ದೀಪಗಳು
ಸಿ ಪಿ ರವಿಕುಮಾರ್
(ಮಹಾದೇವಿ ವರ್ಮಾ ಅವರ ಹಿಂದಿ ಕವಿತೆಯನ್ನು.ಆಧರಿಸಿ)
ಹರಿದ್ವಾರದಲ್ಲಿ ಒಂದು ಸಂಜೆ. ಗಂಗೆಗೆ ಆರತಿ ನಡೆಯುತ್ತಿತ್ತು. ಜನ ತಮ್ಮ ಕೈಗಳಲ್ಲಿ ಆರತಿಯ ತಟ್ಟೆಗಳನ್ನು ಹಿಡಿದು ನಿಂತಿದ್ದರು. ಬಿದಿರಿನ ತಟ್ಟೆಗಳ ಮೇಲೆ ಹಸಿರು ಎಲೆಗಳನ್ನು ಹಾಸಿ ಮೇಲೆ ಹೂವುಗಳನ್ನು ಇರಿಸಲಾಗಿತ್ತು. ಪ್ರತಿಯೊಂದು ತಟ್ಟೆಯಲ್ಲೂ ಒಂದು ದೀಪ.
ಗಂಗೆಯನ್ನು ಪ್ರಾರ್ಥಿಸಿ ಅವಳು ದೀಪವನ್ನು ತೇಲಿಬಿಟ್ಟಳು.
ನದಿಯ ಇನ್ನೊಂದು ದಡದಲ್ಲಿ ಅವನು ಕೂಡಾ ದೀಪವನ್ನು ತೇಲಿಬಿಟ್ಟನು.
ಅವಳ ಕೈಯಲ್ಲಿ ಪೂಜೆ ಮಾಡಿಸಿದ ಅರ್ಚಕ "ಮನಸ್ಸಿನಲ್ಲಿ ನಿನ್ನ ಆಸೆ ಹೇಳಿಕೋ. ಗಂಗಾ ಮಾತೆ ಖಂಡಿತ ಪೂರೈಸುತ್ತಾಳೆ" ಎಂದು ಹೊರಟು ನಿಂತ. ಅವಳು ಕಣ್ಮುಚ್ಚಿ ಧ್ಯಾನಸ್ಥಳಾದಳು. ತಾನು ಹಚ್ಚಿದ ದೀಪವು ತೇಲುತ್ತಾ ಹೋಗುವುದನ್ನು ನೋಡುತ್ತಾ ನಿಂತಳು. ಸ್ವಲ್ಪ ಹೊತ್ತಿನ ನಂತರ ದೀಪವು ಕಾಣದಂತೆ ಮರೆಯಾಯಿತು.
ದೂರದ ದಡದಲ್ಲಿ ಅವನ ಜೊತೆ ಇದ್ದ ಹುಡುಗರು "ಏನು ಕೇಳಿಕೊಂಡೆ ಗಂಗಾಮಾತೆಯಲ್ಲಿ?" ಎಂದು ರೇಗಿಸಿದರು.
ಅವಳು ಹಚ್ಚಿದ ದೀಪ ತೇಲುತ್ತಾ ಹೋಗುತ್ತಿತ್ತು. ಅವನು ಹಚ್ಚಿದ ದೀಪ ಓಲಾಡುತ್ತಾ ಅವಳ ದೀಪವನ್ನು ಸಮೀಪಿಸಿತು. ಎರಡೂ ದೀಪಗಳು ಪರಸ್ಪರ ನೋಡಿ ಒಟ್ಟಿಗೆ ತೇಲುತ್ತಾ ಸಾಗಿದವು. ಅವುಗಳ ಅಕ್ಕಪಕ್ಕದಲ್ಲೂ ಅಸಂಖ್ಯ ದೀಪಗಳು ಮಿನುಗುತ್ತಾ ಸಾಗುತ್ತಿದ್ದವು.
ಸಂಜೆ ಕಳೆದು ಕತ್ತಲು ಆವರಿಸಿದಂತೆ ದೀಪಗಳು ನದಿಯಲ್ಲಿ ತೇಲಿಕೊಂಡು ಹೋಗುವ ದೃಶ್ಯ ಎಲ್ಲರಿಗೂ ಅಪ್ಯಾಯವಾಗಿ ಕಂಡಿತು.
ಅಲ್ಲಿ ಎಲ್ಲೋ ನಾನು ಹಚ್ಚಿಟ್ಟ ದೀಪವೂ ಇದೆ ಎಂದು ಅವಳು ಯೋಚಿಸಿದಳು.
ನಾನು ಹಚ್ಚಿದ ದೀಪ ಇನ್ನೂ ತೇಲುತ್ತಿದೆಯೋ ಎಂದು ದೂರದ ದಡದಲ್ಲಿ ನಿಂತಿದ್ದ ಅವನು ಯೋಚಿಸಿದ.
ಅವರು ಹಚ್ಚಿಟ್ಟ ದೀಪಗಳು ಪರಸ್ಪರ ಮಾತಾಡಿಕೊಂಡು ಹೋಗುತ್ತಿದ್ದವು.
"ನಾವು ಎಲ್ಲಿಗೆ ಹೋಗುತ್ತಿದ್ದೇವೆ, ಏನಾದರೂ ಗೊತ್ತಾ?" ಎಂದು ಅವಳ ದೀಪ ಕೇಳಿತು.
"ಏನೋ ಗೊತ್ತಿಲ್ಲ. ನಾವು ದೀಪಗಳು ಬೇರೆಯವರಿಗೆ ಬೆಳಕು ಕೊಡುತ್ತೇವೆ. ಹಾಗಂತ ನಮಗೆ ಯಾವ ದೂರದೃಷ್ಟಿ ಇದೆ! ಇಲ್ಲೆಲ್ಲ ಮಂಜು ಮುಸುಕಿದೆ. ದೂರದಲ್ಲಿ ಏನೂ ಕಾಣುತ್ತಿಲ್ಲ. ಬರೀ ಕತ್ತಲು."
"ಅಲ್ಲಿ ಏನಾದರೂ ದಡ ಇರಬಹುದಾ? ನಾವು ದಡ ಮುಟ್ಟುತ್ತೇವಾ?"
"ಯಾರಿಗೆ ಗೊತ್ತು! ನಮ್ಮ ಜೊತೆ ಬರುತ್ತಿದ್ದ ಎಷ್ಟೋ ದೀಪಗಳು ನದಿಯ ತೆರೆಯ ಆಟಕ್ಕೆ ಮುಳುಗಿಹೋದವು."
"ಅಯ್ಯೋ ಅದನ್ನೆಲ್ಲ ಹೇಳಬೇಡ. ನನಗೆ ಭಯವಾಗುತ್ತದೆ."
"ಅದಕ್ಕೆ ಯಾಕೆ ಭಯ! ಹಚ್ಚಿದ ದೀಪ ನಂದಲೇ ಬೇಕು."
"ಅಂದಹಾಗೆ ನಿನ್ನನ್ನು ಹಚ್ಚಿದವರು ಯಾರು?"
"ನನಗೇನು ಗೊತ್ತು! ನಿನಗೆ ಗೊತ್ತಾ?"
"ಇಲ್ಲ. ನನ್ನನ್ನು ತೇಲಿ ಬಿಡುವಾಗ ಬೊಗಸೆ ಕೈ ಕಾಣಿಸಿತು. ಅದರ ಮೇಲೆ ಬಣ್ಣದ ಚಿತ್ತಾರ ಬಿಡಿಸಿತ್ತು."
"ನನಗೂ ಬೊಗಸೆ ಕೈ ಕಾಣಿಸಿತು. ಅದು ಒರಟಾಗಿತ್ತು."
"ನಿನಗೆ ಗೊತ್ತಾ? ಕೆಲವು ದೀಪಗಳು ಬಹಳ ಹೆಮ್ಮೆಯಿಂದ ಮಾತಾಡಿಕೊಳ್ಳುತ್ತಿದ್ದವು. ಅವುಗಳನ್ನು ತಾವರೆ ಎಲೆ ಮೇಲೆ ತಾವರೆ ಹೂಗಳ ನಡುವೆ ಹಚ್ಚಿಟ್ಟಿದ್ದ ಬಗ್ಗೆ. ಕೆಲವು ದೀಪಗಳನ್ನು ಯಾವ ಸಿಂಗಾರವೂ ಇಲ್ಲದೆ ಒಂದು ಬಿದಿರಿನ ಬುಟ್ಟಿಯಲ್ಲಿಟ್ಟು ತೇಲಿ ಬಿಟ್ಟಿದ್ದಾರಂತೆ. ಅವುಗಳನ್ನು ನೋಡಿ ತಾತ್ಸಾರ ಭಾವನೆಯಿಂದ ಮಾತಾಡುತ್ತಿದ್ದವು."
"ಮಾತಾಡಿಕೊಳ್ಳಲು ಏನಾದರೂ ಬೇಕಲ್ಲ. ಮಾತಾಡಿಕೊಳ್ಳಲಿ ಬಿಡು. ಉರಿಯುವುದು ತಾನೇ ನಮ್ಮ ಕೆಲಸ? ಯಾವ ದೀಪಗಳು ದಡ ಸೇರುತ್ತವೆ, ಯಾವುದು ಮುಳುಗುತ್ತವೆ ಅನ್ನೋದು ಯಾರಿಗೆ ಗೊತ್ತು!"
"ಅಂತೂ ಒಂದು ದಡ ಇದೆ ಅಂತ ನಿನ್ನ ಮಾತಿನ ಅರ್ಥವಾ?"
"ಏನಾದರೂ ಇರಲಿ, ದಡ ಇರಲಿ ಇಲ್ಲದೇ ಇರಲಿ, ತೇಲುತ್ತಾ ಹೋಗುವುದು ನಮ್ಮ ಗುರಿ. ಮೇಲೆ ನೋಡು, ಅಲ್ಲೂ ಅಸಂಖ್ಯ ದೀಪಗಳು ಕಾಣುತ್ತಿವೆ."
"ಅವೂ ತೇಲಿಕೊಂಡು ಹೋಗುತ್ತಿರಬಹುದು. ನಮ್ಮನ್ನು ನೋಡುತ್ತಿರಬಹುದು. ಹಾಗೇ ನಮ್ಮನ್ನು ಹಚ್ಚಿಟ್ಟವರು ನಮ್ಮನ್ನು ನೋಡುತ್ತಿರಬಹುದಾ?"
"ಏನೋ ತಿಳಿಯದು. ಹಚ್ಚಿಟ್ಟು ತೇಲಿ ಬಿಟ್ಟ ಮೇಲೆ ಸಂಬಂಧ ಕಳೆದುಹೋಯಿತು. ಈಗ ತೇಲುತ್ತಾ ಸಾಗುವುದಷ್ಟೇ ನಮ್ಮ ಕೆಲಸ. ತೆರೆಗಳು ಬಂದರೂ ಬರಬಹುದು. ಆದರೂ ಮುಂದುವರೆಯುವುದು ಮಾತ್ರ ನಮ್ಮ ಕೆಲಸ."
ಹೀಗೆ ಮಾತಾಡಿಕೊಳ್ಳುತ್ತಾ ದೀಪಗಳು ಮುಂದುವರೆದವು. ದೀಪಗಳನ್ನು ಹಚ್ಚಿಟ್ಟವರು ಹಿಂದಿರುಗಿದರು. ನಾಳೆ ಮತ್ತೊಮ್ಮೆ ಆರತಿಗೆ ಜನ ಸೇರುತ್ತಾರೆ. ಬಿದಿರಿನ ಬುಟ್ಟಿಗಳಲ್ಲಿ ದೀಪಗಳನ್ನಿಟ್ಟು ಮತ್ತೊಮ್ಮೆ ಸಿಂಗರಿಸುತ್ತಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ