ಕರಗುತ್ತಿದೆ ಕರದಲಿ ನವನೀತ
ಸೂರದಾಸ್ ಉತ್ತರಭಾರತದ ಸಂತಕವಿ. ಕೃಷ್ಣ ಇವನ ಇಷ್ಟದೈವ. ಕುರುಡನಾಗಿದ್ದರೂ ಇವನ ಒಳಗಣ್ಣಿಗೆ ಕೃಷ್ಣನ ಬಾಲಲೀಲೆಗಳು ವೇದ್ಯವಾಗಿದ್ದು ತನ್ನ ರಚನೆಗಳಲ್ಲಿ ಗ್ರಾಮ್ಯ ಭಾಷೆಯ ಮಾಧುರ್ಯದಲ್ಲಿ ಅದ್ಭುತವಾಗಿ ವರ್ಣಿಸುತ್ತಾನೆ. ಅವನ "ಶೋಭಿತ ಕರ್ ನವನೀತ್ ಲಿಯೇ" ಎಂಬ ಭಜನೆಯ ಭಾವಾನುವಾದವನ್ನು ಇಲ್ಲಿ ಓದಿ.
ಮೂಲ ರಚನೆ: ಸಂತ ಸೂರದಾಸ್
ಕನ್ನಡಕ್ಕೆ: ಸಿ.ಪಿ. ರವಿಕುಮಾರ್
ಕರಗುತ್ತಿದೆ ಕರದಲಿ ನವನೀತ
ಕರಗುತ್ತಿದೆ ಹೃದಯವು ನೋಡುತ್ತಾ
ಧೂಳು ಮಣ್ಣಿನಲ್ಲಿ ಅಂಬೆಗಾಲಿಡುತ್ತ
ಹಾಲುಗಲ್ಲದ ಮೆಲುನಗೆ ಚೆಲ್ಲುತ್ತ ॥ ೧ ॥
ತುದಿಬಾಯೊಳು ಮೊಸರಿನ ಅವಶೇಷ
ದಧಿಯೊಲು ಸಿಹಿನಗೆ ಕಳೆವುದು ಕ್ಲೇಶ || ೨ ॥
ಹೊಳೆವುದು ಹಣೆಯಲಿ ಗೋರೋಚನ ತಿಲಕ
ಸುಳಿಗಲ್ಲದ ನಗೆ ಕಿವಿಗಳ ತನಕ ॥ ೩ ॥
ಗುಂಗುರು ಕೇಶದ ರಾಶಿಯ ನೋಟ
ಭೃಂಗಾವಳಿ ಮಧುವನದಲಿ ಹಾರಾಟ ॥ ೪ ॥
ಪದಕ ವಜ್ರ ಹೊಳೆವುದು ಕೊರಳಲ್ಲಿ
ಸಿಂಹನಖವು ತರುವುದು ಶುಭದೃಷ್ಟಿ ॥ ೫ ॥
ಕ್ಷಣವೊಂದರ ಈ ದರುಶನ ಭಾಗ್ಯ
ಏಳುಕಲ್ಪಗಳ ಸುಖ ಸಾಮ್ರಾಜ್ಯ ॥ ೬ ॥
------
A bhajan by Surdas (Shobhit Kar Navneet Liye), translated into Kannada by C.P. Ravikumar
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ