ಪರಿಸ್ಥಿತಿ ನೆನೆದು ಅವಳಿಗೆ ಕೋಪ ಮತ್ತು ದುಃಖ ಎರಡೂ ಉಂಟಾದವು. ಅವಳು ವಿಜ್ಞಾನದ ಪಠ್ಯಪುಸ್ತಕವನ್ನು ಹೇಗೋ ಕಷ್ಟ ಪಟ್ಟು ಓದಲು ಪ್ರಯತ್ನಿಸಿದಳು 


ಸಮಯ ಮಧ್ಯಾಹ್ನದ ಒಂದೂವರೆ ಮೀರಿತ್ತು. ಊಟದ ಸಮಯ ಆಯಿತು. ತನಗೂ ಕೆಳಗಿನಿಂದ ಊಟಕ್ಕೆ ಕರೆ ಬರಬಹುದೇ ಎಂದು ಅವಳು ಕಾದಳು. ಸಮಯ ಎರಡಾದರೂ ಯಾರೂ ಬಾಗಿಲು ತಟ್ಟಲಿಲ್ಲ. ಎರಡೂವರೆಯ ಸುಮಾರಿಗೆ ಯಾರೋ ಅವಳ ಬಾಗಿಲನ್ನು ಮೆಲ್ಲಗೆ ಬಡಿದರು. ಅವಳು ಧಡಪಡಿಸಿ ಮೇಲೆದ್ದು ತಲೆಗೂದಲನ್ನು ಕೈಯಿಂದಲೇ ಸರಿಪಡಿಸಿಕೊಂಡು ಬಾಗಿಲು ತೆರೆದಳು. ಅಲ್ಲಿ ಜೂಜನ್ ನಿಂತಿದ್ದಳು. ಅವಳ ಕೈಯಲ್ಲಿ ಒಂದು ಹರಿವಾಣವಿತ್ತು. 


“ನಿನ್ನ ಊಟ!” ಎಂದು ಅವಳು ಹರಿವಾಣವನ್ನು ಒಳಗೆ ತಂದು ಮೇಜಿನ ಮೇಲಿಟ್ಟಳು. ಹರಿವಾಣದ ಮೇಲಿದ್ದ ಮುಚ್ಚಳ ತೆರೆದು “ಇವತ್ತು ಹಲವು ಅತಿಥಿಗಳು ಬಂದಿದ್ದಾರೆ! ನಿನಗೆ ಊಟ ತಡವಾದೀತು ಎಂದು ಮದಾಂ ಕ್ಯಾಸಿಮಿರಾ ನನಗೆ ಊಟ ಕೊಟ್ಟು ಬರಲು ಹೇಳಿದರು. ನಿನ್ನ ಊಟ ಮುಗಿದ ಮೇಲೆ ಎಲ್ಲವನ್ನೂ ಜೋಡಿಸಿ ಹೊರಗೆ ಇಡು,” ಎಂದು ಉತ್ತರಕ್ಕೆ ಕಾಯದೆ ಹೊರಟಳು. ಹರಿವಾಣದಲ್ಲಿ ಹಲವು ಬಗೆಯ ರುಚಿಕರ ಪದಾರ್ಥಗಳು ಇದ್ದವು. ಕೇಕ್ ಮತ್ತು ಸ್ಟ್ರಾಬೆರ್ರಿ ಹಣ್ಣುಗಳು ಇದ್ದವು. ಆದರೂ ಅವಳಿಗೆ ಊಟ ರುಚಿಸಲಿಲ್ಲ. ತಿನ್ನುವ ಶಾಸ್ತ್ರ ಮುಗಿಸಿ ಅವಳು ಹರಿವಾಣವನ್ನು ಹೊರಗೆ ಇಟ್ಟಳು. 


ಕೆಳಗೆ ಏನು ನಡೆದಿರಬಹುದು ಎಂದು ಅವಳು ಊಹಿಸಲು ಪ್ರಯತ್ನಿಸಿದಳು. ಕಾಸಿಮಿರ್ ತನ್ನ ಪ್ರೇಮವನ್ನು ತನ್ನ ತಂದೆ ತಾಯಿಯರಿಗೆ ತಿಳಿಸಿರಬಹುದೆ? ಅವನು ಮೇಲೆ ಬಂದು ತನ್ನನ್ನು ನರ್ತನಕೂಟಕ್ಕೆ ಕರೆದೊಯ್ಯುವನೇ? ತಾನು ನರ್ತನಕ್ಕೆ ಯಾವ ಡ್ರೆಸ್ ತೊಡಬೇಕು? ತನ್ನಲ್ಲಿ ಇರುವುದು ಒಂದೇ ಬೆಲೆಬಾಳುವ ಉಡುಪು. ಅದನ್ನು ಎಲ್ಲರೂ ನೋಡಿದ್ದಾರೆ! 


ಸಮಯ ಜಾರಿತು. ಅವಳ ಕಣ್ಣಿಗೆ ನಿದ್ರೆ ಹತ್ತಿತು. ಎಚ್ಚರವಾದಾಗ ಸಮಯ ಸಂಜೆಯ ಐದಾಗಿತ್ತು. ಹೊರಗೆ ಕತ್ತಲಾಗಿತ್ತು. ಅವಳು ಮೋಂಬತ್ತಿ ಹಚ್ಚಿಟ್ಟಳು. ಹೂಜಿಯಲ್ಲಿದ್ದ ನೀರು ಲೋಟಕ್ಕೆ ಬಗ್ಗಿಸಿ ಕುಡಿದಳು. ತನ್ನ ಏಕೈಕ ವಿಶೇಷ ಉಡುಪನ್ನು ತೊಟ್ಟು ಮತ್ತೊಮ್ಮೆ ಓದಲು ಕುಳಿತಳು. ಹೇಗೋ ಒಂದೆರಡು ಪುಟ ಓದಿದಳು. ಸಮಯ ಆರಾಯಿತು. ನರ್ತನ ಕೂಟ ಸಂಜೆಯ ಏಳಕ್ಕೆ ಪ್ರಾರಂಭವಾಗುತ್ತದೆ ಎಂದು ಅವಳ ಮನಸ್ಸು ಎಚ್ಚರಿಸಿತು. ಅವಳು ತುಟಿ ಕಚ್ಚಿಕೊಂಡು ಓದಲು ಪ್ರಯತ್ನ ಪಟ್ಟಳು.


ಅವಳ ಕೋಣೆಯ ಬಾಗಿಲನ್ನು ಯಾರೋ ತಟ್ಟಿದರು. ಅವಳು ಲಗುಬಗೆಯಿಂದ ಮೇಲೆದ್ದು ಬಾಗಿಲು ತೆರೆದಳು. ಹೊರಗೆ ಕ್ಷೀಣ ಬೆಳಕಿತ್ತು. ಯಾರೂ ಕಾಣಲಿಲ್ಲ. ಅವಳು ಹೊರಗೆ ಬಂದು ನೋಡಿದಳು. ಯಾರೂ ಗೋಚರಿಸದೆ ಅವಳು ತಬ್ಬಿಬ್ಬಾಗಿ “ನಾನು ಇದನ್ನು ಕಲ್ಪಿಸಿಕೊಂಡೆನೇ?” ಎಂದು ಯೋಚಿಸುತ್ತಾ ಒಳಗೆ ಬಂದಳು. ಮೋಂಬತ್ತಿಯ ಬೆಳಕಿನಲ್ಲಿ ನೆಲದ ಮೇಲೆ ಒಂದು ಲಕೋಟೆ ಕಾಣಿಸಿತು. ಬಾಗಿಲು ತಟ್ಟಿದವರು ಪತ್ರವನ್ನು ಬಾಗಿಲಿನ ಸಂದಿಯಿಂದ ತೂರಿಸಿ ಹೋಗಿದ್ದಾರೆ ಎಂದು ತರ್ಕಿಸಿ ಅವಳು ಬಾಗಿ ಲಕೋಟೆಯನ್ನು ಕೈಗೆತ್ತಿಕೊಂಡಳು.

ಮೂರು ವ್ಯಾಲೆಂಟೈನ್ ಗುಲಾಬಿಗಳು


( ೬)


ಮರಿಯಾ ಲಕೋಟೆಯನ್ನು ತೆಗೆದು ನೋಡಿದಳು. ಕಾಸಿಮಿರನ ಕೈಬರಹ ಅವಳಿಗೆ ಅಪರಿಚಿತವೇನಲ್ಲ. ಅವನು ಇಲ್ಲೇ ಇರುವಾಗ ತನಗೆ ಪತ್ರವನ್ನೇಕೆ ಬರೆದ? ಅವಳ ಕೈ ಕಂಪಿಸಿತು.


“ಪ್ರೀತಿಯ ಮರಿಯಾ,


ನಿನ್ನನ್ನು ನೋಡಬೇಕು ಮತ್ತು ನಮ್ಮಿಬ್ಬರ ಭವಿಷ್ಯವನ್ನು ಕುರಿತು ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ನನ್ನ ಭೇಟಿಯ ಉದ್ದೇಶವಾಗಿತ್ತು. ನಾನು ಊಹಿಸಲೂ ಆಗದ ಅಡಚಣೆಗಳು ಈ ಕಾರ್ಯದಲ್ಲಿ ತಲೆದೋರಿವೆ. ಜೀವನವು ಗಣಿತದ ಪ್ರಮೇಯಗಳಂತೆ ಸರಳವಾಗಿರುವುದಿಲ್ಲ ಎಂದು ನನಗೆ ಅನ್ನಿಸುತ್ತಿದೆ. ನಾನು ಪಿಎಚ್.ಡಿ ಪದವಿಗಾಗಿ ಹೊರಟಾಗ ನನ್ನ ತಾಯಿ ನನ್ನ ವಿವಾಹ ಮಾಡಬೇಕೆಂದು ಬಹಳ ಪ್ರಯತ್ನಿಸಿದರು. ಮಗನನ್ನು ದೂರದ ಊರಿಗೆ ಕಳಿಸುತ್ತಿದ್ದೇನೆ ಎಂಬ ಆತಂಕ ಅವರಿಗೆ ಇತ್ತು. ಆಗ ನನಗೆ ಸೆಸಿಲಿಯಾ ಎಂಬ ಗೆಳತಿ ಇದ್ದಳು. ನಾವಿಬ್ಬರೂ ಮದುವೆಯಾಗುವ ಕನಸನ್ನು ನಮಗಿಂತಲೂ ಹೆಚ್ಚಾಗಿ ನನ್ನ ತಾಯಿ ಕಂಡಿದ್ದರು. ಆದರೆ ಸೆಸಿಲಿಯಾ ದೂರದ ಊರಿಗೆ ಬರಲು ಅವಳ ತಂದೆತಾಯಿ ಒಪ್ಪಲಿಲ್ಲ. ತಮ್ಮ ಒಬ್ಬಳೇ ಮಗಳು ತಮ್ಮಿಂದ ದೂರವಾಗುವುದು ಅವರಿಗೆ ಒಪ್ಪಿತವಾಗಿರಲಿಲ್ಲ. ಹೀಗಾಗಿ ನನ್ನ ಮತ್ತು ಸೆಸಿಲಿಯಾಳ ಸಂಬಂಧ ಮುರಿಯಿತು. ಅವಳು ವಾರ್ಸಾದಲ್ಲೇ ಬೇರೊಬ್ಬ ಯುವಕನನ್ನು ಮದುವೆಯಾದಳು. ಇದರಿಂದ ಬೇಸರಗೊಂಡಿದ್ದ ನನ್ನ ತಾಯಿ ನನಗಾಗಿ ಬೇರೊಂದು ಹೆಣ್ಣನ್ನು ನೋಡುತ್ತಲೇ ಇದ್ದರೆಂದು ನನಗೆ ಕನಸಿನಲ್ಲೂ ಹೊಳೆದಿರಲಿಲ್ಲ. ಇಂದು ನಾನು ರೈಲಿನಿಂದ ಇಳಿದಾಗ ನನ್ನ ತಾಯಿ ನನಗೆ ಬಹಳ ದೊಡ್ಡ ಆಘಾತ ನೀಡಿದರು. ಅವರು ಜೊತೆಗೆ ತಮ್ಮ ದೂರದ ಸಂಬಂಧಿಯೊಬ್ಬರ ಮಗಳನ್ನು ಕರೆದು ತಂದಿದ್ದರು. ಅವಳೊಂದಿಗೆ ನನ್ನ ವಿವಾಹ ಮಾಡುವುದೆಂದು ಅವರು ನಿರ್ಧರಿಸಿಬಿಟ್ಟಿದ್ದಾರೆ. ನನಗೆ ಉಂಟಾದ ಆಘಾತವನ್ನು ನನ್ನ ತಾಯಿ, ತಂದೆ ಮತ್ತು ಅಲೆಕ್ಸಾಂಡ್ರಾ ಎಲ್ಲರೂ ಗಮನಿಸಿದರು ಎಂದು ನನ್ನ ಭಾವನೆ. ಮನೆಗೆ ಬಂದ ಮೇಲೆ ನನ್ನ ತಾಯಿ ನನ್ನನ್ನು ಪ್ರತ್ಯೇಕವಾಗಿ ಕರೆದು ವಿಷಯ ಏನೆಂದು ನನ್ನನ್ನು ವಿಚಾರಿಸಿದರು. ನಾನು ನಮ್ಮಿಬ್ಬರ ಬಗ್ಗೆ ಅವರಿಗೆ ಹೇಳಿದೆ. ಮರಿಯಾ, ಅವರಿಗೆ ನಮ್ಮ ವಿವಾಹವು ಒಂದಿಷ್ಟೂ ಇಷ್ಟವಿಲ್ಲ. ಮನೆಯ ಹಿರಿಯ ಮಗ ಎಂದು ಅವರು ನನ್ನಿಂದ ಬಹಳ ಅಪೇಕ್ಷೆ ಇಟ್ಟುಕೊಂಡಿದ್ದಾರೆ. ಅವರು ಹಾಕಿದ ಗೆರೆ ಮೀರಲು ನನಗೆ ಧೈರ್ಯವಿಲ್ಲ. ನಮ್ಮ ಮನೆಯ ಎಲ್ಲ ನಿರ್ಧಾರಗಳನ್ನೂ ತೆಗೆದುಕೊಳ್ಳುವುದು ನಮ್ಮ ತಾಯಿ. ನಾನು ಅವರ ಮಾತು ಮೀರಿದರೆ ನನ್ನ ತಮ್ಮಂದಿರು ಮತ್ತು ತಂಗಿಯರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಂತೆ ಎಂದು ಅವರು ನನಗೆ ನಿರ್ದಯೆಯಿಂದ ಹೇಳಿದರು. ನಾನು ಅವರ ಮಾತು ಮೀರಿ ನಿನ್ನನ್ನು ಮದುವೆಯಾದರೆ ನಾನು ಈ ಕುಟುಂಬದ ಸಂಬಂಧವನ್ನು ಕಳೆದುಕೊಳ್ಳಬೇಕಾಗುವುದು ಎಂದು ಅವರು ಸ್ಪಷ್ಟವಾಗಿ ಹೇಳಿದರು. ನನಗೆ ಏನೂ ತೋಚುತ್ತಿಲ್ಲ. ನಿನ್ನೊಂದಿಗೆ ಮಾತಾಡುವ ಧೈರ್ಯವೂ ನನಗಿಲ್ಲ. ನನ್ನನ್ನು ಕ್ಷಮಿಸು ಎಂದು ನಿನ್ನನ್ನು ಕೇಳಲೂ ನನಗೆ ಆಗುತ್ತಿಲ್ಲ. ನಿನ್ನನ್ನು ಮರೆಯಲು ನನಗೆ ಸಾಧ್ಯವಿಲ್ಲ. ನನ್ನನ್ನು ನೀನು ಮರೆತುಬಿಡು ಎಂದಷ್ಟೇ ಕೇಳಿಕೊಳ್ಳುತ್ತೇನೆ.


ಕಾಸಿಮಿರ್.”


ಪತ್ರವನ್ನು ಓದುತ್ತಾ ಅವಳು ಕುರ್ಚಿಯ ಮೇಲೆ ಕುಸಿದು ಕುಳಿತಳು. ಅವಳಿಗೆ ಜಗತ್ತು ತಲೆಕೆಳಗಾದಂತೆ ತೋರಿತು. ಯಾರೋ ಅವಳನ್ನು ಕಂಡು ನಕ್ಕಂತೆ ಭಾಸವಾಯಿತು. 


“ಮರಿಯಾ! ಕನಸು ಕಾಣುವುದಕ್ಕೂ ಒಂದು ಮಿತಿ ಇರಬೇಕು! ಶ್ರೀಮಂತ ಮನೆತನದ ಸೊಸೆ! ಪ್ಯಾರಿಸ್ ವಿಶ್ವವಿದ್ಯಾಲಯಕ್ಕೆ ಅವರ ಖರ್ಚಿನಲ್ಲಿ ಓದು! ಪಿಎಚ್.ಡಿ ಪದವಿ!” 

 

ಹಾಗೆ ನಗುತ್ತಿದ್ದುದು ಯಾರು? ಮದಾಂ ಕ್ಯಾಸಿಮಿರಾ? ಇಲ್ಲ, ಅದು ತನ್ನದೇ ಧ್ವನಿಯಂತೆ ತೋರುತ್ತಿದೆ! 


ಅವಳು ಮೇಜನ್ನು ಭದ್ರವಾಗಿ ಹಿಡಿದು ಸಾವರಿಸಿಕೊಂಡಳು. ಹೂಜಿಯಿಂದ ನೀರು ಬಗ್ಗಿಸಿಕೊಂಡು ಕುಡಿದಳು. ಎದುರಿಗೆ ಇದ್ದ ನಿಲುವುಗನ್ನಡಿಯ ಮುಂದೆ ನಿಂತಳು. ಅವಳ ಏಕೈಕ ವಿಶೇಷ ಉಡುಪು ಅವಳನ್ನು ನೋಡಿ ಅಣಕಿಸಿತು. “ನರ್ತನಕೂಟಕ್ಕೆ ಹೋಗುವುದಿಲ್ಲವೇ ಮರಿಯಾ?” ಎಂದು ನಕ್ಕಂತೆ ಕಂಡಿತು. 


ಅವಳು ತನ್ನ ಪ್ರತಿಬಿಂಬವನ್ನು ನೋಡಿ “ಮರಿಯಾ, ಇದೇನು ವಿಶ್ವದ ಕೊನೆಯಲ್ಲ. ನೀನು ಮುಂದೆ ಓದಲೇ ಬೇಕು. ಮುಂದೆ ನೀನೊಬ್ಬ ದೊಡ್ಡ ವಿಜ್ಞಾನಿ ಆಗಲೇಬೇಕು. ಶಪಥ ತೆಗೆದುಕೋ!” ಎಂದು ಹೇಳಿಕೊಂಡಳು. ನಂತರ ತನ್ನ ಮೇಜಿನ ಮೇಲಿದ್ದ ಪುಸ್ತಕಗಳಲ್ಲಿ ಒಂದನ್ನು ಕೈಗೆತ್ತಿಕೊಂಡು ಗಂಭೀರವಾಗಿ ಓದಲು ಕುಳಿತಳು. ಮನಸ್ಸು ದೊಡ್ಡ.ಭಾರವನ್ನು ಕಳೆದುಕೊಂಡು ಹಗುರವಾದಂತೆ ಅನ್ನಿಸಿತು. ಓದಿದ್ದು ಅವಳ ಮನಸ್ಸಿನಲ್ಲಿ ಇಳಿಯಿತು. ಅವಳು ಬಹಳ ಹೊತ್ತು ಓದುತ್ತಾ ಟಿಪ್ಪಣಿ ಮಾಡಿಕೊಳ್ಳುತ್ತಾ ಕಳೆದಳು. ಮೋಂಬತ್ತಿ ಕಿರಿದಾಗುತ್ತಿತ್ತು. 


ಬಾಗಿಲು ತಟ್ಟಿದ ಸದ್ದಾಯಿತು. 


“ತೆಗೆದಿದೆ, ಒಳಕ್ಕೆ ಬನ್ನಿ!” ಎಂದು ಅವಳು ಕುಳಿತಲ್ಲಿಂದಲೇ ಹೇಳಿದಳು. ಜೂಜನ್ ಹರಿವಾಣದೊಂದಿಗೆ ಪ್ರತ್ಯಕ್ಷಳಾದಳು. 


“ಓದುತ್ತಿದ್ದರೆ ಹಸಿವೂ ಆಗುವುದುಲ್ಲವೆ?” ಎಂದು ಹರಿವಾಣವನ್ನು ಮೇಜಿನ ಮೇಲೆ ಇರಿಸಿದಳು. “ನೀನು ಊಟಕ್ಕೆ ಕೆಳಗೆ ಬರಬಹುದು ಎಂದು ನಾನು ಕಾದೆ. ಎಲ್ಲರೂ ವ್ಯಾಲೆಂಟೈನ್ ಸಂಭ್ರಮದಲ್ಲಿ ಅಲ್ಲಿ-ಇಲ್ಲಿ ಹೋದರು. ಆನ್ ನಾಟಕ ನೋಡಲು ಪಾನಿ ಕ್ಯಾಸಿಮಿರಾ ಮತ್ತು ಪಾನ್ ಜೋರಾವ್ಸ್ಕಿ ಹೋದರು. ಉಳಿದವರು ತಮ್ಮ ತಮ್ಮ ಹಾದಿ ಹಿಡಿದು ಹೋದರು. ಮನೆಯಲ್ಲಿ ನಾವು ಇಬ್ಬರೇ. ನಿನ್ನ ಊಟ ಇಲ್ಲಿಗೇ ತಂದೆ.”


“ನೀನು ಬಹಳ ಕರುಣಾಮಯಿ ಜೂಜನ್. ನನಗೆ ತಾಯಿ ಇದ್ದಂತೆ ನೀನು. ನೀನು ನನ್ನ ವ್ಯಾಲೆಂಟೈನ್! ಆದರೆ ನಿನಗೆ ಕೊಡಲು ನನ್ನ ಬಳಿ ಯಾವ ಉಡುಗೊರೆ ಇಲ್ಲ!” ಎಂದು ಮರಿಯಾ ನಕ್ಕಳು.


ಜೂಜನ್ “ನನಗೆ ಮಕ್ಕಳಿಲ್ಲ. ಇಂದು ನೀನು ನನ್ನನ್ನು ತಾಯಿ ಎಂದು ಕರೆದೆಯಲ್ಲ, ಅದೇ ನನಗೆ ಉಡುಗೊರೆ!” ಎಂದಳು.


“ಜೂಜನ್, ಈ ಊಟವನ್ನು ನಾವು ಕೆಳಗೆ ಒಟ್ಟಿಗೇ ಕೂತು ಮಾಡೋಣ!” ಎಂದು ಮರಿಯಾ ಹರಿವಾಣವನ್ನು ಕೈಗೆತ್ತಿಕೊಂಡಳು.  


***


ಮರುದಿನ ಅವಳು ಎಂದಿನಂತೆ ಮಕ್ಕಳಿಗೆ ಪಾಠ ಹೇಳಿದಳು. ಕಾಸಿಮಿರ್ ಮನೆಯಲ್ಲಿ ಇರುವನೋ ಇಲ್ಲವೋ ಎಂಬ ಕುತೂಹಲವೂ ಅವಳನ್ನು ಕಾಡಲಿಲ್ಲ. ಎಲ್ಲ ಮಕ್ಕಳೂ ಉತ್ಸಾಹದಿಂದ ತಮ್ಮ ವ್ಯಾಲೆಂಟೈನ್ ದಿವಸದ ಚಟುವಟಿಕೆಗಳ ಬಗ್ಗೆ ಹೇಳಿಕೊಂಡರು. ರಾಜಕುಮಾರಿಗಿಂತ ತನಗೇ ಹೆಚ್ಚು ಚಪ್ಪಾಳೆ ಬಿತ್ತು ಎಂದು ಆನ್ ಹೆಮ್ಮೆಯಿಂದ ಹೇಳಿಕೊಂಡಳು. ಹ್ಯಾನಾಗೆ ಕೇಕ್ ಬಹಳ ಇಷ್ಟವಾಯಿತು ಎಂದು ಜೂಲಿಯಸ್ ಹೇಳಿಕೊಂಡ. ಅವಳು ಇವನಿಗಾಗಿ ಒಂದು ಬಾಚಣಿಗೆ ತಂದು ಕೊಟ್ಟಿದ್ದಳು. ಅದನ್ನು ಅವನು ಹೆಮ್ಮೆಯಿಂದ ತೋರಿಸಿದ. ವ್ಲಾಡಿಸ್ಲಾವ್ ತನ್ನ ಗೆಳತಿಯ ಜೊತೆಗೆ ನರ್ತನಕೂಟಕ್ಕೆ ಹೋಗಿದ್ದ. ಬ್ರೋನಿಯಾ ಕೂಡಾ ಅದೇ ನರ್ತನಕೂಟಕ್ಕೆ ಗೆಳೆಯನ ಜೊತೆಗೆ ಬಂದಿದ್ದಳು. “ಅತ್ಯಂತ ಒಳ್ಳೆಯ ಜೋಡಿಗಳ” ಸ್ಪರ್ಧೆಯಲ್ಲಿ ಅವರು ಇಬ್ಬರೂ ಬಹುಮಾನ ಗೆದ್ದಿದ್ದರು.


ಮಕ್ಕಳು ಉತ್ಸಾಹದಿಂದ ಹೇಳಿದ್ದನ್ನು ಮರಿಯಾ ಆಸಕ್ತಿಯಿಂದ ಕೇಳಿಸಿಕೊಂಡಳು. “ಮರಿಯಾ, ನೀನು ಯಾರ ಜೊತೆಗೆ ವ್ಯಾಲೆಂಟೈನ್ ದಿವಸ ಆಚರಿಸಿದೆ?” ಎಂದು ಅವರು ಕೇಳಿದಾಗ ಜೂಜನ್ ಜೊತೆ ಊಟ ಮಾಡಿದ್ದನ್ನು ವರ್ಣಿಸಿದಳು. “ಜೂಜನ್ ಮಾಡಿದ ವಿಶೇಷ ಅಡುಗೆಯ ಜೊತೆಗೆ ಕೆಂಪು ವೈನ್ ಸೇವಿಸುವ ಅವಕಾಶ ನನಗೆ ಮಾತ್ರ ಸಿಕ್ಕಿತು!” ಎಂದು ಹೇಳುವಾಗ ತನ್ನ ಧ್ವನಿ ತನಗೇ ಅಪರಿಚಿತ ಎನ್ನಿಸಿತು.


ಜೂಲಿಯಸ್ “ನಿನಗೆ ಗೊತ್ತಾ ಮರಿಯಾ? ಅಣ್ಣ ಕಾಸಿಮಿರ್ ಮತ್ತು ಅಲೆಕ್ಸಾಂಡ್ರಿಯಾ ಈಗ ಜೊತೆಯಾಗಿದ್ದಾರೆ! ಅಲೆಕ್ಸಾಂಡ್ರಿಯಾ ನಮ್ಮ ದೂರದ ಸಂಬಂಧಿ. ಅಣ್ಣ ನೆನ್ನೆ ರಾತ್ರಿಯ ಊಟಕ್ಕೆ ಅವಳ ಮನೆಗೆ ಹೋಗಿದ್ದ. ಅವರು ಈ ವರ್ಷ ಮದುವೆ ಆಗುತ್ತಾರಂತೆ. ಅಮ್ಮ ಹೇಳಿದಳು!” ಎಂದು ಸುದ್ದಿ ತಿಳಿಸಿದ. ಅವಳು.”ಓಹ್, ಹೌದಾ? ಬಹಳ ಸಂತೋಷದ ಸುದ್ದಿ!” ಎಂದಷ್ಟೇ ಹೇಳಿ ಪಾಠದ ಕಡೆಗೆ ಗಮನ ಹರಿಸಿದಳು.


ಅಂದಿನಿಂದ ಅವಳು ಊಟವನ್ನು ಜೂಜನ್ ಜೊತೆಯಲ್ಲೇ ಮಾಡುವ ಅಭ್ಯಾಸ ಮಾಡಿಕೊಂಡಳು. ಮಕ್ಕಳ ಪಾಠ ಬಿಟ್ಟರೆ ಹೆಚ್ಚಿನ ಸಮಯವನ್ನು ತನ್ನ ಕೋಣೆಯಲ್ಲಿ ಕಳೆಯುತ್ತಿದ್ದಳು. ಅಕ್ಕ ಬ್ರೋನಿಗೆ ಪತ್ರ ಬರೆದು ಅಂಚೆ ಪೆಟ್ಟಿಗೆಗೆ ಹಾಕಿದಳು. “ನನಗೆ ಪ್ಯಾರಿಸ್ ವಿಶ್ವವಿದ್ಯಾಲಯಕ್ಕೆ ಆದಷ್ಟೂ ಬೇಗ ಬರಬೇಕೆಂಬ ಅದಮ್ಯ ಆಸೆ ಹುಟ್ಟಿದೆ. ನಾನು ಗವರ್ನೆಸ್ ಹುದ್ದೆಯಲ್ಲಿ ನನಗೆ ಸಿಕ್ಕುತ್ತಿರುವ ಸಂಬಳವನ್ನು ಕೂಡಿಡುತ್ತಿದ್ದೇನೆ. ಪ್ಯಾರಿಸ್ ನಗರಕ್ಕೆ ಪ್ರಯಾಣ ಮಾಡಲು ಸಾಕಷ್ಟು ಹಣವಿದೆ. ಅಲ್ಲಿ ವಿಶ್ವವಿದ್ಯಾಲಯಕ್ಕೆ ಸೇರಿಕೊಳ್ಳಲು ಬೇಕಾದ ಹಣವೂ ನನ್ನ ಬಳಿ ಇದೆ. ನನಗೆ ಮುಂದೆ ಸ್ಕಾಲರ್ಶಿಪ್ ಸಿಕ್ಕಬಹುದು ಎಂಬ ಆಸೆಯೂ ಇದೆ. ನೀನು ನನಗೆ ಪ್ರಾರಂಭದಲ್ಲಿ ಸಹಾಯ ಮಾಡಿದರೆ ನಾನು ಧೈರ್ಯ ಮಾಡಿ ರೈಲ್ವೆ ಟಿಕೆಟ್ ಕಾದಿರಿಸುತ್ತೇನೆ”


ಮಾರ್ಚ್ ತಿಂಗಳ ಮೊದಲ ದಿನ ಅವಳು ಮದಾಂ ಕ್ಯಾಸಿಮಿರಾಳನ್ನು ಕಾಣಲೇ ಬೇಕಾಗಿತ್ತು. ಅಂದು ಸಂಬಳ ಪಡೆಯುವ ದಿನ. ಅವಳು ಸಂಜೆಯವರೆಗೆ ಕಾದು ಕ್ಯಾಸಿಮಿರಾ ಅವರ ಕೋಣೆಯ ಬಾಗಿಲು ತಟ್ಟಿದಳು.


“ಒಳಗೆ ಬರಬಹುದು” ಎಂದು ಮನೆಯ ಒಡತಿ ಒಳಗಿನಿಂದಲೇ ಹೇಳಿದಳು. ಮರಿಯಾ ಕೋಣೆಯನ್ನು ಪ್ರವೇಶಿಸಿದಳು. ಕ್ಯಾಸಿಮಿರಾ ಒಂದು ಫೋಟೋ ಆಲ್ಬಂ ನೋಡುತ್ತಾ ಕುಳಿತಿದ್ದಳು. ಕತ್ತು ಮೇಲೆತ್ತಿ ನೋಡಿ “ಓಹ್, ನಿನ್ನ ಸಂಬಳದ ದಿವಸ ಬಂತಲ್ಲವೇ!” ಎಂದಳು. ಮರಿಯಾ ಮೌನವಾಗಿ ನಿಂತಿದ್ದಳು.


ಕ್ಯಾಸಿಮಿರಾ ತನ್ನ ಪರ್ಸ್ ತೆರೆದು ಹಣ ಎಣಿಸಿ ಕೊಟ್ಟಳು.


“ಮರಿಯಾ, ಕ್ಯಾಸಿಮಿರ್ ನನ್ನ ಜೊತೆ ಮಾತಾಡಿದ” ಎಂದಳು.


ಮರಿಯಾ ಏನೂ ಉತ್ತರಿಸದೆ ನಿಂತಿದ್ದಳು.


“ಮರಿಯಾ, ಅವನು ನಿನ್ನಲ್ಲಿ ಏನು ಕಂಡನೋ ನನಗೆ ತಿಳಿಯದು. ಅವನು ಪುಸ್ತಕ ಕ್ರಿಮಿ. ನೀನೂ ಅಷ್ಟೇ. ಅದೇ ಅವನನ್ನು ನಿನ್ನ ಕಡೆ ಸೆಳೆದಿರಬಹುದು. ಆದರೆ ಇಷ್ಟರಿಂದಲೇ ಒಂದು ಸಂಸಾರ ನಡೆಯುವುದಿಲ್ಲ. ಕ್ಯಾಸಿಮಿರ್ ಈ ಮನೆಯ ಹಿರಿಯ ಮಗ. ಅವನನ್ನು ಕುರಿತು ನಮಗೆಲ್ಲಾ ಅನೇಕ ಅಪೇಕ್ಷೆಗಳಿವೆ. ಅವನು ಓದಿ ವಿಶ್ವವಿದ್ಯಾಲಯದಲ್ಲಿ ಉನ್ನತ ಹುದ್ದೆ ಹಿಡಿಯಬಹುದು. ಅವನಿಗೆ ಸನ್ಮಾನಗಳು ಸಿಕ್ಕಬಹುದು. ಯೋಚಿಸು, ಅವನಿಗೆ ಎಂಥ ಹೆಂಡತಿ ಬೇಕೆಂದು. ನಮ್ಮದು ಹೆಸರಾಂತ ಮನೆತನ. ಅವನಿಗೆ ಹೆಂಡತಿಯಾಗಿ ಬರುವವಳು ನಮ್ಮ ಆಚಾರ ವಿಚಾರ ತಿಳಿದವಳಾಗಿರಬೇಕು. ಭೋಜನಕೂಟ ಆಯೋಜಿಸುವುದು ಹೇಗೆ, ದೊಡ್ಡ ಮನೆತನದ ಅತಿಥಿಗಳನ್ನು ನೋಡಿಕೊಳ್ಳುವುದು ಹೇಗೆ, ಇವೆಲ್ಲ ಗೊತ್ತಿರಬೇಕು. ಅವನಿಗಾಗಿ ತನ್ನ ಜೀವನ ಮುಡಿಪಾಗಿ ಇಡುವ ಹೆಂಡತಿ ಅವನಿಗೆ ಬೇಕು. ಅಲೆಕ್ಸಾಂಡ್ರಾ ನನ್ನ ದೂರದ ಸಂಬಂಧಿ. ಅವಳು ಕೂಡಾ ಶ್ರೀಮಂತ ಮನೆತನಕ್ಕೆ ಸೇರಿದವಳು. ನಾನು ಹೇಳುತ್ತಿರುವುದು ನಿನಗೆ ಅರ್ಥವಾಯಿತೆ?” 


ಮರಿಯಾ ಹೌದೆಂದು ತಲೆ ಆಡಿಸಿದರೂ ಅವಳ ಮನಸ್ಸು ಕುದಿಯಿತು. 


“ನೀನು ಅವನನ್ನು ಪತ್ರದ ಮೂಲಕ ಅಥವಾ ಬೇರಾವ ಬಗೆಯಲ್ಲೂ ಸಂಪರ್ಕಿಸುವುದಿಲ್ಲ ಎಂದು ನಾನು ನಂಬಿದ್ದೇನೆ.”


“ಇಲ್ಲ, ಖಂಡಿತಾ ಇಲ್ಲ.”


“ಸದ್ಯಕ್ಕೆ ಅವನ ಪಿಎಚ್.ಡಿ ಸಂಶೋಧನೆ ಮುಗಿಯುವುದು ಮುಖ್ಯ. ನಾನು ಅವನಿಗೂ ಹೇಳಿದ್ದೇನೆ. ನಿನ್ನನ್ನು ಸಂಪರ್ಕಿಸಬಾರದು ಎಂದು. ಅವನ ಮದುವೆ ಈ ವರ್ಷ ಮಾಡುವ ಯೋಜನೆ ಇದೆ. ನೀನೂ ನಿನ್ನ ಕೆಲಸದ ಮೇಲೆ ನಿಗಾ ಇಡು. ಸರಿಯೇ?”


ಮರಿಯಾ ಮೌನವಾಗಿ ತಲೆ ಅಲ್ಲಾಡಿಸಿ ಸಮ್ಮತಿ ಸೂಚಿಸಿದಳು. 


“ಸರಿ, ನೀನು ನಿನ್ನ ಕೆಲಸ ನೋಡು.”


“ಧನ್ಯವಾದಗಳು, ಪಾನಿ ಕ್ಯಾಸಿಮಿರಾ” ಎಂದು ಅವಳು ಹೊರಗೆ ಬಂದಳು. ಅವಳ ಕಣ್ಣುಗಳು ಮಂಜಾಗಿದ್ದವು. ತನ್ನ ಕೋಣೆಗೆ ಹೋಗಿ ಹಣವನ್ನು ಜೋಪಾನ ಮಾಡಿದಳು. ಹೂಜಿಯಿಂದ ನೀರು ಬಗ್ಗಿಸಿಕೊಂಡು ಕುಡಿದಳು. ತನ್ನ ಕೋಣೆಯ ಕಿಟಕಿಯ ಬಳಿ ಬಂದು ಹೊರಗೆ ನೋಡಿದಳು. ಹೊರಗೆ ಕತ್ತಲಾಗುತ್ತಿತ್ತು. ಗಿಡಮರಗಳಲ್ಲಿ ಹಕ್ಕಿಗಳು ಚಿಲಿಪಿಲಿ ಮಾಡುತ್ತಿದ್ದವು. ಬೇಸಗೆ ಬರುತ್ತಿರುವ ಸೂಚನೆಗಳು ಕಾಣುತ್ತಿದ್ದವು. 


ಬಾಗಿಲು ತಟ್ಟಿದ ಸದ್ದಾಯಿತು. ಜೂಜನ್ ಒಂದು ಲಕೋಟೆಯನ್ನು ಅವಳ ಕೈಗಿತ್ತು “ಈ ಪತ್ರ ನಿನಗೆ ಇವತ್ತು ಬಂತು,” ಎಂದಳು. 


ಪತ್ರದ ಮೇಲಿನ ಕೈಬರಹ ಅವಳಿಗೆ ಪರಿಚಿತವಾದದ್ದು. ಬ್ರೋನಿಯಾ ತನ್ನ ಪತ್ರಕ್ಕೆ ಮಾರುತ್ತರ ಬರೆದಿದ್ದಾಳೆ! “ಧನ್ಯವಾದ, ಜೂಜನ್!” ಎಂದು ಅವಳು ಪತ್ರವನ್ನು ಬಿಡಿಸಿದಳು.


***


ಅವಳು ರೈಲ್ವೆ ಸ್ಟೇಷನ್ನಿಗೆ ಹೊರಡುವ ಸಮಯವಾಯಿತು. ಅವಳು ಒಂದು ವಾರದಿಂದ ಈ ದಿನಕ್ಕಾಗಿ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾಳೆ. ಕೊಂಡೊಯ್ಯಲು ಅವಳ ಬಳಿ ಹೆಚ್ಚು ಸಾಮಾನುಗಳಿಲ್ಲ. ಬಟ್ಟೆ, ಪುಸ್ತಕಗಳು, ಅಷ್ಟೇ. ಇವೆಲ್ಲ ಒಂದು ಪೆಟ್ಟಿಗೆಯಲ್ಲಿ ಹಿಡಿಸಿದವು. ಜೂಜನ್ ಅವಳ ಪ್ರಯಾಣಕ್ಕೆ ಒಂದಿಷ್ಟು ತಿಂಡಿಗಳನ್ನು ಮಾಡಿಕೊಟ್ಟಿದ್ದಾಳೆ. ಅವುಗಳದ್ದು ಎಂದು ಕೈಚೀಲ. ಹಣ ಮತ್ತು ರೈಲ್ವೆ ಟಿಕೆಟ್ಟುಗಳನ್ನು ತನ್ನ ಪರ್ಸಿನಲ್ಲಿ ಭದ್ರಪಡಿಸಿದ್ದಾಳೆ. ಎರಡು ದಿವಸಗಳ ಹಿಂದೆ ಅವಳು ತನ್ನ ತಂದೆ ಮತ್ತು ಸೋದರರನ್ನು ಕಂಡು ಅವರಿಗೆ ವಿದಾಯ ಹೇಳಿ ಬಂದಿದ್ದಾಳೆ. ಅವಳು ಓದಲು ಹೋಗುತ್ತಿರುವುದು ಅವಳ ತಂದೆಗೆ ಬಹಳ ಸಂತೋಷ ಕೊಟ್ಟಿದೆ. “ನಿನ್ನ ಓದಿಗೆ ನಾನು ಸಹಾಯ ಮಾಡಲು ಸಾಧ್ಯವಾಗಲಿಲ್ಲ ಮಗು. ಇಗೋ, ಈ ಗಡಿಯಾರ ನಿನಗೆ ಕೊಡುತ್ತಿದ್ದೇನೆ. ನನಗೆ ಇದರ ಅವಶ್ಯಕತೆ ಇಲ್ಲ. ನಿನ್ನ ತಾಯಿಯ ಕೋಟ್ ನಾನು ನೆನಪಿಗೆ ಇಟ್ಟುಕೊಂಡಿದ್ದೆ. ಅದು ನಿನಗೆ ಉಪಯೋಗಕ್ಕೆ ಬಂದೀತು. ನೀನು ಚಿಕ್ಕಂದಿನಿಂದಲೂ ಓದಿನಲ್ಲಿ ಮುಂದು. ನೀನು ಇಲ್ಲೇ ವಾರ್ಸಾದಲ್ಲೇ ಓದುವ ಅವಕಾಶ ಇದ್ದಿದ್ದರೆ ನಮ್ಮ ಕಣ್ಮುಂದೆ ಇರಬಹುದಾಗಿತ್ತು. ಇರಲಿ, ನಿನಗೆ ನೆನಪಾದಾಗ ಪತ್ರ ಬರೆದು ತಿಳಿಸು,” ಎಂದು ಅವಳ ತಂದೆ ಅವಳನ್ನು ತಬ್ಬಿಕೊಂಡು ಬೀಳ್ಕೊಟ್ಟರು.  


ಅವಳು ಕ್ಯಾಸಿಮಿರಾ ಅವರನ್ನು ನೋಡಲು ಹೋದಳು. “ನಿಮ್ಮ ಸಹಕಾರಕ್ಕಾಗಿ ಧನ್ಯವಾದಗಳು ಪಾನಿ ಕ್ಯಾಸಿಮಿರಾ! ನಿಮ್ಮ ಶುಭಾಶಯಗಳನ್ನು ಬೇಡಲು ಬಂದಿದ್ದೇನೆ,” ಎಂದಳು.


“ನಿನ್ನ ಓದು ಯಶಸ್ವಿಯಾಗಲಿ, ಪ್ರಯಾಣ ಸುಖವಾಗಿರಲಿ” ಎಂದು ಕ್ಯಾಸಿಮಿರಾ ತನ್ನ ಪರ್ಸಿನಿಂದ ಸ್ವಲ್ಪ ಹಣವನ್ನು ತೆಗೆದು “ನಿನ್ನ ಪ್ರಯಾಣದ ಖರ್ಚಿಗೆ ನಿನ್ನೊಡನೆ ಇರಲಿ. ನೀನು ಮಕ್ಕಳಿಗೆ ಚೆನ್ನಾಗಿ ಪಾಠ ಹೇಳಿದ್ದೀಯ. ಅವರು ನಿನ್ನನ್ನು ಬಹಳ ಹಚ್ಚಿಕೊಂಡಿದ್ದಾರೆ. ಮುಂದೆ ನೀನು ವಾರ್ಸಾಗೆ ಹಿಂದಿರುಗಿದರೆ ನಮ್ಮ ಮನೆಯ ಬಾಗಿಲು ನಿನಗೆ ತೆಗೆದೇ ಇರುತ್ತದೆ” 


“ನಿಮ್ಮ ವಿಶ್ವಾಸ ಬಹಳ ದೊಡ್ಡದು,” ಎಂದು ಮರಿಯಾ ಅವರಿಗೆ ಧನ್ಯವಾದ ಹೇಳಿ ಹೊರಟಳು. ಆನ್ ಮತ್ತು ಬ್ರೋನಿಯಾ ಅವಳನ್ನು ಅಪ್ಪಿಕೊಂಡು ವಿದಾಯ ಹೇಳಿದರು. ವ್ಲಾಡಿಸ್ಲಾವ್ “ನಿನ್ನ ಪಿಎಚ್.ಡಿ. ಸಂಶೋಧನೆ ಯಶಸ್ವಿಯಾಗಲಿ ಮರಿಯಾ!” ಎಂದು ಕೈ ಕುಲುಕಿದ. ಜೂಲಿಯಸ್ ಅವಳನ್ನು ಪೆಚ್ಚಾಗಿ ನೋಡುತ್ತ “ನೀನು ನನಗೆ ಬಹಳ ಚೆನ್ನಾಗಿ ಪಾಠ ಹೇಳಿದೆ, ಮರಿಯಾ. ನನಗೂ ಗಣಿತ ಅರ್ಥವಾಗುವ ಹಾಗೆ ಬಿಡಿಸಿ ಹೇಳುತ್ತಿದ್ದೆ!” ಎಂದು ಸುಮ್ಮನೆ ನಿಂತ. ಅವಳು ತನ್ನ ಪರ್ಸಿನಲ್ಲಿ ಕೈಹಾಕಿ ಒಂದು ಕಾಗದದ ಪೊಟ್ಟಣ ತೆಗೆದು ಅವನ ಕೈಗೆ ಕೊಟ್ಟಳು. “ಜೂಲಿಯಸ್, ಮುಂದಿನ ವ್ಯಾಲೆಂಟೈನ್ ದಿವಸ ನಿನ್ನ ಗೆಳತಿ ಹ್ಯಾನಾಗೆ ಇದನ್ನು ಉಡುಗೊರೆಯಾಗಿ ಕೊಡು!” ಎಂದಳು. ಅವನು ಅದನ್ನು ಕುತೂಹಲದಿಂದ ಸ್ವೀಕರಿಸಿದ. ಅವಳು “ಜೂಜನ್!” ಎನ್ನುತ್ತಾ ಅಡುಗೆಮನೆಯ ಕಡೆಗೆ ಹೊರಟಳು. ಅವಳು ಹೋದ ನಂತರ ಜೂಲಿಯಸ್ ಕಾಗದದ ಪೊಟ್ಟಣ ತೆರೆದು ನೋಡಿದ. ಬೆಳ್ಳಿಯ ಮೂರು ಗುಲಾಬಿಗಳ ಪಿನ್! “ಓಹ್, ಹ್ಯಾನಾಗೆ ಇದು ಬಹಳ ಇಷ್ಟವಾಗುತ್ತದೆ!” ಎಂದು ಅವನು ಉಡುಗೊರೆಯನ್ನು ಜೋಪಾನವಾಗಿ ಇಟ್ಟುಕೊಂಡ.


ತಮ್ಮ ಕುದುರೆ ಸಾರೋಟಿನಲ್ಲಿ ಮರಿಯಾಳನ್ನು ರೈಲ್ವೆ ಸ್ಟೇಷನ್ನಿಗೆ ಬಿಟ್ಟು ಬರುವ ವ್ಯವಸ್ಥೆಯನ್ನು ಕ್ಯಾಸಿಮಿರಾ ಮಾಡಿದ್ದಳು. ಜೂಜನ್ ಬೇಡ ಎಂದರೂ ಕೇಳದೆ ಅವಳ ಪೆಟ್ಟಿಗೆಯನ್ನು ಕೊಂಡೊಯ್ದು ಸಾರೋಟಿನಲ್ಲಿ ಇಟ್ಟಳು. “ಜೂಜನ್, ನಾನು ಹೊರಡುತ್ತೇನೆ! ನಿನಗೆ ಪತ್ರ ಬರೆಯುತ್ತೇನೆ!” ಎಂದು ಮರಿಯಾ ಹೇಳಿದಳು. ಜೂಜನ್ “ನಿನ್ನ ಪ್ರಯಾಣ ಸುಖವಾಗಿರಲಿ, ಮಗೂ! ನಿನ್ನ ಮುಂದಿನ ಭವಿಷ್ಯ ಉಜ್ವಲವಾಗಿದೆ. ಇಲ್ಲಿ ನಡೆದದ್ದನ್ನು ಮರೆತುಬಿಡು!” ಎಂದಳು. ಮರಿಯಾ ಕ್ಷೀಣವಾಗಿ ನಕ್ಕು ತಲೆಯಾಡಿಸಿದಳು.


ಸಾರೋಟಿನಲ್ಲಿ ಕುಳಿತು ಅವಳು ಕೊನೆಯ ಸಲ ಜೊರಾವ್ಸ್ಕಿ ನಿವಾಸದ ಕಡೆಗೆ ನೋಡಿದಳು. ನಂತರ ಮುಂದಕ್ಕೆ ತಿರುಗಿ “ಹೊರಡೋಣ!” ಎಂದು ಸಾರೋಟಿನ ಚಾಲಕನಿಗೆ ಹೇಳಿದಳು.


(ಇಲ್ಲಿಗೆ ಮೊದಲ ಗುಲಾಬಿ ಅರಳಿ ನಿಮ್ಮ ಕೈಸೇರಿತು. ಕಥೆ ಮುಂದುವರೆಯುತ್ತದೆ. ಮರಿಯಾ ಯಾರು ಎಂದು ನೀವು ಈಗಾಗಲೇ ಊಹಿಸಿರಬಹುದು. ನಿಮ್ಮ ಪ್ರತಿಕ್ರಿಯೆ ಹಾಕಿ.)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ