ರಾಜನು ತನ್ನನ್ನು ರಕ್ಷಿಸಿಕೊಂಡ
ಮೂಲ ಹಿಂದಿ - ಸೂರ್ಯಕಾಂತ್ ತ್ರಿಪಾಠಿ ನಿರಾಲಾ
ಕನ್ನಡಕ್ಕೆ - ಸಿ. ಪಿ. ರವಿಕುಮಾರ್
ರಾಜನು ತನ್ನನ್ನು ರಕ್ಷಿಸಿಕೊಂಡ.
ಕೋಟೆ ಕಟ್ಟಿದ, ದೊಡ್ಡ ಸೈನ್ಯ ಇಟ್ಟುಕೊಂಡ.
ಬಾಲ ಅಲ್ಲಾಡಿಸುವ ಸಾಮಂತರಾಜರು
ತಮ್ಮ ಸ್ವಾರ್ಥದ ಕೋಲನ್ನಿಟ್ಟುಕೊಂಡು
ಅವನ ಹಿಂದೆ ಬಂದರು.
ಗ್ರಂಥಗಳಲ್ಲಿ ಬ್ರಾಹ್ಮಣರು
ಜನತೆಯನ್ನು ಬಂಧಿಸಿ ತಂದರು.
ಕವಿಗಳು ರಾಜನ ಶೌರ್ಯವನ್ನು ಹಾಡಿದರು,
ಲೇಖಕರು ಲೇಖನಗಳನ್ನು ಬರೆದರು,
ಇತಿಹಾಸಕಾರರು ಇತಿಹಾಸದ ಪುಟ ತುಂಬಿಸಿದರು.
ನಟರು-ಕಲಾವಿದರು ನಾಟಕಗಳನ್ನು ರಚಿಸಿ
ರಂಗಮಂಚದ ಮೇಲೆ ಆಡಿದರು.
ಜನರ ಮೇಲೆ ನಾಟಿತು ರಾಜನ ಸಮ್ಮೋಹನಾಸ್ತ್ರ,
ಲೋಕದ ನಾರಿಯರಿಗೆ ಅವನ ರಾಣಿಯರು ಆದರ್ಶರಾದರು,
ಧರ್ಮಕಾರ್ಯಗಳು ಹೆಚ್ಚುತ್ತಿವೆ ಎಂಬ ಸುಳ್ಳು ಹಬ್ಬಿತು.
ಆದರೆ ಸಭ್ಯತೆಯ ಹೆಸರಿನಲ್ಲಿ ಧರ್ಮ ಕಂಟಕದಲ್ಲಿತ್ತು.
ರಕ್ತದ ನದಿ ಹರಿಯಿತು,
ಜನ ಕಣ್ಣು-ಕಿವಿ ಮುಚ್ಚಿಕೊಂಡು ಅದರಲ್ಲಿ ಮುಳುಗೆದ್ದರು.
ಕಣ್ಣು ತೆರೆದಾಗ ರಾಜ ತನ್ನನ್ನು ರಕ್ಷಿಸಿಕೊಂಡ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ